ಹಿಮಾನಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಬಲ್ ಒಲಿಂಪಿಕ್ಸ್ ವಿಜೇತ ನೀರಜ್ ಚೋಪ್ರಾ; ಕ್ಯೂಟ್ ಜೋಡಿಯ ಫೋಟೋಸ್ ವೈರಲ್
Neeraj Chopra: ಡಬಲ್ ಒಲಿಂಪಿಕ್ಸ್ ವಿಜೇತ ನೀರಜ್ ಚೋಪ್ರಾ ಅವರು ಹಿಮಾನಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ಯೂಟ್ ಜೋಡಿಯ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಭಾರತದ ಡಬಲ್ ಒಲಿಂಪಿಕ್ಸ್ ವಿಜೇತ ನೀರಜ್ ಚೋಪ್ರಾ ಅವರು ನೂತನ ವರ್ಷದಲ್ಲಿ ತಮ್ಮ ಅಭಿಮಾನಿಗಳಿಗೆ ಅದ್ಭುತ ಮತ್ತು ಆಶ್ಚರ್ಯಕರ ಉಡುಗೊರೆಯನ್ನು ನೀಡಿದ್ದಾರೆ. ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಪತ್ನಿ ಹಿಮಾನಿ ಅವರನ್ನು ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ವರಿಸಿದ್ದಾರೆ. ಜನವರಿ 19ರ ಭಾನುವಾರ ತಮ್ಮ ಮದುವೆ 3 ಫೋಟೋಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಳ್ಳುವ ಮೂಲಕ ನೀರಜ್ ಸಿಹಿ ಸುದ್ದಿ ನೀಡಿದ್ದಾರೆ.
27 ವರ್ಷದ ನೀರಜ್ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು. ತನ್ನ ತಾಯಿ ಜೊತೆಗಿರುವ ಫೋಟೋವನ್ನೂ ಪೋಸ್ಟ್ ಮಾಡಿದ್ದಾರೆ. 'ನನ್ನ ಕುಟುಂಬದೊಂದಿಗೆ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ. ಈ ಕ್ಷಣಕ್ಕೆ ನಮ್ಮನ್ನು ಕರೆತಂದ ಪ್ರತಿಯೊಬ್ಬರ ಆಶೀರ್ವಾದಕ್ಕೂ ಕೃತಜ್ಞರಾಗಿರುತ್ತೇವೆ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಸದ್ಯ ನೀರಜ್ ಅವರ ಪತ್ನಿ ಹಿಮಾನಿ ಯಾರು? ಏನು ಮಾಡುತ್ತಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನೀರಜ್ ಕೂಡ ಈ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ.
ಹಿಮಾನಿ ಯಾರು?
ನೀರಜ್ ಮತ್ತು ಹಿಮಾನಿ ಅವರು ಬಾಲ್ಯದ ಗೆಳೆಯರೇ ಅಥವಾ ಇಬ್ಬರಿಗೂ ಹಳೆಯ ಸಂಬಂಧವಿದೆಯೇ ಅಥವಾ ನೀರಜ್ ತನ್ನ ಮನೆಯವರ ಆಯ್ಕೆಯಂತೆ ಮದುವೆ ಆಗಿದ್ದಾರೆಯೇ ಎಂಬುದು ಸಹ ಸ್ಪಷ್ಟವಾಗಿಲ್ಲ. ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದ ನೀರಜ್, ಅನೇಕ ಸಂದರ್ಶನಗಳಲ್ಲಿ ಯಾವಾಗ ಮದುವೆಯಾಗುತ್ತೀರಿ ಅಥವಾ ಗೆಳತಿ ಇದ್ದಾನೋ ಇಲ್ಲವೋ ಎಂದು ಪ್ರಶ್ನೆ ಕೇಳಲಾಗಿತ್ತು. ಆದರೆ ನೀರಜ್ ಅದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕವೂ ಮದುವೆ ವಿಚಾರವಾಗಿ ಅವರ ಕುಟುಂಬ ಸದಸ್ಯರನ್ನು ಕೇಳಿದ್ದಾಗಲೂ ಏನನ್ನೂ ಹೇಳಿರಲಿಲ್ಲ. ಇದೀಗ ನೀರಜ್ ಸದ್ದಿಲ್ಲದೇ ಮದುವೆಯ ಸುದ್ದಿಯನ್ನು ನೀಡಿ ಅಚ್ಚರಿ ಮೂಡಿಸಿದ್ದಾರೆ.
ನೀರಜ್ ಚೋಪ್ರಾ ಸಾಧನೆಗಳು
ಹರಿಯಾಣದ ಪಾಣಿಪತ್ ಜಿಲ್ಲೆಯ ಖಂಡ್ರಾ ಗ್ರಾಮದವರಾದ ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದಲ್ಲಿ ಹೊಸ ಚರಿತ್ರೆ ಸೃಷ್ಟಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಸಂಪಾದಿಸಿದರು. ಅವರು ಮೊದಲು 2016ರಲ್ಲಿ ಅಂಡರ್-20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ಖ್ಯಾತಿ ಗಳಿಸಿದ್ದ ನೀರಜ್, 2018 ರಲ್ಲಿ ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು.
ಟೊಕಿಯೊ ಒಲಿಂಪಿಕ್ಸ್ 2021ರಲ್ಲಿ ನೀರಜ್ 87.58 ಮೀಟರ್ ಎಸೆದು ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದರು. ಆ ಮೂಲಕ ಅವರು ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯರಾದರು. ನೀರಜ್ ನಂತರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ತಮ್ಮ ಸಾಧನೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಇದಲ್ಲದೆ, ನೀರಜ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಚಿನ್ನ ಮತ್ತು ಡೈಮಂಡ್ ಲೀಗ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
