ಒಲಿಂಪಿಕ್ಸ್‌ನಲ್ಲಿ ಸತತ ಕಂಚಿನ ಪದಕ; 52 ವರ್ಷಗಳ ಬಳಿಕ ಅಪರೂಪದ ದಾಖಲೆ ನಿರ್ಮಿಸಿದ ಭಾರತ ಹಾಕಿ ತಂಡ-indian mens hockey team win consecutive bronze medal in olympics medal to end 52 year long wait paris olympics ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಒಲಿಂಪಿಕ್ಸ್‌ನಲ್ಲಿ ಸತತ ಕಂಚಿನ ಪದಕ; 52 ವರ್ಷಗಳ ಬಳಿಕ ಅಪರೂಪದ ದಾಖಲೆ ನಿರ್ಮಿಸಿದ ಭಾರತ ಹಾಕಿ ತಂಡ

ಒಲಿಂಪಿಕ್ಸ್‌ನಲ್ಲಿ ಸತತ ಕಂಚಿನ ಪದಕ; 52 ವರ್ಷಗಳ ಬಳಿಕ ಅಪರೂಪದ ದಾಖಲೆ ನಿರ್ಮಿಸಿದ ಭಾರತ ಹಾಕಿ ತಂಡ

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪೇನ್ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದ ಭಾರತ ಪುರುಷರ ಹಾಕಿ ತಂಡವು, 13ನೇ ಒಲಿಂಪಿಕ್ಸ್ ಪದಕ ಗೆದ್ದುಕೊಂಡಿದೆ. ಕಂಚಿನ ಪದಕ ಗೆಲ್ಲುವ ಮೂಲಕ ಭಾರತ ಅಪರೂಪದ ಸಾಧನೆ ಮಾಡಿದೆ.

52 ವರ್ಷಗಳ ಬಳಿಕ ಅಪರೂಪದ ದಾಖಲೆ ನಿರ್ಮಿಸಿದ ಭಾರತ ಹಾಕಿ ತಂಡ
52 ವರ್ಷಗಳ ಬಳಿಕ ಅಪರೂಪದ ದಾಖಲೆ ನಿರ್ಮಿಸಿದ ಭಾರತ ಹಾಕಿ ತಂಡ (PTI)

ಸ್ಪೇನ್‌ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸುವುದರೊಂದಿಗೆ, ಭಾರತೀಯ ಪುರುಷರ ಹಾಕಿ ತಂಡವು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಕಳೆದ ಬಾರಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೂ ಕಂಚಿನ ಪದಕ ಗೆದ್ದಿದ್ದ ಭಾರತ ತಂಡ, ಈ ಬಾರಿ ಮತ್ತೆ ಅದೇ ಸಾಧನೆಯನ್ನು ಪುನರಾವರ್ತಿಸಿದೆ. ಇದರೊಂದಿಗೆ ಹರ್ಮನ್‌ಪ್ರೀತ್‌ ಸಿಂಗ್‌ ಬಳಗವು ಗಮನಾರ್ಹ ಸಾಧನೆ ಮಾಡಿದೆ. ಸುಮಾರು ಐದು ದಶಕಗಳ ನಂತರ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಸ್ಪೇನ್ ವಿರುದ್ಧ 2-1 ಗೋಲುಗಳ ಅಂತರದ ಜಯದೊಂದಿಗೆ ಭಾರತ ಪುರುಷರ ಹಾಕಿ ತಂಡವನ್ನು ಕಂಚಿನ ಪದಕ ಗೆದ್ದಿರುವುದು ಮಾತ್ರವಲ್ಲದೆ, 1972ರ ನಂತರ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸತತ ಎರಡು ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದ ಸಾಧನೆ ಮಾಡಿದೆ. ಕಳೆದ ಬಾರಿ ಟೋಕಿಯೊದಲ್ಲಿ ಭಾರತವು ಮೂರನೇ ಸ್ಥಾನ ಪಡೆದಿತ್ತು.

ಈ ಹಿಂದೆ 1968 ಮತ್ತು 1972ರ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಸತತವಾಗಿ ಭಾರತ ಪದಕ ಗೆದ್ದಿತ್ತು. ಅದರ ನಂತರ ಒಲಿಂಪಿಕ್ಸ್‌ನಲ್ಲಿ ಸತತ ಯಶಸ್ಸನ್ನು ಪುನರಾವರ್ತಿಸಲು ಆಗಿರಲಿಲ್ಲ. ಆದರೆ ಈ ಬಾರಿ, ಅನುಭವಿ ಗೋಲ್‌ಕೀಪರ್‌ ಪಿಆರ್‌ ಶ್ರೀಜೇಶ್‌ ಅವರಿಗೆ ವಿದಾಯ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಭಾರತಕ್ಕೆ ಇದು ಹಾಕಿಯಲ್ಲಿ 13ನೇ ಪದಕ.

ಸುಮಾರು ಐವತ್ತು ವರ್ಷಗಳ ಹಿಂದೆ ಭಾರತವು 1968ರಲ್ಲಿ ಪಶ್ಚಿಮ ಜರ್ಮನಿಯನ್ನು 2-1 ಅಂತರದಿಂದ ಸೋಲಿಸುವ ಮೂಲಕ ಕಂಚು ಗೆದ್ದಿತ್ತು. ಆ ನಂತರ 1972ರಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಸೋಲಿಸುವ ಮೂಲಕ ಸತತವಾಗಿ ಕಂಚಿನ ಪದಕಗಳನ್ನು ಗೆದ್ದಿತ್ತು. ಅದಾದ ಆರು ವರ್ಷಗಳ ಬಳಿಕ ಭಾರತ ಕೊನೆಯ ಬಾರಿ ಒಲಿಂಪಿಕ್ಸ್‌ನಲ್ಲಿ ಪೋಡಿಯಂ ಫಿನಿಶ್‌ ಮಾಡಿತ್ತು. ಆ ವಿಜಯದ ನಂತರ ಒಲಿಂಪಿಕ್ಸ್‌ ಪದಕಕ್ಕಾಗಿ 41 ವರ್ಷಗಳು ಬೇಕಾದವು. ಇದೀಗ ಈ ಬಾರಿಯೂ ಭಾರತಕ್ಕೆ ಚಿನ್ನವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಗತಕಾಲದ ವೈಭವವನ್ನು ಪ್ಯಾರಿಸ್‌ನಲ್ಲಿ ಮರುಕಳಿಸುವ ಆಸೆ ಕಮರಿದರೂ, ಕಂಚಿನ ಪದಕ್ಕೆ ಭಾರತ ತೃಪ್ತಿ ಪಡೆದಿದೆ.

ಗೋಡೆಯಂತೆ ನಿಂತ ಶ್ರೀಜೇಶ್

ಪಂದ್ಯಾವಳಿಯುದ್ದಕ್ಕೂ ಭಾರತದ ಗೋಲ್‌ ಮಷಿನ್‌ ಆಗಿ ಆಡಿದವರು ನಾಯಕ ಹರ್ಮನ್‌ಪ್ರೀತ್‌ ಸಿಂಗ್.‌ ಇದೇ ವೇಳೆ ತಮ್ಮೆಲ್ಲಾ ಅನುಭವವನ್ನು ಆಟಕ್ಕಾಗಿ ಧಾರೆಯೆರೆದು, ಗೋಲ್‌ ಬಾಕ್ಸ್‌ ಬಳಿ ತಡೆಗೋಡೆಯಂತೆ ನಿಂತವರು ಶ್ರೀಜೇಶ್‌. ಕಂಚಿನ ಪದಕ ಪಂದ್ಯದಲ್ಲೂ ಸ್ಪೇನ್‌ ಪಡೆದ ಹಲವು ಪೆನಾಲ್ಟಿ ಕಾರ್ನರ್‌ ಅವಕಾಶಗಳಿಗೆ ತಡೆಯೊಡ್ಡಿದವರು ಇದೇ ಶ್ರೀಜೇಶ್. ತಮ್ಮ ವಿದಾಯ ಪಂದ್ಯಾವಳಿಯನ್ನು ಖುದ್ದು ಶ್ರೀಜೇಶ್‌ ಅವರೇ ಸ್ಮರಣೀಯವಾಗಿಸಿದ್ದು ಒಂದೆಡೆಯಾದರೆ, ಅವರಿಗೆ ಸಂಪೂರ್ಣ ತಂಡದ ನೆರವು ಸಿಕ್ಕಿತು. ಗ್ರೇಟ್‌ ಬ್ರಿಟನ್‌ ವಿರುದ್ಧದ ರೋಚಕ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ಸಮರ್ಪಣಾಭಾವ ಹೇಗಿತ್ತು ಎಂಬುದು ಇದಕ್ಕೆ ಸ್ಪಷ್ಟ ಉದಾಹರಣೆ.‌

ಭಾರತದ ಗೆಲುವಿನ ಓಟ

ಪ್ಯಾರಿಸ್‌ನಲ್ಲಿ ಪೂಲ್‌ ಹಂತದಲ್ಲಿ ಬಲಿಷ್ಠ ಅರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಭಾರತ ಸೋಲಿಸಿತ್ತು. ಆದರೆ, ಹಾಲಿ ಚಾಂಪಿಯನ್ ಬೆಲ್ಜಿಯಂ ವಿರುದ್ಧ 1-2 ಅಂತರದಲ್ಲಿ ಸೋತಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ರೋಮಾಂಚಕ ಗೆಲುವು ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿತ್ತು. ಜರ್ಮನಿ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ರೋಚಕ ಸೋಲು ಕಂಡಿತು. ಇಂದು ಕಂಚಿನ ಪದಕ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ ಗೆಲುವಿನ ಸಾಧನೆ ಮಾಡಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.