Asian Games: ಹಾಂಕಾಂಗ್ ವಿರುದ್ಧ 13-0 ಅಂತರದ ಗೆಲುವು; ಸೆಮಿಫೈನಲ್ ಲಗ್ಗೆ ಇಟ್ಟ ಭಾರತ ಮಹಿಳೆಯರ ಹಾಕಿ ತಂಡ
Asian Games 2023: ಭಾರತ ವನಿತೆಯರ ಹಾಕಿ ತಂಡವು ಹಾಂಕಾಂಗ್ ಚೀನಾ ವಿರುದ್ಧ 13 ಗೋಲುಗಳನ್ನು ಗಳಿಸಿ ಏಷ್ಯನ್ ಗೇಮ್ಸ್ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಏಷ್ಯನ್ ಗೇಮ್ಸ್‌ನಲ್ಲಿ (19th Asian Games) ಮಹಿಳೆಯರ ಹಾಕಿ ಪಂದ್ಯದಲ್ಲಿ ಭಾರತ ತಂಡವು (Indian women's hockey team) ಸೆಮಿಫೈನಲ್ ಪ್ರವೇಶಿಸಿದೆ. ಹಾಂಗ್‌ಝೌನಲ್ಲಿ ನಡೆದ ಪೂಲ್ ಎ ಪಂದ್ಯದಲ್ಲಿ ಹಾಂಕಾಂಗ್ ಚೀನಾ (Hong Kong China) ವಿರುದ್ಧ ಭಾರತ ಮಹಿಳಾ ಹಾಕಿ ತಂಡ 13-0 ಅಂತರದ ಭರ್ಜರಿ ಜಯ ಸಾಧಿಸಿದೆ. ಪರುಷರ ತಂಡದಂತೆ ವನಿತೆಯರ ತಂಡ ಕೂಡಾ ಎರಡಂಕಿ ಗೋಲುಗಳನ್ನು ಗಳಿಸಿ ಭರ್ಜರಿ ಪ್ರದರ್ಶನ ನೀಡಿದೆ.
ಭಾರತದ ಪರ ವಂದನಾ ಕಟಾರಿಯಾ ಹಾಗೂ ದೀಪಿಕಾ ಹ್ಯಾಟ್ರಿಕ್ ಗೋಲುಗಳನ್ನು ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವಂದನಾ ಪಂದ್ಯದ 2ನೇ, 16ನೇ ಹಾಗೂ 48ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ದೀಪಿಕಾ 4, 54 ಮತ್ತು 58ನೇ ನಿಮಿಷಗಳಲ್ಲಿ ತಂಡಕ್ಕೆ ಅಂಕ ತಂದುಕೊಟ್ಟರು. ಉಳಿದಂತೆ ಮೋನಿಕಾ 7ನೇ, ದೀಪ್ ಗ್ರೇಸ್ ಎಕ್ಕಾ 11 ಮತ್ತು 42ನೇ ನಿಮಿಷ, ಸಂಗೀತಾ ಕುಮಾರಿ 27 ಹಾಗೂ 55ನೇ ನಿಮಿಷ, ವೈಷ್ಣವಿ ವಿಠಲ್ ಫಾಲ್ಕೆ 34ನೇ ನಿಮಿಷ ಮತ್ತು ನವನೀತ್ ಕೌರ್ 58 ನಿಮಿಷದಲ್ಲಿ ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಸಿದರು.
ಮೊದಲ ಕ್ವಾರ್ಟರ್‌ನಲ್ಲಿಯೇ ಭಾರತವು ಹಾಂಕಾಂಗ್ ಚೀನಾ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ಆರಂಭಿಸಿತು. ಮೊದಲ ಕ್ವಾರ್ಟರ್‌ನಲ್ಲಿ 4-0 ಗೋಲುಗಳ ಮುನ್ನಡೆ ಸಾಧಿಸಿತು. ವಂದನಾ ಕಟಾರಿಯಾ ಅಮೋಘ ಫೀಲ್ಡ್ ಗೋಲ್‌ನೊಂದಿಗೆ ತಂಡಕ್ಕೆ ಮೊದಲ ಗೋಲು ಗಳಿಸಿದರು. ನಂತರ ದೀಪಿಕಾ ಮತ್ತು ಮೋನಿಕಾ ಕೂಡ ತಲಾ ಒಂದು ಫೀಲ್ಡ್ ಗೋಲು ಗಳಿಸಿದರು. ಭಾರತದ ಉಪನಾಯಕಿ ಗ್ರೇಸ್ ಎಕ್ಕಾ ಪೆನಾಲ್ಟಿ ಕಾರ್ನರ್ ಅನ್ನು ಯಶಸ್ವಿಯಾಗಿಸಿದರು.
ಎರಡನೇ ಕ್ವಾರ್ಟರ್ ಬಳಿಕ ವಿರಾಮದ ವೇಳೆಗೆ ಭಾರತವು 6-0 ಮುನ್ನಡೆ ಸಾಧಿಸಿತು. ಅಂತಿಮ ಕ್ವಾರ್ಟರ್‌ನ ಅಂತ್ಯಕ್ಕೆ ಭಾರತ ತಂಡವು 8-0 ಮುನ್ನಡೆ ಸಾಧಿಸಿತು. ಅಂತಿಮವಾಗಿ 13-0 ಅಂತರದ ಜಯ ಸಾಧಿಸಿತು. ಈ ನಡುವೆ ಎದುರಾಳಿಗೆ ಒಂದೇ ಒಂದು ಗೋಲು ಗಳಿಸಲು ಕೂಡಾ ಭಾರತ ಅವಕಾಶ ನೀಡಲಿಲ್ಲ.
ಈ ಗೆಲುವಿನೊಂದಿಗೆ ಭಾರತ ಪೂಲ್ ಹಂತದಲ್ಲಿ ಅಜೇಯವಾಗಿ ಮುನ್ನಡೆದಿದೆ. ಮುಂದೆ ಭಾರತದ ವನಿತೆಯರು ಅಕ್ಟೋಬರ್ 5ರ ಗುರುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಬಾಂಗ್ಲಾದೇಶವನ್ನು 12-0 ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಪುರುಷರ ಹಾಕಿ ತಂಡ
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಹಾಕಿ (hockey) ತಂಡವು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಇಂದು ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಭರ್ಜರಿ 12-0 ಗೋಲುಗಳ ಅಂತರದಿಂದ ಸೋಲಿಸಿದ ಭಾರತವು, ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ (Harmanpreet Singh) ಮತ್ತು ಮನ್‌ದೀಪ್ ಸಿಂಗ್ ಇಬ್ಬರೂ ತಲಾ ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿದರು. ಹರ್ಮನ್‌ಪ್ರೀತ್ ಪಂದ್ಯದ 2ನೇ, 4ನೇ ಮತ್ತು 32ನೇ ನಿಮಿಷದಲ್ಲಿ ಮೂರು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದರು. ಅತ್ತ ಮನ್‌ದೀಪ್ 18ನೇ, 24ನೇ ಮತ್ತು 46ನೇ ನಿಮಿಷದಲ್ಲಿ ಮೂರು ಗೋಲು ಗಳಿಸಿದ ಕಾರಣ ಭಾರತ ಪೂಲ್ ಎನಲ್ಲಿ ಅಜೇಯವಾಗಿ ಮುನ್ನಡೆಯಿತು.