2024ರಲ್ಲಿ ಒಂದೇ ಒಂದು ಗೆಲುವು ಕಾಣದೆ ವರ್ಷದ ಅಭಿಯಾನ ಮುಗಿಸಿದ ಭಾರತ ಫುಟ್ಬಾಲ್ ತಂಡ; 10 ವರ್ಷಗಳಲ್ಲಿ ಇದೇ ಮೊದಲು
ಮಲೇಷ್ಯಾ ವಿರುದ್ಧದ ಸೌಹಾರ್ಧ ಪಂದ್ಯದಲ್ಲಿ ಭಾರತದ 1-1 ಗೋಲುಗಳಿಂದ ಡ್ರಾ ಮಾಡಿಕೊಂಡಿತು. ಇದರೊಂದಿಗೆ ಭಾರತ ಫುಟ್ಬಾಲ್ ತಂಡವು 2024ರಲ್ಲಿ ಆಡಿದ 11 ಪಂದ್ಯಗಳಲ್ಲಿ ಒಂದೇ ಒಂದು ಜಯವಿಲ್ಲದೆ ಅಭಿಯಾನ ಮುಗಿಸಿತು. ಗೋಲ್‌ಕೀಪರ್ ಗುರ್ಪ್ರೀತ್ ಸಿಂಗ್ ಸಂಧು ಅವರಿಗೆ ಇದು ನಿರಾಶಾದಾಯಕ ವರ್ಷವಾಗಿದೆ.
ಭಾರತ ಫುಟ್ಬಾಲ್ ತಂಡವು 2024ರಲ್ಲಿ ಒಂದೇ ಒಂದು ಗೆಲುವು ಕಾಣದೆ ತನ್ನ ವಾರ್ಷಿಕ ಅಭಿಯಾನವನ್ನು ಮುಕ್ತಾಯಗೊಳಿಸಿದೆ. ನವೆಂಬರ್ 18ರ ಸೋಮವಾರ ಹೈದರಾಬಾದ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಫುಟ್‌ಬಾಲ್ ಸೌಹಾರ್ದ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧದ (India vs Malaysia) ಪಂದ್ಯವು 1-1 ಗೋಲುಗಳ ಅಂತರದಲ್ಲಿ ನೀರಸ ಡ್ರಾಗೊಂಡಿತು. ಉಭಯ ತಂಡಗಳು ಕೂಡಾ ಗೆಲುವು ಸಾಧಿಸಲಾಗದೆ ನಿರಾಶೆಗೊಂಡವು. ಇದರೊಂದಿಗೆ ಭಾರತ ಫುಟ್ಬಾಲ್ ತಂಡವು 2024ರಲ್ಲಿ ಆಡಿದ 11 ಪಂದ್ಯಗಳಲ್ಲಿ ಒಂದೂ ಪಂದ್ಯದಲ್ಲಿ ಜಯ ಸಾಧಿಸಲಾಗದೆ ವರ್ಷವನ್ನು ಮುಗಿಸಿದೆ. ಈ ವರ್ಷ ಇದುವೇ ಭಾರತದ ಕೊನೆಯ ಪಂದ್ಯವಾಗಿದೆ.
2014ರ ನಂತರ ಇದೇ ಮೊದಲ ಬಾರಿಗೆ ಭಾರತ ತಂಡವು ವರ್ಷದಲ್ಲಿ ಒಂದೇ ಒಂದು ಗೆಲುವಿಲ್ಲದೆ ವರ್ಷದ ಅಭಿಯಾನ ಅಂತ್ಯಗೊಳಿಸಿದೆ. ಈ ವರ್ಷದಲ್ಲಿ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಮೂರನೇ ಸುತ್ತು ಪ್ರವೇಶ ಸಾಧ್ಯವೆಂಬಂತಿತ್ತು. ಆದರೆ ನಾಲ್ಕು ಡ್ರಾಗಳೊಂದಿಗೆ ವರ್ಷ ಕೊನೆಗೊಂಡಿದೆ. ಈ ನಡುವೆ ತನಗಿಂತ ಕೆಳ ಶ್ರೇಯಾಂಕದ ತಂಡಗಳ ವಿರುದ್ಧ ಒಂದು ಸೋಲು ಹಾಗೂ ಮಲೇಷ್ಯಾ ವಿರುದ್ಧದ ಡ್ರಾ, ಆಟಗಾರರು ಹಾಗೂ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.
ಪಂದ್ಯದ ಮೊದಲಾರ್ಧದ 19ನೇ ನಿಮಿಷದಲ್ಲೇ ಮಲೇಷ್ಯಾ ಮೊದಲ ಗೋಲು ಗಳಿಸಿ ಭಾರತದ ಮೇಲೆ ಒತ್ತಡ ಹೇರಿತು. ಪಾಲೊ ಜೋಸ್ಯೂ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದಕ್ಕೆ ಪ್ರತಿಯಾಗಿ ಪಂದ್ಯದ 39ನೇ ನಿಮಿಷದಲ್ಲಿ ಭಾರತ ಮೊದಲ ಗೋಲು ಗಳಿಸಿತು. ಫೆರ್ನಾಂಡಿಸ್ ಕಾರ್ನರ್ ಕಿಕ್ ಮೂಲಕ ಭೆಕೆ ಸಂಧು ಅವರತ್ತ ಚೆಂಡು ಕಳಿಸಿದರು. ಇದರೊಂದಿಗೆ ಭಾರತ ಸಮಬಲ ಸಾಧಿಸಿ ನಿಟ್ಟುಸಿರು ಬಿಟ್ಟಿತು.
ಮನೋಲೊ ಮಾರ್ಕ್ವೆಜ್ ಕೋಂಚಿಂಗ್‌ಗೆ ಸಿಗದ ಗೆಲುವು
ಭಾರತ ಪುರುಷರ ಫುಟ್ಬಾಲ್ ತಂಡದ ಮುಖ್ಯ ಕೋಚ್ ಆಗಿ ಮನೋಲೊ ಮಾರ್ಕ್ವೆಜ್ ಅವರು ನೇಮಕಗೊಂಡ ಬಳಿಕ, ಭಾರತ ತಂಡಕ್ಕೆ ಇದು ನಾಲ್ಕನೇ ಪಂದ್ಯವಾಗಿತ್ತು. ಆದರೆ ತಂಡವು ಮಾರ್ಕ್ವೆಜ್ ತರಬೇತಿಯಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಕೂಡಾ ಗೆದ್ದಿಲ್ಲ. ಅಲ್ಲದೆ ಭಾರತವು 2024ರಲ್ಲಿ ಒಂದೇ ಒಂದು ಗೆಲುವು ಕಾಣದ ಅನಗತ್ಯ ದಾಖಲೆ ನಿರ್ಮಿಸಿತು. ಭಾರತವು ಮಾರಿಷಸ್ ವಿರುದ್ಧ 0-0 ಡ್ರಾ ಮತ್ತು ಇಂಟರ್‌ಕಾಂಟಿನೆಂಟಲ್ ಕಪ್‌ನಲ್ಲಿ ಸಿರಿಯಾ ವಿರುದ್ಧ 0-3 ರಿಂದ ಸೋತಿತು. ತನ್ನ ಕೊನೆಯ ಫುಟ್ಬಾಲ್ ಸೌಹಾರ್ದ ಪಂದ್ಯದಲ್ಲಿ ವಿಯೆಟ್ನಾಂ ವಿರುದ್ಧ 1-1 ಗೋಲುಗಳಿಂದ ಡ್ರಾ ಮಾಡಿಕೊಂಡಿತ್ತು.