Kohli in CTR Hotel: ಮಸಾಲೆ ದೋಸೆ ಅದ್ಭುತವಾಗಿತ್ತು, ಪ್ರೀತಿಯ ಆತಿಥ್ಯಕ್ಕೆ ಧನ್ಯವಾದ; ಸಿಟಿಆರ್ ಹೋಟೆಲ್ ಬುಕ್ನಲ್ಲಿ ಕೊಹ್ಲಿ ಮಾತು
ಶ್ರೀ ಸಾಗರ್ ಸೆಂಟ್ರಲ್ ಟಿಫಿನ್ ರೂಮ್ ಹೋಟೆಲ್ನಲ್ಲಿ ದೋಸೆ ತಿಂದ ನಂತರ ಹೋಟೆಲ್ ಪುಸ್ತಕದಲ್ಲಿ ವಿರಾಟ್ ಕೊಹ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕೊಹ್ಲಿ ದಂಪತಿ ಭೇಟಿ ಕೊಟ್ಟಿರುವ ಚಿತ್ರಗಳು ಮತ್ತು ಕೊಹ್ಲಿ ಅಭಿಪ್ರಾಯವನ್ನು ಸಿಟಿಆರ್ ಹೋಟೆಲ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.
ವಿಶಿಷ್ಟ ಶೈಲಿಯ ಆಹಾರದಿಂದಲೇ ಗಮನ ಸೆಳೆದಿರುವ ಬೆಂಗಳೂರಿನ ಮಲ್ಲೇಶ್ವರಂನ 7ನೇ ಕ್ರಾಸ್ನಲ್ಲಿರುವ ಸೆಂಟ್ರಲ್ ಟಿಫನ್ ಸೆಂಟರ್ ಹೋಟೆಲ್ನಲ್ಲಿ (Shree Sagar Central Tiffin Room in Malleshwaram) ಮಸಾಲೆ ದೋಸೆ ಸವಿದ ನಂತರ ಭಾರತ ತಂಡದ ಮಾಜಿ ನಾಯಕ, ಆರ್ಸಿಬಿ (Royal Challengers Bangalore) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli), ಮತ್ತವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಅವರ ಕುಟುಂಬ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಸಾಲೆ ದೋಸೆ (CTR Hotel Masala Dosa) ಸವಿದ ಬಳಿಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರೊಂದಿಗೆ ಹೋಟೆಲ್ ಸಿಬ್ಬಂದಿ ಫೋಟೋ ತೆಗೆಸಿಕೊಂಡಿದ್ದಾರೆ. ಅಲ್ಲದೆ ಹೋಟೆಲ್ ಪುಸ್ತಕದಲ್ಲಿ ವಿರಾಟ್ ಕೊಹ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸದ್ಯ ಭೇಟಿ ಕೊಟ್ಟಿರುವ ಚಿತ್ರಗಳನ್ನು ಮತ್ತು ಕೊಹ್ಲಿ ಬರೆದಿರುವ ಅಭಿಪ್ರಾಯವನ್ನು ಸಿಟಿಆರ್ ಹೋಟೆಲ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.
ಕೊಹ್ಲಿ ಬುಕ್ನಲ್ಲಿ ಬರೆದಿದ್ದು ಹೀಗಿದೆ!
ನಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಅತ್ಯಂತ ಶಾಂತಿಯುತವಾಗಿ ಕುಳಿತು ಉಪಹಾರ ಸವಿದ ಸಮಯ ಅದ್ಭುತವಾಗಿತ್ತು. ನಿಮ್ಮ ಅದ್ಭುತವಾದ ಆತಿಥ್ಯ ಮತ್ತು ರುಚಿಕರವಾದ ಉಪಹಾರಕ್ಕಾಗಿ ಧನ್ಯವಾದಗಳು. ಶುಭಾಶಯಗಳು. ಗುಡ್ ಲಕ್. ಇಂತಿ ನಿಮ್ಮ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಎಂದು ಹೋಟೆಲ್ ಪುಸ್ತಕದಲ್ಲಿ ಕೊಹ್ಲಿ ಬರೆದಿದ್ದಾರೆ.
ಹೋಟೆಲ್ ಪೋಸ್ಟ್ನಲ್ಲಿ ಏನಿದೆ?
ಇನ್ಸ್ಟಾಗ್ರಾಂನಲ್ಲಿ ವಿರೂಷ್ಕಾ ದಂಪತಿ ಫೋಟೋಗಳನ್ನು ಹಂಚಿಕೊಂಡಿರುವ ಶ್ರೀ ಸಾಗರ್ ಸೆಂಟ್ರಲ್ ಟಿಫಿನ್ ರೂಮ್ ಹೋಟೆಲ್, ವಿಶೇಷವಾದ ಕ್ಯಾಪ್ಶನ್ ಬರೆದಿದ್ದಾರೆ. ಇಂದು ನಮ್ಮೊಂದಿಗೆ ಯಾರಿದ್ದಾರೆ ನೋಡಿ! ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ತಮ್ಮ ಕುಟುಂಬ ಸಮೇತ ನಮ್ಮನ್ನು ಭೇಟಿ ಮಾಡಿದ್ದು, ಬಹಳ ಸಂತೋಷವಾಯಿತು. ಈ ದಿನ ನಮಗೆ ವಿಶೇಷ. ನಿಮ್ಮ ಮಾತುಗಳು, ಶುಭಾಶಯ ನಮ್ಮ ಉತ್ಸಾಹ ಮತ್ತಷ್ಟು ಹೆಚ್ಚಿಸಿದೆ. ಮತ್ತೆ ನಿಮಗಾಗಿ ಎದುರು ನೋಡುತ್ತಿರುತ್ತೇವೆ ಎಂದು ಅಡಿಬರಹ ನೀಡಿದೆ.
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಭೇಟಿ ನೀಡಿ ಮಸಾಲೆ ದೋಸೆ ಸವಿದ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಮಸಾಲೆ ದೋಸೆ ಸವಿಯಲು ಸಿಟಿಆರ್ ಹೋಟೆಲ್ಗೆ ಬಂದಿದ್ದ ಕೊಹ್ಲಿಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು. ಒಂದೇ ಒಂದು ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದರು. ಆದರೆ ಭಾರಿ ಭದ್ರತೆಯಿದ್ದ ಕಾರಣ, ಅಭಿಮಾನಿಗಳಿಗೆ ನಿರಾಸೆಯಾಯಿತು.
ಆರ್ಸಿಬಿ.. ಆರ್ಸಿಬಿ.. ಘೋಷಣೆ
ಕೊಹ್ಲಿ-ಅನುಷ್ಕಾ ಹೋಟೆಲ್ನಿಂದ ಬರುವಿಕೆಗೆ ಹೊರೆಗ ಕಾಯುತ್ತಿದ್ದ ಅಭಿಮಾನಿಗಳು ವಿಡಿಯೋ, ಫೋಟೋಗೆ ತೆಗೆದುಕೊಂಡರು. ಹಾಗೆಯೇ ಇದೇ ವೇಳೆ ಆರ್ಸಿಬಿ, ಆರ್ಸಿಬಿ ಎಂದು ಕೂಗಿದರು. ಹಾಗೆಯೇ ಸ್ಟಾರ್ ದಂಪತಿಗೆ ಜೈಕಾರ ಹಾಕಿದರು. ಅನುಷ್ಕಾ ಕಾರು ಹತ್ತುವಾಗ ಅಭಿಮಾನಿಯೊಬ್ಬರು ಸೆಲ್ಫಿಗೆ ಮುಗಿ ಬಿದ್ದರು. ಆದರೆ ಬೇಡ ಎಂದು ಕೊಹ್ಲಿ ಹೇಳಿದ್ದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.
ಪ್ರಸ್ತುತ ಐಪಿಎಲ್ನಲ್ಲಿ ಕೊಹ್ಲಿ 4 ಅರ್ಧಶತಕಗಳ ನೆರವಿನಿಂದ 279 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್ನಲ್ಲಿದ್ದಾರೆ. ಬಹಳ ದಿನಗಳ ನಂತರ ಕಳೆದ ಪಂದ್ಯದಲ್ಲಿ ಕ್ಯಾಪ್ಟನ್ ಆಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಏಪ್ರಿಲ್ 23ರಂದು ರಾಜಸ್ಥಾನ್ ರಾಯಲ್ಸ್ ಎದುರು ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಗ್ರೀನ್ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ.