Kannada News  /  Sports  /  Jasprit Bumrah Ruled Out Of T20 World Cup
ಜಸ್ಪ್ರೀತ್‌ ಬೂಮ್ರಾ
ಜಸ್ಪ್ರೀತ್‌ ಬೂಮ್ರಾ (ANI)

T20 World Cup 2022: ವಿಶ್ವಕಪ್‌ ಗೆಲ್ಲುವ ಭಾರತದ ಕನಸಿಗೆ ಆರಂಭಿಕ ವಿಘ್ನ; ತಂಡದಿಂದ ಬೂಮ್ರಾ ಔಟ್

29 September 2022, 16:09 ISTHT Kannada Desk
29 September 2022, 16:09 IST

ಭಾರತ ತಂಡದಿಂದ ವೇಗಿ ಬೂಮ್ರಾ ಹೊರಬಿದ್ದಿದ್ದಾರೆ. ಬೆನ್ನುನೋವಿನ ಸಮಸ್ಯೆಯಿಂದಾಗಿ ನಿನ್ನೆಯ ಪಂದ್ಯದಿಂದ ಹೊರಗುಳಿದಿದ್ದ ಅವರು, ಮಹತ್ವದ ಟಿ20 ವಿಶ್ವಕಪ್‌ ತಂಡದಿಂದಲೂ ಹೊರಬಿದ್ದಿದ್ದಾರೆ.

ಟಿ20 ವಿಶ್ವಕಪ್‌ ಗೆಲ್ಲಬೇಕೆಂಬ ಭಾರತದ ಕನಸಿಗೆ ಆರಂಭದಿಂದಲೇ ವಿಘ್ನ ಎದುರಾಗುತ್ತಿದೆ. ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರು ಬೆನ್ನುಮೂಳೆ ಸಮಸ್ಯೆಯಿಂದಾಗಿ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಬಿಸಿಸಿಐ ಮೂಲಗಳನ್ನು ಆಧರಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ನಿನ್ನೆ ಹರಿಣಗಳ ವಿರುದ್ಧದ ಮೊದಲ ಟಿ20 ಪಂದ್ಯಕ್ಕೂ ಮುನ್ನ ಭಾರತದ ಅಭ್ಯಾಸದ ಅವಧಿಯಲ್ಲಿ ಬೆನ್ನುನೋವಿನ ಬಗ್ಗೆ ಬೂಮ್ರಾ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಟಿ20 ಪಂದ್ಯವನ್ನು ಮಿಸ್‌ ಮಾಡಿಕೊಂಡರು. ಇದೀಗ ವಿಶ್ವಕಪ್‌ ತಂಡದಿಂದಲೂ ಬೂಮ್ರಾ ಹೊರಬಿದ್ದ ಸುದ್ದಿ ಸಿಕ್ಕಿದ್ದು, ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಅನುಪಸ್ಥಿತಿಯು ಭಾರತ ತಂಡಕ್ಕೆ ದೊಡ್ಡ ಹೊಡೆತವಾಗಲಿದೆ.

ಕಳೆದ ಏಷ್ಯಾಕಪ್‌ನಲ್ಲೂ ಭಾರತ ಬೂಮ್ರಾರನ್ನು ಮಿಸ್‌ ಮಾಡಿಕೊಂಡಿತ್ತು. ಆ ಬಳಿಕ ತಂಡಕ್ಕೆ ಮರಳಿದ ಅವರು, ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿದ್ದರು. ಆದರೆ ಈಗ ವಿಶ್ವಕಪ್‌ ತಂಡದಿಂದಲೂ ಅವರು ಸ್ಥಾನ ಕಳೆದುಕೊಳ್ಳಲಿದ್ದಾರೆ. ಈಗಾಗಲೇ ರವೀಂದ್ರ ಜಡೇಜಾ ಅವರ ಅನುಪಸ್ಥಿತಿಯನ್ನೇ ಅಭಿಮಾನಿಗಳು ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ಬೆನ್ನಲ್ಲೇ ಈಗ ಪ್ರಮುಖ ವೇಗಿಯನ್ನು ಕೂಡಾ ವಿಶ್ವಕಪ್‌ ತಂಡದಿಂದ ಭಾರತ ಕಳೆದುಕೊಂಡಿದೆ.

ಬೆನ್ನುನೋವಿನಿಂದಾಗಿ ಏಷ್ಯಾಕಪ್‌ನಿಂದ ಹೊರಗುಳಿದಿದ್ದ ಬೂಮ್ರಾ, ಈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮೂಲಕ ಭಾರತ ತಂಡಕ್ಕೆ ಮರಳಿದ್ದರು. ಸರಣಿಯ 2 ಮತ್ತು 3ನೇ ಪಂದ್ಯದಲ್ಲಿ ಆಡಿದ್ದರು.

ಸದ್ಯ ಬೆನ್ನುನೋವಿನಿಂದ ತಂಡದಿಂದ ಹೊರಬಿದ್ದ ಅವರ ಗಾಯದ ಪ್ರಮಾಣವು ಶಸ್ತ್ರಚಿಕಿತ್ಸೆಗೆ ಒಳಗಾಗುವಷ್ಟು ಗಂಭೀರವಾಗಿಲ್ಲ ಎಂದು ಹೇಳಲಾಗಿದೆ. ಆದರೆ ಕನಿಷ್ಠ 4ರಿಂದ 5 ತಿಂಗಳುಗಳವರೆಗೆ ಅವರು ಮೈದಾನದಿಂದ ದೂರ ಉಳಿವುಳಿಯುವಷ್ಟು ಗಂಭೀರವಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇನ್ನೊಂದೆಡೆ ಬುಮ್ರಾ ಇಂದು ಎನ್‌ಸಿಎಗೆ ಹಾರುವ ನಿರೀಕ್ಷೆಯಿದೆ. ಅಲ್ಲಿ ತಪಾಸಣೆ ನಡೆದು ವರದಿಗಳ ಮೌಲ್ಯಮಾಪನ ಮಾಡಿದ ಬಳಿಕವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಬಿಸಿಸಿಐ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದೆ.

ಆಧುನಿಕ ಕ್ರಿಕೆಟ್‌ನಲ್ಲಿ ಪ್ರಮುಖ ವೇಗಿಗಳಲ್ಲಿ ಒಬ್ಬರೆಂದು ಹೆಸರು ಗಳಿಸಿರುವ ಬೂಮ್ರಾ ಇದುವರೆಗೆ ಭಾರತದ ಪರ 60 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ 70 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಸ್ವರೂಪದಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಆಗಿದ್ದಾರೆ.

28 ವರ್ಷದ ವೇಗದ ಬೌಲರ್ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿದ್ದರು. ಇವರೊಂದಿಗೆ ಅನುಭವಿ ಸ್ವಿಂಗ್‌ ಸ್ಪೆಷಲಿಸ್ಟ್‌ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಮತ್ತು ಹರ್ಷಲ್ ಪಟೇಲ್ ಕೂಡಾ ಆಯ್ಕೆಯಾಗಿದ್ದಾರೆ. ಸದ್ಯ ಗಾಯಾಳು ಬುಮ್ರಾ ಹೊರಬಿದ್ದರೆ, ಭಾರತವು ಅವರ ಸ್ಥಾನಕ್ಕೆ ಮೊಹಮ್ಮದ್ ಶಮಿ ಮತ್ತು ದೀಪಕ್ ಚಹಾರ್‌ರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ. ಏಕೆಂದರೆ ಇವರಿಬ್ಬರನ್ನು ಮಹತ್ವದ ಪಂದ್ಯಾವಳಿಗೆ ಸ್ಟ್ಯಾಂಡ್‌ಬೈ ಆಗಿ ಹೆಸರಿಸಲಾಗಿದೆ. ಇನ್ನೊಂದೆ ಸ್ಟ್ಯಾಂಡ್‌ ಬೈ ಸ್ಥಾನಕ್ಕೆ ಆರ್‌ಸಿಬಿ ಅಟಗಾರ ಮೊಹಮ್ಮದ್‌ ಸಿರಾಜ್‌ ಆಯ್ಕೆಯಾಗಬಹುದು.

ಬೂಮ್ರಾ ತಂಡದಿಂದ ಹೊರಬೀಳುವುದಕ್ಕೂ ಮುನ್ನ, ಮೊಣಕಾಲಿನ ಗಾಯದಿದಾಗಿ ಆಲ್‌ರೌಂಡರ್ ರವೀಂದ್ರ ಜಡೇಜಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಇದಾದ ಬಳಿಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಈ ತಿಂಗಳು ಮತ್ತೊಂದು ಹೊಡೆತ ಎದುರಿಸಿದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಜಡೇಜಾ ಬದಲಿಗೆ ಸ್ಥಾನ ಪಡೆದ ಅಕ್ಷರ್‌ ಪಟೇಲ್‌, ಉಭಯ ತಂಡಗಳ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಕಾಂಗರೂಗಳ ವಿರುದ್ಧದ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರದರ್ಶನ ನೀಡಿ ಮಿಂಚಿದ್ದಾರೆ.