ದೋಹಾ ಡೈಮಂಡ್ ಲೀಗ್ 2024: ನೀರಜ್ ಚೋಪ್ರಾಗೆ 2ನೇ ಸ್ಥಾನ; ಕೇವಲ 2 ಸೆಂಟಿ ಮೀಟರ್ಗಳಲ್ಲಿ ತಪ್ಪಿತು ಮೊದಲ ಸ್ಥಾನ
Neeraj Chopra - Doha Diamond League 2024 : ಪ್ರಸಕ್ತ ಸಾಲಿನ ದೋಹಾ ಡೈಮಂಡ್ ಲೀಗ್ನಲ್ಲಿ ಭಾರತದ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ದೋಹಾ ಡೈಮಂಡ್ ಲೀಗ್-2024ರಲ್ಲಿ (Doha Diamond League 2024) ಭಾರತದ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ (Neeraj Chopra) ಅವರು ಮೊದಲ ಸ್ಥಾನವನ್ನು ಎರಡು ಸೆಂಟಿ ಮೀಟರ್ಗಳಿಂದ ಕಳೆದುಕೊಂಡಿದ್ದಾರೆ. ಅವರ ಅತ್ಯುತ್ತಮ ಪ್ರಯತ್ನ 88.36 ಮೀಟರ್ ಆಗಿದೆ. ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಚ್ ಅವರು 88.38 ಮೀಟರ್ ದೂರ ಜಿಗಿದು ಮೊದಲ ಸ್ಥಾನ ಪಡೆದಿದ್ದಾರೆ. ಈ ಆವೃತ್ತಿಯಲ್ಲಿ ನೀರಜ್ ಮತ್ತು ವಡ್ಲೆಚ್ ಇಬ್ಬರಿಗೂ ಇದು ಅತ್ಯುತ್ತಮ ಎಸೆತವಾಗಿತ್ತು. ಆಂಡರ್ಸನ್ ಪೀಟರ್ಸ್ ಅವರು 86.62 ಮೀಟರ್ ಗುರಿ ತಲುಪಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಭಾರತದ ಮತ್ತೊಬ್ಬ ಜಾವೆಲಿನ್ ಎಸೆತಗಾರ ಕಿಶೋರ್ ಜೆನಾ, 76.31 ಮೀಟರ್ ಎಸೆದು ಒಂಬತ್ತನೇ ಸ್ಥಾನ ಪಡೆದಿದ್ದಾರೆ. ದೋಹಾ ಡೈಮಂಡ್ ಲೀಗ್ ಇತಿಹಾಸದಲ್ಲಿ ವಾಡ್ಲೆಚ್ ಅತ್ಯುತ್ತಮ ಜಾವೆಲಿನ್ ಎಸೆತ 90.88 ಮೀಟರ್ ಆಗಿದ್ದರೆ, ನೀರಜ್ ಅವರ ಅದ್ಭುತ ಎಸೆತ 89.94 ಮೀಟರ್ ಆಗಿದೆ. ಆಂಡರ್ಸನ್ ಪೀಟರ್ಸ್ ಅವರ ಅತ್ಯುತ್ತಮ ಎಸೆತ 93.07 ಮೀ ಆಗಿದೆ. ಆದರೆ ಪ್ರಸ್ತುತ ಆವೃತ್ತಿಯಲ್ಲಿ ಅಗ್ರ-3 ಸ್ಥಾನ ಪಡೆದಿರುವ ಈ ಮೂವರು ಸಹ ತಮ್ಮ ವೈಯಕ್ತಿಕ ಅತ್ಯುತ್ತಮ ಎಸೆತಗಳನ್ನು ಮೀರಿಸಲು ಸಾಧ್ಯವಾಗಿಲ್ಲ.
ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲಿ 85.87
ನೀರಜ್ ಮೊದಲ ಪ್ರಯತ್ನದಲ್ಲೇ ಫೌಲ್ ಆದರು. ವಾಡ್ಲೆಚ್ ತಮ್ಮ ಮೊದಲ ಪ್ರಯತ್ನದಲ್ಲಿ 85.87 ಮೀಟರ್ ಎಸೆದು ಗಮನ ಸೆಳೆದರು. ಆಂಡರ್ಸನ್ ಪೀಟರ್ಸ್ 80.68 ಮೀಟರ್ ಎಸೆದರು. ಕಿಶೋರ್ ಜೆನ್ನಾ ಅವರ ಮೊದಲ ಪ್ರಯತ್ನ 75.72 ಮೀಟರ್ ದೂರ ಜಾವೆಲಿನ್ ಹಾಕಿದರು. 2ನೇ ಪ್ರಯತ್ನದಲ್ಲಿ ನೀರಜ್ 84.93 ಮೀಟರ್ ಹಾಕಿದರೆ, ವಾಡ್ಲೆಚ್ 2ನೇ ಪ್ರಯತ್ನದಲ್ಲಿ 86.93 ಮೀ ಮತ್ತು ಪೀಟರ್ಸ್ 2ನೇ ಪ್ರಯತ್ನವು 85.75 ಮೀ ಆಗಿತ್ತು. ಆದರೆ ಜೆನಾ ಅವರು ತನ್ನ 2ನೇ ಪ್ರಯತ್ನದಲ್ಲಿ ಫೌಲ್ ಮಾಡಿದರು. ಎರಡು ಪ್ರಯತ್ನಗಳ ನಂತರ ಅವರನ್ನು ಕೈಬಿಡಲಾಯಿತು.
ಮೂರನೇ ಪ್ರಯತ್ನದಲ್ಲಿ ನೀರಜ್ 86.24 ಮೀಟರ್ ದೂರ ಎಸೆದ ಎರಡನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದರು. ಅದೇ ಸಮಯದಲ್ಲಿ ವಾಡ್ಲೆಚ್ 88.38 ಮೀಟರ್ ಎಸೆಯುವ ಮೂಲಕ ಮೊದಲ ಸ್ಥಾನ ಗಿಟ್ಟಿಸಿಕೊಂಡರು. ಪೀಟರ್ಸ್ 3ನೇ ಎಸೆತದಲ್ಲಿ ಫೌಲ್ ಮಾಡಿದರು. 4ನೇ ಪ್ರಯತ್ನದಲ್ಲಿ ನೀರಜ್ 86.18 ಮೀಟರ್ ದೂರ ಎಸೆಯುವ ಮೂಲಕ ಮತ್ತೆ 2ನೇ ಸ್ಥಾನದಲ್ಲೇ ಉಳಿದರು. ಆದರೆ ವಾಡ್ಲೆಚ್ 84.04 ಮೀಟರ್ ಎಸೆದರೆ, ಪೀಟರ್ಸ್ 82.89 ಮೀಟರ್ ಎಸೆದರು.
ಅಂತಿಮ ಪ್ರಯತ್ನದಲ್ಲಿ 88.36 ಮೀಟರ್ ಎಸೆದ ನೀರಜ್
ವಾಡ್ಲೆಚ್ ಅವರ 5ನೇ ಪ್ರಯತ್ನವು ಫೌಲ್ ಆಗಿತ್ತು. ನೀರಜ್ 82.28 ಮೀಟರ್ ಎಸೆದರೆ, ಪೀಟರ್ಸ್ 85.08 ಮೀಟರ್ ಎಸೆದರು. ವಾಡ್ಲೆಚ್ ಮೊದಲ, ನೀರಜ್ ಎರಡನೇ ಮತ್ತು ಪೀಟರ್ಸ್ ಮೂರನೇ ಸ್ಥಾನ ಪಡೆದರು. ಆರನೇ ಅಥವಾ ಕೊನೆಯ ಪ್ರಯತ್ನದಲ್ಲಿ ನೀರಜ್ 88.36 ಮೀಟರ್ ಎಸೆದು 2 ಸೆಂಟಿಮೀಟರ್ಗಳಿಂದ ಮೊದಲ ಸ್ಥಾನ ಕಳೆದುಕೊಂಡರು. ವಾಡ್ಲೆಚ್ ಆರನೇ ಪ್ರಯತ್ನ ವಿಫಲವಾಯಿತು. ಆಗ ಪೀಟರ್ಸ್ 86.62 ಮೀಟರ್ ಎಸೆದರು. ಅಂತಿಮವಾಗಿ ವಾಡ್ಲೆಚ್ 88.38 ಮೀ, ನೀರಜ್ 88.36 ಮೀ ಮತ್ತು ಪೀಟರ್ಸ್ 86.62 ಮೀಟರ್ ಎಸೆದು ಕ್ರಮವಾಗಿ ಅಗ್ರ ಮೂರು ಸ್ಥಾನ ಪಡೆದರು.
