ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ ನಿಮಗೂ ಉಚಿತ ವೀಸಾ; ಅಟ್ಲಿಸ್ ಸಿಇಒ ಭರವಸೆ
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ ನಿಮಗೂ ಉಚಿತ ವೀಸಾ; ಅಟ್ಲಿಸ್ ಸಿಇಒ ಭರವಸೆ

ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ ನಿಮಗೂ ಉಚಿತ ವೀಸಾ; ಅಟ್ಲಿಸ್ ಸಿಇಒ ಭರವಸೆ

Neeraj Chopra: 2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ ತನ್ನ ಬಳಕೆದಾರರಿಗೆ ಉಚಿತ ವೀಸಾ ನೀಡುವುದಾಗಿ ಅಟ್ಲಿಸ್ ಸಿಇಒ ಮೋಹಕ್ ನಹ್ತಾ ಭರವಸೆ ನೀಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ ಎಲ್ಲರಿಗೂ ಉಚಿತ ವೀಸಾ; ಅಟ್ಲಿಸ್ ಸಿಇಒ ಭರವಸೆ
ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ ಎಲ್ಲರಿಗೂ ಉಚಿತ ವೀಸಾ; ಅಟ್ಲಿಸ್ ಸಿಇಒ ಭರವಸೆ

ಟೊಕಿಯೊ ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ನೀರಜ್ ಚೋಪ್ರಾ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಆಗಸ್ಟ್ 8ರಂದು ನಡೆಯುವ ಜಾವೆಲಿನ್ ಎಸೆತದ ಸ್ಪರ್ಧೆಗೆ ಸಿದ್ಧರಾಗಿದ್ದಾರೆ. ಕಳೆದ 2 ವರ್ಷಗಳಲ್ಲಿ ಪ್ರಮುಖ ಟೂರ್ನಿಗಳಲ್ಲಿ ಹಲವು ಪದಕಗಳನ್ನು ಗೆದ್ದ ನೀರಜ್ ಅವರಿಂದ ಮತ್ತೊಂದು ಸ್ವರ್ಣವನ್ನು ನಿರೀಕ್ಷಿಸಲಾಗಿದೆ. ಇದರ ನಡುವೆ ಆನ್​ಲೈನ್ ವೀಸಾ ಆ್ಯಪ್​ ಅಟ್ಲಿಸ್​​ನ ಸಂಸ್ಥಾಪಕ ಮತ್ತು ಸಿಇಒ ಮೋಹಕ್ ನಹ್ತಾ ಅವರು ವಿಶೇಷ ಆಫರ್​​ವೊಂದನ್ನು ನೀಡಿದ್ದಾರೆ.

ಹಾಲಿ ಒಲಿಂಪಿಕ್ಸ್​ನಲ್ಲಿ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಎಲ್ಲರಿಗೂ ಉಚಿತ ವೀಸಾ ಎಂದು ನಹ್ತಾ ಬಂಪರ್​ ಆಫರ್​ ಘೋಷಿಸಿದ್ದಾರೆ. ಜುಲೈ 30ರ ಮಂಗಳವಾರ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದ ನಹ್ತಾ, ‘ಒಲಿಂಪಿಕ್ಸ್​​ನಲ್ಲಿ ಚೋಪ್ರಾ ಸ್ವರ್ಣ ಜಯಿಸಿದರೆ ನಾನು ಎಲ್ಲರಿಗೂ ಉಚಿತ ವೀಸಾ ಕಳುಹಿಸಿಕೊಡುತ್ತೇನೆ’ ಎಂದು ಬರೆದಿದ್ದರು. ಈ ಆಫರ್​ ಬೆನ್ನಲ್ಲೇ ಅಟ್ಲಿಸ್ ವೆಬ್​ಸೈಟ್​ಗೆ ಭೇಟಿಕೊಟ್ಟವರ ಸಂಖ್ಯೆ 124ರಷ್ಟು ಹೆಚ್ಚಾಗಿದೆ.

ಫ್ರೀ ವೀಸಾ ಬಗ್ಗೆ ನಹ್ತಾ ಸ್ಪಷ್ಟನೆ

ಹೌದು, ನೀರಜ್ ಚೋಪ್ರಾ ಗೋಲ್ಡ್ ಗೆದ್ದರೆ ಎಲ್ಲರಿಗೂ ಉಚಿತ ವೀಸಾ ನೀಡುವುದಾಗಿ ಘೋಷಿಸಿದ್ದೆ. ಈ ಬಗ್ಗೆ ಹಲವರು ಪ್ರಶ್ನೆ ಕೇಳಿದ್ದರು. ಇದೀಗ ಅದಕ್ಕೆ ಸ್ಪಷ್ಟನೆ ಎಂಬಂತೆ ಮಾಹಿತಿ ನೀಡುತ್ತಿದ್ದೇನೆ. ಆಗಸ್ಟ್ 8ರಂದು ಜರುಗುವ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚೋಪ್ರಾ, ಬಂಗಾರದ ಸಾಧನೆ ಮಾಡಿದರೆ ನಮ್ಮ ಎಲ್ಲಾ ಗ್ರಾಹಕರಿಗೆ ಒಂದು ದಿನಕ್ಕೆ ಉಚಿತ ವೀಸಾ ಕೊಡುತ್ತೇವೆ. ಯಾವುದೇ ಶುಲ್ಕ ಪಡೆಯುವುದಿಲ್ಲ, ಒಂದು ರೂಪಾಯಿ ಇಲ್ಲದೆಯೇ ವೀಸಾ ಒದಗಿಸಲಾಗುವುದು. ಒಂದು ದೇಶಕ್ಕೆಂದು ಸೀಮಿತವಲ್ಲ, ನಿಮಗೆ ಇಷ್ಟವಾದ ದೇಶಗಳಿಗೆ ವೀಸಾ ಕೊಡಲಾಗುವುದು ಎಂದು ಹೇಳಿದ್ದಾರೆ.

ನಹ್ತಾ ಅವರ ಲಿಂಕ್ಡ್ಇನ್ ಪೋಸ್ಟ್ ಇಲ್ಲಿದೆ

ಈ ಪೋಸ್ಟ್​ನ ಮುಂದುವರಿದ ಭಾಗವಾಗಿ, ಎಲ್ಲಾ ದೇಶಗಳಿಗೂ ಈ ವೀಸಾ ನೀಡಲಾಗುವುದು. ಈ ವಿಶೇಷ ಆಫರ್​ ದಕ್ಕಿಸಿಕೊಳ್ಳಲು ನೀವು ಎಲ್ಲಿಗೆ ಪ್ರಯಾಣಿಸಲು ಇಚ್ಚಿಸುತ್ತಿರೋ ಅದನ್ನು ಮೊದಲು ಆಯ್ಕೆ ಮಾಡಬೇಕು. ಸ್ಥಳ ಆಯ್ಕೆ ಮಾಡಿದ ನಂತರ ನಿಮ್ಮ ಇಮೇಲ್ ಅನ್ನು ಕಾಮೆಂಟ್​ನಲ್ಲಿ ಹಾಕಿದರೆ ಸಾಕು, ನಿಮಗೆ ಉಚಿತ ವೀಸಾ ಕ್ರೆಡಿಟ್​ನೊಂದಿಗೆ ನಿಮ್ಮ ಹೆಸರಿನಲ್ಲಿ ಖಾತೆ ರಚಿಸುತ್ತೇವೆ ಎಂದು ಆಫರ್ ಪಡೆಯಲು ಏನು ಮಾಡಬೇಕೆಂದು ಬರೆದಿದ್ದಾರೆ. ಇದೀಗ ಸಾವಿರಾರು ಸಂಖ್ಯೆಯಲ್ಲಿ ಕಾಮೆಂಟ್ ಮಾಡುವ ಮೂಲಕ ಈ ಆಫರ್​ ಸ್ವಂತವಾಗಿಸಿಕೊಳ್ಳಲು ಕಾಯುತ್ತಿದ್ದಾರೆ.

ಮೋಹಕ್ ನಹ್ತಾ ಅವರು ಹಾಕಿದ್ದ ಮೊದಲ ಪೋಸ್ಟ್​​ಗೆ ನೆಟ್ಟಿಗರು ಪ್ರಶ್ನೆಗಳ ಸುರಿಮಳೆಗೈದಿದ್ದರು. ಉಚಿತ ವೀಸಾ ಹೇಗೆ ಸಾಧ್ಯವಾಗುತ್ತದೆ, ಎಷ್ಟು ದಿನಗಳ ಕಾಲ ಈ ವಿಶೇಷ ಆಫರ್ ಇರಲಿದೆ, ಯಾರಿಗೆ, ಯಾವ ದೇಶಕ್ಕೆ ಉಚಿತ ವೀಸಾ ಕೊಡುತ್ತೀರಿ, ಉಚಿತ ವೀಸಾ ಪಡೆಯಲು ಏನೆಲ್ಲಾ ಮಾಡಬೇಕು ಎಂಬ ಪ್ರಶ್ನೆಗಳನ್ನೆಲ್ಲಾ ನಹ್ತಾ ಅವರಿಗೆ ಕೇಳಿದ್ದರು. ಇದೀಗ ಈ ಪ್ರಶ್ನೆಗಳಿಗೆ ಉತ್ತರ ಎನ್ನುವಂತೆ ಸ್ಪಷ್ಟನೆ ಪೋಸ್ಟ್​ ಹಾಕುವ ಮೂಲಕ ಅಭಿಮಾನಿಗಳ ಗೊಂದಲಗಳಿಗೆ ಪರಿಹರಿಸಿದ್ದಾರೆ.

ಅಟ್ಲಿಸ್ ಕಂಪನಿ ಸ್ಥಾಪನೆಯಾಗಿದ್ದು ಯಾವಾಗ?

ಅಟ್ಲಿಸ್ ಕಂಪನಿಯನ್ನು 2021ರಲ್ಲಿ ಯುನೈಟೆಡ್ ಸ್ಟೇಟ್ಸ್​​​ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸ್ಥಾಪನೆ ಮಾಡಲಾಯಿತು. ಯುಎಸ್ಎ ಜೊತೆಗೆ ಇದು ಭಾರತದಲ್ಲಿ 2 ಕಚೇರಿಗಳನ್ನು (ಮುಂಬೈ ಮತ್ತು ಗುರುಗ್ರಾಮ್) ಹೊಂದಿದೆ. ವೀಸಾಗಳಿಗೆ ಅರ್ಜಿ ಸಲ್ಲಿಸಲು ಕಂಪನಿಯು ಬಳಕೆದಾರರಿಗೆ ಸಹಾಯ ಮಾಡುತ್ತದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.