ನಿವೃತ್ತಿ ಹಿಂಪಡೆದು ಮಾಲ್ಡೀವ್ಸ್ ವಿರುದ್ಧ ಸೌಹಾರ್ದ ಪಂದ್ಯವಾಡಿದ ಸುನಿಲ್ ಛೆಟ್ರಿ; 489 ದಿನಗಳ ಬಳಿಕ ಭಾರತಕ್ಕೆ ಮೊದಲ ಜಯ
ಭಾರತ ಫುಟ್ವಾಲ್ ತಂಡವು 16 ತಿಂಗಳ ಬಳಿಕ ಮೊದಲ ಗೆಲುವು ದಾಖಲಿಸಿದೆ. ಮಾಲ್ಡೀವ್ಸ್ ವಿರುದ್ಧ ಸೌಹಾರ್ದ ಪಂದ್ಯದಲ್ಲಿ ಭಾರತ ಗೆದ್ದಿದೆ. ನಿವೃತ್ತಿಯಿಂದ ಹಿಂದೆ ಸರಿದು ಪಂದ್ಯವಾಡಿದ ದಿಗ್ಗಜ ಸುನಿಲ್ ಛೆಟ್ರಿ, ಆಕರ್ಷಕ ಗೋಲು ಗಳಿಸಿ ಅಭಿಮಾನಿಗಳ ಖುಷಿಗೆ ಕಾರಣರಾದರು.

ಮಾಲ್ಡೀವ್ಸ್ ವಿರುದ್ಧದ ಸ್ನೇಹಪರ ಪಂದ್ಯದಲ್ಲಿ ಭಾರತ ಫುಟ್ಬಾಲ್ ತಂಡವು ಭರ್ಜರಿ ಜಯ ಸಾಧಿಸಿದೆ. ಮೇಘಾಲಯದ ಶಿಲ್ಲಾಂಗ್‌ನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಬುಧವಾರ (ಮಾ 19) ನಡೆದ ಸೌಹಾರ್ದ ಪಂದ್ಯದಲ್ಲಿ ಮಾಲ್ಡೀವ್ಸ್ ತಂಡವನ್ನು ಭಾರತ 3-0 ಗೋಲುಗಳಿಂದ ಸೋಲಿಸಿತು. ಕಳೆದ ವರ್ಷವಷ್ಟೇ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳಿದ್ದ ಭಾರತ ಫುಟ್ಬಾಲ್ ರಂಗದ ದಿಗ್ಗಜ ಸುನಿಲ್ ಛೆಟ್ರಿ, ಅಂತಾರಾಷ್ಟ್ರೀಯ ಪುನರಾಗಮನ ಪಂದ್ಯದಲ್ಲಿ ಆಕರ್ಷಕ ಗೋಲು ಗಳಿಸಿ ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಳಿಸಿದರು. ತಮ್ಮ ವೃತ್ತಿಜೀವನದ 95ನೇ ಗೋಲು ಗಳಿಸಿದ ಛೆಟ್ರಿ, ಭಾವುಕರಾದರು.
ಪಂದ್ಯವು ಸಂಪೂರ್ಣ ಏಕಮುಖವಾಗಿ ಸಾಗಿತು. ರಾಹುಲ್ ಭೇಕೆ 35ನೇ ನಿಮಿಷದಲ್ಲಿ ಅದ್ಭುತ ಹೆಡರ್ ಮೂಲಕ ಭಾರತದ ಪರ ಮೊದಲ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 66ನೇ ನಿಮಿಷದಲ್ಲಿ ಲಿಸ್ಟನ್ ಕೊಲಾಕೊ ಅವರ ಮತ್ತೊಂದು ಪ್ರಭಾವಶಾಲಿ ಹೆಡರ್, ತಂಡದ ಅಂಕವನ್ನು ಎರಡಕ್ಕೆ ಏರಿಸಿತು. ನಂತರ 76ನೇ ನಿಮಿಷದಲ್ಲಿ ಭಾರತದ ನಾಯಕ ಸುನಿಲ್ ಛೆಟ್ರಿಯಿಂದ ಬಹುನಿರೀಕ್ಷಿತ ಗೋಲು ಬಂತು. ಇದು ಕೂಡ ಹೆಡರ್ ಆಗಿತ್ತು. ಅಲ್ಲಿಗೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಕಳೆದ ವರ್ಷ, ಅಂದರೆ 2024ರ ಜೂನ್ ತಿಂಗಳಲ್ಲಿ ಕೋಲ್ಕತಾದಲ್ಲಿ ಸೇರಿದ್ದ ಸುಮಾರು 59,000 ಅಭಿಮಾನಿಗಳ ಸಮ್ಮುಖದಲ್ಲಿ ಕುವೈತ್ ವಿರುದ್ಧದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಆಡಿದ ನಂತರ ಛೆಟ್ರಿ ತಮ್ಮ ಅಂತಾರಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಆದರೆ, ಮಾರ್ಚ್ 8ರಂದು ತಮ್ಮ ನಿರ್ಧಾರವನ್ನು ಬದಲಾಯಿಸಿದರು. ಭಾರತದ ಪರ ಮತ್ತೆ ನೀಲಿ ಜೆರ್ಸಿ ತೊಡುವುದಾಗಿ ಘೋಷಿಸಿದರು. 2027ರಲ್ಲಿ ನಡೆಯಲಿರುವ ಏಷ್ಯನ್ ಕಪ್ ಅನ್ನು ಗುರಿಯಾಗಿಸಿಕೊಂಡು ಭಾರತದ ಪರ ಅಂತಾರಾಷ್ಟ್ರೀಯ ಪಂದ್ಯ ಆಡುವುದಾಗಿ ಹೇಳಿದರು.
489 ದಿನಗಳ ನಂತರ ಭಾರತಕ್ಕೆ ಗೆಲುವು
ಸೌಹಾರ್ಧ ಪಂದ್ಯಕ್ಕಾಗಿ ತಮ್ಮ ನಿವೃತ್ತಿಯ ನಿರ್ಧಾರದಿಂದ ಯು ಟರ್ನ್ ಮಾಡಿದ ಭಾರತೀಯ ಫುಟ್ಬಾಲ್ ದಂತಕಥೆ, ಹಲವು ತಿಂಗಳುಗಳ ಬಳಿಕ ಮೊದಲ ಪಂದ್ಯವಾಡಿದರು. ವಿಶೇಷವೆಂದರೆ ಭಾರತ ತಂಡಕ್ಕೆ ಈ ಗೆಲುವು ವಿಶೇಷ. ಬರೋಬ್ಬರಿ 489 ದಿನಗಳ ನಂತರ ಭಾರತ ತಂಡ ಇದೇ ಮೊದಲ ಗೆಲುವು ಸಾಧಿಸಿದೆ. 2023ರ ನವೆಂಬರ್ 16ರಂದು ಕುವೈತ್ ನಗರದಲ್ಲಿ ನಡೆದಿದ್ದ 2026ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕುವೈತ್ ವಿರುದ್ಧ ಭಾರತ ಕೊನೆಯ ಬಾರಿಗೆ ಗೆಲುವು (1-0) ಸಾಧಿಸಿತ್ತು. ಅದಾದ 16 ತಿಂಗಳ ನಂತರ ಭಾರತದ ಮೊದಲ ಗೆಲುವು ಇದಾಗಿದೆ.
ಸುನಿಲ್ ಛೆಟ್ರಿ ಗೋಲು ಗಳಿಸಿದ ಕ್ಷಣ
ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಮೂರನೇ ಸುತ್ತಿನಲ್ಲಿ ಮಾರ್ಚ್ 25ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಭಾರತ ತನ್ನ ಅಭಿಯಾನ ಆರರಂಭಿಸಲಿದೆ. ಅದಕ್ಕೂ ಮುನ್ನ ಈ ಗೆಲುವು ಭಾರತದ ಆತ್ಮವಿಶ್ವಾಸ ಹೆಚ್ಚಿಸಲಿದೆ.
