ಎಫ್ಐಎಚ್ ಹಾಕಿ ಪ್ರೊ ಲೀಗ್; ಬೆಲ್ಜಿಯಂ ವಿರುದ್ಧ ಭಾರತ ಪುರುಷರ ಮತ್ತು ಮಹಿಳಾ ತಂಡಗಳಿಗೆ ಸೋಲು
ಬೆಲ್ಜಿಯಂ ವಿರುದ್ಧದ ಎಫ್ಐಎಚ್ ಹಾಕಿ ಪ್ರೊ ಲೀಗ್ ಪಂದ್ಯದಲ್ಲಿ ಭಾರತ ಪುರುಷರ ಮತ್ತು ವನಿತೆಯರ ಹಾಕಿ ತಂಡ ಸೋಲು ಕಂಡಿದೆ. ಪುರುಷರ ತಂಡ ಕನಿಷ್ಠ ಒಂದು ಗೋಲು ಗಳಿಸಿದರೆ, ಮಹಿಳಾ ತಂಡ ಕನಿಷ್ಠ ಖಾತೆ ತೆರಯಲು ವಿಫಲವಾಯ್ತು.
ಎಫ್ಐಎಚ್ ಹಾಕಿ ಪ್ರೊ ಲೀಗ್ 2023/24ರ (FIH Hockey Pro League 2023/24.) ಯುರೋಪ್ ಹಂತದ ಎರಡನೇ ಪಂದ್ಯದಲ್ಲಿ ಭಾರತೀಯ ಪುರುಷರ ಮತ್ತು ವನಿತೆಯರ ಹಾಕಿ ತಂಡಗಳು ಸೋಲು ಕಂಡಿವೆ. ಶುಕ್ರವಾರ ನಡೆದ ಪಂದ್ಯದಲ್ಲಿ ಪುರುಷರ ತಂಡವು ಬೆಲ್ಜಿಯಂ ವಿರುದ್ಧ 1-4 ಗೋಲುಗಳಿಂದ ಸೋತರೆ, ಮಹಿಳಾ ಹಾಕಿ ತಂಡವು ಬೆಲ್ಜಿಯಂ ವಿರುದ್ಧ 0-2 ಗೋಲುಗಳ ಅಂತರದಿಂದ ಮುಗ್ಗರಿಸಿದೆ.
ಭಾರತ ಪುರುಷರ ತಂಡದ ಪರ 55ನೇ ನಿಮಿಷದಲ್ಲಿ ಅಭಿಷೇಕ್ ಗೋಲು ಏಕೈಕ ಗೋಲು ಬಾರಿಸಿದರು. ಬೆಲ್ಜಿಯಂ ಪುರುಷರ ತಂಡದ ಪರ 22ನೇ ನಿಮಿಷದಲ್ಲಿ ಫೆಲಿಕ್ಸ್ ಡೆನಾಯರ್ ಮೊದಲ ಗೋಲು ಗಳಿಸಿದರೆ, ಅಲೆಕ್ಸಾಂಡರ್ ಹೆಂಡ್ರಿಕ್ಸ್ 34 ಮತ್ತು 60ನೇ ನಿಮಿಷದಲ್ಲಿ ಒಟ್ಟು ಎರಡು ಗೋಲು ಗಳಿಸಿದರು. ಉಳಿದಂತೆ ಸೆಡ್ರಿಕ್ ಚಾರ್ಲಿಯರ್ 49ನೇ ನಿಮಿಷದಲ್ಲಿ ಅಂಕ ತಂದುಕೊಟ್ಟರು.
ಪಂದ್ಯದ ಆರಂಭದಿಂದಲೂ ಬೆಲ್ಜಿಯಂ ತಂಡವು ಭಾರತಕ್ಕೆ ಹೆಚ್ಚು ಅಪಾಯಕಾರಿಯಾಗಿ ಕಾಡಿತು. ಆದರೆ, ಸಂಘಟಿತ ಹೋರಾಟ ನಡೆಸಿದ ಭಾರತೀಯರು ರಕ್ಷಣಾತ್ಮಕ ಆಟವಾಡಿದರು. ಎದುರಾಳಿ ತಂಡ ನೀಡಿದ ಒತ್ತಡವನ್ನು ಅಷ್ಟೇ ಉತ್ತಮವಾಗಿ ನಿಭಾಯಿಸಿತು. ರೋಚಕವಾಗಿ ಸಾಗಿದ ಮೊದಲ ಕ್ವಾರ್ಟರ್ ಬಳಿಕ ಉಭಯ ತಂಡಗಳು ಅಂಕಗಳ ಖಾತೆ ತೆರೆಯಲು ವಿಫಲವಾದವು.
ಪೆನಾಲ್ಟಿ ಕಾರ್ನರ್ ಅವಕಾಶ ಮಿಸ್ ಮಾಡಿಕೊಂಡ ಹರ್ಮನ್ ಪ್ರೀತ್
ಎರಡನೇ ಕ್ವಾರ್ಟರ್ ಇನ್ನೂ ರೋಚಕವಾಯ್ತು. ಮೊದಲ ಮೂರು ನಿಮಿಷಗಳಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಾಕಶ ಸಿಕ್ಕಿತು. ಆದರೆ ಹರ್ಮನ್ ಪ್ರೀತ್ ಅವರ ಶಾಟ್ ಅನ್ನು ಬೆಲ್ಜಿಯಂ ಗೋಲ್ ಕೀಪರ್ ಚಾಣಾಕ್ಷತನದಿಂದ ತಡೆದರು. ಸುತ್ತು ಪೂರ್ಣಗೊಳ್ಳಲು ಎಂಟು ನಿಮಿಷಗಳು ಬಾಕಿ ಇರುವಾಗ ಫೆಲಿಕ್ಸ್ ಡೆನಾಯರ್ ಮೊದಲ ಗೋಲು ಗಳಿಸಿದರು.
ಇದನ್ನೂ ಓದಿ | SRH vs RR live score IPL 2024: ಸನ್‌ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ ಪಂದ್ಯದ ಲೇಟೆಸ್ಟ್ ಅಪ್ಡೇಟ್
ಮೊದಲಾರ್ಧದ ನಂತರ ಭಾರತ ಆಕ್ರಮಣಕಾರಿ ಆಟ ಆರಂಭಿಸಿತು. ಆದರೆ ಬೆಲ್ಜಿಯಂ ಬಲಿಷ್ಠ ಡಿಫೆನ್ಸ್ ಕೋಟೆಯನ್ನು ಭೇದಿಸುವುದು ತಂಡಕ್ಕೆ ಸುಲಭವಾಗಲಿಲ್ಲ. ಅಲೆಕ್ಸಾಂಡರ್ ಹೆಂಡ್ರಿಕ್ಸ್ ಗೋಲಿನೊಂದಿಗೆ ಮೂರನೇ ಕ್ವಾರ್ಟರ್ ಅಂತ್ಯಕ್ಕೆ ಬೆಲ್ಜಿಯಂ 2-0 ಅಂತರದಿಂದ ಮುನ್ನಡೆ ಸಾಧಿಸಿತ್ತು.
ಅಂತಿಮವಾಗಿ ಸೆಡ್ರಿಕ್ ಚಾರ್ಲಿಯರ್ ಗಳಿಸಿದ ಗೋಲಿನಿಂದ ಬೆಲ್ಜಿಯಂ ಮುನ್ನಡೆ 3-0ಕ್ಕೆ ಏರಿಕೆಯಾಯ್ತು. ಪಂದ್ಯ ಮುಗಿಯಲು ಐದು ನಿಮಿಷಗಳು ಬಾಕಿ ಇರುವಾಗ ಭಾರತ ಖಾತೆ ತೆರೆಯಿತು. ಅಭಿಷೇಕ್ 55ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಪಂದ್ಯದ ಕೊನೆಯಲ್ಲಿ ಪೆನಾಲ್ಟಿ ಸ್ಟ್ರೋಕ್ ಮೂಲಕ ಬೆಲ್ಜಿಯಂಗೆ ಅಲೆಕ್ಸಾಂಡರ್ ಗೋಲು ಗಳಿಸಿದರು. ಅಂತಿಮವಾಗಿ ಪಂದ್ಯವನ್ನು ಬೆಲ್ಜಿಯಂ 4-1 ಗೋಲುಗಳಿಂದ ಗೆದ್ದುಕೊಂಡಿತು.
ವನಿತೆಯರ ತಂಡಕ್ಕೂ ಸೋಲು
ಅತ್ತ ವನಿತೆಯರ ತಂಡ ಕೂಡಾ ತನ್ನ ಪಂದ್ಯದಲ್ಲಿ ಮುಗ್ಗರಿಸಿತು. ಬೆಲ್ಜಿಯಂ ಪರ 34ನೇ ನಿಮಿಷದಲ್ಲಿ ಅಲೆಕ್ಸಿಯಾ ಟಿ ಸರ್ಸ್ಟೆವೆನ್ಸ್ ಗೋಲು ಗಳಿಸಿದರೆ, ಲೂಯಿಸ್ ಡೆವೆಟ್ 36ನೇ ನಿಮಿಷದಲ್ಲಿ ಸತತ ಎರಡು ಗೋಲು ಗಳಿಸಿದರು. ಅಂತಿಮವಾಗಿ ಭಾರತೀಯ ಮಹಿಳಾ ಹಾಕಿ ತಂಡವು 0-2 ಅಂತರದಿಂದ ಸೋಲೊಪ್ಪಿತು.
ಇದನ್ನೂ ಓದಿ | ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ; ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು; ಅಶ್ಮಿತಾಗೆ ಸೋಲು
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ