ಆಸ್ಟ್ರೇಲಿಯನ್ ಓಪನ್: ನೊವಾಕ್ ಜೊಕೊವಿಕ್‌ಗೆ ಪ್ರಬಲ ಪೈಪೋಟಿ ನೀಡಿ ಸೋತ ಭಾರತ ಮೂಲದ ನಿಶೇಶ್ ಬಸವರೆಡ್ಡಿ, ವ್ಯಾಪಕ ಶ್ಲಾಘನೆ
Australian Open 2025: ಸರ್ಬಿಯಾದ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್, ಭಾರತ ಮೂಲದ ಅಮೆರಿಕ ಆಟಗಾರ ನಿಶೇಶ್ ಬಸವರೆಡ್ಡಿ ಅವರನ್ನು ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ 2025ರ ಆರಂಭಿಕ ಪಂದ್ಯದಲ್ಲಿಯೇ ಚಾಂಪಿಯನ್ ಆಟಗಾರನಿಗೆ ನಿಶೇಶ್ ಪ್ರಬಲ ಪೈಪೋಟಿ ನೀಡಿದರು.
ಆಸ್ಟ್ರೇಲಿಯನ್ ಓಪನ್ (Australian Open 2025) ಟೆನಿಸ್ ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ಟೂರ್ನಿಯಲ್ಲಿ ಸರ್ಬಿಯಾ ದೊರೆ ನೊವಾಕ್ ಜೊಕೊವಿಕ್ (Novak Djokovic) ಶುಭಾರಂಭ ಮಾಡಿದ್ದಾರೆ. ಆದರೆ, ಮೊದಲ ಸುತ್ತಿನಲ್ಲೇ ಭಾರತ ಮೂಲದ ಆಟಗಾರನೊಬ್ಬ ಜೊಕೊವಿಕ್‌ಗೆ ಪ್ರಬಲ ಪೈಪೋಟಿ ನೀಡಿ ಗಮನ ಸೆಳೆದಿದ್ದಾರೆ. ಅವರೇ ನಿಶೇಶ್ ಬಸವರೆಡ್ಡಿ (Nishesh Basavareddy). ಜೊಕೊವಿಕ್ ವಿರುದ್ಧದ ಮೊದಲ ಸುತ್ತಿನಲ್ಲಿ ಗೆಲ್ಲುವ ಮೂಲಕ ಯುಎಸ್‌ಎ ಪ್ರಜೆ ನಿಶೇಶ್ ಉತ್ತಮ ಆರಂಭ ಪಡೆದರು. ಕೊನೆಗೆ ನಿಶೇಶ್ ಬಸವರೆಡ್ಡಿ ವಿರುದ್ಧ ನೊವಾಕ್ ಜೊಕೊವಿಕ್ 6-4 3-6 4-6 2-6 ಅಂತರದಲ್ಲಿ ಗೆದ್ದರು. ಆದರೆ, ನಿಶೇಶ್ ನೀಡಿದ ಪೈಪೋಟಿಯನ್ನು ಸರ್ಬಿಯಾ ದೊರೆ ಮೆಚ್ಚಿದ್ದಾರೆ.
ನಿಶೇಶ್ ಬಸವರೆಡ್ಡಿ ಮೊದಲ ಸುತ್ತನ್ನು ಸುಲಭವಾಗಿ ಗೆದ್ದರು. ಎರಡನೇ ಸೆಟ್ ನಂತರ ಅವರು ವೇಗವನ್ನು ಕಳೆದುಕೊಂಡರು. ಆ ನಂತರ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಸರ್ಬಿಯಾದ ಆಟಗಾರ ನಾಲ್ಕನೇ ಸೆಟ್‌ನಲ್ಲಿ ಸುಲಭವಾಗಿ ಆಟವನ್ನು ಮುಗಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದರು. ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ವಿಶ್ವದ 7ನೇ ಶ್ರೇಯಾಂಕಿತ ಆಟಗಾರ, ಭಾರತೀಯ ಮೂಲದ ಆಟಗಾರನನ್ನು ಶ್ಲಾಘಿಸಿದ್ದಾರೆ.
ಮೊದಲ ಸೆಟ್ ಸೋತ ನಂತರ, ಜೊಕೊವಿಕ್ ಎರಡನೇ ಸೆಟ್‌ನಲ್ಲಿ ತಮ್ಮ ವೇಗ ಹೆಚ್ಚಿಸಿದರು. ಆದರೆ 19 ವರ್ಷದ ಭಾರತೀಯ ಮೂಲದ ಅಮೆರಿಕ ಆಟಗಾರ ಕೂಡಾ ಪೈಪೋಟಿ ನೀಡಿದರು. ಒಂದು ಹಂತದಲ್ಲಿ ಎರಡನೇ ಸೆಟ್ 3-3ರಲ್ಲಿ ಸಮಬಲವಾಗಿತ್ತು. ಆದರೆ ನಂತರ ದಣಿದ ನಿಶೇಶ್, ಜೊಕೊವಿಕ್‌ಗೆ 6-3 ಅಂತರದಿಂದ ಸೆಟ್ ಬಿಟ್ಟುಕೊಟ್ಟರು.
ಜೊಕೊವಿಕ್ ವಿರುದ್ಧದ ಒಂದು ಗೆಲುವೇ ದೊಡ್ಡದು
ಮೆಲ್ಬೋರ್ನ್‌ನ ರಾಡ್ ಲೇವರ್ ಅರೆನಾದಲ್ಲಿ ಸೋಮವಾರ (ಜ.13) ನಡೆದ ಮೊದಲ ಸುತ್ತಿನ ಮುಖಾಮುಖಿಯಲ್ಲಿ ಅಮೆರಿಕದ ಯುವ ಆಟಗಾರ ಮೊದಲ ಸುತ್ತಿನಲ್ಲಿ 6-4 ಅಂತರದಿಂದ ಜಯಗಳಿಸಿದರು. ಬಸವರೆಡ್ಡಿಗೆ ವೈಲ್ಡ್‌ಕಾರ್ಡ್ ಪ್ರವೇಶ ಸಿಕ್ಕಿದ್ದು, ಜೊಕೊವಿಕ್ ವಿರುದ್ಧದ ಒಂದು ಸುತ್ತಿನ ಗೆಲುವು ಯುವ ಆಟಗಾರನಿಗೆ ಭಾರಿ ಮನ್ನಣೆ ಕೊಟ್ಟಿದೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಅತ್ಯಂತ ಯಶಸ್ವಿ ಆಟಗಾರನಾಗಿರುವ ಜೊಕೊವಿಕ್, ಮೆಲ್ಬೋರ್ನ್‌ನಲ್ಲಿ ದಾಖಲೆಯ 11ನೇ ಪ್ರಶಸ್ತಿ ಗೆಲ್ಲುವ ಗುರಿ ಹಾಕಿಕೊಂಡಿದ್ದಾರೆ.
ಆಂಧ್ರಪ್ರದೇಶದಿಂದ ಅಮೆರಿಕ ಪಯಣ
ಬಸವರೆಡ್ಡಿ ಅವರ ಪೋಷಕರು ಭಾರತ ಮೂಲದವರು. 1999ರಲ್ಲಿ ಅವರು ಆಂಧ್ರಪ್ರದೇಶದಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಿ ಅಲ್ಲೇ ನೆಲೆ ಕಂಡುಕೊಂಡರು. ಬಸವರೆಡ್ಡಿ ಜನಿಸಿದ್ದು ಕ್ಯಾಲಿಫೋರ್ನಿಯಾದಲ್ಲಿ. ಬ್ರಿಯಾನ್ ಸ್ಮಿತ್ ಅವರ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದರು. ಜೂನಿಯರ್ ಮಟ್ಟದಲ್ಲಿ, ವೃತ್ತಿಜೀವನದ ಅತ್ಯುನ್ನತ ಶ್ರೇಯಾಂಕ ಪಡೆದಿರುವ ಅವರು 3ನೇ ಸ್ಥಾನದಲ್ಲಿದ್ದಾರೆ.
ಬಸವರೆಡ್ಡಿ ಇನ್ನೂ ಪೂರ್ಣ ಎಟಿಪಿ ಟೂರ್ ಋತುವನ್ನು ಆಡಿಲ್ಲ. ಅಕ್ಟೋಬರ್‌ನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ತಮ್ಮ ಮೊದಲ ಚಾಲೆಂಜರ್-ಮಟ್ಟದ ಪ್ರಶಸ್ತಿಯನ್ನು ಗೆದ್ದರು. ಇದೇ ವೇಳೆ ಇನ್ನೂ ಎರಡು ಚಾಲೆಂಜರ್ ಸ್ಪರ್ಧೆಗಳಲ್ಲಿ ರನ್ನರ್ ಅಪ್ ಆಗಿದ್ದಾರೆ.
ವ್ಯಾಪಕ ಶ್ಲಾಘನೆ
ಪಂದ್ಯದ ಬಳಿಕ ಜೊಕೊವಿಕ್ ಭಾರತೀಯ ಮೂಲದ ಅಮೆರಿಕ ಆಟಗಾರನನ್ನು ಶ್ಲಾಘಿಸಿದರು. ಒಂದೂವರೆ ಸೆಟ್‌ನಲ್ಲಿ ಉತ್ತಮ ಆಟಗಾರ ಎಂದು ಹೇಳಿದರು. “ಅದು ಅದ್ಭುತವಾಗಿತ್ತು. ಒಂದೂವರೆ ಸೆಟ್‌ವರೆಗೆ ಅವರು ಉತ್ತಮವಾಗಿ ಆಡಿದರು. ಕೋರ್ಟ್‌ನಿಂದ ನಿರ್ಗಮಿಸುವಾಗ ಪಡೆದ ಪ್ರತಿಯೊಂದು ಚಪ್ಪಾಳೆಗೂ ಅವರು ಅರ್ಹರು” ಎಂದು ಜೊಕೊವಿಕ್ ಗೆಲುವಿನ ನಂತರ ಹೇಳಿದ್ದಾರೆ.
