ನತದೃಷ್ಟ ಕ್ಯಾಪ್ಟನ್ಸ್; ತಮ್ಮದೇ ನಾಯಕತ್ವದಲ್ಲಿ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದ ದಿಗ್ಗಜ ಆಟಗಾರರಿವರು!
ಕನ್ನಡ ಸುದ್ದಿ  /  ಕ್ರೀಡೆ  /  ನತದೃಷ್ಟ ಕ್ಯಾಪ್ಟನ್ಸ್; ತಮ್ಮದೇ ನಾಯಕತ್ವದಲ್ಲಿ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದ ದಿಗ್ಗಜ ಆಟಗಾರರಿವರು!

ನತದೃಷ್ಟ ಕ್ಯಾಪ್ಟನ್ಸ್; ತಮ್ಮದೇ ನಾಯಕತ್ವದಲ್ಲಿ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದ ದಿಗ್ಗಜ ಆಟಗಾರರಿವರು!

Pro Kabaddi League Season 11: ಘಟಾನುಘಟಿ ಆಟಗಾರರೇ ಪ್ರೊ ಕಬಡ್ಡಿ ಲೀಗ್​ ಟ್ರೋಫಿಯನ್ನು ಗೆದ್ದಿದ್ದಾರೆ. ಆದರೆ, ಈ ಮೂವರು ದಿಗ್ಗಜ ಆಟಗಾರರು ನಾಯಕನಾಗಿ ಹಲವು ತಂಡಗಳನ್ನು ಪ್ರತಿನಿಧಿಸಿದ್ದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.

ತಮ್ಮದೇ ನಾಯಕತ್ವದಲ್ಲಿ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದ ದಿಗ್ಗಜ ಆಟಗಾರರಿವರು!
ತಮ್ಮದೇ ನಾಯಕತ್ವದಲ್ಲಿ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದ ದಿಗ್ಗಜ ಆಟಗಾರರಿವರು!

Big Players Never Won PKL as Captain: ಬಹುನಿರೀಕ್ಷಿತ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (PKL Season 11) ಅಕ್ಟೋಬರ್​ 18ರಿಂದ ಅದ್ಧೂರಿ ಆರಂಭ ಪಡೆದುಕೊಳ್ಳಲಿದೆ. ಮೂರು ನಗರಗಳಲ್ಲಿ ನಡೆಯುವ ಈ ಟೂರ್ನಿಗೆ ಕಬಡ್ಡಿ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. 12 ತಂಡಗಳು ಹೊಸತನದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿವೆ. ಲೀಗ್ ಇತಿಹಾಸದಲ್ಲಿ ಇದುವರೆಗೂ ಅತ್ಯಂತ ಯಶಸ್ವಿ ತಂಡವೆಂದರೆ, ಪಾಟ್ನಾ ಪೈರೇಟ್ಸ್. ಇದು ಒಟ್ಟು 3 ಬಾರಿ ಟ್ರೋಫಿ ಗೆದ್ದಿದೆ. ಆದಾಗ್ಯೂ, ವಿಭಿನ್ನ ನಾಯಕರ ನಾಯಕತ್ವದಲ್ಲಿ 3 ಬಾರಿ ಈ ಸಾಧನೆ ಮಾಡಿದೆ ಪಾಟ್ನಾ ಪೈರೇಟ್ಸ್. ಪ್ರಮುಖ ಆಟಗಾರರೇ ಟ್ರೋಫಿ ಗೆದ್ದ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆದರೆ ಈ ಮೂವರು ದಿಗ್ಗಜ ಆಟಗಾರರು ನಾಯಕರಾಗಿ ಒಮ್ಮೆಯೂ ಪಿಕೆಎಲ್ ಪ್ರಶಸ್ತಿ ಗೆದ್ದಿಲ್ಲ.

ಪವನ್ ಸೆಹ್ರಾವತ್ (ಪಿಕೆಎಲ್ 8 ಮತ್ತು ಪಿಕೆಎಲ್ 10)

ಪವನ್ ಸೆಹ್ರಾವತ್ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಮೂರನೇ ಅತ್ಯಂತ ಯಶಸ್ವಿ ರೈಡರ್ ಆಗಿದ್ದಾರೆ. 126 ಪಂದ್ಯಗಳಲ್ಲಿ ಒಟ್ಟು 1,189 ರೇಡ್ ಪಾಯಿಂಟ್ಸ್​ ಗಳಿಸಿದ್ದಾರೆ. ಆದರೆ, ನಾಯಕನಾಗಿ ಇನ್ನೂ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಪವನ್ ಲೀಗ್‌ನಲ್ಲಿ 2 ಬಾರಿ ಅಂದರೆ, ಬೆಂಗಳೂರು ಬುಲ್ಸ್ (ಪಿಕೆಎಲ್ 8) ಮತ್ತು ತೆಲುಗು ಟೈಟಾನ್ಸ್ (ಪಿಕೆಎಲ್ 10) ನಾಯಕತ್ವ ವಹಿಸಿದ್ದಾರೆ. ತನ್ನ ನಾಯಕತ್ವದಲ್ಲಿ 8ನೇ ಸೀಸನ್‌ನಲ್ಲಿ ಬೆಂಗಳೂರು ಬುಲ್ಸ್ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದರೆ, ಪಿಕೆಎಲ್ 10ರಲ್ಲಿ ತೆಲುಗು ಟೈಟಾನ್ಸ್ ಕೇವಲ 2 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು.

ದೀಪಕ್ ನಿವಾಸ್ ಹೂಡಾ

ದೀಪಕ್ ನಿವಾಸ್ ಹೂಡಾ ಅವರು ತಮ್ಮ ಪಿಕೆಎಲ್ ವೃತ್ತಿಜೀವನದಲ್ಲಿ 157 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಒಟ್ಟು 1020 ರೇಡ್ ಪಾಯಿಂಟ್​ಗಳನ್ನು ಗಳಿಸಿದ್ದಾರೆ. ಪ್ರೊ ಕಬಡ್ಡಿ ಲೀಗ್‌ನ 5ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್ ನಾಯಕತ್ವದ ಜೊತೆಗೆ ದೀಪಕ್ ಪಿಕೆಎಲ್ 6, 7 ಮತ್ತು 8 ರಲ್ಲಿ ಸತತ 3 ಬಾರಿ ಜೈಪುರ ಪಿಂಕ್ ಪ್ಯಾಂಥರ್ಸ್ ನಾಯಕತ್ವ ವಹಿಸಿದ್ದರು. ಆದರೆ, ಈ ಅವಧಿಯಲ್ಲಿ ದೀಪಕ್ ಹೂಡಾ ನಾಯಕನಾಗಿ ಒಮ್ಮೆಯೂ ಪಿಕೆಎಲ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಪಿಕೆಎಲ್ 5ರಲ್ಲಿ ಪುಣೇರಿ ಪಲ್ಟಾನ್ ಎಲಿಮಿನೇಟರ್​​ನಿಂದ ಹೊರಗುಳಿದಿತ್ತು. ಈ ಅವಧಿಯಲ್ಲಿ ಜೈಪುರ ಒಂದು ಬಾರಿಯೂ ಪ್ಲೇಆಫ್ ತಲುಪಲು ಸಾಧ್ಯವಾಗಲಿಲ್ಲ.

ಫಾಜೆಲ್ ಅತ್ರಾಚಲಿ

ಪಿಕೆಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಡಿಫೆಂಡರ್ ಫಾಜೆಲ್ ಅತ್ರಾಚಲಿ (169 ಪಂದ್ಯಗಳಲ್ಲಿ 486 ಟ್ಯಾಕಲ್ ಪಾಯಿಂಟ್ಸ್​) ಲೀಗ್‌ನ 5 ನೇ ಋತುವಿನಿಂದ ಪಿಕೆಎಲ್​ 10 ರವರೆಗೆ ಒಂದಲ್ಲ ಒಂದು ತಂಡಕ್ಕೆ ನಾಯಕತ್ವ ವಹಿಸಿದ್ದಾರೆ. ಆದಾಗ್ಯೂ, ಈ ಅವಧಿಯಲ್ಲಿ ಅವರ ನಾಯಕತ್ವದಲ್ಲಿ ಯಾವುದೇ ತಂಡ ಪಿಕೆಎಲ್ ಪ್ರಶಸ್ತಿ ಗೆದ್ದಿಲ್ಲ. ಫಾಜೆಲ್ ಅತ್ರಾಚಲಿ ಗುಜರಾತ್ ಜೈಂಟ್ಸ್, ಯು ಮುಂಬಾ ಮತ್ತು ಪುಣೇರಿ ಪಲ್ಟನ್ ತಂಡಗಳಿಗೆ ನಾಯಕತ್ವ ವಹಿಸಿದ್ದಾರೆ. ಆದರೆ ಈ ಅವಧಿಯಲ್ಲಿ ಫೈನಲ್​​ಗಳನ್ನು ಆಡಿದ್ದಾರೆ. ಆದರೆ, ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ. ಈ ಆವೃತ್ತಿಯಲ್ಲಿ ಇತಿಹಾಸವನ್ನು ಬದಲಾಯಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.