Border-Gavaskar Trophy: ಆಸೀಸ್ ಬಳಗದಲ್ಲಿ ಮಾಯದ ಗಾಯ; ಮೊದಲ ಟೆಸ್ಟ್‌ನಿಂದ ಇಬ್ಬರು ಹೊರಕ್ಕೆ
ಈಗಾಗಲೇ ಗಾಯದ ಸಮಸ್ಯೆಯಿಂದಾಗಿ, ಸರಣಿಯ ಆರಂಭಿಕ ಪಂದ್ಯದಿಂದ ಮಿಚೆಲ್ ಸ್ಟಾರ್ಕ್ ಹೊರಬಿದ್ದಿದ್ದಾರೆ. ಅದರ ಬೆನ್ನಲ್ಲೇ ಹೇಜಲ್‌ವುಡ್ ಕೂಡಾ ಹೊರಬಿದ್ದಿದ್ದು, ಆಸೀಸ್ ಬಳಗಕ್ಕೆ ತುಸು ಹಿನ್ನಡೆಯಾಗಲಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಮಹತ್ವದ ಬಾರ್ಡರ್ ಗವಾಸ್ಕರ್ ಟ್ರೋಫಿ ಆರಂಭವಾಗಲಿದೆ. ಟೆಸ್ಟ್ ಸರಣಿಗಾಗಿ ಭಾರತ ಹಾಗೂ ಆಸೀಸ್ ತಂಡಗಳು ಈಗಾಗಲೇ ಅಭ್ಯಾಸ ಆರಂಭಿಸಿದೆ. ಫೆಬ್ರವರಿ 9ರಂದು ನಾಗ್ಪುರದಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದ್ದು, ಅದಕ್ಕೂ ಮುನ್ನ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಗುಮ್ಮ ಕಾಡುತ್ತಿದೆ.
ಟ್ರೆಂಡಿಂಗ್ ಸುದ್ದಿ
ಗಾಯದಿಂದಾಗಿ ಉದ್ಘಾಟನಾ ಪಂದ್ಯವನ್ನು ತಂಡದ ಪ್ರಮುಖ ವೇಗಿ ಜೋಶ್ ಹ್ಯಾಜಲ್‌ವುಡ್ ಕಳೆದುಕೊಳ್ಳಲಿದ್ದಾರೆ. ಇದು ಕಾಂಗರೂ ಪಾಳಯಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಇದಲ್ಲದೆ, ದೆಹಲಿಯಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೂ ಅವರು ಲಭ್ಯವಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಸಿಡ್ನಿ ಟೆಸ್ಟ್‌ನಲ್ಲಿ ಬೌಲಿಂಗ್ ಮಾಡುವಾಗ ಉಂಟಾದ ಎಡಗಾಲಿನ ಗಾಯದಿಂದಾಗಿ ಹ್ಯಾಜಲ್‌ವುಡ್ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಇವರಿಗೆ ಸರಣಿಗೂ ಮುಂಚಿತವಾಗಿ ನಡೆದ ಅಭ್ಯಾಸ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಫೆಬ್ರವರಿ 7ರಂದು ಬೌಲಿಂಗ್ ಅನ್ನು ಪುನರಾರಂಭಿಸುವ ನಿರೀಕ್ಷೆಯಿದೆ. ಪ್ರಮುಖ ಬೌಲರ್ ಅನುಪಸ್ಥಿತಿಯಿಂದಾಗಿ, ಆಸೀಸ್‌ನ ಮತ್ತೋರ್ವ ವೇಗಿ ಸ್ಕಾಟ್ ಬೋಲ್ಯಾಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.
ಈಗಾಗಲೇ ಗಾಯದ ಸಮಸ್ಯೆಯಿಂದಾಗಿ, ಸರಣಿಯ ಆರಂಭಿಕ ಪಂದ್ಯದಿಂದ ಮಿಚೆಲ್ ಸ್ಟಾರ್ಕ್ ಹೊರಬಿದ್ದಿದ್ದಾರೆ. ಅದರ ಬೆನ್ನಲ್ಲೇ ಹೇಜಲ್‌ವುಡ್ ಕೂಡಾ ಹೊರಬಿದ್ದಿದ್ದು, ಆಸೀಸ್ ಬಳಗಕ್ಕೆ ತುಸು ಹಿನ್ನಡೆಯಾಗಲಿದೆ. ಇಬ್ಬರು ಅನುಭವಿಗಳ ಅನುಪಸ್ಥಿತಿಯಿಂದಾಗಿ ಭಾರತ ತಂಡಕ್ಕೆ ಅನುಕೂಲವಾಗಲಿದೆ.
“ಮೊದಲ ಟೆಸ್ಟ್‌ನಲ್ಲಿ ಆಡುವ ಬಗ್ಗೆ ಖಚಿತವಾಗಿಲ್ಲ. ಪಂದ್ಯಕ್ಕೆ ಇನ್ನೂ ಕೆಲ ದಿನಗಳು ಬಾಕಿಯಿವೆ. ಆದರೆ, ಎರಡನೆಯ ಪಂದ್ಯದ ವೇಳೆಗೆ ಎಲ್ಲವೂ ಸರಿಹೋಗುವ ನಿರೀಕ್ಷೆಯಿದೆ. ಒಂದು ವಾರದೊಳಗೆ ಪರಿಸ್ಥಿತಿ ಸರಿ ಹೋಗಬಹುದು. ಮುಂದಿನ ಮಂಗಳವಾರ ಮೈದಾನಕ್ಕಿಳಿದು ಆಡಬಹುದು ಎಂಬ ಬಗ್ಗೆ ಭರವಸೆ ಇದೆ,” ಎಂದು ಹ್ಯಾಜಲ್‌ವುಡ್ ಭಾನುವಾರ ಹೇಳಿದ್ದಾರೆ.
ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಕೂಡಾ ಗಾಯದಿಂದಾಗಿ ಟೆಸ್ಟ್‌ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಇತರ ಸೀಮರ್‌ಗಳಾದ ಸ್ಕಾಟ್ ಬೋಲ್ಯಾಂಡ್ ಮತ್ತು ಅನ್‌ಕ್ಯಾಪ್ಡ್ ಆಟಗಾರ ಕ್ವಿಕ್ ಲ್ಯಾನ್ಸ್ ಮೋರಿಸ್ ಅವರು ತಂಡದಲ್ಲಿ ಸ್ಥಾನ ಪಡೆಯಬಹುದು. ನಾಯಕ ಪ್ಯಾಟ್ ಕಮಿನ್ಸ್ ವೇಗದ ಪಡೆಯನ್ನು ನೋಡಿಕೊಳ್ಳಲಿದ್ದಾರೆ.
ಸದ್ಯ ವಿಶ್ವ ಟೆಸ್ಟ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಕ್ರಮವಾಗಿ ನಂಬರ್ 1 ಮತ್ತು 2ನೇ ಸ್ಥಾನದಲ್ಲಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023ರಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿವೆ. ಆದರೆ, ಭಾರತ ಈ ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ ಟೆಸ್ಟ್ ಸರಣಿಯನ್ನು ಭಾರತ ಗೆಲ್ಲಬೇಕಿದೆ.
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಟ್ ರೆನ್‌ಶಾ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್
ಮೊದಲ ಎರಡು ಟೆಸ್ಟ್‌ಗಳಿಗೆ ಭಾರತದ ಟೆಸ್ಟ್ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್(ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್ ಅಶ್ವಿನ್ , ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.