Kannada News  /  Sports  /  Ipl 2023 Rohit Sharma Set To Join In Elite List With Virat Kohli Jra
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (PTI)

Rohit Sharma Record: ಎರಡು ಪ್ರಮುಖ ದಾಖಲೆಯ ಅಂಚಿನಲ್ಲಿ ಹಿಟ್‌ಮ್ಯಾನ್; ವಿರಾಟ್, ಎಬಿಡಿ ಸನಿಹಕ್ಕೆ ಶರ್ಮಾ

16 April 2023, 13:38 ISTJayaraj
16 April 2023, 13:38 IST

ಮುಂಬೈ ನಾಯಕ ಐಪಿಎಲ್‌ನಲ್ಲಿ ಮತ್ತೊಂದು ಬೃಹತ್ ಸಾಧನೆ ಮಾಡಲು ಇನ್ನೂ ಐದು ಸಿಕ್ಸರ್‌ಗಳನ್ನು ಸಿಡಿಸಬೇಕಾಗಿದೆ. ಇದು ಸಾಧ್ಯವಾದರೆ, ರೋಹಿತ್ ನಗದು ಸಮೃದ್ಧ ಲೀಗ್‌ನಲ್ಲಿ 250 ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಲಿದ್ದಾರೆ.

ಇಂದು (ಭಾನುವಾರ) ನಡೆಯುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2023ರ 22ನೇ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ವಿರುದ್ಧ ಐಪಿಎಲ್‌ನ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ ಕಾದಾಡಲಿದೆ.

ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಮುಂಬೈ, ಲೀಗ್ ಹಂತದಲ್ಲಿ ಮೊದಲ ಗೆಲುವನ್ನು ಪಡೆಯಿತು. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಸಿಡಿಸಿದ ರೋಹಿತ್, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 2021ರ ಐಪಿಎಲ್‌ ಆವೃತ್ತಿಯ ಬಳಿಕ ಐಪಿಎಲ್‌ನಲ್ಲಿ ತಮ್ಮ ಮೊದಲ ಅರ್ಧಶತಕ ಸಿಡಿಸಿದ ಹಿಟ್‌ಮ್ಯಾನ್‌, ಡೆಲ್ಲಿ ವಿರುದ್ಧ 45 ಎಸೆತಗಳಲ್ಲಿ 65 ರನ್‌ ಗಳಿಸಿದರು. ಐದು ಬಾರಿಯ ಚಾಂಪಿಯನ್‌ಗಳು ಇಂದಿನ ಪಂದ್ಯದಲ್ಲಿ ಕೆಕೆಆರ್‌ ತಂಡವನ್ನು ಎದುರಿಸುತ್ತಿರುವುದರಿಂದ, ಮತ್ತಷ್ಟು ದಾಖಲೆ ನಿರ್ಮಿಸುವತ್ತ ರೋಹಿತ್ ಎದುರು ನೋಡುತ್ತಿದ್ದಾರೆ.

ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ನಲ್ಲಿ 6,000 ರನ್‌ಗಳನ್ನು ಪೂರ್ಣಗೊಳಿಸಲು ಹಿಟ್‌ಮ್ಯಾನ್‌ ಕೇವಲ 44 ರನ್‌ಗಳಷ್ಟು ದೂರದಲ್ಲಿದ್ದಾರೆ. 35 ವರ್ಷದ ಅವರು 230 ಪಂದ್ಯಗಳಲ್ಲಿ 5,966 ರನ್ ಗಳಿಸಿದ್ದಾರೆ. ಎಂಐ ನಾಯಕ ರೋಹಿತ್ ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಡೇವಿಡ್ ವಾರ್ನರ್ (6109), ಶಿಖರ್ ಧವನ್ (6477) ಮತ್ತು ಕೊಹ್ಲಿ (6838) ಮಾತ್ರ ಈವರೆಗೆ ವಿಶ್ವದ ಶ್ರೀಮಂತ ಟಿ20 ಲೀಗ್‌ನಲ್ಲಿ 6,000 ರನ್‌ಗಳ ಗಡಿಯನ್ನು ದಾಟಿದ್ದಾರೆ.

ಇನ್ ಫಾರ್ಮ್ ಬ್ಯಾಟರ್ ಐಪಿಎಲ್‌ನಲ್ಲಿ ಮತ್ತೊಂದು ಬೃಹತ್ ಸಾಧನೆ ಮಾಡಲು ಇನ್ನೂ ಐದು ಸಿಕ್ಸರ್‌ಗಳನ್ನು ಸಿಡಿಸಬೇಕಾಗಿದೆ. ಇದು ಸಾಧ್ಯವಾದರೆ, ರೋಹಿತ್ ನಗದು ಸಮೃದ್ಧ ಲೀಗ್‌ನಲ್ಲಿ 250 ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಲಿದ್ದಾರೆ. ವಿಶ್ವದ ಶ್ರೀಮಂತ ಟಿ20 ಲೀಗ್‌ನಲ್ಲಿ ಈವರೆಗೆ ಕ್ರಿಸ್ ಗೇಲ್ (357) ಮತ್ತು ಎಬಿ ಡಿವಿಲಿಯರ್ಸ್ (251) ಮಾತ್ರ 250ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಸದ್ಯ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರೋಹಿತ್‌, ಏಳು ಸಿಕ್ಸರ್‌ ಸಿಡಿಸಿದರೆ ಎಬಿಡಿ ಹಿಂದಿಕ್ಕಿ ಎರಡನೇ ಸ್ಥಾನ ಪಡೆಯಲಿದ್ದಾರೆ.

ಮುಂಬೈ ಇಂಡಿಯನ್ಸ್‌ ಕಳಪೆ ಪ್ರದರ್ಶನ

ಮುಂಬೈ ತಂಡವು ಈ ಆವೃತ್ತಿಯಲ್ಲಿ ಬ್ಯಾಟಿಂಗ್‌ನಲ್ಲಿ ಕುಸಿತ ಕಾಣುತ್ತಿದೆ. ಅನುಭವಿ ಆಟಗಾರರಿಂದ ಉತ್ತಮ ಪ್ರದರ್ಶನ ಹೊರಬರುತ್ತಿಲ್ಲ. ಟಿ20ಯ ನಂಬರ್‌ ವನ್‌ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಬ್ಯಾಟ್‌ ಸದ್ದು ಮಾಡುತ್ತಿಲ್ಲ. ಮೂರು ಪಂದ್ಯಗಳಿಂದ ಸೂರ್ಯ ಕೇವಲ 16 ರನ್ ಗಳಿಸಿದ್ದಾರೆ. ಆದರೆ, 20 ವರ್ಷದ ತಿಲಕ್ ವರ್ಮಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ 3 ಪಂದ್ಯಗಳಲ್ಲಿ 158 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ಅವರು 147 ರನ್ ಗಳಿಸಿದ್ದಾರೆ. ಆ ಮೂಲಕ ತಂಡದ ಅಗ್ರ ಸ್ಕೋರರ್ ಆಗಿದ್ದಾರೆ.

ತಂಡದ ದುಬಾರಿ ಆಟಗಾರ ಕ್ಯಾಮರೂನ್ ಗ್ರೀನ್ ಇಲ್ಲಿಯವರೆಗೆ ಕೇವಲ 34 ರನ್ ಮಾತ್ರ ಗಳಿಸಿದ್ದಾರೆ. ಬೌಲಿಂಗ್‌ನಲ್ಲೂ ಅವರಿಂದ ಹೇಳಿಕೊಳ್ಳುವ ಪ್ರದರ್ಶನ ಹೊರಬಂದಿಲ್ಲ. 17.5 ಕೋಟಿ ರೂಪಾಯಿ ಪಡೆದ ಆಟಗಾರನಿಂದ ಹೆಚ್ಚು ನಿರೀಕ್ಷೆಗಳಿತ್ತು. ಆದರೆ ಇಲ್ಲಿಯವರೆಗೆ ಅವರು ಯಾವುದೇ ರೀತಿಯ ಗಮನಾರ್ಹ ಪ್ರಭಾವ ಬೀರಿಲ್ಲ. ಇದು ತಂಡದ ಚಿಂತೆಗೆ ಕಾರಣವಾಗಿದೆ.

ಮುಂಬೈ ಸಂಭಾವ್ಯ ಆಡುವ ಬಳಗ

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್‌ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ಯಾಮರೂನ್ ಗ್ರೀನ್, ಹೃತಿಕ್ ಶೋಕೀನ್, ಜೋಫ್ರಾ ಆರ್ಚರ್, ಜೇಸನ್ ಬೆಹ್ರೆಂಡಾರ್ಫ್, ಪಿಯೂಷ್ ಚಾವ್ಲಾ.