ಕನ್ನಡ ಸುದ್ದಿ  /  Sports  /  Jasprit Bumrah Returns From Injury

BCCI on Jasprit Bumrah: ಜಸ್ಪ್ರೀತ್ ಬುಮ್ರಾ ಸಂಪೂರ್ಣ ಗುಣಮುಖ; ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕೆ

“ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗಾಗಿ ಭಾರತದ ತಂಡದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಸೇರಿಸಿಕೊಳ್ಳಲಾಗಿದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಬುಮ್ರಾ (Getty)

ಟೀಂ ಇಂಡಿಯಾ ಅಭಿಮಾನಿಗಳಿಗೆ ಬಿಸಿಸಿಐ ಸಿಹಿಸುದ್ದಿಯೊಂದನ್ನು ನೀಡಿದೆ. ಹಲವು ತಿಂಗಳಿಂದ ಗಾಯಕ್ಕೆ ತುತ್ತಾಗಿದ್ದ ವೇಗಿ ಜಸ್ಪ್ರೀತ್ ಬುಮ್ರಾ, ಈಗ ಗುಣಮುಖರಾಗಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಬುಮ್ರಾ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇಂದು (ಮಂಗಳವಾರ) ಖಚಿತಪಡಿಸಿದೆ.

ಇಂದಿನಿಂದ ಆರಂಭವಾಗುತ್ತಿರುವ ಟಿ20 ಸರಣಿ ಮುಗಿದ ಬೆನ್ನಲ್ಲೇ, ಜನವರಿ 10ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಜಸ್ಪ್ರೀತ್ ಬುಮ್ರಾ ಅವರನ್ನು ಕೊನೆಯ ಕ್ಷಣದಲ್ಲಿ ಸೇರ್ಪಡೆಗೊಳಿಸಲಾಗಿದೆ. ಭಾರತದ ಪ್ರಮುಖ ವೇಗಿಯಾದ ಬುಮ್ರಾ ಅವರು, ಕಳೆದ ವರ್ಷ ನಡೆದ ಏಷ್ಯಾಕಪ್‌ಗೂ ಮುಂಚಿತವಾಗಿ ಬೆನ್ನು ನೋವಿನ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದರು. ಸದ್ಯ ಸುದೀರ್ಘ ವಿಶ್ರಾಂತಿಯ ಬಳಿಕ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಡಿಸೆಂಬರ್ ಕೊನೆಯ ವಾರದಲ್ಲಿ ಶ್ರೀಲಂಕಾ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದಾಗ, ಬುಮ್ರಾ ಅವರನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಆದರೆ, ಇಂದು ಮಧ್ಯಾಹ್ನ ಬಿಸಿಸಿಐ ಸಂತಸದ ಸುದ್ದಿಯೊಂದನ್ನು ನೀಡಿದ್ದು, ಲಂಕಾ ವಿರುದ್ಧದ ಸರಣಿಗೆ ಅವರನ್ನು ಆಯ್ಕೆ ಮಾಡಿದೆ. 28 ವರ್ಷ ವಯಸ್ಸಿನ ಆಟಗಾರನ ಆರೋಗ್ಯದಲ್ಲಿ ಚೇತರಿಕೆಯಿಂದ ಟೀಂ ಮ್ಯಾನೇಜ್‌ಮೆಂಟ್‌ ಸಂತೋಷವಾಗಿದೆ. ಮುಂದೆ ನಡೆಯಲಿರುವ ಏಕದಿನ ವಿಶ್ವಕಪ್‌ಗೂ ಮುಂಚೆ ಅವರನ್ನು ತಂಡಕ್ಕೆ ಸೇರಿಸಿರುವುದು ಉತ್ತಮ ಹೆಜ್ಜೆಯಾಗಿದೆ.

“ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿಯು ಮುಂಬರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗಾಗಿ ಭಾರತದ ತಂಡದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಸೇರಿಸಿದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

“ಬುಮ್ರಾ ಅವರು 2022ರ ಸೆಪ್ಟೆಂಬರ್ ತಿಂಗಳಿನಿಂದ ಕ್ರಿಕೆಟ್ ಆಟದಿಂದ ಹೊರಗುಳಿದಿದ್ದರು. ಬೆನ್ನುನೋವಿನ ಕಾರಣ ಅವರು ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA)ಯು ಬುಮ್ರಾ ಫಿಟ್ ಆಗಿದ್ದಾರೆ ಎಂದು ಘೋಷಿಸಿದೆ. ಹೀಗಾಗಿ ಅವರು ಶೀಘ್ರದಲ್ಲೇ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ”, ಎಂದು ಪ್ರಕಟಣೆ ತಿಳಿಸಿದೆ.

ಸದ್ಯ ತಂಡಕ್ಕೆ ಬುಮ್ರಾ ಆಯ್ಕೆಯಾಗಿದ್ದರೂ, ತಕ್ಷಣವೇ ಆಡುವ ಬಳಗದಲ್ಲೂ ಕಾಣಿಸಿಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅರ್ಷ‌ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಅವರಂತಹವರು ಈಗಾಗಲೇ ಭಾರತ ತಂಡದ ವೇಗದ ವಿಭಾಗವನ್ನು ಮುನ್ನಡೆಸಲು ಮುಂದಾಗಿದ್ದು, ಈ ನಡುವೆ ಬುಮ್ರಾ ಎಂಟ್ರಿ ಪಡೆದಿದ್ದಾರೆ. ಹೀಗಾಗಿ ಅಂತಿಮ ಆಡುವ ಬಳಗವನ್ನು ಮ್ಯಾನೇಜ್‌ಮೆಂಟ್‌, ನಾಯಕ ಹಾಗೂ ಕೋಚ್‌ ನಿರ್ಧರಿಸಲಿದ್ದಾರೆ.

ಕಳೆದ ವರ್ಷದಂತೆ, ಈ ವರ್ಷ ಕೂಡಾ ಭಾರತದ ಪಾಲಿಗೆ ಮಹತ್ವದ್ದು. ತವರಿನಲ್ಲಿ ಏಕದಿನ ವಿಶ್ವಕಪ್‌ ನಡೆಯುತ್ತಿರುವುದು ಭಾರತದ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅದಕ್ಕೂ ಮೊದಲು ಭಾರತ ತಂಡವು ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವನ್ನು ತವರಿನಲ್ಲೇ ಎದುರಿಸಲಿದೆ. ಮುಂಬರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ದೃಷ್ಟಿಯಿಂದ ಹಾಗೂ ಏಕದಿನ ವಿಶ್ವಕಪ್‌ ದೃಷ್ಟಿಯಿಂದ, ಭಾರತ ತಂಡದಲ್ಲಿ ಸ್ಥಿರತೆ ಕಾಣುವುದು ಸದ್ಯಕ್ಕೆ ಮುಖ್ಯವಾಗಿದೆ.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್ (ವಿಕೆಟ್‌ ಕೀಪರ್), ಇಶಾನ್ ಕಿಶನ್ (ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.