ಪ್ಯಾರಿಸ್ ಒಲಿಂಪಿಕ್ಸ್ ಸೋಲಿನ ಬೆನ್ನಲ್ಲೇ ಟೆನಿಸ್‌ಗೆ ವಿದಾಯ ಘೋಷಿಸಿದ ರೋಹನ್ ಬೋಪಣ್ಣ
ಕರ್ನಾಟಕದ ಹೆಮ್ಮೆಯ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಭಾರತೀಯ ಟೆನಿಸ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಪಂದ್ಯದಲ್ಲೇ ಸೋತು ನಿರ್ಗಮಿಸಿದ ನಂತರ, ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಇದರೊಂದಿಗೆ 2026ರ ಏಷ್ಯನ್ ಕ್ರೀಡಾಕೂಟದಿಂದ ಹೊರಗುಳಿಯಬೇಕಾಯಿತು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಭಾಗಿಯಾಗಿದ್ದ ಭಾರತದ ಅತ್ಯಂತ ಹಿರಿಯ ಆಟಗಾರ ರೋಹನ್ ಬೋಪಣ್ಣ (Rohan Bopanna), ಅಂತಾರಾಷ್ಟ್ರೀಯ ಟೆನಿಸ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಟೆನಿಸ್ ಅಭಿಯಾನವು ಭಾನುವಾರದಂದು ಆರಂಭಿಕ ಸುತ್ತಿನಲ್ಲೇ ಅಂತ್ಯವಾಯ್ತು. ಸ್ಟೇಡ್ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಡೆದ ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಸೋತರು. ಇದೇ ವೇಳೆ ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ಅವರ ಡಬಲ್ಸ್ ಜೋಡಿ ಕೂಡಾ ಸೋಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಭಾರತದ ಟೆನಿಸ್ ಅಭಿಯಾನ ಅಂತ್ಯ ಕಂಡಿತು. ಇದರ ಬೆನ್ನಲ್ಲೇ ಕನ್ನಡಿಗ ರೋಹನ್ ಬೋಪಣ್ಣ ಭಾರತದ ಪರ ಮುಂದೆ ಟೆನಿಸ್ ಆಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ವಿಶ್ವದ 80ನೇ ಶ್ರೇಯಾಂಕಿತ ಆಟಗಾರ ನಗಾಲ್ 68ನೇ ಶ್ರೇಯಾಂಕಿತ ಫ್ರಾನ್ಸ್‌ನ ಕೊರೆಂಟಿನ್ ಮೌಟೆಟ್ ವಿರುದ್ಧ 6-2, 2-6, 7-5 ಸೆಟ್‌ಗಳಲ್ಲಿ ಸೋತರು. ಪುರುಷರ ಡಬಲ್ಸ್ ಜೋಡಿಯು ಆತಿಥೇಯ ರಾಷ್ಟ್ರದ ಗೇಲ್ ಮೊನ್ಫಿಲ್ಸ್ ಮತ್ತು ಎಡ್ವರ್ಡ್ ರೋಜರ್-ವಾಸೆಲಿನ್ ವಿರುದ್ಧ 7-5, 6-2ರ ನೇರ ಸೆಟ್‌ಗಳಲ್ಲಿ ಸೋಲು ಕಂಡಿತ್ತು.
ಒಲಿಂಪಿಕ್ಸ್‌ನಲ್ಲಿ ತಮ್ಮ ಅಭಿಯಾನ ಅಂತ್ಯಗೊಂಡ ಬೆನ್ನಲ್ಲೇ ಕನ್ನಡಿಗ ವಿದಾಯ ಘೋಷಣೆ ಮಾಡಿದ್ದಾರೆ. ಇದರೊಂದಿಗೆ 2026ರಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಿಂದ ಹೊರಗುಳಿಯುವ ನಿರ್ಧಾರಕ್ಕೆ ಬೋಪಣ್ಣ ಬಂದಿದ್ದಾರೆ. ಆದರೆ, ಎಟಿಪಿ ಟೂರ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿದ್ದಾರೆ.
ಈವರೆಗೆ ಆಡಿದ್ದ ನನಗೆ ಬೋನಸ್
“ಇದು ದೇಶಕ್ಕಾಗಿ ಖಂಡಿತವಾಗಿಯೂ ನನ್ನ ಕೊನೆಯ ಈವೆಂಟ್ ಆಗಿ ಉಳಿಯುತ್ತದೆ. ನಾನು ಯಾವ ಹಂತದಲ್ಲಿದ್ದೇನೆ ಎಂಬುದು ನನಗೆ ಸಂಪೂರ್ಣವಾಗಿ ಅರ್ಥವಾಗಿದೆ. ನನ್ನಿಂದ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೂ ನಾನು ಟೆನಿಸ್ ಅನ್ನು ಆನಂದಿಸಲಿದ್ದೇನೆ. ನಾನು ಈವರೆಗೆ ಆಡಿರುವುದೇ ನನಗೆ ದೊಡ್ಡ ಬೋನಸ್. ನಾನು ಎರಡು ದಶಕಗಳ ಕಾಲ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. 2002ರಲ್ಲಿ ಅಂತಾರಾಷ್ಟ್ರೀಯ ಟೆನಿಸ್‌ಗೆ ಪದಾರ್ಪಣೆ ಮಾಡಿ, 22 ವರ್ಷಗಳ ನಂತರವೂ ನಾನು ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ. ಅದರ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ,” ಎಂದು ಬೋಪಣ್ಣ ಹೇಳಿಕೊಂಡಿದ್ದಾರೆ.
ಹೆಮ್ಮೆಯ ಕ್ಷಣ ಯಾವುದು?
ಈಗಾಗಲೇ ಡೇವಿಸ್ ಕಪ್‌ನಿಂದ ನಿವೃತ್ತಿ ಘೋಷಿಸಿರುವ ಬೋಪಣ್ಣ, 2010ರಲ್ಲಿ ಭಾರತ-ಬ್ರೆಜಿಲ್ ನಡುವಿನ ಡೇವಿಸ್ ಕಪ್ ಪಂದ್ಯದಲ್ಲಿ ರಿಕಾರ್ಡೊ ಮೆಲ್ಲೊ ವಿರುದ್ಧದ ಗೆಲುವನ್ನು ಭಾರತದ ಪರ ತಮ್ಮ ಹೆಮ್ಮೆಯ ಕ್ಷಣವೆಂದು ಬಣ್ಣಿಸಿದ್ದಾರೆ.
ಈ ಬಾರಿ ಬೋಪಣ್ಣ ಜೋಡಿಯು ಒಲಿಂಪಿಕ್ಸ್ ಪದಕ ಗೆಲ್ಲುವ ಭಾರತದ ಫೇವರೆಟ್ ಆಟಗಾರರಲ್ಲಿ ಒಬ್ಬರಾಗಿದ್ದರು. 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಭಾರತದ ಲಿಯಾಂಡರ್ ಪೇಸ್ ಸಿಂಗಲ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ನಂತರ, ಭಾರತೀಯರು ಟೆನಿಸ್‌ನಲ್ಲಿ ಇದುವರೆಗೂ ಪದಕ ಗೆದ್ದಿಲ್ಲ. 2016ರ ರಿಯೋ ಒಲಿಂಪಿಕ್ಸ್ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಹಾಗೂ ಬೋಪಣ್ಣ ಜೋಡಿ ನಾಲ್ಕನೇ ಸ್ಥಾನ ಪಡೆದಿದ್ದರು. ಅದರೊಂದಿಗೆ ಕೂದಲೆಳೆ ಅಂತರದಲ್ಲಿ ಪದಕ ಕಳೆದುಕೊಂಡಿದ್ದರು.
ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟ 2024 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಒಲಿಂಪಿಕ್ಸ್: ಲಕ್ಷ್ಯ ಸೇನ್ ಗೆಲುವು, ಆರ್ಚರಿ ತಂಡಕ್ಕೆ ಕ್ವಾರ್ಟರ್ ಫೈನಲ್ನಲ್ಲಿ ಸೋಲು; ಅರ್ಜೆಂಟೀನಾ ವಿರುದ್ಧದ ಹಾಕಿ ಪಂದ್ಯ ಡ್ರಾ
