India vs New Zealand: ಕಿವೀಸ್ ಟಿ20 ಸರಣಿಯಲ್ಲಿ ಕೊಹ್ಲಿ-ರೋಹಿತ್ ಅನುಪಸ್ಥಿತಿಗೆ ಬಹಿರಂಗವಾಗದ ಕಾರಣ; ಜಯ್ ಶಾ ಮೌನ
ಪ್ರಸ್ತುತ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಭಾಗವಾಗಿರುವ ಕೊಹ್ಲಿ ಮತ್ತು ರೋಹಿತ್ ಅನುಪಸ್ಥಿತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅವರ ಅನುಪಸ್ಥಿತಿಯ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡಾ ಬಾಯಿ ಬಿಟ್ಟಿಲ್ಲ. ಹೀಗಾಗಿ ಬಿಸಿಸಿಐ ನಿಖರ ಉದ್ದೇಶದ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ಶುಕ್ರವಾರ ತಡರಾತ್ರಿ ನ್ಯೂಜಿಲೆಂಡ್ ವಿರುದ್ಧದ ವೈಟ್ ಬಾಲ್ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಿದೆ. ನ್ಯೂಜಿಲೆಂಡ್ ವಿರುದ್ಧದ ಎರಡೂ ಸರಣಿಗಳಿಗೆ 16 ಸದಸ್ಯರ ತಂಡವನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಕಿವೀಸ್ ವಿರುದ್ಧ ಭಾರತವು ತಲಾ ಮೂರು ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಆಡಲಿದೆ.
ಟ್ರೆಂಡಿಂಗ್ ಸುದ್ದಿ
ಗಮನಾರ್ಹವಾಗಿ, ತಂಡದಲ್ಲಿ ಮೂವರ ಗೈರು ಭಾರಿ ಕುತೂಹಲ ಮೂಡಿಸಿದೆ. ಕಿವೀಸ್ ವಿರುದ್ಧದ ಎರಡೂ ಸರಣಿಗಳಿಂದ ಕೆ ಎಲ್ ರಾಹುಲ್ ಹೊರಗುಳಿದರೆ, ಎರಡೂ ಸರಣಿಗಳಿಂದ ಮತ್ತು ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾರನ್ನು ಮತ್ತೆ ಹೊರಗಿಡಲಾಗಿದೆ. ಇದರಲ್ಲಿ ರಾಹುಲ್ ಅವರನ್ನು ಆಯ್ಕೆ ಮಾಡದಿರುವುದಕ್ಕೆ ಬಿಸಿಸಿಐ ಕಾರಣವನ್ನು ವಿವರಿಸಿದೆ. ಆದರೆ ಕೊಹ್ಲಿ ಮತ್ತು ರೋಹಿತ್ ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
“ಕೌಟುಂಬಿಕ ಕಾರ್ಯಗಳಿಂದಾಗಿ ಕೆ ಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಗೆ ಅಲಭ್ಯರಾಗಿದ್ದಾರೆ” ಎಂದು ಶುಕ್ರವಾರ ಬಿಡುಗಡೆಯಾದ ಬಿಸಿಸಿಐ ಹೇಳಿಕೆ ತಿಳಿಸಿದೆ. ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡು ಟೆಸ್ಟ್‌ಗಳಿಂದ ಆಲ್‌ರೌಂಡರ್ ರವೀಂದ್ರ ಜಡೇಜಾ ಅನುಪಸ್ಥಿತಿಯ ಹಿಂದಿನ ಕಾರಣವನ್ನು ಸಹ ಬಿಸಿಸಿಐ ಉಲ್ಲೇಖಿಸಿದೆ. “ಜಡೇಜಾ ಅವರನ್ನು ಅವರ ಫಿಟ್ನೆಸ್ ಆಧಾರದ ಮೇಲೆ ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ” ಎಂದು ಹೇಳಿಕೆ ತಿಳಿಸಿದೆ.
ಆದರೆ, ಪ್ರಸ್ತುತ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಭಾಗವಾಗಿರುವ ಕೊಹ್ಲಿ ಮತ್ತು ರೋಹಿತ್ ಅನುಪಸ್ಥಿತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅವರ ಅನುಪಸ್ಥಿತಿಯ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡಾ ಬಾಯಿ ಬಿಟ್ಟಿಲ್ಲ. ಹೀಗಾಗಿ ಬಿಸಿಸಿಐ ನಿಖರ ಉದ್ದೇಶದ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.
ಕಳೆದ ತಿಂಗಳು ಶ್ರೀಲಂಕಾ ಸರಣಿಗಾಗಿ ಟಿ20 ತಂಡವನ್ನು ಪ್ರಕಟಿಸುವ ಮೊದಲು ಬಂದ ಪಿಟಿಐ ವರದಿಯ ಪ್ರಕಾರ, ಕೊಹ್ಲಿಯಂತಹ ಆಟಗಾರರಿಗೆ ಟಿ20 ಮಾದರಿಯಿಂದ ವಿರಾಮ ನೀಡಲು ಬಿಸಿಸಿಐ ಯೋಚಿಸಿದೆಯಂತೆ. ಭಾರತವು ಆಯಾ ಫಾರ್ಮ್ಯಾಟ್‌ಗೆ ತಕ್ಕನಾಗಿ ಆಡಬಲ್ಲ ಆಟಗಾರರನ್ನು ಮಾತ್ರ ಆಯ್ಕೆ ಮಾಡುತ್ತದೆ ಎಂದು ವರದಿ ಉಲ್ಲೇಖಿಸಿತ್ತು.
ಕೊಹ್ಲಿಯನ್ನು ಶ್ರೀಲಂಕಾ ವಿರುದ್ಧದ ಟಿ2O ಸರಣಿಗೆ ಆಯ್ಕೆ ಮಾಡಿರಲಿಲ್ಲ. ಆದರೆ, ಆ ಬಳಿಕ ನಡೆಯುತ್ತಿರುವ ಏಕದಿನ ಸರಣಿಗೆ ಅವರು ಹಿಂತಿರುಗಿದ್ದಾರೆ. ರೋಹಿತ್ ಶರ್ಮಾ ಕೂಡಾ ಏಕದಿನಕ್ಕೆ ನಾಯಕನಾಗಿ ಮರಳಿದ್ದರು.
“ಮೊದಲನೆಯದಾಗಿ, ಆಟಗಾರ ಒಂದರ ಮೇಲೊಂದರಂತೆ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ. ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಆಡುವ ಆಟಗಾರರಿಗೆ ಸಾಕಷ್ಟು ವಿರಾಮ ನೀಡಬೇಕು. ನಾವು ನ್ಯೂಜಿಲೆಂಡ್ ವಿರುದ್ಧ ಮೂರು ಟಿ20ಗಳನ್ನುಆಡಬೇಕಿದೆ. ಏನಾಗುತ್ತದೆ ಎಂಬುದನ್ನು ಐಪಿಎಲ್ ನಂತರ ನಾವು ಕಾದು ನೋಡಬೇಕು. ನಾನು ಚುಟುಕು ಸ್ವರೂಪದಲ್ಲಿ ಆಡುವುದನ್ನು ನಿಲ್ಲಸಲು ನಿರ್ಧರಿಸಿಲ್ಲ” ಎಂದು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಹಿಂದಿರುಗಿದ ಬೆನ್ನಲ್ಲೇ ರೋಹಿತ್ ಹೇಳಿದ್ದಾರೆ.
ಭಾರತವು ಈ ವರ್ಷ ಇನ್ನು ಎರಡು ಟಿ20 ಸರಣಿಗಳನ್ನು ಮಾತ್ರ ಆಡಲಿದೆ. ಜುಲೈ-ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮತ್ತು ಏಕದಿನ ವಿಶ್ವಕಪ್ ಬಳಿಕ ಆಸ್ಟ್ರೇಲಿಯಾ ವಿರುದ್ಧ ವಿದೇಶಿ ಸರಣಿಯಲ್ಲಿ ಭಾರತ ಪಾಲ್ಗೊಳ್ಳಿದೆ. ಆ ಸಂದರ್ಭದಲ್ಲಿ ಬಿಸಿಸಿಐ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದನ್ನು ನೋಡಬೇಕಿದೆ.