ಕನ್ನಡ ಸುದ್ದಿ  /  Sports  /  Ipl  /  Rcb Unbox Event Reunion Of Kohli Abd Gayle Live Streaming Details And All You Need To Know

RCB Unbox Event: ತ್ರಿವಳಿ ರತ್ನಗಳ ಸಮ್ಮಿಲನ, ಸೋನು ನಿಗಮ್​ರಿಂದ ಸಂಗೀತ ಕಾರ್ಯಕ್ರಮ, ಲೈವ್ ಸ್ಟ್ರೀಮ್​ ವಿವರ.. ಸಂಪೂರ್ಣ ಮಾಹಿತಿ ಇಲ್ಲಿದೆ!

RCB Unbox Event: ಕೊಹ್ಲಿ, ಎಬಿಡಿ ಮತ್ತು ಗೇಲ್ ಅವರು ಅದ್ಧೂರಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎನಿಸಲಿದ್ದಾರೆ. ಏಕೆಂದರೆ ಆರ್​​ಸಿಬಿಯ ಅನರ್ಘ್ಯ ತ್ರಿವಳಿ ರತ್ನಗಳಾದ ಈ ಮೂವರು ಬಹು ದಿನಗಳ ನಂತರ ಫ್ರಾಂಚೈಸಿ ಪರ ಮತ್ತೆ ಒಂದಾಗುತ್ತಿದ್ದಾರೆ.

ಆರ್​​ಸಿಬಿ ಅನ್​ಬಾಕ್ಸ್​ ಈವೆಂಟ್​​
ಆರ್​​ಸಿಬಿ ಅನ್​ಬಾಕ್ಸ್​ ಈವೆಂಟ್​​ (RCB/Twitter)

ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡಕ್ಕೆ ಅಪಾರ ಕೊಡುಗೆ ನೀಡಿದ ಎಬಿ ಡಿವಿಲಿಯರ್ಸ್ (AB de Villiers)​​ ಮತ್ತು ಕ್ರಿಸ್ ​ಗೇಲ್ (Chris Gayle)​ ಅವರಿಗೆ ಗೌರವ ಸೂಚಿಸುವ ಸಲುವಾಗಿ ಫ್ರಾಂಚೈಸಿ, ಇಂದು ‘ಆರ್​ಸಿಬಿ ಅನ್​​ಬಾಕ್ಸ್​​’ ಈವೆಂಟ್​ ಅನ್ನು ಆಯೋಜಿಸಿದೆ. ಈ ಬೃಹತ್​​ ಕಾರ್ಯಕ್ರಮಕ್ಕಾಗಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗಿ ನಿಂತಿದೆ. ಈ ವಿಶೇಷ ಸಮಾರಂಭ, ವಿರಾಟ್​ ಕೊಹ್ಲಿ (Virat Kohli), ಡಿವಿಲಿಯರ್ಸ್​ ಮತ್ತು​ ಗೇಲ್ ಅವರ​​​​ ಪುನರ್ಮಿಲನಕ್ಕೆ ಸಾಕ್ಷಿಯಾಗುತ್ತಿದೆ.

ಕೊಹ್ಲಿ, ಎಬಿಡಿ ಮತ್ತು ಗೇಲ್ ಅವರು ಅದ್ಧೂರಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎನಿಸಲಿದ್ದಾರೆ. ಏಕೆಂದರೆ ಆರ್​​ಸಿಬಿಯ ಅನರ್ಘ್ಯ ತ್ರಿವಳಿ ರತ್ನಗಳಾದ ಈ ಮೂವರು ಬಹು ದಿನಗಳ ನಂತರ ಫ್ರಾಂಚೈಸಿ ಪರ ಮತ್ತೆ ಒಂದಾಗುತ್ತಿದ್ದಾರೆ. ಡಿವಿಲಿಯರ್ಸ್ 2011 ರಿಂದ 2021 ರವರೆಗೆ ರೆಡ್​ ಆರ್ಮಿ ಪರ ಆಡಿದ್ದರು. 2011 ರಲ್ಲಿ ಆರ್‌ಸಿಬಿಗೆ ಸೇರಿದ ಗೇಲ್, ಏಳು ವರ್ಷಗಳ ಕಾಲ ಆಡಿದ್ದರು. ಈ ಕೊಡುಗೆ ನೆನಪಿನಾರ್ಥ ಅವರನ್ನು ಗೌರವಿಸಲಾಗುತ್ತದೆ. ಇನ್ನು ಕೊಹ್ಲಿ ಮೊದಲ ವರ್ಷದಿಂದ ಆರ್‌ಸಿಬಿ ತಂಡದಲ್ಲಿದ್ದು, ಈಗಲೂ ತಂಡದ ಸದಸ್ಯರಾಗಿದ್ದಾರೆ.

RCB ಅನ್‌ಬಾಕ್ಸ್ ಈವೆಂಟ್ ಎಂದರೇನು?

ಹಲವು ವರ್ಷಗಳ ಕಾಲ ತಂಡಕ್ಕೆ ಅಪಾರ ಕೊಡುಗೆ ನೀಡಿದ ಗೇಲ್ ಮತ್ತು ಡಿವಿಲಿಯರ್ಸ್ ಅವರನ್ನು RCB ಅನ್‌ಬಾಕ್ಸ್ ಈವೆಂಟ್‌ನಲ್ಲಿ ಫ್ರಾಂಚೈಸಿ ಗೌರವಿಸುತ್ತದೆ. ಎಬಿಡಿ ಜರ್ಸಿ ಸಂಖ್ಯೆ 17 ಮತ್ತು ಗೇಲ್ ಜರ್ಸಿ ಸಂಖ್ಯೆ 333 ಗೌರವಾರ್ಥದಿಂದ ಶಾಶ್ವತವಾಗಿ ನಿವೃತ್ತವಾಗುತ್ತದೆ. ಮತ್ತು ಇಬ್ಬರೂ ಲೆಜೆಂಡರಿ ಕ್ರಿಕೆಟರ್​​ಗಳಿಗೆ RCB ಹಾಲ್ ಆಫ್ ಫೇಮ್‌ ನೀಡಿ ವಿಶೇಷವಾಗಿ ಗೌರವ ಸೂಚಿಸಲಾಗುತ್ತದೆ. ಇದೇ ಮಾರ್ಚ್​ 31ರಿಂದ ಆರಂಭವಾಗುವ IPLಗಾಗಿ ವೇಳೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ನೂತನ ಜೆರ್ಸಿಯನ್ನೂ ಅನಾವರಣ ಮಾಡಲಿದೆ.

ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ.?

ಎಬಿಡಿ ಮತ್ತು ಗೇಲ್​ ಅವರಿಗೆ ಗೌರವ ಸೂಚಿಸುವುದಷ್ಟೇ ಅಲ್ಲ, ನೆರೆದಿರುವ ಅಭಿಮಾನಿಗಳಿಗೆ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಅಮೆರಿಕನ್​ ಗಾಯಕ ಜೇಸನ್ ಡೆರುಲೋ, ಸೋನು ನಿಗಮ್, ತುಳಸಿ ಕುಮಾರ್ ಮತ್ತು ಅದಿತಿ ಸಿಂಗ್ ಶರ್ಮಾ ಅವರಿಂದ ಸಂಗೀತ ಕಾರ್ಯಕ್ರಮಗಳು ಪ್ರದರ್ಶನಗಳು ನಡೆಯಲಿವೆ. ಹಿಂದಿ ಮತ್ತು ಕನ್ನಡ ಹಾಡುಗಳನ್ನು ಹಾಡಲಾಗುತ್ತದೆ. ಬೆಂಗಳೂರು ಮೂಲದ ರಾಕ್ ಬ್ಯಾಂಡ್ ಥರ್ಮಲ್ ಮತ್ತು ಕ್ವಾರ್ಟರ್ ಸಹ ಈವೆಂಟ್‌ನಲ್ಲಿ ನೇರ ಪ್ರದರ್ಶನ ನೀಡಲಿದೆ.

ಯಾವಾಗ ಮತ್ತು ಎಲ್ಲಿ.?

RCB ಅನ್‌ಬಾಕ್ಸ್ ಈವೆಂಟ್ ಅನ್ನು ಸ್ಟೇಡಿಯಂಗೆ ಬಂದವರಿಗೆ ಮಾತ್ರ ವೀಕ್ಷಣೆಗೆ ಅವಕಾಶ ಇರುವುದಿಲ್ಲ. ಅಭಿಮಾನಿಗಳು ಮನೆಯಲ್ಲೇ ಕೂತು ಲೈವ್​ ವೀಕ್ಷಿಸುವ ಸದಾವಕಾಶ ಇದೆ. ಈವೆಂಟ್ ಸಂಜೆ 4 ಗಂಟೆಗೆ ಸರಿಯಾಗಿ ಪ್ರಾರಂಭವಾಗಲಿದ್ದು, ಸಂಜೆ 5.45 ಸಮಯಕ್ಕೆ ಮುಕ್ತಾಯಗೊಳ್ಳಲಿದೆ. ಮತ್ತು RCBಯ ಅಧಿಕೃತ YouTube ಚಾನಲ್‌ನಲ್ಲಿ ಕಾರ್ಯಕ್ರಮದ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಅಭಿಮಾನಿಗಳು ಒಳಗೆ ಪ್ರವೇಶಿಸಲು 3 ಗಂಟೆಗೆ ಮೈದಾನದ ಗೇಟ್​​​ಗಳನ್ನು ತೆರೆಯಲಾಗುತ್ತದೆ.

15 ವರ್ಷಗಳಿಂದ ಐಪಿಎಲ್​ ಭಾಗವಾಗಿ ಒಂದೇ ಒಂದು ಪ್ರಶಸ್ತಿ ಗೆಲ್ಲದೆ ಆರ್​ಸಿಬಿ, ಈ ಋತುವಿನಲ್ಲಿ ಟ್ರೋಫಿಯ ಮೇಲೆ ಕೈ ಹಾಕುವ ಗುರಿಯನ್ನು ಹೊಂದಿದೆ. ಈ ಫ್ರಾಂಚೈಸಿ 2009, 2011 ಮತ್ತು 2016 ರಲ್ಲಿ ಮೂರು ಬಾರಿ ಫೈನಲ್‌ಗೆ ಪ್ರವೇಶಿಸಿದೆ. ಆದರೆ ಎಲ್ಲದರಲ್ಲೂ ರನ್ನರ್-ಅಪ್​​ಗೆ ತೃಪ್ತಿಪಟ್ಟುಕೊಂಡಿದೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಏಪ್ರಿಲ್ 1 ರಂದು ತವರಿನಲ್ಲಿ ಅಭಿಯಾನವನ್ನು ಪ್ರಾರಂಭಿಸಲಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಸುಯಶ್ ಪ್ರಭುದೇಸಾಯಿ, ಅನೂಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್​), ವನಿಂದು ಹಸರಂಗ, ಮಹಿಪಾಲ್ ಲೊಮ್ರೋರ್, ಗ್ಲೇನ್​ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್, ಮನೋಜ್ ಭಾಂಡಗೆ, ಮೈಕಲ್ ಬ್ರೇಸ್​​ವೆಲ್​, ಜೋಶ್ ಹೇಜಲ್​​ವುಡ್​, ಆಕಾಶ್ ದೀಪ್​ ಸಿಂಗ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರಣ್​ ಶರ್ಮಾ, ಡೇವಿಡ್ ವಿಲ್ಲಿ, ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸಿ ಟಾಪ್ಲೇ, ಹಿಮಾಂಶು ಶರ್ಮಾ.