ಇಂಗ್ಲೆಂಡ್ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಔಟ್; ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡಕ್ಕೆ ಚಿಂತೆ
Jasprit Bumrah: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದಾರೆ. ಬಿಸಿಸಿಐ ಪ್ರಕಟಿಸಿದ ಪರಿಷ್ಕೃತ ಏಕದಿನ ತಂಡದಲ್ಲಿ ಬುಮ್ರಾ ಹೆಸರು ಕಾಣೆಯಾಗಿದೆ.

ಟೀಮ್ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಮತ್ತೆ ಮುನ್ನೆಲೆಗೆ ಬಂದಿದೆ. ಫೆಬ್ರವರಿ ಆರಂಭ ಅಂದರೆ ಫೆ 6ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭದೊಳಗೆ ವೇಗಿಯ ಫಿಟ್ನೆಸ್ ಅಪ್ಡೇಟ್ ಹೊರಬರುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದವು. ಹೀಗಾಗಿ ಚೇತರಿಕೆ ಕಂಡಿದ್ದರೆ ಅವರನ್ನು ಏಕದಿನ ಸರಣಿಗೆ ಆಯ್ಕೆ ಮಾಡಲಾಗುತ್ತದೆ ಎಂದೂ ಹೇಳಲಾಗಿತ್ತು. ಆದರೀಗ ಪರಿಷ್ಕೃತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಸೇರ್ಪಡೆಯಾಗಿದ್ದರೆ, ಬುಮ್ರಾ ಅವಕಾಶ ಪಡೆದಿಲ್ಲ. ಬುಮ್ರಾ ಇನ್ನೂ ಫಿಟ್ ಆಗದೇ ಇರುವುದು ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ಮೆಂಟ್ ಚಿಂತೆಗೆ ಕಾರಣವಾಗಿದೆ.
ಫೆಬ್ರವರಿ 19ರಿಂದ ಶುರುವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡಕ್ಕೆ ಜಸ್ಪೀತ್ ಬುಮ್ರಾ ಅಗತ್ಯ ತುಂಬಾ ಇದೆ. ಇಂತಹ ಪರಿಸ್ಥಿತಿಯಲ್ಲಿ ಚೇತರಿಸಿಕೊಳ್ಳದ ಕಾರಣ ಫಿಟ್ನೆಸ್ ಸಮಸ್ಯೆ ಬಿಗಡಾಯಿಸಿದೆ ಎಂದು ವರದಿಯಾಗಿದೆ. ಹೀಗಿದ್ದಾಗ ಚಾಂಪಿಯನ್ಸ್ ಟ್ರೋಫಿಗೆ ತಂಡದಲ್ಲಿ ಬದಲಾವಣೆ ಮಾಡಲು ಫೆಬ್ರವರಿ 11 ಕೊನೆಯ ದಿನವಾಗಿದ್ದು, ಅಷ್ಟರೊಳಗೆ ಫಿಟ್ ಆಗುತ್ತಾರಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಬೆನ್ನು ನೋವಿನೊಂದ ಬಳಲುತ್ತಿರುವ ವೇಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಐದನೇ ಟೆಸ್ಟ್ ಪಂದ್ಯದ ವೇಳೆ ಬುಮ್ರಾ ಗಾಯಗೊಂಡಿದ್ದರು. ಆದಾಗ್ಯೂ, ಬುಮ್ರಾ ಅವರ ಹೆಸರನ್ನು ತಂಡದಿಂದ ತೆಗೆದು ಹಾಕುವ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಏನನ್ನೂ ಹೇಳಿಲ್ಲ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಬಿಸಿಸಿಐ ಜನವರಿಯಲ್ಲೇ ಪ್ರಕಟಿಸಿತ್ತು. ಅಂದು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಪತ್ರಿಕಾಗೋಷ್ಠಿಯಲ್ಲಿ ಬುಮ್ರಾ ಮೊದಲ 2 ಏಕದಿನ ಪಂದ್ಯಗಳಿಗೆ ಅಲಭ್ಯರು. ಆದರೆ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರೆ ಎಂದು ಹೇಳಿದ್ದರು. ಅವರು ಹೇಳಿದಂತೆ ಅಂದು ಪ್ರಕಟಿಸಿದ ತಂಡದಲ್ಲು ಮಾಹಿತಿ ನೀಡಲಾಗಿತ್ತು. ಆದರೆ ಬುಮ್ರಾ ಫಿಟ್ ಆಗುತ್ತಾರೆ ಎನ್ನುವ ಭರವಸೆಯಿಂದ ಈ ಹೇಳಿಕೆ ನೀಡಿದ್ದರು ಎಂದು ಈಗ ತಿಳಿಯುತ್ತಿದೆ. ಪ್ರಸ್ತುತ ಪರಿಷ್ಕೃತ ತಂಡದಲ್ಲೂ ಅವಕಾಶ ಪಡೆಯದ ಕಾರಣ ಬುಮ್ರಾ ಅಲಭ್ಯತೆ ಪರಿಗಣಿಸಿ ಅವಕಾಶ ಪಡೆದಿದ್ದ ಹರ್ಷಿತ್ ರಾಣಾರನ್ನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಕರೆದೊಯ್ದರೂ ಅಚ್ಚರಿ ಇಲ್ಲ.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡುವ ವೇಳೆ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದರು. 2ನೇ ಇನ್ನಿಂಗ್ಸ್ನಲ್ಲಿ ಬುಮ್ರಾ ಬೌಲಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. 5 ವಾರಗಳ ಕಾಲ ವಿಶ್ರಾಂತಿ ಪಡೆಯಲು ಅವರಿಗೆ ವೈದ್ಯರು ಸಲಹೆ ನೀಡಿದ್ದರು. ಆದರೆ ಬಿಸಿಸಿಐ ಇದುವರೆಗೂ ಯಾವುದೇ ಅಪ್ಡೇಟ್ ನೀಡಿಲ್ಲ. ಬಿಜಿಟಿಯಲ್ಲಿ 32 ವಿಕೆಟ್ ಕಿತ್ತಿದ್ದ ಬುಮ್ರಾ, ಭಾರತ 1-3ರಿಂದ ಸರಣಿ ಸೋತರೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಬುಮ್ರಾ ಆದಷ್ಟು ಬೇಗ ಫಿಟ್ ಆಗಲಿ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ವರುಣ್ ಚಕ್ರವರ್ತಿಗೆ ಅವಕಾಶ ನೀಡಿದ್ದೇಕೆ?
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ವರುಣ್ ಚಕ್ರವರ್ತಿ ಅತ್ಯುತ್ತಮ ಫಾರ್ಮ್ನಲ್ಲಿದ್ದು, ಏಕದಿನ ಸರಣಿಯಲ್ಲೂ ಅಂತಹದ್ದೇ ಮ್ಯಾಜಿಕ್ ನಡೆಸಲಿದ್ದಾರೆ ಎಂಬ ಉದ್ದೇಶದಿಂದ ಅವರನ್ನು ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ 9.85ರ ಸರಾಸರಿಯಲ್ಲಿ 14 ವಿಕೆಟ್ ಕಬಳಿಸಿದ್ದರು. ಈವರೆಗೂ ಏಕದಿನ ಪಂದ್ಯವಾಡದ ವರುಣ್, ಈ ಸರಣಿಯಲ್ಲಿ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತದ ಪರಿಷ್ಕೃತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
