IPL 2023: ಸಾಯಿ ಸುದರ್ಶನ್​ ಆಟಕ್ಕೆ ಶಹಬ್ಬಾಸ್​ ಎಂದ ಗವಾಸ್ಕರ್​, ಅನಿಲ್ ಕುಂಬ್ಳೆ
ಕನ್ನಡ ಸುದ್ದಿ  /  ಕ್ರೀಡೆ  /  Ipl 2023: ಸಾಯಿ ಸುದರ್ಶನ್​ ಆಟಕ್ಕೆ ಶಹಬ್ಬಾಸ್​ ಎಂದ ಗವಾಸ್ಕರ್​, ಅನಿಲ್ ಕುಂಬ್ಳೆ

IPL 2023: ಸಾಯಿ ಸುದರ್ಶನ್​ ಆಟಕ್ಕೆ ಶಹಬ್ಬಾಸ್​ ಎಂದ ಗವಾಸ್ಕರ್​, ಅನಿಲ್ ಕುಂಬ್ಳೆ

IPL 2023: ಲೆಜೆಂಡರಿ ಆಟಗಾರ ಸುನಿಲ್ ಗವಾಸ್ಕರ್ ಅವರು, ಸಾಯಿ ಸುದರ್ಶನ್ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಆಡಿದ ಅನುಭವಿ ಆಟಗಾರನಂತೆ ಸುದರ್ಶನ್ ಬ್ಯಾಟಿಂಗ್​ ನಡೆಸಿದರು ಎಂದು ಗವಾಸ್ಕರ್ ಗುಣಗಾನ ಮಾಡಿದ್ದಾರೆ.

ಸಾಯಿ ಸುದರ್ಶನ್​​
ಸಾಯಿ ಸುದರ್ಶನ್​​ (IPL)

ಐಪಿಎಲ್​ 16ನೇ (IPL 2023) ಆವೃತ್ತಿಯಲ್ಲಿ ಯುವ ಆಟಗಾರರ ಅಬ್ಬರ ಜೋರಾಗಿದೆ. ಋತುರಾಜ್​ ಗಾಯಕ್ವಾಡ್ (Ruturaj Gaikwad)​​, ಶುಭ್​ಮನ್​ ಗಿಲ್​ (Shubman Gill), ತಿಲಕ್​ ವರ್ಮಾ (Tilak Varma).. ಹೀಗೆ ಯಂಗ್​ ಸ್ಟರ್​ಗಳು ಐಪಿಎಲ್​​ ಅಖಾಡದಲ್ಲಿ ದೂಳೆಬ್ಬಿಸುತ್ತಿದ್ದಾರೆ. ಸದ್ಯ ಈ ಸಾಲಿಗೆ ಗುಜರಾತ್​ ಟೈಟಾನ್ಸ್ ತಂಡದ ಯುವ ಆಟಗಾರ ಸಾಯಿ ಸುದರ್ಶನ್​ (Sai Sudharsan) ಸೇರಿದ್ದಾರೆ. ಟೀಮ್​ ಇಂಡಿಯಾದ ಭವಿಷ್ಯದ ತಾರೆ ಎಂದು ದಿಗ್ಗಜ ಕ್ರಿಕೆಟಿಗರ ನಾಲಗೆಯಲ್ಲಿ ಹರಿದಾಡುತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸೊಗಸಾದ ಅರ್ಧಶತಕ ಸಿಡಿಸಿದ್ದೇ ಸುದರ್ಶನ್​ಗೆ ಪ್ರಶಂಸೆಯ ಸುರಿಮಳೆ ಬರಲು ಕಾರಣ. ಸಾಯಿ ಸುದರ್ಶನ್​​​ ಅವರ ನೋಡಿದ ಆಟಗಾರರು, ಮಾಜಿ ಕ್ರಿಕೆಟರ್ಸ್​ ಹೇಳುತ್ತಿರುವುದು ಒಂದೇ ಪದ, ಈತ ಭವಿಷ್ಯದ ತಾರೆ ಎಂಬುದು. ಸ್ಟಾರ್ ಆಟಗಾರರೇ, ಪೆವಿಲಿಯನ್​ ಪರೇಡ್​ ನಡೆಸುತ್ತಿದ್ದರೆ, ತಾಳ್ಮೆಯುತ ಮತ್ತು ಕೆಚ್ಚೆದೆಯ ಹೋರಾಟ ನಡೆಸಿದ ಸುದರ್ಶನ್​, ದಿಗ್ಗಜರ ಮನ ಗೆದ್ದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನ ಬೌಲರ್​​​ಗಳಿಗೂ ನಿರಾಯಾಸವಾಗಿ ಬೆಂಡೆತ್ತಿದ ತಮಿಳುನಾಡು ಆಟಗಾರ, ಮೊದಲ ಪಂದ್ಯದಲ್ಲಿ ಇಂಪ್ಯಾಕ್ಟ್​​ ಪ್ಲೇಯರ್​ ಆಗಿದ್ದರು.

2ನೇ ಪಂದ್ಯದಲ್ಲಿ ನೇರವಾಗಿ ತಂಡದಲ್ಲಿ ಅವಕಾಶ ಪಡೆದ 21 ವರ್ಷದ ಎಡಗೈ ಬ್ಯಾಟರ್​​, ಮನಮೋಹಕ ಹಾಫ್​ ಸೆಂಚುರಿ ಸಿಡಿಸಿ, ಪಂದ್ಯದ ಗೆಲುವಿನ ರೂವಾರಿ ಎನಿಸಿದರು. ಆ ಮೂಲಕ ನಾಯಕ ಹಾರ್ದಿಕ್​ ಪಾಂಡ್ಯ ನಂಬಿಕೆ ಉಳಿಸಿಕೊಂಡರು. ಮೊದಲ ಪಂದ್ಯದಲ್ಲಿ ಸಾಯಿ, ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು. ಕೇನ್​ ವಿಲಿಯಮ್ಸನ್​ ಅವರ ಸ್ಥಾನಕ್ಕೆ 3ನೇ ಕ್ರಮಾಂಕದಲ್ಲಿ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದು 22 ರನ್​ ಗಳಿಸಿದ್ದರು.

2ನೇ ಪಂದ್ಯದಲ್ಲಿ ಅಜೇಯ 62 ರನ್​

ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ 22 ರನ್ ಗಳಿಸಿದ್ದ ಸುದರ್ಶನ್, ಸಿಕ್ಕ​ ಎರಡನೇ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಡೆಲ್ಲಿ ನೀಡಿದ್ದ 163 ರನ್​ಗಳ ಸವಾಲಿನ ಗುರಿಯನ್ನು ಬೆನ್ನುತ್ತುವಾಗ ವೃದ್ಧಿಮಾನ್​​ ಸಾಹ, ಶುಭ್​​ಮನ್​ ಗಿಲ್​​, ಹಾರ್ದಿಕ್​ ಪಾಂಡ್ಯ, ವಿಜಯ್​ ಶಂಕರ್​​ ಒಬ್ಬರ ಹಿಂದೊಬ್ಬರು ಪೆವಿಲಿಯನ್​ ದಾರಿ ಹಿಡಿದರು. ಆದರೆ ಕ್ರೀಸ್​​ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಸುದರ್ಶನ್​, ಅಜೇಯ ಅರ್ಧಶತಕ​ ಸಿಡಿಸಿ ಗಮನ ಸೆಳೆದರು. 92 ನಿಮಿಷಗಳ ಕಾಲ ಬ್ಯಾಟಿಂಗ್​ ನಡೆಸಿದ ಸುದರ್ಶನ್​, 48 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​​ಗಳ ನೆರವಿನಿಂದ 62 ರನ್​​ ಚಚ್ಚಿದರು.

ಲೆಜೆಂಡರಿ ಆಟಗಾರ ಸುನಿಲ್ ಗವಾಸ್ಕರ್ ಅವರು, ಸಾಯಿ ಸುದರ್ಶನ್ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಆಡಿದ ಅನುಭವಿ ಆಟಗಾರನಂತೆ ಸುದರ್ಶನ್ ಬ್ಯಾಟಿಂಗ್​ ನಡೆಸಿದರು ಎಂದು ಗವಾಸ್ಕರ್ ಗುಣಗಾನ ಮಾಡಿದ್ದಾರೆ. ಇದೇ ಪ್ರದರ್ಶನ ಮುಂದುವರೆದರೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ​​​ ಪ್ರವೇಶ ನೀಡುವ ದಿನಗಳು ದೂರ ಇರುವುದಿಲ್ಲ ಎಂದು ಹೇಳಿದ್ದಾರೆ.

ಗವಾಸ್ಕರ್​ ಜೊತೆಗೆ ಅನಿಲ್ ಕುಂಬ್ಳೆ ಸಹ ತಮಿಳುನಾಡು ಕ್ರಿಕೆಟಿಗನ ಬ್ಯಾಟಿಂಗ್ ನೋಡಿ ಮಂತ್ರಮುಗ್ಧರಾಗಿದ್ದಾರೆ. ಸಾಯಿ ಸುದರ್ಶನ್ ತುಂಬಾ ಸಂಘಟಿತ ಆಟಗಾರನಂತೆ ಕಾಣುತ್ತಿದ್ದರು. ವೇಗದ ಬೌಲಿಂಗ್ ಮತ್ತು ಸ್ವಿಂಗ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು. ಅವರು ಮೊದಲ ಇಂಪ್ಯಾಕ್ಟ್​​ ಪ್ಲೇಯರ್​​ ಆಗಿ ಬಂದರೂ, 2ನೇ ಪಂದ್ಯದಲ್ಲಿ ಖಂಡಿತವಾಗಿಯೂ ಪ್ರಭಾವ ಬೀರಿದರು ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ. ಕಳೆದ ವರ್ಷ ದೇಶೀಯ ಪಂದ್ಯಗಳಲ್ಲಿ ಅಮೋಘ ಆಟವಾಡಿದ್ದ ಸಾಯಿ ಸುದರ್ಶನ್​ ಅವರು, 20 ಲಕ್ಷ ಮೂಲ ಬೆಲೆಗೆ ಖರೀದಿ ಆಗಿದ್ದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.