ಕನ್ನಡ ಸುದ್ದಿ  /  Sports  /  Ipl Players Fitness 2023 All You Need To Bcci Gps Fitness Tracking Device

GPS ಫಿಟ್‌ನೆಸ್ ಟ್ರ್ಯಾಕಿಂಗ್ ಸಾಧನ ಧರಿಸಿ IPL ಆಡಲಿರುವ ಟೀಮ್​ ಇಂಡಿಯಾ ಆಟಗಾರರು, ಕಾರಣ ಇಲ್ಲಿದೆ!

ಫಿಟ್​ನೆಸ್​ ಮೇಲ್ವಿಚಾರಣೆ ನಡೆಸುವ ಸಲುವಾಗಿ ಟೀಮ್​ ಇಂಡಿಯಾ ಆಟಗಾರರು ಜಿಪಿಎಸ್ ಫಿಟ್‌ನೆಸ್ ಟ್ರ್ಯಾಕಿಂಗ್ ಸಾಧನ (GPS Fitness Tracking Device) ಧರಿಸಿಯೇ ಅಂಗಳಕ್ಕಿಳಿಯುವಂತೆ ಬಿಸಿಸಿಐ ಸೂಚಿಸಿದೆ.

ಟೀಮ್​ ಇಂಡಿಯಾ
ಟೀಮ್​ ಇಂಡಿಯಾ

ವಿಶ್ವದ ಅತಿ ದೊಡ್ಡ ಕ್ರಿಕೆಟ್ ಲೀಗ್ ಐಪಿಎಲ್ (IPL) ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ಲೀಗ್‌ನಲ್ಲಿ ಟೀಮ್​​​​ ಇಂಡಿಯಾ ಆಟಗಾರರು (Team India Players) ಮತ್ತು ವಿಶ್ವದ ದಿಗ್ಗಜ ಕ್ರಿಕೆಟಿಗರು ಪೈಪೋಟಿ ಏರ್ಪಡಲಿದೆ. ಆದರೆ, ಈ ಧನಾಧನ್ ಲೀಗ್‌ನಲ್ಲಿ ವಿಶೇಷ ಸಾಧನ ಧರಿಸಿ ಭಾರತೀಯ ಆಟಗಾರರು ಮೈದಾನ ಪ್ರವೇಶಿಸುವಂತೆ ಬಿಸಿಸಿಐ (BCCI) ಖಡಕ್​ ಎಚ್ಚರಿಕೆ ಸಹ ನೀಡಿದೆ.

ಜಿಪಿಎಸ್ ಫಿಟ್‌ನೆಸ್ ಟ್ರ್ಯಾಕಿಂಗ್

ಫಿಟ್​ನೆಸ್​ ಮೇಲ್ವಿಚಾರಣೆ ನಡೆಸುವ ಸಲುವಾಗಿ ಟೀಮ್​ ಇಂಡಿಯಾ ಆಟಗಾರರು ಜಿಪಿಎಸ್ ಫಿಟ್‌ನೆಸ್ ಟ್ರ್ಯಾಕಿಂಗ್ ಸಾಧನ (GPS Fitness Tracking Device) ಧರಿಸಿಯೇ ಅಂಗಳಕ್ಕಿಳಿಯುವಂತೆ ಬಿಸಿಸಿಐ ಸೂಚಿಸಿದೆ. ಈ ಸಾಧನದ ನೆರವಿನಿಂದ ಆಟಗಾರರ ಫಿಟ್​ನೆಸ್​ ಸಾಮರ್ಥ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸಲಾಗುತ್ತದೆ.

ಅಭ್ಯಾಸದ ಅವಧಿಯಲ್ಲಿ ಮಾತ್ರವಲ್ಲ, ಪಂದ್ಯಗಳ ಸಂದರ್ಭದಲ್ಲೂ ಆಟಗಾರರು ಮೈದಾನದಲ್ಲಿ ಈ ಜಿಪಿಎಸ್ ಸಾಧನ ಧರಿಸಬೇಕು. ಆಟಗಾರರು ಮೆಗಾ ಲೀಗ್‌ನಲ್ಲಿ ಗಾಯಗೊಳ್ಳದಂತೆ ತಡೆಯಲು BCCI ಈ ನಿರ್ಧಾರಕ್ಕೆ ಮುಂದಾಗಿದೆ. ಭಾರತ ತಂಡದ ಎಲ್ಲಾ ಆಟಗಾರರು ಈ ಸಾಧನ ಧರಿಸಬೇಕು ಎಂದು ಬಿಸಿಸಿಐ ಕಟ್ಟುನಿಟ್ಟಾಗಿ ಹೇಳಿದೆ.

ಐಪಿಎಲ್ ನಂತರ ಟೀಮ್​​ ಇಂಡಿಯಾ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ (ICC World Test Championship) ಆಡಲಿದೆ. ಇಂಗ್ಲೆಂಡಿನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐಸಿಸಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಇದರ ನಂತರ ಆಗಸ್ಟ್​​​​ನಲ್ಲಿ ಏಷ್ಯಾಕಪ್​​, ಬಳಿಕ ಅಕ್ಟೋಬರ್‌ನಲ್ಲಿ ODI ವಿಶ್ವಕಪ್ (ODI World Cup) ನಡೆಯಲಿದೆ.

ಕಳೆದ 10 ವರ್ಷಗಳಿಂದ ಟೀಮ್​ ಇಂಡಿಯಾ ಐಸಿಸಿ ಟ್ರೋಫಿ ಗೆದ್ದಿಲ್ಲ. ಇತ್ತೀಚೆಗೆ ಫೈನಲ್​, ಸೆಮಿಫೈನಲ್​​​ನಲ್ಲೇ ಮುಗ್ಗರಿಸುತ್ತಿದೆ. ಈ ಹಿನ್ನೆಲೆ ಮುಂದಿರುವ ಎರಡೂ ಐಸಿಸಿ ಟ್ರೋಫಿಗಳನ್ನು ಗೆಲ್ಲುವುದು ಭಾರತಕ್ಕೆ ಮಹತ್ವದ್ದಾಗಿದೆ. ಅದರಲ್ಲೂ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ಗೆಲ್ಲುವುದು ಅತ್ಯಂತ ಮಹತ್ವದ್ದು.

ಯಾವ ದೇಶಗಳು ಬಳಸುತ್ತಿವೆ?

ಪ್ರತಿಷ್ಠಿತ ಟೂರ್ನಿಗಳಿರುವ ಕಾರಣ, ಟೀಮ್​​​ ಇಂಡಿಯಾ ಆಟಗಾರರ ಫಿಟ್​​ನೆಸ್​​ ಬಗ್ಗೆ ಬಿಸಿಸಿಐ ವಿಶೇಷ ಗಮನ ಹರಿಸಿದೆ. ಈಗಾಗಲೇ ಇಂಗ್ಲೆಂಡ್​, ಆಸ್ಟ್ರೇಲಿಯಾ ತಂಡಗಳು ಈ ಸಾಧನ ಬಳಸುತ್ತಿವೆ. ಇತ್ತೀಚೆಗೆ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಮಹಿಳಾ ಕ್ರಿಕೆಟಿಗರು ಫಿಟ್ನೆಸ್ ಟ್ರ್ಯಾಕಿಂಗ್ ಸಾಧನಗಳೊಂದಿಗೆ ಕಣಕ್ಕೆ ಇಳಿದಿದ್ದರು. ಭಾರತದ ರಾಷ್ಟ್ರೀಯ ಹಾಕಿ ತಂಡದ ಆಟಗಾರರು ಸಹ ಬಳಸುತ್ತಿದ್ದಾರೆ.

ಹೇಗೆ ಕೆಲಸ ಮಾಡಲಿದೆ?

ಈ ಸಾಧನವು ಆಟಗಾರನ ಫಿಟ್‌ನೆಸ್‌ಗೆ ಸಂಬಂಧಿಸಿದ ಸುಮಾರು 500 ವಿವಿಧ ರೀತಿಯ ಮಾಹಿತಿಯನ್ನು ನೀಡುತ್ತದೆ. ಆಟಗಾರನ ಶಕ್ತಿಯ ಮಟ್ಟ, ದೂರ ಕ್ರಮಿಸುವಿಕೆ, ವೇಗ, ಸ್ಥಗಿತದ ಅಪಾಯ, ಹೃದಯ ಬಡಿತ, ರಕ್ತದೊತ್ತಡ ಸೇರಿ ಪ್ರಮುಖ ಮಾಹಿತಿ ನೀಡುತ್ತದೆ. ಈ ಸಾಧನವು ಕೆಲಸದ ಹೊರೆಯಿಂದ ಆಟಗಾರನಿಗೆ ಗಾಯವನ್ನು ಉಂಟು ಮಾಡುವ ಮಿತಿಯನ್ನು ಹೇಳುವ ಸಾಮರ್ಥ್ಯವನ್ನು ಹೊಂದಿದೆ.

2018ರಿಂದ ಕೆಲಸಗಳು ನಡೆಯುತ್ತಿವೆ!

BCCI 2018ರಿಂದಲೇ ಈ ಸಾಧನದ ಬಳಕೆಯನ್ನು ಪರಿಗಣಿಸಲು ಆರಂಭಿಸಿತ್ತು. ಈಗ ಮೊದಲ ಬಾರಿಗೆ IPLನಲ್ಲಿ ಬಳಸಲು ಸಜ್ಜಾಗಿದೆ. WPLನಲ್ಲಿ ಪ್ರಯೋಗ ನಡೆಸಲಾಗಿತ್ತು. ಇದರಿಂದ ಉತ್ತಮ ಫಲಿತಾಂಶ ಬಂದಿತ್ತು. ಇದರಿಂದ ಫ್ರಾಂಚೈಸಿಗಳಿಗೂ ಲಾಭವಾಗಿತ್ತು. ಫಿಟ್​ನೆಸ್​ಗೆ ಅನುಗುಣವಾಗಿ ತಮ್ಮ ಆಟಗಾರರನ್ನು ಬಳಸಿಕೊಂಡರು. ಇದಾದ ನಂತರ ಐಪಿಎಲ್‌ನಲ್ಲಿ ಬಳಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ.

IPLನಲ್ಲಿ ಭಾರತೀಯ ಆಟಗಾರರ ಫಿಟ್‌ನೆಸ್ ಮೇಲ್ವಿಚಾರಣೆಗೆ ಸಂಬಂಧಿಸಿ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 3 ತಿಂಗಳ ಹಿಂದೆಯೇ ಕೆಲಸದ ಹೊರೆ ಇಳಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಗಾಯಗೊಳ್ಳಲಿರುವ ಆಟಗಾರರನ್ನು ಮೊದಲೇ ಸೂಚಿಸಿ ರಕ್ಷಿಸಲಾಗುತ್ತದೆ. ಇದರಿಂದ ತಂಡದಲ್ಲಿ ಗಾಯದ ಸಮಸ್ಯೆಯನ್ನು ತಡೆಗಟ್ಟಬಹುದು.

ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಬೇಕಾಗಿದೆ. ಅಲ್ಲದೆ, ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಅಂತಹ ಪರಿಸ್ಥಿತಿಯಲ್ಲಿ ಹಿರಿಯರು ಮತ್ತು ಪ್ರಮುಖ ಆಟಗಾರರಿಗೆ ಗಾಯವಾಗುವುದನ್ನು ತಪ್ಪಿಸಲು ಫ್ರಾಂಚೈಸಿಗಳೊಂದಿಗೆ ಕೆಲಸದ ಹೊರೆ ಇಳಿಸುವ ಚರ್ಚಿಸಲಾಗಿದೆ. ಈ ವಿಶೇಷ ಸಾಧನೆ ಅಳವಡಿಕೆಗೆ ಕ್ರಿಕೆಟ್​​ ತಜ್ಞರು, ಮಾಜಿ ಕ್ರಿಕೆಟರ್​​ಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.