9 ವರ್ಷದ ಮಗುವಿನ ತಾಯಿ ಆಸ್ಟ್ರೇಲಿಯಾ ಖೋ ಖೋ ತಂಡದ ನಾಯಕಿ; ಕೆಲಸಕ್ಕೆ ರಜೆ ಹಾಕಿ ವಿಶ್ವಕಪ್‌ಗೆ ಹಾಜರಾದ ಭಾರತ ಮೂಲದ ಸೋನಮ್ ಗಾರ್ಗ್
ಭಾರತ ಮೂಲದವರಾದ ಸೋನಮ್ ಗಾರ್ಗ್, ಈಗ ಆಸ್ಟ್ರೇಲಿಯಾ ಖೋ ಖೋ ತಂಡದ ನಾಯಕಿ. ಭಾರತದಲ್ಲಿ ತಮ್ಮ ಶಾಲಾ ದಿನಗಳಿಂದಲೇ ಖೋ ಖೋ ಆಡುತ್ತಿದ್ದ ಅವರು, ಸದ್ಯ ಕಾಂಗರೂ ನಾಡಿನಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಅವರು 9 ವರ್ಷದ ಮಗುವಿನ ತಾಯಿಯೂ ಹೌದು.

ಸದ್ಯ ಭಾರತದಲ್ಲಿ ಖೋ ಖೋ ವಿಶ್ವಕಪ್ ಸಂಭ್ರಮ ಜೋರಾಗಿದೆ. ಭಾರತ ಪುರುಷ ಹಾಗೂ ಮಹಿಳೆಯರ ತಂಡಗಳು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಟೂರ್ನಿಯಲ್ಲಿ ವನಿತೆಯರ ವಿಭಾಗದಲ್ಲಿ 19 ದೇಶಗಳ ತಂಡ ಭಾಗವಹಿಸಿದ್ದು, ಹಲವು ತಂಡಗಳಲ್ಲಿ ಭಾರತ ಮೂಲದ ಆಟಗಾರ್ತಿಯರಿದ್ದಾರೆ. ಆಸ್ಟ್ರೇಲಿಯಾ ತಂಡ ಕೂಡಾ ಚೊಚ್ಚಲ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದು, ಗ್ರೂಪ್ ಹಂತದಲ್ಲೇ ಹೊರಬಿದ್ದಿದೆ. ಆದರೆ, ತಂಡದ ನಾಯಕಿ ಮಾತ್ರ ಎಲ್ಲರ ಗಮನ ಸೆಳೆದಿದ್ದರು. ಅವರೇ ಸೋನಮ್ ಗಾರ್ಗ್.
ಸೋನಮ್ ಅವರು, ಭಾರತ ಮೂಲದವರು. ಈಗ ಆಸ್ಟ್ರೇಲಿಯಾ ಖೋ ಖೋ ತಂಡದ ನಾಯಕಿ. ತಮ್ಮ ಶಾಲಾ ದಿನಗಳಿಂದಲೇ ಚಂಡೀಗಢದಲ್ಲಿ ಖೋ ಖೋ ಆಡುತ್ತಿದ್ದ ಅವರು, ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಕಳೆದ 10 ವರ್ಷಗಳಿಂದ ಕಾಂಗರೂ ನಾಡಿನಲ್ಲಿರುವ ಅವರು ಈಗ ಒಂಬತ್ತು ವರ್ಷದ ಮಗುವಿನ ತಾಯಿ. ಅವರ ಕೌಶಲ್ಯ ಹಾಗೂ ಅನುಭವವು ಅವರನ್ನು ಆಸೀಸ್ ತಂಡದ ನಾಯಕಿಯನ್ನಾಗಿ ಮಾಡಿದೆ.
“ನಾನು ಚಂಡೀಗಢದಲ್ಲಿ ಹುಟ್ಟಿ ಬೆಳೆದೆ. ಮದುವೆಯಾದ ಬಳಿಕ 10 ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಬಂದೆ. ನನ್ನ ಶಾಲಾ ದಿನಗಳ ಸಮಯದಲ್ಲಿ ನಾನು ಭಾರತದಲ್ಲಿ ಆಡುತ್ತಿದ್ದೆ. ಅದು 20-22 ವರ್ಷಗಳ ಹಿಂದೆ” ಎಂದು ಸೋನಮ್ ಸುದ್ದಿಸಂಸ್ಥೆ ಪಿಟಿಐ ಭಾಷಾಗೆ ತಿಳಿಸಿದ್ದಾರೆ.
“ಖೋ ಖೋ ವಿಶ್ವಕಪ್ ಎಂದಾಗ ನನಗೆ ನನ್ನ ಬಾಲ್ಯದ ನೆನಪುಗಳೇ ಬಂತು. ನಾನು ಈ ಬಗ್ಗೆ ನಿಜಕ್ಕೂ ಉತ್ಸುಕಳಾದೆ. ಆಸ್ಟ್ರೇಲಿಯಾದಲ್ಲಿ ಖೋ ಖೋ ಸಮಿತಿಯನ್ನು ಸಂಪರ್ಕಿಸಿ ತಂಡವನ್ನು ಸೇರಿಕೊಂಡೆ. ಶೀಘ್ರದಲ್ಲೇ, ನಾನು ತಂಡದ ನಾಯಕಿಯಾದೆ,” ಎಂದು 30 ವರ್ಷದ ಗಾರ್ಗ್ ಹೇಳಿದ್ದಾರೆ. ವೃತ್ತಿಯಲ್ಲಿ ಅವರು ಹಣಕಾಸು ಎಕ್ಸ್‌ಪರ್ಟ್.
ವೃತ್ತಿ-ಕ್ರೀಡೆ ಮತ್ತೆ ಖಾಸಗಿ ಬದುಕಿನ ಸಮತೋಲನ
ಕ್ರೀಡೆ ಎಂದು ಬಂದಾಗ ಸೋನಮ್ ಅವರ ಮುಂದಿದ್ದ ಮೊದಲ ಸವಾಲೇ, ತಮ್ಮ ಕುಟುಂಬ, ಉದ್ಯೋಗ ಮತ್ತು ಕ್ರೀಡೆಯ ನಡುವೆ ಸಮತೋಲನ ಸಾಧಿಸುವುದು. “ನನಗೆ ಒಂಬತ್ತು ವರ್ಷದ ಒಬ್ಬ ಮಗನಿದ್ದಾನೆ. ಪೂರ್ಣ ಸಮಯದ ಕೆಲಸ ಕೂಡಾ ಮಾಡುತ್ತಿದ್ದೇನೆ. ಮನೆ ಮತ್ತು ಹವ್ಯಾಸದ ನಡುವೆ ಸಮತೋಲನ ಸಾಧಿಸುವುದು ಕಷ್ಟಕರವಾಗಿತ್ತು. ಅದು ಸುಲಭದ ಮಾತಲ್ಲ. ಆದರೆ, ಬೆಂಬಲ ನೀಡುವ ಪತಿ ಮತ್ತು ಮಗನ ಸಹಾಯದಿಂದ ನಾನು ಎಲ್ಲವನ್ನೂ ಸಾಧ್ಯವಾಗಿಸಿದ್ದೇನೆ” ಎನ್ನುತ್ತಾರೆ ಗಾರ್ಗ್.
ಕೆಲಸಕ್ಕೆ ರಜೆ ಹಾಕಿ ವಿಶ್ವಕಪ್‌ಗೆ ಹಾಜರಿ
ಸದ್ಯ ಸೋನಮ್ ಅವರು ತಮ್ಮ ಕೆಲಸದಿಂದ ರಜೆ ತೆಗೆದುಕೊಂಡು ವಿಶ್ವಕಪ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಈಗ ಅವರ ಪತಿಯೇ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ. “ಶಾಲೆಗೆ ಹೋಗುವ ನನ್ನ ಮಗನಿಗೆ ಆರು ವಾರಗಳ ಬೇಸಿಗೆ ರಜೆ ಇದೆ. ಹೀಗಾಗಿ ವರ್ಕ್ ಫ್ರಂ ಹೋಮ್ ಮಾಡುತ್ತಿರುವ ನನ್ನ ಪತಿ ಅವನನ್ನು ನೋಡಿಕೊಳ್ಳುತ್ತಾರೆ” ಎಂದು ಗಾರ್ಗ್ ಹೇಳಿದ್ದಾರೆ.
“ನಮ್ಮ ತಂಡವು ವಿಭಿನ್ನ ಹಿನ್ನೆಲೆಯ ಆಟಗಾರರನ್ನು ಹೊಂದಿದೆ. ನಮ್ಮ ತಂಡದಲ್ಲಿ ಭಾರತೀಯರು, ಐರಿಷ್ ಮತ್ತು ಯುರೋಪಿಯನ್ನರು ಕೂಡಾ ಇದ್ದಾರೆ. ಇದು ತುಂಬಾ ವೈವಿಧ್ಯಮಯ ತಂಡವಾಗಿದೆ,” ಎಂದಿದ್ದಾರೆ.
ಕೇವಲ 2-3 ತಿಂಗಳ ತಯಾರಿ
ಕ್ರೀಡೆಗಳನ್ನು ಪ್ರೀತಿಸುವ ಮತ್ತು ಬಹುಸಂಸ್ಕೃತಿ ಇರುವ ಆಸ್ಟ್ರೇಲಿಯಾದಂತಹ ದೇಶದಲ್ಲಿ, ಅಷ್ಟೇನೂ ಪ್ರಸಿದ್ಧಿಯಲ್ಲದ ಕ್ರೀಡೆಗಳಿಗೆ ತಂಡವನ್ನು ಕಟ್ಟುವುದು ಕಷ್ಟದ ಕೆಲಸವಾಗಿರಲಿಲ್ಲ ಎಂದು ಸೋನಮ್ ಹೇಳಿದ್ದಾರೆ. “ಖೋ ಖೋ ವಿಶ್ವಕಪ್ ಬಗ್ಗೆ ಕೇವಲ 2-3 ತಿಂಗಳ ಹಿಂದಷ್ಟೇ ತಿಳಿದುಕೊಂಡೆವು. ಅಲ್ಲಿನ ಸ್ಥಳೀಯರಿಗೆ 'ಖೋ ಖೋ' ಪದದ ಅರ್ಥವೇ ತಿಳಿದಿಲ್ಲ. ಆದರೆ ಅವರು ಅದನ್ನು ಇಷ್ಟಪಡುತ್ತಾರೆ. ಆಸ್ಟ್ರೇಲಿಯಾದಲ್ಲಿ ಅದಕ್ಕೆ ಉತ್ತಮ ಭವಿಷ್ಯ ಇದೆ ಎಂದು ನನಗೆ ಖಚಿತವಾಗಿದೆ” ಎಂದು ಸೋನಮ್ ಹೇಳಿದರು.
