IPL 2023: ಗುಜರಾತ್ ಟೈಟಾನ್ಸ್‌ಗೆ ಭಾರಿ ಹೊಡೆತ; ಗಾಯಾಳು ವಿಲಿಯಮ್ಸನ್ ಐಪಿಎಲ್‌ನಿಂದಲೇ ಹೊರಕ್ಕೆ!
ಕನ್ನಡ ಸುದ್ದಿ  /  ಕ್ರೀಡೆ  /  Ipl 2023: ಗುಜರಾತ್ ಟೈಟಾನ್ಸ್‌ಗೆ ಭಾರಿ ಹೊಡೆತ; ಗಾಯಾಳು ವಿಲಿಯಮ್ಸನ್ ಐಪಿಎಲ್‌ನಿಂದಲೇ ಹೊರಕ್ಕೆ!

IPL 2023: ಗುಜರಾತ್ ಟೈಟಾನ್ಸ್‌ಗೆ ಭಾರಿ ಹೊಡೆತ; ಗಾಯಾಳು ವಿಲಿಯಮ್ಸನ್ ಐಪಿಎಲ್‌ನಿಂದಲೇ ಹೊರಕ್ಕೆ!

ಹೆಚ್ಚಿನ ಆರೋಗ್ಯ ತಪಾಸಣೆಗಾಗಿ ವಿಲಿಯಮ್ಸನ್ ನ್ಯೂಜಿಲೆಂಡ್‌ಗೆ ತೆರಳಲಿದ್ದಾರೆ. ಗುಜರಾತ್ ಟೈಟಾನ್ಸ್ ತಂಡವು ಬಲಗೈ ಬ್ಯಾಟರ್‌ಗೆ ಬದಲಿ ಆಟಗಾರನನ್ನು ಅಂತಿಮಗೊಳಿಸಲಿದ್ದು, ಸೂಕ್ತ ಸಮಯದಲ್ಲಿ ಘೋಷಣೆ ಮಾಡಲಿದೆ.

ಗಾಯಗೊಂಡ ಕೇನ್ ವಿಲಿಯಮ್ಸನ್‌ಗೆ ಸಹ ಆಟಗಾರರು ಪೆವಿಲಿಯನ್‌ಗೆ ಮರಳಲು  ನೆರವಾದರು
ಗಾಯಗೊಂಡ ಕೇನ್ ವಿಲಿಯಮ್ಸನ್‌ಗೆ ಸಹ ಆಟಗಾರರು ಪೆವಿಲಿಯನ್‌ಗೆ ಮರಳಲು ನೆರವಾದರು (AFP)

ಗುಜರಾತ್ ಟೈಟಾನ್ಸ್ ತಂಡದ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್, ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023ರ ಎಲ್ಲಾ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಆಟಗಾರ ಗಾಯಗೊಂಡಿದ್ದರು. ಬೌಂಡರಿ ಲೈನ್‌ ಬಳಿ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ ವಿಲಿಯಮ್ಸನ್ ಅವರ ಬಲ ಮೊಣಕಾಲಿಗೆ ಗಾಯವಾಗಿತ್ತು.

“ಟೂರ್ನಮೆಂಟ್‌ನಲ್ಲಿ ಕೇನ್ ಅವರನ್ನು ಗಾಯದಿಂದ ಕಳೆದುಕೊಂಡಿರುವುದು ಬೇಸರ ತರಿಸಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಅವರು ಶೀಘ್ರದಲ್ಲೇ ಮೈದಾನಕ್ಕಿಳಿಯುವ ಭರವಸೆ ಇದೆ” ಎಂದು ಗುಜರಾತ್‌ ತಂಡದ ಕೋಚ್ ವಿಕ್ರಮ್ ಸೋಲಂಕಿ ಹೇಳಿದ್ದಾರೆ.

ವಿಲಿಯಮ್ಸನ್ ಈಗ ಹೆಚ್ಚಿನ ಆರೋಗ್ಯ ಮೌಲ್ಯಮಾಪನಕ್ಕಾಗಿ ನ್ಯೂಜಿಲೆಂಡ್‌ಗೆ ತೆರಳಲಿದ್ದಾರೆ. ಗುಜರಾತ್ ಟೈಟಾನ್ಸ್ ಬಲಗೈ ಬ್ಯಾಟರ್‌ಗೆ ಬದಲಿ ಆಟಗಾರನನ್ನು ಅಂತಿಮಗೊಳಿಸಲಿದ್ದು, ಸೂಕ್ತ ಸಮಯದಲ್ಲಿ ಘೋಷಣೆ ಮಾಡಲಿದೆ.

ಆಗಿದ್ದೇನು?

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಜೋಶುವಾ ಲಿಟಲ್ ಎಸೆದ 12.3 ಓವರ್​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಬ್ಯಾಟ್ಸ್​​​ಮನ್​​ ಋತುರಾಜ್​ ಗಾಯಕ್ವಾಡ್​ ಮಿಡ್​ ವಿಕೆಟ್‌​ನತ್ತ ಸಿಕ್ಸರ್​ ಬಾರಿಸಲು ಯತ್ನಿಸಿದರು. ಈ ಮಿಡ್​​​​​ ವಿಕೆಟ್‌​ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದ​ ವಿಲಿಯಮ್ಸನ್​​​, ಋತುರಾಜ್​ ಕ್ಯಾಚ್ ಹಿಡಿಯಲು ಯತ್ನಿಸಿ ಗಾಯಗೊಂಡಿದ್ದರು. ಕೇನ್​​, ಚೆಂಡು ತಡೆದ ಬಳಿಕ ಕೆಳಗೆ ಬಿದ್ದರು. ಆ ಸಂದರ್ಭದಲ್ಲಿ ಅವರ ಕಾಲು ಉರುಳಿದಂತೆ ಕಂಡು ಬಂತು. ತಕ್ಷಣವೇ ಫಿಸಿಯೋ ಅವರಿಗೆ ಚಿಕಿತ್ಸೆ ನೀಡಿದರು. ಬಳಿಕ​ ಇಬ್ಬರ ಹೆಗಲು ಹಿಡಿದು ಕೇನ್‌ ಮೈದಾನ ತೊರೆಯಬೇಕಾಯಿತು.

ಗಾಯದಿಂದ ಕೇನ್‌ ಹೊರನಡೆದ ಬಳಿಕ ಮತ್ತೆ ಮೈದಾನಕೆ ಬರಲಿಲ್ಲ. ಬ್ಯಾಟಿಂಗ್‌ ಇವರ ಬದಲಿಗೆ ಇಂಪ್ಯಾಕ್ಟ್‌ ಪ್ಲೇಯರ್‌ ಅನ್ನು ಕಣಕ್ಕಿಳಿಸಲಾಯ್ತು. ಹೊಸ ನಿಯಮದಂತೆ ಬದಲಿ ಆಟಗಾರನಾಗಿ ಬಿ ಸಾಯಿ ಸುದರ್ಶನ್ ಮೈದಾನಕ್ಕಿಳಿದರು.

ಕೇನ್​​ ವಿಲಿಯಮ್ಸನ್ ಈ ಹಿಂದಿನ ಐಪಿಎಲ್‌ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್​ ತಂಡದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ಕಳೆದ ವರ್ಷ ಎಸ್‌ಆರ್‌ಹೆಚ್ ತಂಡವು 8ನೇ ಸ್ಥಾನ ಪಡೆದಿತ್ತು.‌ ಅಲ್ಲದೆ ವಿಲಿಯಮ್ಸನ್‌ ಕೂಡಾ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಹೀಗಾಗಿ ಫ್ರಾಂಚೈಸಿ ಅವರನ್ನು ತಂಡದಿಂದ ಬಿಡುಗಡೆ ಮಾಡಿತು. ಬಳಿಕ ಮಿನಿ ಹರಾಜಿಗೆ ಬಂದ ಕೇನ್​​ರನ್ನು ಗುಜರಾತ್ ಟೈಟಾನ್ಸ್ 2 ಕೋಟಿ ನೀಡಿ ಖರೀದಿಸಿತ್ತು. ಅದರಂತೆಯೇ ಅನುಭವಿ ಆಟಗಾರನನ್ನು ತಂಡವು ಮೊದಲ ಪಂದ್ಯದಲ್ಲೇ ಕಣಕ್ಕಿಳಿಸಿತು. ಆದರೆ, ಸದ್ಯ ಅವರು ಗಾಯಗೊಂಡು ಟೂರ್ನಿ ಆರಂಭದಲ್ಲೇ ತಂಡದಿಂದ ಹೊರಬಿದ್ದಿದ್ದಾರೆ.

ಗುಜರಾತ್‌ ತಂಡವು ಏಪ್ರಿಲ್​​ 4ರಂದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯ ಸೇರಿದಂತೆ ಮುಂದಿನ ಎಲ್ಲಾ ಪಂದ್ಯಳಿಂದ ಕೇನ್‌ ಹೊರಬಿದ್ದಿದ್ದಾರೆ. ಕಿವೀಸ್‌ ತಂಡದ ಪ್ರಮುಖ ಆಟಗಾರನಾಗಿರುವ ಕೇನ್‌ ಗಾಯ, ನ್ಯಜಿಲ್ಯಾಡ್‌ ತಂಡಕ್ಕೂ ಹಿನ್ನಡೆ ತಂದಿದೆ. ಮುಂದೆ ವಿಶ್ವಕಪ್‌ ನಡೆಯಲಿರುವುದರಿಂದ ಕೇನ್‌ ಅವರ ಶೀಘ್ರ ಚೇತರಿಕೆಗೆ ತಂಡ ಆಶಿಸುತ್ತಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.