'ಖೋ ಖೋ ವಿಶ್ವಕಪ್ ಗೆದ್ದವರಿಗೆ ಮಹಾರಾಷ್ಟ್ರ 2.5 ಕೋಟಿ ರೂ, ಹುದ್ದೆ ಕೊಡ್ತು; ಆದರೆ ನೀವು 5 ಲಕ್ಷ ಕೊಟ್ಟು ಅವಮಾನಿಸಿದ್ರಿ'
ಕನ್ನಡ ಸುದ್ದಿ  /  ಕ್ರೀಡೆ  /  'ಖೋ ಖೋ ವಿಶ್ವಕಪ್ ಗೆದ್ದವರಿಗೆ ಮಹಾರಾಷ್ಟ್ರ 2.5 ಕೋಟಿ ರೂ, ಹುದ್ದೆ ಕೊಡ್ತು; ಆದರೆ ನೀವು 5 ಲಕ್ಷ ಕೊಟ್ಟು ಅವಮಾನಿಸಿದ್ರಿ'

'ಖೋ ಖೋ ವಿಶ್ವಕಪ್ ಗೆದ್ದವರಿಗೆ ಮಹಾರಾಷ್ಟ್ರ 2.5 ಕೋಟಿ ರೂ, ಹುದ್ದೆ ಕೊಡ್ತು; ಆದರೆ ನೀವು 5 ಲಕ್ಷ ಕೊಟ್ಟು ಅವಮಾನಿಸಿದ್ರಿ'

ಖೋ ಖೋ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಗೌತಮ್ ಮತ್ತು ಚೈತ್ರಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ಲಕ್ಷ ಬಹುಮಾನ ಘೋಷಿಸಿದ್ದಕ್ಕೆ ಜೆಡಿಎಸ್​ ತರಾಟೆ ತೆಗೆದುಕೊಂಡಿದೆ.

'ಖೋ ಖೋ ವಿಶ್ವಕಪ್ ಗೆದ್ದ ಕರ್ನಾಟಕದ ಬಿ ಚೈತ್ರ ಮತ್ತು ಗೌತಮ್ ಅವರನ್ನು ಸಿಎಂ ಸಿದ್ದರಾಮಯ್ಯ ಸನ್ಮಾನಿಸಿದ ಕ್ಷಣ.
'ಖೋ ಖೋ ವಿಶ್ವಕಪ್ ಗೆದ್ದ ಕರ್ನಾಟಕದ ಬಿ ಚೈತ್ರ ಮತ್ತು ಗೌತಮ್ ಅವರನ್ನು ಸಿಎಂ ಸಿದ್ದರಾಮಯ್ಯ ಸನ್ಮಾನಿಸಿದ ಕ್ಷಣ.

ಇತ್ತೀಚೆಗೆ ಮುಕ್ತಾಯಗೊಂಡ ಖೋ-ಖೋ ವಿಶ್ವಕಪ್​ ಟೂರ್ನಿಯಲ್ಲಿ ಮಹಿಳೆಯರ ಮತ್ತು ಪುರುಷರ ವಿಭಾಗದಲ್ಲಿ ಭಾರತದ ತಂಡಗಳೇ ಚಾಂಪಿಯನ್ ಪಟ್ಟಕ್ಕೇರಿವೆ. ಖೋ-ಖೋ ವಿಶ್ವಕಪ್ ಗೆದ್ದ ಆಟಗಾರರಿಗೆ ಆಯಾ ರಾಜ್ಯಗಳು ಭರ್ಜರಿ ಉಡುಗೊರೆ ನೀಡಿ, ಸರ್ಕಾರದ ಹುದ್ದೆ ನೀಡುವುದಾಗಿ ಘೋಷಿಸಿವೆ. ಕರ್ನಾಟಕದ ಆಟಗಾರರಿಗೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಆದರೆ ಇದೇ ವಿಚಾರಕ್ಕೆ ಜೆಡಿಎಸ್​ ಪಕ್ಷವು ರಾಜ್ಯ ಸರ್ಕಾರವನ್ನು ತರಾಟೆ ತೆಗೆದುಕೊಂಡಿದೆ.

ಕರ್ನಾಟಕದಿಂದ ಟಿ ನರಸೀಪುರದ ಕುರುಬೂರಿನ ಬಿ ಚೈತ್ರಾ ಮತ್ತು ಮಂಡ್ಯದ ಎಂಕೆ ಗೌತಮ್ ಅವರು ಕ್ರಮವಾಗಿ ಭಾರತದ ಮಹಿಳೆಯರ ಮತ್ತು ಪುರುಷರ ತಂಡದಲ್ಲಿ ಸ್ಥಾನ ಪಡೆದಿದ್ದರು. ವಿಶ್ವಕಪ್ ಗೆದ್ದ ಬಳಿಕ ದೆಹಲಿಯಲ್ಲಿ ತಮ್ಮ ಕಚೇರಿಗೆ ಕರೆಸಿದ್ದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ಚೈತ್ರಾ ಮತ್ತು ಗೌತಮ್ ಅವರನ್ನು ಸನ್ಮಾನಿಸಿ ಶ್ಲಾಘಿಸಿದ್ದರು. ನಂತರ ಕರ್ನಾಟಕಕ್ಕೆ ಆಗಮಿಸಿದ ಇಬ್ಬರಿಗೂ ಸಿಎಂ ಸಿದ್ದರಾಮಯ್ಯ ಸನ್ಮಾನಿಸಿ 5 ಲಕ್ಷ ಬಹುಮಾನ ಘೋಷಿಸಿದ್ದರು.

ಇದರ ಬೆನ್ನಲ್ಲೇ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಜೆಡಿಎಸ್​, ಸರ್ಕಾರಿ ಹುದ್ದೆ ಮತ್ತು ಉತ್ತಮ ಮೊತ್ತ ನೀಡುವಂತೆ ಒತ್ತಾಯಿಸಿದೆ. ಅಲ್ಲದೆ, ಪಕ್ಕದ ರಾಜ್ಯಗಳು ನೀಡಿರುವ ನೆರವು ಉಲ್ಲೇಖಿಸಿ ಕಿಡಿಕಾರಿದೆ. ಮಹಾರಾಷ್ಟ್ರ ಸರ್ಕಾರ ಖೋಖೋ ವಿಶ್ವಕಪ್ ಜಯಿಸಿದ ತಮ್ಮ ರಾಜ್ಯದ ಆಟಗಾರರಿಗೆ ತಲಾ 2.5 ಕೋಟಿ ರೂಪಾಯಿ ಬಹುಮಾನದ ಜೊತೆಗೆ ಗ್ರೇಡ್​-ಎ ಕೆಟಗರಿ ಸರ್ಕಾರಿ ಹುದ್ದೆ ನೀಡುವುದಾಗಿಯೂ ಘೋಷಿಸಿದೆ. ಆದರೆ ನೀವು ಪುಡಿಗಾಸು ಕೊಟ್ಟು ಕೈತೊಳೆದುಕೊಂಡಿದ್ದೀರಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ಕನ್ನಡಿಗರಿಗೆ ಅಪಮಾನ ಎಂದ ಜೆಡಿಎಸ್

'ಪುಡಿಗಾಸು 5 ಲಕ್ಷ ರೂಪಾಯಿ ಘೋಷಿಸಿ ಚೊಚ್ಚಲ ಖೋ ಖೋ ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಖೋ ಖೋ ಆಟಗಾರರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅವಮಾನಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಪಕ್ಕದ ಕೇರಳ ರಾಜ್ಯಕ್ಕೆ ಸದಾ ಮಿಡಿಯುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಮನ ಕನ್ನಡಿಗರಾದ ಬಿ ಚೈತ್ರಾ ಹಾಗೂ ಎಂಕೆ ಗೌತಮ್ ಅವರ ಅಮೋಘ ಸಾಧನೆಗೆ ಮಿಡಿಯದಿರುವುದು ವಿಪರ್ಯಾಸ' ಎಂದಿದೆ.

'ಕೇರಳದವರಿಗೆ ಲಕ್ಷ ಲಕ್ಷ ಕೊಡುವ ಸಿದ್ದರಾಮಯ್ಯ ಸರ್ಕಾರ, ರಾಜ್ಯದ ಗ್ರಾಮೀಣ ಪ್ರತಿಭೆಗಳ ಸಾಧನೆಗೆ ಕೇವಲ 5 ಲಕ್ಷ ನೀಡಿ ಕನ್ನಡಿಗರಿಗೆ ಅಪಮಾನ ಮಾಡುತ್ತಿದೆ. ಸರ್ಕಾರ ಕ್ರೀಡಾಪಟುಗಳ ಸಾಧನೆ ಮತ್ತು ಪರಿಶ್ರಮವನ್ನು ಅವಮಾನಿಸದೆ ಗೌರವದಿಂದ ನಡೆಸಿಕೊಂಡು, ಭವಿಷ್ಯದ ಆಟಗಾರರಿಗೂ ಸೂಕ್ತ ಪ್ರೋತ್ಸಾಹ ನೀಡಬೇಕು' ಎಂದು ಹೇಳಿ ಪೋಸ್ಟ್ ಮಾಡಿರುವ ಜೆಡಿಎಸ್, ಚೈತ್ರಾ ಮತ್ತು ಗೌತಮ್ ತಮಗೆ ನೀಡಿದ 5 ಲಕ್ಷದ ಹಣ ತಿರಸ್ಕರಿಸಿದ ಸುದ್ದಿಯ ಪ್ರತಿಯನ್ನು ಹಂಚಿಕೊಂಡಿದೆ.

ಮತ್ತೊಂದು ಪೋಸ್ಟ್​ನಲ್ಲಿ 'ಗುಲಾಮಿ ಮನಸ್ಥಿತಿಯಿಂದ ಹೊರಬನ್ನಿ ಕಾಂಗ್ರೆಸ್ಸಿಗರೇ, ಖೋಖೋ ವಿಶ್ವಕಪ್‌ ವಿಜೇತ ಆಟಗಾರರಿಗೆ ಸೂಕ್ತ ಪ್ರೋತ್ಸಾಹಧನ ಹಾಗೂ ಸರ್ಕಾರಿ ಉದ್ಯೋಗ ನೀಡಲು ಹೈಕಮಾಂಡ್‌ ಆದೇಶವೇನಾದರೂ ಬರಬೇಕೇ? ಖೋಖೋ ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿದ್ದ ಇತರೆ ರಾಜ್ಯಗಳ ಆಟಗಾರರಿಗೆ ಆಯಾ ರಾಜ್ಯಗಳು ಸೂಕ್ತ ಪ್ರೋತ್ಸಾಹಧನದ ಜೊತೆ ಸರ್ಕಾರಿ ಹುದ್ದೆ ನೀಡಿ ಗೌರವಿಸಿದೆ. ಕೇರಳಕ್ಕೆ ಲಕ್ಷ ಲಕ್ಷ ಕೊಡುವ ಸಿದ್ದರಾಮಯ್ಯ ಸರ್ಕಾರ, ರಾಜ್ಯದ ಗ್ರಾಮೀಣ ಪ್ರತಿಭೆಗಳ ಸಾಧನೆಗೆ ಕೇವಲ ಲಕ್ಷ ನೀಡಿ ಕನ್ನಡಿಗರಿಗೆ ಅಪಮಾನ ಮಾಡುತ್ತಿದೆ' ಎಂದು ಕಿಡಿಕಾರಿದೆ.

ಬಹುಮಾನ ತಿರಸ್ಕರಿಸಿದ ಚೈತ್ರಾ, ಗೌತಮ್

ಖೋ ಖೋ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಗೌತಮ್ ಮತ್ತು ಚೈತ್ರಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದ 5 ಲಕ್ಷ ರೂಪಾಯಿ ಬಹುಮಾನ ಮೊತ್ತವನ್ನು ತಿರಸ್ಕರಿಸಿದ್ದಾರೆ. ಶನಿವಾರ ಬೆಂಗಳೂರಿನ ಪ್ರೆಸ್​ಕ್ಲಬ್​ನಲ್ಲಿ ಮಾತನಾಡಿದ ಇಬ್ಬರು ಕ್ರೀಡಾಪಟುಗಳು, ಖೋ ಖೋ ಆಟಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ. ನಮಗೆ ಕ್ರೀಡಾಂಗಣ ಬೇಕು ಎಂದು ಮನವಿ ಮಾಡಿದ್ದರು. ಮಹಾರಾಷ್ಟ್ರದ ಜೊತೆಗೆ ಉತ್ತರ ಪ್ರದೇಶ, ಹರಿಯಾಣ, ಜಮ್ಮು ಕಾಶ್ಮೀರ ಸರ್ಕಾರಗಳು ವಿಶ್ವಕಪ್ ಗೆದ್ದ ತಮ್ಮ ರಾಜ್ಯದ ಖೋ ಖೋ ಆಟಗಾರರಿಗೆ ಸೂಕ್ತ ಗೌರವ ನೀಡಿವೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.