Kannada News  /  Sports  /  Jasprit Bumrah Pulled Out Of India Vs Sri Lanka Odis
ಜಸ್ಪ್ರೀತ್‌ ಬುಮ್ರಾ
ಜಸ್ಪ್ರೀತ್‌ ಬುಮ್ರಾ (Getty)

Jasprit Bumrah out of Sri Lanka ODIs: ಯುಟರ್ನ್‌ ಹೊಡೆದ ಬಿಸಿಸಿಐ; ಲಂಕಾ ವಿರುದ್ಧದ ಏಕದಿನ ಸರಣಿಯಿಂದ ಬುಮ್ರಾ ಹೊರಕ್ಕೆ

09 January 2023, 17:34 ISTHT Kannada Desk
09 January 2023, 17:34 IST

“ಶ್ರೀಲಂಕಾ ವಿರುದ್ಧದ ಮುಂಬರುವ 3 ಪಂದ್ಯಗಳ ಏಕದಿನ ಸರಣಿಯಿಂದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ. ಏಕದಿನ ಸರಣಿಗೆ ಮುನ್ನ ಗುವಾಹಟಿಯಲ್ಲಿ ತಂಡ ಸೇರಿಕೊಳ್ಳಬೇಕಾಗಿದ್ದ ಬುಮ್ರಾ, ಬೌಲಿಂಗ್ ಮಾಡುವ ಸಲುವಾಗಿ ಚೇತರಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ,” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯು ನಾಳೆಯಿಂದ ಆರಂಭವಾಗುತ್ತಿದೆ. ಮೊದಲ ಪಂದ್ಯಕ್ಕೆ ಒಂದು ದಿನ ಬಾಕಿ ಇರುವಂತೆಯೇ, ಸರಣಿಯಿಂದ ವೇಗಿ ಜಸ್ಪ್ರೀತ್‌ ಬುಮ್ರಾ ಹೊರಬಿದ್ದಿದ್ದಾರೆ. ಕಳೆದ ಅಕ್ಟೋಬರ್‌ನಿಂದ ಕ್ರಿಕೆಟ್‌ನಿಂದ ಬುಮ್ರಾ ಹೊರಗುಳಿದಿದ್ದಾರೆ. ಆ ಬಳಿಕ ಲಂಕಾ ವಿರುದ್ಧದ ಏಕದಿನ ಸರಣಿಗೆ ದಿಢೀರ್‌ ಸೇರ್ಪಡೆಗೊಂಡರೂ, ಎನ್‌ಸಿಎ ನಿರ್ದೇಶನದ ಮೇರೆಗೆ ಮತ್ತೆ ತಂಡದಿಂದ ಹೊರಹಾಕಲಾಗಿದೆ.

ಟ್ರೆಂಡಿಂಗ್​ ಸುದ್ದಿ

“ಶ್ರೀಲಂಕಾ ವಿರುದ್ಧದ ಮುಂಬರುವ 3 ಪಂದ್ಯಗಳ ಏಕದಿನ ಸರಣಿಯಿಂದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ. ಏಕದಿನ ಸರಣಿಗೆ ಮುನ್ನ ಗುವಾಹಟಿಯಲ್ಲಿ ತಂಡ ಸೇರಿಕೊಳ್ಳಬೇಕಾಗಿದ್ದ ಬುಮ್ರಾ, ಬೌಲಿಂಗ್ ಮಾಡುವ ಸಲುವಾಗಿ ಚೇತರಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿಯು ಜಸ್ಪ್ರೀತ್ ಬುಮ್ರಾಗೆ ಯಾವುದೇ ಬದಲಿ ಆಟಗಾರನನ್ನು ಹೆಸರಿಸಿಲ್ಲ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ತಡೆರಹಿತ ಕ್ರಿಕೆಟ್ ಆಡಿದರೆ ಮತ್ತೆ ಆರೋಗ್ಯ ಸಮಸ್ಯೆಯಾಗುವ ಸಾಧ್ಯತೆ ಇರುವುದರಿಂದ, ಭಾರತದ ವೇಗಿಗೆ ಸ್ವಲ್ಪ ಹೆಚ್ಚಿನ ಸಮಯವನ್ನು ನೀಡುವುದು ಉತ್ತಮ ಎಂದು ನಂಬಲಾಗಿದೆ. ಈ ನಡುವೆ, ಮುಂದಿನ ವಾರ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಬುಮ್ರಾ ಭಾಗವಹಿಸುವ ನಿರೀಕ್ಷೆಯಿದೆ. ಆ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ನಂತರ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲೂ ಅವರು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಆರಂಭದಲ್ಲಿ, ಬೆನ್ನಿನ ಗಾಯದಿಂದ ಚೇತರಿಸಿಕೊಂಡ ಬಳಿಕ ಬುಮ್ರಾ ತೋರಿದ ಆರೋಗ್ಯ ಪ್ರಗತಿಯಿಂದ ಬಿಸಿಸಿಐ ತೃಪ್ತವಾಗಿದೆ ಎಂದು ಹೇಳಲಾಗಿತ್ತು. ಕಳೆದ ವರ್ಷ ನಡೆದ ವಿಶ್ವಕಪ್‌ಗೆ ಮೊದಲು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡ ಬಳಿಕ, ಬುಮ್ರಾ ಅವರ ಗಾಯ ಉಲ್ಬಣಿಸಿತು. ಹೀಗಾಗಿಯೇ ಬಿಸಿಸಿಐ ಭಾರತದ ಪ್ರಧಾನ ವೇಗಿಯನ್ನು ಆಟದಿಂದ ಹೊರಗಿಡಲು ನಿರ್ಧರಿಸಿತು. ಅವರ ಸಂಪೂರ್ಣ ಚೇತರಿಕೆಗಾಗಿ ಕಾದು ನೋಡುವ ತಂತ್ರ ಅನುಸರಿಸಿತು. ಹೀಗಾಗಿ ಮೊದಲ ಏಕದಿನ ಪಂದ್ಯ ನಡೆಯುವ ಗುವಾಹಟಿಗೆ ಭಾರತ ತಂಡದೊಂದಿಗೆ ಬುಮ್ರಾ ಪ್ರಯಾಣಿಸಿಲ್ಲ.

ಲಂಕಾ ವಿರುದ್ಧದ ಏಕದಿನಕ್ಕೆ ಪ್ರಕಟಿಸಿದ ಭಾರತದ ಆರಂಭಿಕ ತಂಡದಲ್ಲಿ ಬುಮ್ರಾ ಅವರನ್ನು ಹೆಸರಿಸದಿದ್ದರೂ, ಹೊಸ ವರ್ಷಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಅವರನ್ನು ತಂಡಕ್ಕೆ ಸೇರಿಸಲು ಮಂಡಳಿ ನಿರ್ಧರಿಸಿತು. ಆದರೆ, ಇದೀಗ ಮತ್ತೆ ಹೊರಬಿದ್ದಿರುವ ಬುಮ್ರಾ ಮರಳುವಿಕೆಗೆ ಮತ್ತಷ್ಟು ದಿನ ಕಾಯಬೇಕಾಗಿದೆ.

ಬುಮ್ರಾ ಈ ಹಿಂದೆಯೂ ಹಲವು ಬಾರಿ ಗಾಯಗಳಿಗೆ ತುತ್ತಾಗಿದ್ದರು. 2018ರಲ್ಲಿ, ಬುಮ್ರಾ ಎಡಗೈ ಹೆಬ್ಬೆರಳು ಮುರಿತಕ್ಕೊಳಗಾಗಿದ್ದರು. ಹೀಗಾಗಿ ಅವರು ಮೂರು ವಾರಗಳ ಕಾಲ ಮತ್ತು ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಿಂದ ಹೊರಗುಳಿದರು. ಆ ಬಳಿಕ 2019ರ ವಿಶ್ವಕಪ್ ನಂತರ, ಬುಮ್ರಾ ಬೆನ್ನಿನ ಗಾಯಕ್ಕೆ ತುತ್ತಾದರು. ಇದರಿಂದಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಟೆಸ್ಟ್ ಸರಣಿಯನ್ನು ಕಳೆದುಕೊಳ್ಳಬೇಕಾಯಿತು. 2020-21ರ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ, ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಬುಮ್ರಾ ಮತ್ತೆ ಗಾಯಾಳುವಾದರು. ಹೀಗಾಗಿ ಗಬ್ಬಾದಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಿಂದ ಹೊರಗುಳಿದಿದ್ದರು.

ಶ್ರೀಲಂಕಾ ಏಕದಿನ ಸರಣಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಚಹಾಲ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಅರ್ಷದೀಪ್ ಸಿಂಗ್.