IPL 2023: ಗಾಯದ ಹೊಡೆತ, ಪ್ರಮುಖರೇ ಔಟ್.. ಆರ್ಸಿಬಿ ಸ್ಟ್ರೆಂಥ್-ವೀಕ್ನೆಸ್ ಏನು?
ಪ್ರಸ್ತುತ ಸಮತೋಲಿತ ತಂಡ ಕಟ್ಟಿರುವ RCB, ಚೊಚ್ಚಲ IPL ಟೈಟಲ್ ಮೇಲೆ ಕಣ್ಣಿಟ್ಟಿದ್ದು, ಟ್ರೋಫಿ ಬರ ನೀಗಿಸಲು ಮುಂದಾಗಿದೆ. ಆದರೆ ತಂಡದಲ್ಲಿ ಕೆಲವು ಗೊಂದಲಗಳು ಉಂಟಾಗಿದ್ದು, ಬಗೆಹರಿಸಿಕೊಳ್ಳಬೇಕಿದೆ.
ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಗ್ಗರಿಸಿತು. ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಬಗ್ಗು ಬಡಿದಿದ್ದ RCB, 2ನೇ ಕ್ವಾಲಿಫೈಯರ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದೆದುರು ಶರಣಾಯಿತು. ಇದರೊಂದಿಗೆ RCB ಫೈನಲ್ ಕನಸು ಭಗ್ನವಾಯಿತು. ಟ್ರೋಫಿ ಕನಸಿನಲ್ಲಿದ್ದ ಅಭಿಮಾನಿಗಳಿಗೂ ನಿರಾಸೆಯಾಯಿತು.
ಈಗ ಮತ್ತೊಂದು ಹೊಸ ಋತುವು ಆರಂಭಗೊಂಡಿದೆ. ಅದೇ ಹುರುಪು ತಂಡದಲ್ಲಿ ಕಾಣಿಸುತ್ತಿದೆ. ಅಭಿಮಾನಿಗಳು ಮತ್ತು ಆಟಗಾರರಿಂದ ಹೊಸ ಭರವಸೆಯೊಂದಿಗೆ ಕಣಕ್ಕಿಳಿಯಲಿದೆ. ತನ್ನ ತಮ್ಮ ನಿಷ್ಠಾವಂತ ಅಭಿಮಾನಿಗಳ ಮುಂದೆ ಯುದ್ಧ ಆರಂಭಿಸಲು ಸಜ್ಜಾಗಿದೆ. ಪ್ರಸ್ತುತ ಸಮತೋಲಿತ ತಂಡ ಕಟ್ಟಿರುವ RCB, ಚೊಚ್ಚಲ IPL ಟೈಟಲ್ ಮೇಲೆ ಕಣ್ಣಿಟ್ಟಿದ್ದು, ಟ್ರೋಫಿ ಬರ ನೀಗಿಸಲು ಮುಂದಾಗಿದೆ. ಆದರೆ ತಂಡದಲ್ಲಿ ಕೆಲವು ಗೊಂದಲಗಳು ಉಂಟಾಗಿದ್ದು, ಬಗೆಹರಿಸಿಕೊಳ್ಳಬೇಕಿದೆ.
ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು!
ಕಳೆದ ವರ್ಷ ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿರಲಿಲ್ಲ. ನಿಧಾನಗತಿ ಇನ್ನಿಂಗ್ಸ್ ಕಟ್ಟುವ ಮೂಲಕ ರನ್ಗಳ ಕಾಣಿಕೆ ನೀಡಿದ್ದರು. ಇದರ ಹೊರತಾಗಿ ಆರ್ಸಿಬಿ ಪ್ಲೇ ಆಫ್ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ರೆಡ್ ಆರ್ಮಿ ಪರ ಹೆಚ್ಚು ರನ್ ಕಲೆ ಹಾಕಿದ 2ನೇ ಬ್ಯಾಟರ್ ಎನಿಸಿದ್ದರು. ಆದರೂ ಅವರ ಪ್ರದರ್ಶನ ಗಮನ ಸೆಳೆಯುವಂತಿರಲಿಲ್ಲ.
ಐಪಿಎಲ್ ಮುಗಿದ ಬಳಿವೂ ಕೆಲವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ಹೊರ ಬಂತು ಕೊಹ್ಲಿ ಅವರಿಂದ.! ಬಳಿಕ ಅಬ್ಬರಿಸಿದರು. 3 ವರ್ಷಗಳ ನಂತರ ಶತಕ ಸಿಡಿಸಿದರು. ಏಷ್ಯಕಪ್-ಟಿ20 ವಿಶ್ವಕಪ್ನಲ್ಲಿ ಅಬ್ಬರದ ಆಟವಾಡಿದರು. ಏಕದಿನ ಕ್ರಿಕೆಟ್ನಲ್ಲೂ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಮಿಂಚಿದರು. ಟೆಸ್ಟ್ ಕ್ರಿಕೆಟ್ನಲ್ಲೂ ಫಾರ್ಮ್‌ಗೆ ಬಂದರು. ಇದು ಆರ್ಸಿಬಿ ಫ್ರಾಂಚೈಸಿ ಪಾಲಿಗೆ ವರದಾನವಾಗಿದೆ.
ಸದ್ಯ ಆರಂಭಿಕ ಫಾಫ್ ಡು ಪ್ಲೆಸಿಸ್ಗೆ ಕೊಹ್ಲಿ ಜೊತೆಯಾಗಿ ಬರುವ ನಿರೀಕ್ಷೆ ಇದೆ. ರಜತ್ ಪಟಿದಾರ್, ಗ್ಲೇನ್ ಮ್ಯಾಕ್ಸ್‌ವೆಲ್ ಸ್ಥಾನದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಗೊಂದಲ ಇದೆ. ಅವರಷ್ಟೇ ಸಾಮರ್ಥ್ಯ ಹೊಂದಿರುವ ಆಟಗಾರರ ಕೊರತೆ ಕಾಡುತ್ತಿದೆ. ದಿನೇಶ್ ಕಾರ್ತಿಕ್ ತಮ್ಮ ಫಿನಿಷರ್ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಲು ಮತ್ತಷ್ಟು ತುಡಿತದಲ್ಲಿದ್ದಾರೆ. ಮಹಿಪಾಲ್ ಲೋಮ್ರೋರ್ ಮಧ್ಯಮ ಕ್ರಮಾಂಕದಲ್ಲೇ ಬ್ಯಾಟ್ ಬೀಸಲಿದ್ದಾರೆ. ಆದರೆ ಅನೂಜ್ ರಾವತ್ಗೆ ಜಾಗ ಸಿಗುವುದು ಅನುಮಾನ ಎನ್ನಲಾಗಿದೆ. ಮ್ಯಾಕ್ಸ್‌ವೆಲ್ ಜಾಗದಲ್ಲಿ ಫಿನ್ ಅಲೆನ್ ಸ್ಥಾನ ಗಿಟ್ಟಿಸಿಕೊಂಡರೂ ಅಚ್ಚರಿ ಇಲ್ಲ.
ವೇಗದ ಬೌಲಿಂಗ್ ವಿಭಾಗದಲ್ಲಿ ಆಳದ ಕೊರತೆ
ಫಾಫ್ ಡು ಪ್ಲೆಸಿಸ್ ಅವರ ತಂಡವು ವೇಗದ ಬೌಲಿಂಗ್ ವಿಭಾಗದಲ್ಲಿ ಅಷ್ಟೇನು ಪರಿಣಾಮಕಾರಿಯಾಗಿಲ್ಲ. ವೇಗಿ ಜೋಷ್ ಹೇಜಲ್‌ವುಡ್ ಗಾಯದಿಂದ ತಂಡಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಸ್ಪಿನ್ನರ್ ವನಿಂದು ಹಸರಂಗ ಕೂಡ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಹಾಗಾಗಿ ಮೊಹಮ್ಮದ್ ಸಿರಾಜ್ಗೆ ಸಾಥ್ ನೀಡುವ ಸರಿಯಾದ ಬೌಲರ್ ತಂಡದಲ್ಲಿಲ್ಲ. ಡೇವಿಡ್ ವಿಲ್ಲಿ ಹೊಸ ಚೆಂಡನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ. ಇನ್ನು ಹರ್ಷಲ್ ಪಟೇಲ್ ಮಧ್ಯಮ ಓವರ್, ಡೆತ್ ಓವರ್ಗಳಲ್ಲಿ ತಂಡದ ಬಲ ಎನಿಸಿದ್ದಾರೆ. ಸಿದ್ಧಾರ್ಥ್ ಕೌಲ್ ಮತ್ತು ಆಕಾಶ್ ದೀಪ್ ಸಿಂಗ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೆ ಪರಿಣಾಮಕಾರಿ ಏನಲ್ಲ.
ಮೈಕೆಲ್ ಬ್ರೇಸ್ವೆಸ್ ಮೇಲೆ ನಿರೀಕ್ಷೆ
ಶ್ರೀಲಂಕಾದ ಸ್ಟಾರ್ ಬೌಲರ್ ವನಿಂದು ಹಸರಂಗ, ಟೂರ್ನಿಯ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಆತನ ಸ್ಥಾನದಲ್ಲಿ ಮೈಕೆಲ್ ಬ್ರೇಸ್‌ವೆಲ್ ಕಣಕ್ಕಿಳಿಯುವುದು ಕನ್ಫರ್ಮ್. ಬೌಲಿಂಗ್-ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ತೋರಿರುವ ಬ್ರೇಸ್‌ವೆಲ್ ಚೊಚ್ಚಲ ಐಪಿಎಲ್ನಲ್ಲಿ ಆಲ್ರೌಂಡ್ ಆಟದ ಮೂಲಕ ಚೊಚ್ಚಲ ಅಬ್ಬರಿಸುವ ನಿರೀಕ್ಷೆ ಹುಟ್ಟು ಹಾಕಿದ್ದಾರೆ.
ಗಾಯಗಳೇ ಹೆಚ್ಚು.!
ಐಪಿಎಲ್‌ನ ಆರಂಭಕ್ಕೂ ಮುನ್ನವೇ ಆರ್ಸಿಬಿ ಇಂಜುರಿ ಆಘಾತಕ್ಕೆ ಒಳಗಾಗಿದೆ. ಪ್ರಮುಖ ಆಟಗಾರರೇ ಗಾಯದಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ ವೇಗಿ ಜೋಶ್ ಹೇಜಲ್‌ವುಡ್ ಸ್ನಾಯುರಜ್ಜು ಗಾಯದಿಂದಾಗಿ ಆಡುವುದು ಅನುಮಾನವಾಗಿದೆ. ರಜತ್ ಪಾಟಿದಾರ್ ಹಿಮ್ಮಡಿ ಗಾಯದ ಕಾರಣ ಟೂರ್ನಿಯ ಆರಂಭಿಕ ಹಂತವನ್ನು ಕಳೆದುಕೊಳ್ಳಲಿದ್ದಾರೆ. ಗ್ಲೇನ್ ಮ್ಯಾಕ್ಸ್‌ವೆಲ್ ಸಹ ಕಾಲಿನ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ವಿಲ್ ಜಾಕ್ಸ್ ಈಗಾಗಲೇ ಟೂರ್ನಿ ತೊರೆದಿದ್ದಾರೆ. ರೀಸ್ ಟಾಪ್ಲೆ ಕೂಡ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ.
ಆರ್ಸಿಬಿ ತಂಡ
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ರಜತ್ ಪಾಟಿದಾರ್, ಅನುಜ್ ರಾವತ್, ಆಕಾಶ್ ದೀಪ್, ಜೋಶ್ ಹ್ಯಾಜಲ್‌ವುಡ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಸುಯಾಶ್ ಪ್ರಭುದೇಸಾಯಿ, ಕರಣ್ ಶರ್ಮಾ, ಸಿದ್ದಾರ್ಥ್ ಕೌಲ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಮೈಕೆಲ್ ಬ್ರೇಸ್‌ವೆಲ್.