ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪ್ರಮಾದ; ದಕ್ಷಿಣ ಕೊರಿಯಾ ಬದಲಿಗೆ ಉತ್ತರ ಕೊರಿಯಾ ಎಂದು ಪರಿಚಯಿಸಿ ಎಡವಟ್ಟು
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪ್ರಮಾದ; ದಕ್ಷಿಣ ಕೊರಿಯಾ ಬದಲಿಗೆ ಉತ್ತರ ಕೊರಿಯಾ ಎಂದು ಪರಿಚಯಿಸಿ ಎಡವಟ್ಟು

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪ್ರಮಾದ; ದಕ್ಷಿಣ ಕೊರಿಯಾ ಬದಲಿಗೆ ಉತ್ತರ ಕೊರಿಯಾ ಎಂದು ಪರಿಚಯಿಸಿ ಎಡವಟ್ಟು

‌ಪ್ಯಾರಿಸ್‌ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಉತ್ತರ ಕೊರಿಯಾ ದೇಶದ ಹೆಸರಿನೊಂದಿಗೆ ಪರಿಚಯಿಸಲಾಗಿದೆ. ಮಹತ್ವದ ಕ್ರೀಡಾಕೂಟದಲ್ಲಿ ಆದ ತಪ್ಪಿಗೆ ಐಒಸಿ ಕ್ಷಮೆಯಾಚಿಸಿದೆ.

ದಕ್ಷಿಣ ಕೊರಿಯಾ ಬದಲಿಗೆ ಉತ್ತರ ಕೊರಿಯಾ ಎಂದು ಪರಿಚಯಿಸಿ ಎಡವಟ್ಟು
ದಕ್ಷಿಣ ಕೊರಿಯಾ ಬದಲಿಗೆ ಉತ್ತರ ಕೊರಿಯಾ ಎಂದು ಪರಿಚಯಿಸಿ ಎಡವಟ್ಟು

ಜಾಗತಿಕ ಮಟ್ಟದಲ್ಲಿ ದೊಡ್ಡ ಈವೆಂಟ್‌ ಮಾಡುವಾಗ ಎಷ್ಟೇ ಎಚ್ಚರವಿದ್ದರೂ ಸಾಲುವುದಿಲ್ಲ. ಎಚ್ಚರಿಕೆ ವಹಿಸಿದಾಗ ಎಲ್ಲೋ ಒಂದೆಡೆ ತಪ್ಪುಗಳಾಗುವ ಸಾಧ್ಯತೆ ಇರುತ್ತದೆ. ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿಯೂ ದೊಡ್ಡ ಪ್ರಮಾದವೊಂದು ಆಗಿದೆ. ತಪ್ಪು ಗಮನಕ್ಕೆ ಬಂದ ಬೆನ್ನಲ್ಲೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಕ್ಷಮೆಯಾಚನೆ ಮಾಡಿದೆ. ಉದ್ಘಾಟನಾ ಸಮಾರಂಭದ ಸಮಯದಲ್ಲಿ ವಿವಿಧ ಒಲಿಂಪಿಕ್‌ ಅಸೋಸಿಯೇಷನ್‌ ತಂಡಗಳು ಸೀನ್‌ ನದಿ ಮೇಲೆ ದೋಣಿಯಲ್ಲಿ ಸಾಗಿಬಂದರು. ಈ ವೇಳೆ ದಕ್ಷಿಣ ಕೊರಿಯಾದ ಅಥ್ಲೀಟ್‌ಗಳನ್ನು ಉತ್ತರ ಕೊರಿಯಾ ಎಂದು ತಪ್ಪಾಗಿ ಪರಿಚಯಿಸಲಾಗಿದೆ. ಹೀಗಾಗಿ ಆಗಿರುವ ತಪ್ಪಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಶನಿವಾರ ಕ್ಷಮೆಯಾಚಿಸಿದೆ.

ದಕ್ಷಿಣ ಕೊರಿಯಾದ ನಿಯೋಗವು ಪ್ಯಾರಿಸ್‌ನ ಸೀನ್ ನದಿ ಮೇಲೆ ಸಾಗಿ ಬರುವಾಗ ಅವರನ್ನು ಉತ್ತರ ಕೊರಿಯಾ ದೇಶದ ಅಧಿಕೃತ ಹೆಸರಿನೊಂದಿಗೆ ಪರಿಚಯಿಸಲಾಗಿದೆ. ಫ್ರೆಂಚ್‌ ಭಾಷೆಯಲ್ಲಿ "ರಿಪಬ್ಲಿಕ್ ಪಾಪ್ಯುಲೇರ್ ಡೆಮಾಕ್ರಟಿಕ್ ಡಿ ಕೋರಿ" ಎಂದು ಮೊದಲಿಗೆ ಹೇಳಲಾಯ್ತು. ಆ ಬಳಿಕ ನಂತರ ಇಂಗ್ಲಿಷ್‌ನಲ್ಲಿ "ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ" ಎಂದು ಹೇಳಲಾಗಿದೆ. ಜಾಗತಿಕ ಕ್ರೀಡಾಕೂಟದಲ್ಲಿ ಆದ ದೋಷ ದಕ್ಷಿಣ ಕೊರಿಯಾದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

“ಉದ್ಘಾಟನಾ ಸಮಾರಂಭದ ನೇರಪ್ರಸಾರದ ಸಮಯದಲ್ಲಿ ದಕ್ಷಿಣ ಕೊರಿಯಾದ ತಂಡವನ್ನು ಪರಿಚಯಿಸುವಾಗ ಆದ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ” ಎಂದು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (IOC) ತನ್ನ ಅಧಿಕೃತ ಕೊರಿಯನ್ ಭಾಷೆಯ ಎಕ್ಸ್‌ ಖಾತೆಯ ಪೋಸ್ಟ್‌ನಲ್ಲಿ ತಿಳಿಸಿದೆ.

ಇದಕ್ಕೂ ಮೊದಲು, ದಕ್ಷಿಣ ಕೊರಿಯಾದ ಕ್ರೀಡಾ ಸಚಿವಾಲಯವು ಹೇಳಿಕೆಯಲ್ಲಿ "2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ದಕ್ಷಿಣ ಕೊರಿಯಾದ ನಿಯೋಗವನ್ನು ಉತ್ತರ ಕೊರಿಯಾದ ತಂಡವಾಗಿ ಪರಿಚಯಿಸಿದ ಸಂದರ್ಭದಲ್ಲಿ ಘೋಷಿಸಿದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತದೆ" ಎಂದು ಹೇಳಿದರು.

ದಕ್ಷಿಣ ಕೊರಿಯಾ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಪದಕ ಬೇಟೆ ಆರಂಭಿಸಿದೆ. ಈಗಾಗಲೇ 5 ಚಿನ್ನ ಸೇರಿದಂತೆ ಒಟ್ಟು 9 ಪದಕಗಳನ್ನು ಗೆದ್ದ ಪದಕ ಪಟ್ಟಿಯಲ್ಲಿ‌ 5ನೇ ಸ್ಥಾನದಲ್ಲಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.