ಕನ್ನಡ ಸುದ್ದಿ  /  ಕ್ರೀಡೆ  /  ಅತ್ತ ಕ್ರಿಕೆಟ್‌ ವಿಶ್ವಕಪ್‌; ಇತ್ತ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ ಲಗ್ಗೆ ಇಟ್ಟ ಭಾರತ ಹಾಕಿ ತಂಡ

ಅತ್ತ ಕ್ರಿಕೆಟ್‌ ವಿಶ್ವಕಪ್‌; ಇತ್ತ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ ಲಗ್ಗೆ ಇಟ್ಟ ಭಾರತ ಹಾಕಿ ತಂಡ

ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವನಿತೆಯರು ಪ್ರಭಾವಶಾಲಿ ಪ್ರದರ್ಶನ ನೀಡಿದ್ದಾರೆ. ದಕ್ಷಿಣ ಕೊರಿಯಾ ಮಣಿಸಿ ಸೆಮಿಫೈನಲ್‌ ಲಗ್ಗೆ ಇಟ್ಟಿದ್ದಾರೆ.

ದಕ್ಷಿಣ ಕೊರಿಯಾ ವಿರುದ್ಧ ಗೋಲು ಗಳಿಸಿ ಸಂಭ್ರಮಿಸಿದ ಭಾರತದ ಆಟಗಾರ್ತಿಯರು
ದಕ್ಷಿಣ ಕೊರಿಯಾ ವಿರುದ್ಧ ಗೋಲು ಗಳಿಸಿ ಸಂಭ್ರಮಿಸಿದ ಭಾರತದ ಆಟಗಾರ್ತಿಯರು (ANI)

ಇತ್ತ ಭಾರತ ಕ್ರಿಕೆಟ್‌ ತಂಡವು ವಿಶ್ವಕಪ್‌ ಸೆಮಿಫೈನಲ್‌ ಲಗ್ಗೆ ಇಟ್ಟಿದೆ. ಇದೇ ವೇಳೆ ಅತ್ತ ಭಾರತ ವನಿತೆಯರ ಹಾಕಿ ತಂಡವು (Indian women's hockey team) ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ (Asian Champions Trophy) ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ನವೆಂಬರ್‌ 2ರ ಗುರುವಾರ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಐದನೇ ಮತ್ತು ಅಂತಿಮ ಲೀಗ್‌ ಹಂತದ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡವು ದಕ್ಷಿಣ ಕೊರಿಯಾ ವಿರುದ್ಧ 5-0 ಗೋಲುಗಳಿಂದ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಆರು ತಂಡಗಳು ಭಾಗಿಯಾಗುವ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದೊಂದಿಗೆ ಲೀಗ್ ಹಂತವನ್ನು ಮುಗಿಸಿತು.

ಆತಿಥೇಯ ಭಾರತದ ಪರ ಸಲಿಮಾ ಟೆಟೆ 6 ಮತ್ತು 36ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ನವನೀತ್ ಕೌರ್ 36ನೇ ನಿಮಿಷ, ವಂದನಾ ಕಟಾರಿಯಾ 49ನೇ ನಿಮಿಷ ಮತ್ತು ನೇಹಾ 60ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಟ್ರೆಂಡಿಂಗ್​ ಸುದ್ದಿ

ಆಡಿದ ಎಲ್ಲಾ ಐದು ಪಂದ್ಯಗಳಲ್ಲಿ ಗೆಲುವಿನೊಂದಿಗೆ, ಭಾರತವು 15 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇದೇ ವೇಳೆ ನೂತನ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಚೀನಾ (9), ಜಪಾನ್ (9) ಮತ್ತು ಮೂರು ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾ (7) ನಂತರದ ಸ್ಥಾನಗಳಲ್ಲಿವೆ. ಅತ್ತ 4 ಅಂಕ ಪಡೆದ ಮಲೇಷ್ಯಾ ಮತ್ತು ಖಾತೆ ತೆರೆಯದ ಥಾಯ್ಲೆಂಡ್ ನಾಲ್ಕರ ಘಟ್ಟಕ್ಕೆ ತಲುಪಲು ವಿಫಲವಾದವು.

ಶನಿವಾರ ನಡೆಯಲಿರುವ ಸೆಮಿಫೈನಲ್‌ ಪಂದ್ಯಗಳಲ್ಲಿ ಭಾರತವು ಮತ್ತೆ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ. ಮತ್ತೊಂದು ಪಂದ್ಯದಲ್ಲಿ ಚೀನಾ ಮತ್ತು ಜಪಾನ್ ಮುಖಾಮುಖಿಯಾಗಲಿವೆ. ರಾಂಚಿಯ ಮಾರಂಗ್ ಗೊಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋಟರ್ಫ್ ಹಾಕಿ ಸ್ಟೇಡಿಯಂನಲ್ಲಿ ಭಾನುವಾರ ಫೈನಲ್‌ ಪಂದ್ಯ ನಡೆಯಲಿದೆ.

ವಿಶ್ವಕಪ್‌ ಸೆಮಿಫೈನಲ್ ಪ್ರವೇಶಿಸಿದ ಭಾರತ ಕ್ರಿಕೆಟ್‌ ತಂಡ

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ ಟೀಮ್ ಇಂಡಿಯಾ, ಶ್ರೀಲಂಕಾ ವಿರುದ್ಧವೂ ಗೆದ್ದಿದೆ. ಆ ಮೂಲಕ ವಿಶ್ವಕಪ್​​ನಲ್ಲಿ ಮೊದಲ ತಂಡವಾಗಿ ಸೆಮಿಫೈನಲ್​​ ಅಧಿಕೃತ ಪ್ರವೇಶ ಪಡೆದಿದೆ. ಮತ್ತೊಂದೆಡೆ ಸೋತ ಲಂಕಾ ಬಹುತೇಕ ಸೆಮೀಸ್​​ ರೇಸ್​ನಿಂದ ಹೊರಬಿದ್ದಿದೆ. ಸಿಂಹಳೀಯರ ವಿರುದ್ಧ 302 ರನ್​ಗಳ ಗೆಲುವು ದಾಖಲಿಸಿದ ರೋಹಿತ್ ಪಡೆ, ಸತತ ನಾಲ್ಕನೇ ಬಾರಿ (2011, 2015, 2019 ಮತ್ತು 2023) ಹಾಗೂ ಒಟ್ಟು 8ನೇ ಸಲ ಏಕದಿನ ವಿಶ್ವಕಪ್​ ಸೆಮಿಫೈನಲ್​ಗೆ ಪ್ರವೇಶಿಸಿದ ದಾಖಲೆ ಬರೆದಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಭರ್ಜರಿ ಬ್ಯಾಟಿಂಗ್ ನಡೆಸಿತು. ನಿಗದಿತ 50 ಓವರ್​​​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 357 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಶ್ರೀಲಂಕಾ, ಭಾರತೀಯ ಬೌಲರ್​​ಗಳ ದಾಳಿಗೆ ತತ್ತರಿಸಿ ಹೋಯಿತು. 19.4 ಓವರ್​​​ಗಳಲ್ಲಿ 55 ರನ್​ಗಳಿಗೆ ಸರ್ವಪತನ ಕಂಡಿತು.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.