IPL 2023: ಪಂಜಾಬ್ ಕಿಂಗ್ಸ್ ತಂಡದಿಂದ ಬೈರ್‌ಸ್ಟೋ ಹೊರಕ್ಕೆ; ಬದಲಿ ಆಟಗಾರನ ಘೋಷಣೆ, ಆದ್ರೆ ಗಪ್ಟಿಲ್ ಅಲ್ಲ!
“ಗಾಯದಿಂದಾಗಿ ಜಾನಿ ಬೈರ್‌ಸ್ಟೋ ಅವರು ಈ ಋತುವಿನ ಐಪಿಎಲ್‌ನಲ್ಲಿ ಆಡುತ್ತಿಲ್ಲ ಎಂದು ನಿಮಗೆ ತಿಳಿಸಲು ನಾವು ವಿಷಾದಿಸುತ್ತೇವೆ. ನಾವು ಅವರಿಗೆ ಶುಭ ಹಾರೈಸುತ್ತೇವೆ. ಮುಂದಿನ ಋತುವಿನಲ್ಲಿ ಅವರನ್ನು ತಂಡದಲ್ಲಿ ನೋಡಲು ಎದುರು ನೋಡುತ್ತೇವೆ,” ಎಂದು ಫ್ರಾಂಚೈಸಿ ತಿಳಿಸಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಕೆಲ ದಿನಗಳಷ್ಟೇ ಉಳಿದಿದೆ. ಈ ನಡುವೆ ಹೆಚ್ಚಿನ ತಂಡಗಳಿಗೆ ಗಾಯದ ಸಮಸ್ಯೆ ಕಾಡುತ್ತಿದೆ. ಸದ್ಯ ಈ ಸಮಸ್ಯೆ ಪಂಜಾಬ್ ಕಿಂಗ್ಸ್ ತಂಡವನ್ನು ಕೂಡಾ ಬಿಟ್ಟಿಲ್ಲ. ತಂಡದ ಸ್ಟಾರ್ ಬ್ಯಾಟರ್ ಜಾನಿ ಬೈರ್‌ಸ್ಟೋ ತಂಡದಿಂದ ಹೊರಬಿದ್ದಿದ್ದಾರೆ. ಕಾಲಿನ ಗಾಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಂಜಾಬ್ ತಂಡದಿಂದ ಅವರನ್ನು ಕೈಬಿಡಲಾಗಿದೆ. ಟಿ20 ಸ್ವರೂಪದಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಿರುವ ಆಂಗ್ಲ ಕ್ರಿಕೆಟಿಗನ ಅನುಪಸ್ಥಿತಿ ಎದುರಾಳಿ ತಂಡಗಳಿಗೆ ಖುಷಿ ಕೊಟ್ಟಿದೆ.
ಜಾನಿ ಬೈರ್‌ಸ್ಟೋ ತಂಡದಿಂದ ಹೊರಬೀಳುವ ಸೂಚನೆ ಈ ಹಿಂದೆಯೇ ಸಿಕ್ಕಿತ್ತು. ಅವರ ಬದಲಿಗೆ ನ್ಯೂಜಿಲೆಂಡ್ ತಂಡದ ಸ್ಫೋಟಕ ಆಟಗಾರ ಮಾರ್ಟಿನ್ ಗಪ್ಟಿಲ್ಗೆ ಫ್ರಾಂಚೈಸಿಯು ಗಾಳ ಗಾಕಿದೆ ಎಂದು ಹೇಳಲಾಗಿತ್ತು. ಆದರೆ, ಸದ್ಯ ಈ ಬಗ್ಗೆ ಫ್ರಾಂಚೈಸಿಯು ಸ್ಪಷ್ಟನೆ ನೀಡಿದೆ. ಸದ್ಯ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರುವ ಫ್ರಾಂಚೈಸಿಯು ಮ್ಯಾಥ್ಯೂ ಶಾರ್ಟ್ (Matthew Short ) ಅವರನ್ನು ಬದಲಿ ಆಟಗಾರನಾಗಿ ಕರೆಸಿಕೊಂಡಿದೆ.
“ಗಾಯದಿಂದಾಗಿ ಜಾನಿ ಬೈರ್‌ಸ್ಟೋ ಅವರು ಈ ಋತುವಿನ ಐಪಿಎಲ್‌ನಲ್ಲಿ ಆಡುತ್ತಿಲ್ಲ ಎಂದು ನಿಮಗೆ ತಿಳಿಸಲು ನಾವು ವಿಷಾದಿಸುತ್ತೇವೆ. ನಾವು ಅವರಿಗೆ ಶುಭ ಹಾರೈಸುತ್ತೇವೆ. ಮುಂದಿನ ಋತುವಿನಲ್ಲಿ ಅವರನ್ನು ತಂಡದಲ್ಲಿ ನೋಡಲು ಎದುರು ನೋಡುತ್ತೇವೆ. ಅವರ ಬದಲಿಯಾಗಿ ಮ್ಯಾಥ್ಯೂ ಶಾರ್ಟ್ ಅವರನ್ನು ತಂಡಕ್ಕೆ ಸ್ವಾಗತಿಸಲು ನಾವು ಸಂತೋಷಪಡುತ್ತೇವೆ” ಎಂದು ಫ್ರಾಂಚೈಸಿಯು ಟ್ವೀಟ್ ಮೂಲಕ ತಿಳಿಸಿದೆ.
ವರದಿಯ ಪ್ರಕಾರ, ಬೈರ್‌ಸ್ಟೋ ಅವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅನುಭವಿಸಿದ ಕಾಲಿನ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB)ಯು ಬೈರ್‌ಸ್ಟೋಗೆ ಐಪಿಎಲ್‌ನಲ್ಲಿ ಆಡಲು ನಿರಾಕ್ಷೇಪಣಾ ಪ್ರಮಾಣಪತ್ರ (NOC) ನೀಡಲು ನಿರಾಕರಿಸಿದೆ.
2022ರ ಸೆಪ್ಟೆಂಬರ್ ತಿಂಗಳಲ್ಲಿ ಗಾಯಗೊಂಡ ಬೈರ್‌ಸ್ಟೋ ಅವರು, ಇಂಗ್ಲೆಂಡ್ ತಂಡದ ಟಿ20 ವಿಶ್ವಕಪ್ ಅಭಿಯಾನವನ್ನು ಕಳೆದುಕೊಂಡಿದ್ದರು. ಅದರ ಬೆನ್ನಲ್ಲೇ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಟೆಸ್ಟ್ ಪ್ರವಾಸಗಳಿಂದಲೂ ಹೊರಬಿದ್ದಿದ್ದರು.
ಮ್ಯಾಥ್ಯೂ ಶಾರ್ಟ್ ಯಾರು?
ಆಸ್ಟ್ರೇಲಿಯಾದ ಈ ಅನ್‌ಕ್ಯಾಪ್ಡ್ ಕ್ರಿಕೆಟಿಗ, ಐಪಿಎಲ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಬ್ಯಾಟಿಂಗ್ ಜತೆಗೆ ಬೌಲಿಂಗ್‌ನಲ್ಲಿ ಆಫ್-ಸ್ಪಿನ್ ಮೂಲಕ ಮೋಡಿ ಮಾಡಬಲ್ಲ ಸಾಮರ್ಥ್ಯ ಇವರಿಗಿದೆ. ಅವರು ಈಗಾಗಲೇ ಬಿಗ್ ಬ್ಯಾಷ್ ಲೀಗ್ (BBL)ನ ಇತ್ತೀಚಿನ ಆವೃತ್ತಿಯಲ್ಲಿ ಸರಣಿಶ್ರೇಷ್ಠ ಪ್ರದರ್ಶನ ನೀಡಿದ್ದರು. 144.47ರ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಬೀಸಿ, ಬರೋಬ್ಬರಿ 458 ರನ್ ಕಲೆ ಹಾಕಿದ್ದರು. ಆ ಮೂಲಕ ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದರು. ಇದರಲ್ಲಿ ಚೇಸಿಂಗ್ ವೇಳೆ ಗಳಿಸಿದ ಅಜೇಯ 100 ರನ್ ಕೂಡಾ ಸೇರಿದೆ.
ಬಿಬಿಎಲ್‌ನಲ್ಲಿ 7.13ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಶಾರ್ಟ್ ಅವರು ಪ್ರಥಮ ದರ್ಜೆ ಮತ್ತು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಮೂರು ಶತಕಗಳನ್ನು ಗಳಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅವರು ತಮ್ಮ ತವರು ರಾಜ್ಯವಾದ ವಿಕ್ಟೋರಿಯಾ ಪರ ಆಡುತ್ತಾರೆ.
ಪಂಜಾಬ್ ಕಿಂಗ್ಸ್ ತಂಡ
ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಮ್ಯಾಥ್ಯೂ ಶಾರ್ಟ್, ಪ್ರಭ್‌ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟನ್, ಅಥರ್ವ ಟೈಡೆ, ಅರ್ಷದೀಪ್ ಸಿಂಗ್, ನಾಥನ್ ಎಲ್ಲಿಸ್, ಬಲ್ತೇಜ್ ಸಿಂಗ್, ಕಗಿಸೊ ರಬಾಡ, ರಾಹುಲ್ ಚಾಹರ್, ಸ್ಯಾಮ್ ಕರನ್, ಸಿಕಂದರ್ ರಝಾ, ಹರ್‌ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ಶಿವಂ ಸಿಂಗ್, ಮೋಹಿತ್ ರಾಥೆ, ಹರ್‌ಪ್ರೀತ್ ಬ್ರಾರ್.