ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಕೊನೆಯ ಒಲಿಂಪಿಕ್ಸ್; ಪದಕ ಗೆಲ್ಲುವ ಶಪಥ ಮಾಡಿದ ಭಾರತ ಹಾಕಿ ತಂಡ
ಭಾರತ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಅವರ ಕೊನೆಯ ಪಂದ್ಯಾವಳಿಯಾಗಲಿದೆ. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಈ ಬಾರಿ 'ವಿನ್ ಇಟ್ ಫಾರ್ ಶ್ರೀಜೇಶ್' ಎಂಬ ಧ್ಯೇಯದೊಂದಿಗೆ ಕಣಕ್ಕಿಳಿಯುತ್ತಿದೆ.

ಭಾರತ ಹಾಕಿ ತಂಡದಲ್ಲಿ ಸುದೀರ್ಘ ಸಮಯದಿಂದ ಗೋಲ್ ಕೀಪರ್ ಆಗಿ ಯಶಸ್ಸು ಸಾಧಿಸಿರುವ ಅನುಭವಿ ಆಟಗಾರ ಪಿಆರ್ ಶ್ರೀಜೇಶ್ (PR Sreejesh) ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ತಂಡದ ಮಾಜಿ ನಾಯಕ, ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ತಮ್ಮ ಕೊನೆಯ ಪಂದ್ಯಾವಳಿಯಾಗಲಿದೆ ಎಂಬುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹಿರಿಯ ಆಟಗಾರನಿಗೆ ಹಾಕಿ ಇಂಡಿಯಾ ಕೂಡ ಶುಭ ಹಾರೈಸಿದೆ. ಕಳೆದ ಬಾರಿ ನಡೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ತಂಡದ ಭಾಗವಾಗಿದ್ದ ಶ್ರೀಜೇಶ್, ಈ ಬಾರಿಯೂ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರಿಗೆ ಇದು ಕೊನೆಯ ಪಂದ್ಯಾವಳಿ ಆಗಲಿದೆ. ಹೀಗಾಗಿ ಪದಕದೊಂದಿಗೆ ತಮ್ಮ ವೃತ್ತಿಜೀವನಕ್ಕೆ ಪೂರ್ಣವಿರಾಮ ಹಾಕಬೇಕೆಂಬುದು ಅವರು ಬಯಕೆ. ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡ ಕೂಡಾ ಪದಕ ಗೆದ್ದು ಶ್ರೀಜೇಶ್‌ಗೆ ಅರ್ಪಿಸಬೇಕೆಂಬ ಮಹದಾಸೆ ಇಟ್ಟುಕೊಂಡಿದೆ.
“ಅಂತಾರಾಷ್ಟ್ರೀಯ ಹಾಕಿ ಜೀವನದಲ್ಲಿ ನನ್ನ ಅಂತಿಮ ಅಧ್ಯಾಯದ ಹೊಸ್ತಿಲಲ್ಲಿ ನಿಂತಿದ್ದೇನೆ. ಸುದೀರ್ಘ ವರ್ಷಗಳ ಈ ಪ್ರಯಾಣವು ಅಸಾಧಾರಣವಾಗಿದೆ. ವೃತ್ತಿ ಜೀವನದುದ್ದಕ್ಕೂ ನನ್ನ ಕುಟುಂಬ, ಸಹ ಆಟಗಾರರು, ತರಬೇತುದಾರರು ಮತ್ತು ಅಭಿಮಾನಿಗಳಿಂದ ನಾನು ಪಡೆದ ಪ್ರೀತಿ ಮತ್ತು ಅಪಾರ ಬೆಂಬಲಕ್ಕೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ” ಎಂದು ಶ್ರೀಜೇಶ್ ತಮ್ಮ ಕೊನೆಯ ಪಂದ್ಯಾವಳಿ ಕುರಿತು ಹೇಳಿಕೊಂಡಿದ್ದಾರೆ.
ಭಾರತೀಯ ಹಾಕಿ ತಂಡವು ಸದ್ಯ 'ವಿನ್ ಇಟ್ ಫಾರ್ ಶ್ರೀಜೇಶ್' ಎಂಬ ಧ್ಯೇಯದೊಂದಿಗೆ ಒಲಿಂಪಿಕ್ಸ್‌ನಲ್ಲಿ ಅಭಿಯಾನ ಆರಂಭಿಸಲು ಮುಂದಾಗಿದೆ. ಆ ಮೂಲಕ ಹಾಕಿ ದಂತಕಥೆಗೆ ಗೆಲುವಿನ ಉಡುಗೊರೆ ನೀಡಲು ಉತ್ಸುಕವಾಗಿದೆ.
ಸುದೀರ್ಘ ವೃತ್ತಿಜೀವನ
2006ರಲ್ಲಿ ತಮ್ಮ ಹಿರಿಯರ ತಂಡಕ್ಕೆ ಪದಾರ್ಪಣೆ ಮಾಡಿದ ಶ್ರೀಜೇಶ್, ಈಗಾಗಲೇ ಬರೋಬ್ಬರಿ 328 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಮೂರು ಒಲಿಂಪಿಕ್ ಕ್ರೀಡಾಕೂಟಗಳು, ಕಾಮನ್ವೆಲ್ತ್ ಗೇಮ್ಸ್ ಮತ್ತು ವಿಶ್ವಕಪ್ ಪಂದ್ಯಗಳನ್ನು ಆಡಿದ್ದಾರೆ. ಹಿರಿಯ ಆಟಗಾರನಿಗೆ ಈ ಬಾರಿಯ ಪ್ಯಾರಿಸ್ ಕ್ರೀಡಾಕೂಟವು ನಾಲ್ಕನೇ ಒಲಿಂಪಿಕ್ಸ್ ಪಂದ್ಯಾವಳಿ. 2010ರಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಶ್ರೀಜೇಶ್, 2014ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ತಂಡದ ಭಾಗವಾಗಿದ್ದಾರೆ. ಕಳೆದ ಬಾರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ತಂಡದಲ್ಲಿಯೂ ಆಡಿದ್ದಾರೆ. ಸತತ ನಾಲ್ಕು ದಶಕಗಳ ಪದಕಗಳ ಬರವನ್ನು ಭಾರತ ಅಂದು ನೀಗಿಸಿತ್ತು. ಎಫ್ಐಎಚ್ ಹಾಕಿ ಪ್ರೊ ಲೀಗ್ 2021/22ರಲ್ಲಿ ಭಾರತದ ಮೂರನೇ ಸ್ಥಾನ ಸಂಪಾದಿಸುವಲ್ಲಿ ಶ್ರೀಜೇಶ್ ಪ್ರಮುಖ ಪಾತ್ರ ವಹಿಸಿದ್ದರು.
ಶ್ರೀಜೇಶ್ 2021ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದಾರೆ. ಅವರು ಕ್ರಮವಾಗಿ 2021 ಮತ್ತು 2022 ರಲ್ಲಿ ಸತತ ಎಫ್ಐಎಚ್ ಗೋಲ್‌ಕೀಪರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಪಿಆರ್ ಶ್ರೀಜೇಶ್‌ಗಾಗಿ ಗೆಲ್ಲೋಣ
ಶ್ರೀಜೇಶ್ ಅವರಿಗಾಗಿ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆಯನ್ನು ನಾಯಕ ಹರ್ಮನ್‌ಪ್ರೀತ್ ಸಿಂಗ್ ವ್ಯಕ್ತಪಡಿಸಿದ್ದಾರೆ. "ಪ್ಯಾರಿಸ್ ಒಲಿಂಪಿಕ್ಸ್ ನಿಜಕ್ಕೂ ವಿಶೇಷ ಪಂದ್ಯಾವಳಿಯಾಗಿದೆ. ನಮ್ಮ ಅಭಿಯಾನವನ್ನು ದಂತಕಥೆ ಪಿಆರ್ ಶ್ರೀಜೇಶ್ ಅವರಿಗೆ ಅರ್ಪಿಸಲು ನಿರ್ಧರಿಸಿದ್ದೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. 2016ರ ಜೂನಿಯರ್ ವಿಶ್ವಕಪ್‌ನಲ್ಲಿ ನಾವು ಪ್ರಶಸ್ತಿಯನ್ನು ಎತ್ತಿಹಿಡಿದಾಗ ಅವರ ಮಾರ್ಗದರ್ಶನವನ್ನು ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ. ನಾವು ಶ್ರೀಜೇಶ್ ಅವರಿಗಾಗಿ ಗೆಲ್ಲಲು ಬಯಸುತ್ತೇವೆ. ಮತ್ತೊಮ್ಮೆ ಪೋಡಿಯಂ ಮೇಲೆ ನಿಲ್ಲಲು ಹೆಚ್ಚು ಪ್ರೋತ್ಸಾಹ ಪಡೆದಿದ್ದೇವೆ ಎಂದು ಹರ್ಮನ್ ಹೇಳಿದ್ದಾರೆ.
ಇನ್ನಷ್ಟು ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ನೀರಿಗಿಳಿಯೋಕೆ ಭಯಪಡ್ತಿದ್ದೋಳು ಈಗ ಒಲಿಂಪಿಕ್ಸ್‌ನಲ್ಲಿ ಅತ್ಯಂತ ಕಿರಿಯ ಈಜುಪಟು; 14 ವರ್ಷದ ಕನ್ನಡತಿ ಗೆದ್ದಿರೋದು 7 ಚಿನ್ನ!
