ಪುರುಷರ 4X400 ಮೀ, ಮಿಶ್ರ 4X400 ಮೀ ಓಟ; ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯದ ಭಾರತದ ತಂಡಗಳು
ವಿಶ್ವ ಅಥ್ಲೆಟಿಕ್ಸ್ ರಿಲೇಗಳಲ್ಲಿ ಪುರುಷರ 4X400 ಮೀಟರ್, ಮಿಶ್ರ 4X400 ಮೀಟರ್ ಓಟದ ಭಾರತದ ತಂಡಗಳು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯುವಲ್ಲಿ ವಿಫಲಗೊಂಡಿವೆ.

ಈ ವರ್ಷದ ಕೊನೆಯಲ್ಲಿ ಟೊಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯಲು ಪುರುಷರ 4×400 ಮೀಟರ್ ಮತ್ತು ಮಿಶ್ರ 4×400 ಮೀಟರ್ ತಂಡಗಳು ವಿಫಲವಾದ ಕಾರಣ ವಿಶ್ವ ಅಥ್ಲೆಟಿಕ್ಸ್ ರಿಲೇಗಳಲ್ಲಿ ಭಾರತದ ಅಭಿಯಾನವು ನಿರಾಶೆಯಲ್ಲಿ ಕೊನೆಗೊಂಡಿತು.
ಮಿಶ್ರ 4×400 ಮೀಟರ್ ಓಟದಲ್ಲಿ ಸಂತೋಷ್ ಕುಮಾರ್ ತಮಿಳರಸನ್, ರೂಪಲ್ ಚೌಧರಿ, ತೆನ್ನರಸು ಕಾಯಲ್ವಿಜಿ ವಿಶಾಲ್ ಮತ್ತು ಶುಭಾ ವೆಂಕಟೇಶನ್ ಅವರನ್ನು ಒಳಗೊಂಡ ತಂಡ 3 ನಿಮಿಷ 14.81 ಸೆಕೆಂಡುಗಳಲ್ಲಿ ಗುರಿ ತಲುಪಿ 4ನೇ ಸ್ಥಾನ ಪಡೆಯಿತು. 2 ಹೀಟ್ಸ್ನಲ್ಲಿ ಅಗ್ರ 3 ತಂಡಗಳು ಸೆಪ್ಟೆಂಬರ್ 13-21ರವರೆಗೆ ಜಪಾನ್ನ ರಾಜಧಾನಿಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿವೆ.
ಶನಿವಾರ ನಡೆದ ಸ್ಪರ್ಧೆಯಲ್ಲಿ ಭಾರತೀಯರು 3:16.85 ಸೆಕೆಂಡುಗಳಲ್ಲಿ ಗುರಿ ತಲುಪಿ ಐದನೇ ಸ್ಥಾನ ಪಡೆದಿದ್ದರು. ವಿಶ್ವ ಚಾಂಪಿಯನ್ಶಿಪ್ ಸ್ಥಾನ ಕಾಯ್ದಿರಿಸಲು ಭಾರತಕ್ಕೆ ಮತ್ತೊಂದು ಅವಕಾಶ ಸಿಕ್ಕಿತ್ತು. ಆದರೆ ಸಾಧ್ಯವಾಗಲಿಲ್ಲ. 8 ತಂಡಗಳು ಶನಿವಾರ ತಮ್ಮ ವಿಶ್ವ ಚಾಂಪಿಯನ್ ಶಿಪ್ ಸ್ಥಾನಗಳನ್ನು ಕಾಯ್ದಿರಿಸಿವೆ.
ಪುರುಷರ ತಂಡಕ್ಕೂ ಸೋಲು
ಪುರುಷರ 4×400 ಮೀಟರ್ ಓಟದಲ್ಲಿ ಜಯ್ ಕುಮಾರ್, ಧರ್ಮವೀರ್ ಚೌಧರಿ, ತೆಕ್ಕಿನಾಲಿಲ್ ಸಾಜಿ ಮನು ಮತ್ತು ರಿನ್ಸ್ ಜೋಸೆಫ್ ಅವರನ್ನೊಳಗೊಂಡ ತಂಡ 3:04.49 ಸೆಕೆಂಡುಗಳಲ್ಲಿ ಗುರಿ ತಲುಪಿ 7ನೇ ಸ್ಥಾನ ಪಡೆಯಿತು. ಶನಿವಾರ ನಡೆದ ಪುರುಷರ 4×400 ಮೀಟರ್ ಓಟದಲ್ಲಿ ಭಾರತ 3:03.92 ಸೆಕೆಂಡುಗಳಲ್ಲಿ ಗುರಿ ತಲುಪಿ ಐದನೇ ಸ್ಥಾನ ಪಡೆದಿತ್ತು. ವಿಶ್ವ ಚಾಂಪಿಯನ್ಶಿಪ್ ಸ್ಥಾನ ಕಾಯ್ದಿರಿಸಲು ಅವರಿಗೂ ಭಾನುವಾರ ಮತ್ತೊಂದು ಅವಕಾಶ ಸಿಕ್ಕಿತ್ತಾದರೂ ಸಾಧ್ಯವಾಗಲಿಲ್ಲ.
ಪುರುಷರ ಮತ್ತು ಮಹಿಳೆಯರ 4×100 ಮೀಟರ್ ಮತ್ತು 4×400 ಮೀಟರ್ ಮತ್ತು ಮಿಶ್ರ 4×400 ಮೀಟರ್ನಲ್ಲಿ ಅಗ್ರ 14 ತಂಡಗಳು ಟೊಕಿಯೊ ವಿಶ್ವ ಚಾಂಪಿಯನ್ಶಿಪ್ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತವೆ. ಅರ್ಹತಾ ಅವಧಿಯಲ್ಲಿ ಅಗ್ರ ಪಟ್ಟಿಗಳ ಆಧಾರದ ಮೇಲೆ ಪ್ರತಿ ಸ್ಪರ್ಧೆಯಲ್ಲಿ ಉಳಿದ 2 ಸ್ಥಾನ ನೀಡಲಾಗುತ್ತದೆ. ಭಾರತವು ಈಗ ಉಳಿದಿರುವ 2 ತಂಡಗಳಲ್ಲಿ ಒಂದಾಗಲು ಆಶಿಸುತ್ತದೆ. ಅರ್ಹತಾ ವಿಂಡೋದಲ್ಲಿ ಸ್ಪರ್ಧೆಗಳಲ್ಲಿ ಉತ್ತಮ ಸಮಯವನ್ನು ಗಳಿಸಲು ಪ್ರಯತ್ನಿಸುತ್ತದೆ.
ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿರಲಿಲ್ಲ
ಹಂಗೇರಿಯಲ್ಲಿ ನಡೆದ 2023ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ದೇಶವು ಪುರುಷರ 4×400 ಮೀಟರ್ ಸ್ಪರ್ಧೆಯಲ್ಲಿ ಸ್ಪರ್ಧಿಸಿತ್ತು. ಅಲ್ಲಿ ಭಾರತೀಯ ಕ್ವಾರ್ಟೆಟ್ 2:59.05ರ ಏಷ್ಯನ್ ದಾಖಲೆಯೊಂದಿಗೆ ಹೀಟ್ ರೇಸ್ನಲ್ಲಿ 2ನೇ ಸ್ಥಾನ ಪಡೆಯುವ ಮೊದಲು ಯುನೈಟೆಡ್ ಸ್ಟೇಟ್ಸ್ಗೆ ಆತಂಕ ಸೃಷ್ಟಿಸಿತ್ತು. ಮೊಹಮ್ಮದ್ ಅನಾಸ್, ಅಮೋಜ್ ಜಾಕೋಬ್, ರಾಜೇಶ್ ರಮೇಶ್ ಮತ್ತು ಮುಹಮ್ಮದ್ ಅಜ್ಮಲ್ ಅವರನ್ನೊಳಗೊಂಡ ಭಾರತ ತಂಡ ಫೈನಲ್ನಲ್ಲಿ 5ನೇ ಸ್ಥಾನ ಪಡೆದಿತ್ತು.
ಆದಾಗ್ಯೂ, ಅದೇ ತಂಡವು ಹೀಟ್ ರೇಸ್ನಲ್ಲಿ ನಾಲ್ಕನೇ ಸ್ಥಾನ ಪಡೆದ ಕಾರಣ 2024ರ ಪ್ಯಾರಿಸ್ ಒಲಿಂಪಿಕ್ಸ್ಗೆ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. ಇದೀಗ 2023ರ ವಿಶ್ವ ಚಾಂಪಿಯನ್ಶಿಪ್ ಮತ್ತು 2024ರ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದ ಅಥ್ಲೀಟ್ಗಳನ್ನು ಹೊರಗಿಟ್ಟು ಪುರುಷರ 4×400 ಮೀಟರ್ ರಿಲೇಯಲ್ಲಿ ಭಾರತ ಹೊಸ ತಂಡವನ್ನು ಕಣಕ್ಕಿಳಿಸಿತ್ತು.