ಕನ್ನಡ ಸುದ್ದಿ  /  Sports  /  Indias G Sathiyan Wins First Ever Wtt Feeder Title Beating Manav Thakkar At Beirut 2024 World Table Tennis Jra

ಇತಿಹಾಸ ನಿರ್ಮಿಸಿದ ಭಾರತದ ಜಿ ಸತ್ಯನ್; ವಿಶ್ವ ಟೇಬಲ್ ಟೆನಿಸ್ ಫೀಡರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯನೆಂಬ ದಾಖಲೆ

G Sathiyan: ಡಬ್ಲ್ಯುಟಿಟಿ ಫೀಡರ್ ಸೀರೀಸ್ ಪುರುಷರ ಸಿಂಗಲ್ಸ್ ಟ್ರೋಫಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಜಿ ಸತ್ಯನ್ ಪಾತ್ರರಾಗಿದ್ದಾರೆ. ಫೈನಲ್ ಪಂದ್ಯದಲ್ಲಿ 9ನೇ ಶ್ರೇಯಾಂಕದ ಆಟಗಾರ ಮಾನವ್ ಠಕ್ಕರ್ ವಿರುದ್ಧ ಗೆದ್ದು ಟ್ರೋಫಿ ಗೆಲುವು ತಮ್ಮದಾಗಿಸಿಕೊಂಡರು.

ಇತಿಹಾಸ ನಿರ್ಮಿಸಿದ ಭಾರತದ ಜಿ ಸತ್ಯನ್
ಇತಿಹಾಸ ನಿರ್ಮಿಸಿದ ಭಾರತದ ಜಿ ಸತ್ಯನ್ (AP)

ಭಾರತದ ಸ್ಟಾರ್‌ ಟೇಬಲ್‌ ಟೆನ್ನಿಸ್‌ ಆಟಗಾರ ಜಿ ಸತ್ಯನ್ ವಿಶೇಷ ದಾಖಲೆ ಬರೆದಿದ್ದಾರೆ. ಲೆಬನಾನ್‌ನ ಬೈರುತ್‌ನಲ್ಲಿ ನಡೆದ ಡಬ್ಲ್ಯುಟಿಟಿ (ವಿಶ್ವ ಟೇಬಲ್ ಟೆನಿಸ್) ಫೀಡರ್ ಸೀರೀಸ್ ಟೇಬಲ್‌ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಟ್ರೋಫಿ ಗೆದ್ದ ಮೊದಲ ಭಾರತೀಯ ಎಂಬ ಅಗ್ಗಳಿಕೆಗೆ ಸತ್ಯನ್ ಪಾತ್ರರಾಗಿದ್ದಾರೆ. ಮಾರ್ಚ್‌ 21ರ ಗುರುವಾರ ರಾತ್ರಿ ಡಬ್ಲ್ಯುಟಿಟಿ ಫೀಡರ್ 2024ರ ಕೊನೆಯ ದಿನದಂದು ನಡೆದ ಫೈನಲ್‌ ಪಂದ್ಯದಲ್ಲಿ, ಭಾರತದ ಮತ್ತೋರ್ವ ಆಟಗಾರ ಮಾನವ್ ಠಕ್ಕರ್ ಅವರನ್ನು 3-1 (6-11, 11-7, 11-7, 11-4) ಅಂಕಗಳ ಅಂತರದಿಂದ ಸೋಲಿಸಿ ಈ ವಿಶೇಷ ಸಾಧನೆ ಮಾಡಿದ್ದಾರೆ.

ವಿಶ್ವದ 11ನೇ ಶ್ರೇಯಾಂಕಿತ ಸತ್ಯನ್, ಲೆಬನಾನ್ ರಾಜಧಾನಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ 5ನೇ ಶ್ರೇಯಾಂಕದ ಹರ್ಮೀತ್ ದೇಸಾಯಿ (15-13, 6-11, 11-8, 13-11) ಮತ್ತು ಅಗ್ರ ಶ್ರೇಯಾಂಕದ ಚುವಾಂಗ್ ಚಿಹ್-ಯುವಾನ್ (11-8, 11-13, 11-8, 11-9) ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದರು. ಆದರೆ ಫೈನಲ್ ಪಂದ್ಯದಲ್ಲಿ 9ನೇ ಶ್ರೇಯಾಂಕದ ಆಟಗಾರ ಠಕ್ಕರ್ ಅವರನ್ನು ಎದುರಿಸಿದರು. ಆರಂಭಿಕ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಆಟಗಾರ, ಆ ಬಳಿಕ ಸತತ ಮೂರರಲ್ಲಿ ಗೆದ್ದು ಟ್ರೋಫಿ ಗೆಲುವು ತಮ್ಮದಾಗಿಸಿಕೊಂಡರು.

ಈ ಗೆಲುವಿನೊಂದಿಗೆ, ಡಬ್ಲ್ಯುಟಿಟಿ ಈವೆಂಟ್‌ನಲ್ಲಿ ಮೊದಲ ಪುರುಷರ ಸಿಂಗಲ್ಸ್ ಗೆದ್ದ ಸಾಧನೆಯನ್ನು ಸತ್ಯನ್ ಮಾಡಿದ್ದಾರೆ. ಇದೇ ವೇಳೆ, ಐಟಿಟಿಎಫ್ ಜೆಕ್ ಇಂಟರ್ನ್ಯಾಷನಲ್ ಓಪನ್ 2021ರ ನಂತರ, ಅಂತಾರಾಷ್ಟ್ರೀಯ ಶ್ರೇಯಾಂಕ ಸ್ಪರ್ಧೆಯಲ್ಲಿ ಇದು ಅವರ ಮೊದಲ ಸಿಂಗಲ್ಸ್ ಪ್ರಶಸ್ತಿಯಾಗಿದೆ.

ಇದನ್ನೂ ಓದಿ | ಗುಡ್ ಲಕ್ ಮೈ ಬಿಸ್ಕತ್; ವಿರಾಟ್ ಕೊಹ್ಲಿಗೆ ವಿಶೇಷವಾಗಿ ಶುಭ ಕೋರಿದ ಆರ್​ಸಿಬಿ ಆಪತ್ಭಾಂದವ ಎಬಿ ಡಿವಿಲಿಯರ್ಸ್

ಅತ್ತ, ಚೀನಾದ ಕ್ಸಿಯಾ ಲಿಯನ್ ನಿ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ತಮ್ಮ ಎರಡನೇ ಡಬ್ಲ್ಯುಟಿಟಿ ಫೀಡರ್ ಪ್ರಶಸ್ತಿಯನ್ನು ಗೆದ್ದರು. ಸುಹ್ ಹ್ಯೋ ವೊನ್ ವಿರುದ್ಧ ಅವರು 11-9, 11-5, 11-5 ಅಂಕಗಳ ಅಂತರದಿಂದ ಮೇಲುಗೈ ಸಾಧಿಸಿದರು.

ಡಬಲ್ಸ್‌ನಲ್ಲಿ ನಿರಾಶೆ

ಪುರುಷರ ಡಬಲ್ಸ್‌ನಲ್ಲಿ ಭಾರತದ ಮಾನವ್ ಠಕ್ಕರ್ ಮತ್ತು ಮನುಷ್ ಉತ್ಪಲ್ಭಾಯ್ ಶಾ ಜೋಡಿ 11-5, 7-11, 11-13, 12-14 ಅಂತರದಲ್ಲಿ ಆಂಡಿ ಪಿರೇರಾ ಮತ್ತು ಜಾರ್ಜ್ ಕ್ಯಾಂಪೋಸ್ ವಿರುದ್ಧ ಸೋತು ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಮಿಶ್ರ ಡಬಲ್ಸ್‌ನಲ್ಲಿ ದಿಯಾ ಚಿಟಾಲೆ ಮತ್ತು ಮನುಷ್ ಶಾ ಅವರು ಮಾನವ್ ಮತ್ತು ಅರ್ಚನಾ ಕಾಮತ್ ಅವರನ್ನು 3-1 (11-6, 10-12, 11-6, 11-6) ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದರು.

ವಿಭಾಗ