Kannada News  /  Sports  /  India Wins A Match And A Series Against New Zealand
ಭಾರತಕ್ಕೆ ಭರ್ಜರಿ ಗೆಲುವು
ಭಾರತಕ್ಕೆ ಭರ್ಜರಿ ಗೆಲುವು (BCCI)

India vs New Zealand: ಕೇವಲ 66 ರನ್‌ಗಳಿಗೆ ಕಿವೀಸ್ ಆಲೌಟ್; ಬೃಹತ್ ಜಯದೊಂದಿಗೆ ಭಾರತಕ್ಕೆ ಸರಣಿ

01 February 2023, 22:33 ISTHT Kannada Desk
01 February 2023, 22:33 IST

ಇತ್ತೀಚೆಗಷ್ಟೇ ಕಿವೀಸ್‌ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ್ದ ಭಾರತ, ಇದೀಗ ಟಿ20 ಸರಣಿಯನ್ನು ಕೂಡಾ ತನ್ನದಾಗಿಸಿಕೊಂಡಿದೆ. 

ಅಹಮದಾಬಾದ್‌: ನ್ಯೂಜಿಲ್ಯಾಂಡ್‌ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಭಾರತ, ಸರಣಿಯನ್ನು ತನ್ನದಾಗಿಸಿಕೊಂಡಿದೆ. ಭಾರತ ನೀಡಿದ ದೊಡ್ಡ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಕಿವೀಸ್‌ 168 ರನ್‌ಗಳ ಭಾರಿ ಅಂತರದಿಂದ ಸೋತಿದೆ. ಈ ಮೂಲಕ ಭಾರತ 2-1ರಿಂದ ಸರಣಿ ವಶಪಡಿಸಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ, ಶುಬ್ಮನ್‌ ಗಿಲ್‌ ಶತಕದ ನೆರವಿನಿಂದ 234 ರನ್‌ಗಳ ಬೃಹತ್‌ ಮೊತ್ತ ಕಲೆ ಹಾಕಿತು. ಆ ಮೂಲಕ ಗೆಲ್ಲಲು 235 ರನ್‌ಗಳ ಗುರಿ ಪಡೆದ ಪ್ರವಾಸಿ ಕಿವೀಸ್‌, ಕೇವಲ 12.1 ಓವರ್‌ಗಳಲ್ಲಿ ಕೇವಲ 66 ರನ್‌ ಗಳಿಸಿ ಆಲೌಟ್‌ ಆಯ್ತು. ಹೀಗಾಗಿ ಭಾರತ 168 ರನ್‌ಗಳ ಭಾರಿ ಅಂತರದಿಂದ ಗೆದ್ದು ಬೀಗಿತು. ರನ್‌ಗಳ ಅಂತರದಲ್ಲಿ ಭಾರತಕ್ಕೆ ಟಿ20 ಕ್ರಿಕೆಟ್‌ನಲ್ಲೇ ಬೃಹತ್‌ ಗೆಲುವು ಇದಾಗಿದೆ.

ಇತ್ತೀಚೆಗಷ್ಟೇ ಕಿವೀಸ್‌ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ್ದ ಭಾರತ, ಇದೀಗ ಟಿ20 ಸರಣಿಯನ್ನು ಕೂಡಾ ತನ್ನದಾಗಿಸಿಕೊಂಡಿದೆ. ಕಿವೀಸ್‌ ನಿರಾಸೆಯೊಂದಿಗೆ ತವರಿಗೆ ಮರಳಬೇಕಾಗಿದೆ.

ಬ್ಯಾಟಿಂಗ್‌ನಲ್ಲಿ ಕಿವೀಸ್‌ ಸಂಪೂರ್ಣವಾಗಿ ಕುಸಿಯಿತು. ತಂಡದ ಮೊತ್ತ 21 ಆಗುವಷ್ಟರಲ್ಲಿ ಅಗ್ರ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಪರ ಡೇರಿಲ್‌ ಮಿಚೆಲ್‌ ಮಾತ್ರ ತುಸು ಪ್ರತಿರೋಧ ಒಡ್ಡಿ 35 ರನ್‌ ಕಲೆ ಹಾಕಿದರು. ಅವರನ್ನು ಹೊರತುಪಡಿಸಿ ನಾಯಕ ಸ್ಯಾಂಟ್ನರ್‌ 13 ರನ್‌ ಗಳಿಸಿದರು. ಇವರನ್ನು ಹೊರತಪಡಿಸಿ ಬೇರೆ ಯಾವ ಆಟಗಾರನೂ ಎರಡಂಕಿ ಮೊತ್ತ ಗಳಿಸಿಲ್ಲ.

ಟಿ20ಯಲ್ಲಿ ನ್ಯೂಜಿಲೆಂಡ್‌ ಕಳಪೆ ಪ್ರದರ್ಶನ

ಶ್ರೀಲಂಕಾ ವಿರುದ್ಧ 60 ರನ್‌ -2014

ಬಾಂಗ್ಲಾದೇಶ ವಿರುದ್ಧ 60 ರನ್‌ -2021

ಇಂದು ಭಾರತದ ವಿರುದ್ಧ 66 ರನ್ -2023

ಭಾರತದ ವಿರುದ್ಧ ಟಿ20ಯಲ್ಲಿ ಅತಿ ಕಡಿಮೆ ಮೊತ್ತ

66 ರನ್ -ಇಂದು ನ್ಯೂಜಿಲ್ಯಾಂಡ್

70 ರನ್ -ಐರ್ಲೆಂಡ್‌ -2018

80 ರನ್‌ -ಇಂಗ್ಲೆಂಡ್‌ - -2012

ಗಿಲ್‌ ದಾಖಲೆ

ಇತ್ತೀಚೆಗಷ್ಟೇ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ, ಈ ಸಾಧನೆ ಮಾಡಿದ ಯುವ ಆಟಗಾರನಾಗಿ ಗಿಲ್‌ ಹೊರಹೊಮ್ಮಿದ್ದರು. ಇಂದಿನ ಟಿ20 ಪಂದ್ಯದಲ್ಲಿ ಮತ್ತೆ ಶತಕ ಸಿಡಿಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಅವರು ತಲುಪಿದ್ದಾರೆ. ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ ಶತಕ ಸಿಡಿಸಿದ ಭಾರತದ ಐದನೇ ಆಟಗಾರನಾಗಿ ಗಿಲ್‌ ಹೊರಹೊಮ್ಮಿದರು. ಈ ಹಿಂದೆ ಸುರೇಶ್ ರೈನಾ, ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.

ನ್ಯೂಜಿಲ್ಯಾಂಡ್‌ ವಿರುದ್ದ ಇತ್ತೀಚೆಗಷ್ಟೇ ಏಕದಿನದಲ್ಲಿ ವೈಯಕ್ತಿಕ ಅತಿ ಹೆಚ್ಚು ರನ್‌ ಕಲೆ ಹಾಕಿದ್ದ ಗಿಲ್‌, ಇಂದಿನ ಪಂದ್ಯದಲ್ಲಿ ಟಿ20ಯಲ್ಲೂ ಅತಿ ಹೆಚ್ಚು ರನ್‌ ಕಲೆ ಹಾಕಿದರು.

ಇಂದಿನ ಪಂದ್ಯದಲ್ಲಿ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಕಳೆದ ಹಲವು ಪಂದ್ಯಗಳಲ್ಲಿ ವಿಫಲವಾಗಿದ್ದ ಇಶಾನ್‌ ಕಿಶನ್‌, ಇಂದು ಕೂಡಾ ವಿಫಲರಾದರು. ಕೇವಲ ಒಂದು ರನ್‌ ಗಳಿಸಿ ನಿರ್ಗಮಿಸಿದರು. ವನ್‌ ಡೌನ್ ಕ್ರಮಾಂಕದಲ್ಲಿ ಬಂದ ರಾಹುಲ್‌ ತ್ರಿಪಾಠಿ ಬಂದೊಡನೆ ಅಬ್ಬರಿಸಿದರು. ಮೂರು ಭರ್ಜರಿ ಸಿಕ್ಸರ್‌ ಸಹಿತ 44 ರನ್‌ ಸಿಡಿಸಿದರು. ಇವರ ನಿರ್ಗಮನದ ಬಳಿಕ ಬಂದ ಸೂರ್ಯಕುಮಾರ್‌ ಯಾದವ್‌, ಕ್ಷಣಕಾಲ ಅಬ್ಬರಿಸಿ 24 ರನ್‌ ಸಿಡಿಸಿದರು.

ಅಂತಿಮ ಓವರ್‌ಗಳಲ್ಲಿ ನಾಯಕ ಪಾಂಡ್ಯ ಹಾಗೂ ಗಿಲ್‌ ಉತ್ತಮ ಜತೆಯಾಟ ನೀಡಿದರು. ಪಾಂಡ್ಯ 30 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. 126 ರನ್‌ ಗಳಿಸಿ ಅಜೇರಾಗಿ ಉಳಿದ ಗಿಲ್‌, ಭಾರತದ ಪರ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು.