ಭಾರತ vs ಇಂಗ್ಲೆಂಡ್ ಏಕದಿನ ಸರಣಿ; ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ? ಕಾರಣ ಇಲ್ಲಿದೆ
India vs England: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರ ಕೆಲಸದ ಹೊರೆ ಇಳಿಸುವ ಸಲುವಾಗಿ ಆಸ್ಟ್ರೇಲಿಯಾ ಪ್ರವಾಸದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗುತ್ತದೆ ಎಂದು ವರದಿಯಾಗಿದೆ.
ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿಯು (BGT 2025) ಮುಕ್ತಾಯಗೊಂಡ ಬಳಿಕ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಟೀಮ್ ಇಂಡಿಯಾ (Team India) ಸಿದ್ಧತೆ ಆರಂಭಿಸಬೇಕಿದೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳ (India vs England) ಮಧ್ಯೆ ಜನವರಿ 22ರಿಂದ 5 ಪಂದ್ಯಗಳ ಟಿ20ಐ ಸರಣಿ, 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಏಕದಿನ ಸರಣಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy) ಸಿದ್ಧತೆಯ ಭಾಗವಾಗಿರಲಿದೆ. ಎರಡು ಸರಣಿಗಳಿಗೆ ಶೀಘ್ರದಲ್ಲೇ ಬಿಸಿಸಿಐ (BCCI) ತಂಡ ಪ್ರಕಟಿಸಲಿದೆ. ಆದರೆ ಒಡಿಐ ಸಿರೀಸ್ಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತದೆ ಎಂದು ವರದಿಯಾಗಿದೆ.
ಭಾರತ ತಂಡದ ಹಿರಿಯ ಆಟಗಾರರಿಗೆ ನಾಯಕ ರೋಹಿತ್ ಶರ್ಮಾ (Rohit sharma), ವಿರಾಟ್ ಕೊಹ್ಲಿ (Virat Kohli) ಮತ್ತು ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ನಂತರ ಇಂಗ್ಲೆಂಡ್ ವಿರುದ್ಧ ವೈಟ್-ಬಾಲ್ ಸರಣಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಸ್ಪೋರ್ಟ್ಸ್ ಟಾಕ್ ಪ್ರಕಾರ, ಚಾಂಪಿಯನ್ಸ್ ಟ್ರೋಫಿಗೆ ಹಿರಿಯ ಆಟಗಾರರ ಕೆಲಸದ ಹೊರೆ ಇಳಿಸುವ ಮತ್ತು ಗಾಯದ ಆತಂಕದ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೂ ಆಟಗಾರರೊಂದಿಗೆ ಚರ್ಚಿಸಿದ ನಂತರ ಅಂತಿಮ ಕರೆ ತೆಗೆದುಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ. ಏಕೆಂದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಈ ಮೂವರೇ ಮೇಜರ್.
ಬಿಜಿಟಿ ಸರಣಿ ಬಳಿಕ ಏಕದಿನ ಸರಣಿ ಆರಂಭಕ್ಕೆ 1 ತಿಂಗಳ ಅಂತರ
ಭಾರತ-ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟಿ20ಐ ಸರಣಿ ಜನವರಿ 22ರಿಂದ ಪ್ರಾರಂಭವಾಗಲಿದೆ. ಆದರೆ ಏಕದಿನ ಸರಣಿ ಫೆಬ್ರವರಿ 6ರಿಂದ ಪ್ರಾರಂಭವಾಗಲಿದೆ. ರೋಹಿತ್-ಕೊಹ್ಲಿ ಟಿ20ಐಗೆ ನಿವೃತ್ತಿ ಘೋಷಿಸಿದ್ದು, ಏಕದಿನ ಸರಣಿಗೆ ವಿರಾಮ, ಬುಮ್ರಾ ಎರಡೂ ಸರಣಿಗಳಿಂದ ವಿರಾಮ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ. ಬಿಜಿಟಿ ಸರಣಿ ಮುಗಿದ ಒಂದು ತಿಂಗಳ ನಂತರ ಏಕದಿನ ಸರಣಿ ಆರಂಭವಾಗಲಿರುವ ಕಾರಣ ಮೂವರು ಆಟಗಾರರಿಗೆ ವಿಶ್ರಾಂತಿ ನೀಡುವುದೇಕೆ? ಅವರು ಸಿದ್ಧತೆ ನಡೆಸುವುದಾದರೂ ಹೇಗೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.
ಕಳೆದ ಆರು ತಿಂಗಳಿಂದ ಕೊಹ್ಲಿ, ರೋಹಿತ್, ಬುಮ್ರಾ ನಿಯಮಿತವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಅದರಲ್ಲೂ ಸಿಕ್ಕಾಪಟ್ಟೆ ಬೌಲಿಂಗ್ ಮಾಡಿದ್ದಾರೆ. ಹೀಗಾಗಿ ಬುಮ್ರಾರನ್ನು ಟಿ20ಐ ಸರಣಿಗೆ ರೆಸ್ಟ್ ನೀಡಿ ಏಕದಿನ ಸರಣಿಗೆ ಆಡಿಸಬೇಕು. ಟಿ20ಐನಿಂದ ನಿವೃತ್ತರಾಗಿರುವ ಕೊಹ್ಲಿ ಮತ್ತು ರೋಹಿತ್ರನ್ನೂ ಏಕದಿನ ಸರಣಿಯಲ್ಲಿ ಆಡಿಸಬೇಕು. ಪ್ರಸ್ತುತ ನಡೆಯುತ್ತಿರುವ ಸಿಡ್ನಿ ಟೆಸ್ಟ್ ಅಧಿಕೃತವಾಗಿ ಮುಕ್ತಾಯವಾಗುವುದು ಜನವರಿ 7ರಂದು (ಆದರೆ ಇನ್ನೂ ಬೇಗನೇ ಮುಗಿಯುವ ಸಾಧ್ಯತೆ ಇದೆ.) ಆ ಬಳಿಕ ಒಡಿಐ ಸರಣಿ ಆರಂಭವಾಗುವುದು ಫೆಬ್ರವರಿ 5ರಂದು. ಹೀಗಾಗಿ ಅವರಿಗೆ ಒಂದು ತಿಂಗಳು ಕಾಲ ವಿಶ್ರಾಂತಿ ಸಿಗುತ್ತದೆ ಅಂದಮೇಲೆ ಮತ್ತೆ ವಿಶ್ರಾಂತಿ ಏಕೆ? ಇದು ಕ್ರಿಕೆಟ್ ತಜ್ಞರ ಪ್ರಶ್ನೆಯಾಗಿದೆ.
ಭಾರತ vs ಇಂಗ್ಲೆಂಡ್ ಟಿ20 ಸರಣಿ ವೇಳಾಪಟ್ಟಿ
1ನೇ ಟಿ20ಐ: ಜನವರಿ 22, 2025, ಕೋಲ್ಕತ್ತಾ (ಈಡನ್ ಗಾರ್ಡನ್ಸ್)
2 ನೇ ಟಿ20ಐ: ಜನವರಿ 25, 2025, ಚೆನ್ನೈ (ಚಿದಂಬರಂ ಕ್ರೀಡಾಂಗಣ, ಚೆನ್ನೈ)
3ನೇ ಟಿ20ಐ: ಜನವರಿ 28, 2025, ರಾಜ್‌ಕೋಟ್ (ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ)
4 ನೇ ಟಿ20ಐ: ಜನವರಿ 31, 2025, ಪುಣೆ (ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ)
5ನೇ ಟಿ20ಐ: ಫೆಬ್ರವರಿ 2, 2025, ಮುಂಬೈ (ವಾಂಖೆಡೆ ಸ್ಟೇಡಿಯಂ)
ಎಲ್ಲಾ ಟಿ20ಐ ಪಂದ್ಯಗಳು ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತವೆ
ಭಾರತ vs ಇಂಗ್ಲೆಂಡ್ ಏಕದಿನ ಸರಣಿ ವೇಳಾಪಟ್ಟಿ
1ನೇ ಏಕದಿನ: ಫೆಬ್ರವರಿ 6, 2025, ನಾಗ್ಪುರ (ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ)
2ನೇ ಏಕದಿನ: ಫೆಬ್ರವರಿ 9, 2025, ಕಟಕ್ (ಬಾರಾಬತಿ ಸ್ಟೇಡಿಯಂ)
3ನೇ ಏಕದಿನ: ಫೆಬ್ರವರಿ 12, 2025, ಅಹಮದಾಬಾದ್ (ನರೇಂದ್ರ ಮೋದಿ ಸ್ಟೇಡಿಯಂ)