ಗೂಳಿಗಳ ಬಳಗದಲ್ಲಿ ಪ್ರೊ ಕಬಡ್ಡಿಯ ಯಶಸ್ವಿ ರೈಡರ್; ಬೆಂಗಳೂರು ಬುಲ್ಸ್‌ ಕಪ್ ಗೆಲ್ಲಲು ಪರ್ದೀಪ್ ನರ್ವಾಲ್ ಪಣ-kabaddi news pardeep narwal pkl career teams raid points pro kabaddi league season 11 bengaluru bulls jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಗೂಳಿಗಳ ಬಳಗದಲ್ಲಿ ಪ್ರೊ ಕಬಡ್ಡಿಯ ಯಶಸ್ವಿ ರೈಡರ್; ಬೆಂಗಳೂರು ಬುಲ್ಸ್‌ ಕಪ್ ಗೆಲ್ಲಲು ಪರ್ದೀಪ್ ನರ್ವಾಲ್ ಪಣ

ಗೂಳಿಗಳ ಬಳಗದಲ್ಲಿ ಪ್ರೊ ಕಬಡ್ಡಿಯ ಯಶಸ್ವಿ ರೈಡರ್; ಬೆಂಗಳೂರು ಬುಲ್ಸ್‌ ಕಪ್ ಗೆಲ್ಲಲು ಪರ್ದೀಪ್ ನರ್ವಾಲ್ ಪಣ

ಪ್ರೊ ಕಬಡ್ಡಿ ಲೀಗ್‌ ಇತಿಹಾಸದಲ್ಲಿ ಈವರೆಗೆ 3 ತಂಡಗಳ ಪರ ಆಡಿರುವ ಪರ್ದೀಪ್ ನರ್ವಾಲ್, ಪಿಕೆಎಲ್‌ 2ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಪರ ಪದಾರ್ಪಣೆ ಪಂದ್ಯವಾಡಿದ್ದರು. ಇದೀಗ 11ನೇ ಋತುವಿನಲ್ಲಿ ಮತ್ತೆ ಬುಲ್ಸ್‌ ಪರ ತೊಡೆ ತಟ್ಟಲು ಕಾಯುತ್ತಿದ್ದಾರೆ. ಅವರ ಪಿಕೆಎಲ್‌ ಜರ್ನಿ ಹೇಗಿತ್ತು ನೋಡಿ.

ಬೆಂಗಳೂರು ಬುಲ್ಸ್‌ ಕಪ್ ಗೆಲ್ಲಲು ಪರ್ದೀಪ್ ನರ್ವಾಲ್ ಪಣ; ಯಶಸ್ವಿ ರೈಡರ್ ದಾಖಲೆಗಳಿವು
ಬೆಂಗಳೂರು ಬುಲ್ಸ್‌ ಕಪ್ ಗೆಲ್ಲಲು ಪರ್ದೀಪ್ ನರ್ವಾಲ್ ಪಣ; ಯಶಸ್ವಿ ರೈಡರ್ ದಾಖಲೆಗಳಿವು

ಪ್ರೊ ಕಬಡ್ಡಿ ಲೀಗ್‌ 11ನೇ ಆವತ್ತಿಗೆ ದಿನಗಣನೆ ಶುರುವಾಗಿದೆ. ಕಳೆದ ಕೆಲವು ಆವೃತ್ತಿಗಳಲ್ಲಿ ಟ್ರೋಫಿ ಗೆಲ್ಲಲು ವಿಫಲವಾಗಿರುವ ಬೆಂಗಳೂರು ಬುಲ್ಸ್‌, ಈ ಬಾರಿ ಆತ್ಮವಿಶ್ವಾಸದೊಂದಿಗೆ ಲೀಗ್‌ಗೆ ಕಾಲಿಡುತ್ತಿದೆ. ಪಿಕೆಎಲ್‌ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ರೈಡರ್ ಎನಿಸಿಕೊಂಡಿರುವ ಬಲಿಷ್ಠ ಆಟಗಾರ ಪರ್ದೀಪ್ ನರ್ವಾಲ್ (Pardeep Narwal) ತಂಡದ ಪರ ಆಡುತ್ತಿರುವುದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಲೀಗ್ ಇತಿಹಾಸದಲ್ಲಿ 3 ತಂಡಗಳ ಪರ ಆಡಿರುವ ಡೇಂಜರಸ್‌ ರೈಡರ್‌, ಈ ಬಾರಿ ಬುಲ್ಸ್‌ ಪರ ತೊಡೆ ತಟ್ಟಲು ಸಜ್ಜಾಗಿದ್ದಾರೆ. ಯಾವ ತಂಡದ ಪರ ಪ್ರೊ ಕಬಡ್ಡಿ ಲೀಗ್‌ಗೆ ಪದಾರ್ಪಣೆ ಮಾಡಿದ್ದರೋ, ಅದೇ ತಂಡದ ಪರ ಪಿಕೆಎಲ್ 11ನೇ ಆವೃತ್ತಿಯಲ್ಲಿ ಪರ್ದೀಪ್‌ ಆಡುತ್ತಿರುವುದು ವಿಶೇಷ. ಹೌದು, ಪಿಕೆಎಲ್‌ ಎರಡನೇ ಆವೃತ್ತಿಯಲ್ಲಿ ಪರ್ದೀಪ್‌ ಗೂಳಿಗಳ ಬಳಗದ ಪರ ಆಡಿದ್ದರು. ಕೆಲವೇ ಸೀಸನ್‌ ಹೊರತುಪಡಿಸಿದರೆ, ಪರ್ದೀಪ್ ನರ್ವಾಲ್ ಲೀಗ್‌ ಉದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದಾರೆ.

ಪ್ರೊ ಕಬಡ್ಡಿ 3ನೇ ಮತ್ತು 5ನೇ ಸೀಸನ್‌ನ ಅತ್ಯುತ್ತಮ ರೈಡರ್ ಪ್ರಶಸ್ತಿಯನ್ನು ಬಾಚಿಕೊಂಡಿರುವ ನರ್ವಾಲ್‌, ಸತತ ಮೂರು ಬಾರಿ ಟ್ರೋಫಿ ಗೆದ್ದ ಪಾಟ್ನಾ ಪೈರೇಟ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಾಟ್ನಾ ತಂಡವು 3, 4 ಮತ್ತು 5ನೇ ಆವೃತ್ತಿಗಳಲ್ಲಿ ಹ್ಯಾಟ್ರಿಕ್‌ ಪ್ರಶಸ್ತಿ ಗೆದ್ದಿತ್ತು. ಇದರಲ್ಲಿ ಪರ್ದೀಪ್‌ ಪಾತ್ರ ಅಮೋಘವಾಗಿತ್ತು. ಪಿಕೆಎಲ್‌ ಇತಿಹಾಸದಲ್ಲೇ ಅತಿ ಹೆಚ್ಚು ರೈಡ್‌‌ ಪಾಯಿಂಟ್ (1690) ಗಳಿಸಿರುವ ದಾಖಲೆ ಹೊಂದಿರುವ ಆಟಗಾರನ ಸಾಧನೆ ನೋಡೋಣ.

ಬೆಂಗಳೂರು ಬುಲ್ಸ್

ಪರ್ದೀಪ್ ನರ್ವಾಲ್ ಈವರೆಗೆ ಪ್ರೊ ಕಬಡ್ಡಿ ಲೀಗ್‌ನಲ್ಲಿ 3 ತಂಡಗಳ ಪರ ಆಡಿದ್ದಾರೆ. ಪಿಕೆಎಲ್‌ 2ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಪರ ಕಾಲಿಟ್ಟಿದ್ದರು. ಬೆಂಗಳೂರು ಬುಲ್ಸ್‌ ಪರ ಆಡಿದ ಚೊಚ್ಚಲ ಅಭಿಯಾನದಲ್ಲಿ ಪರ್ದೀಪ್ ನರ್ವಾಲ್ 6 ಪಂದ್ಯಗಳಲ್ಲಿ ಒಟ್ಟು 9 ಅಂಕಗಳನ್ನು ಗಳಿಸಿದ್ದರು. ಇದೀಗ 11ನೇ ಋತುವಿನಲ್ಲಿ ಬೆಂಗಳೂರು ಬುಲ್ಸ್‌ ಪರ ಮತ್ತೆ ಅಬ್ಬರಿಸುವ ನಿರೀಕ್ಷೆ ಮೂಡಿಸಿದ್ದಾರೆ.

ಪಾಟ್ನಾ ಪೈರೇಟ್ಸ್

ಪಿಕೆಎಲ್‌ 3ರಿಂದ 7ನೇ ಆವೃತ್ತಿಯವರೆಗೆ ಸತತ ಐದು ವರ್ಷಗಳ ಕಾಲ ಅವರು ಪಾಟ್ನಾ ಪರ ತೊಡೆ ತಟ್ಟಿದ್ದರು. ಪ್ರೊ ಕಬಡ್ಡಿ ಮೂರನೇ ಋತುವಿನಲ್ಲಿ ಮೊದಲ ಬಾರಿಗೆ ಪೈರೇಟ್ಸ್ ತಂಡದ ಭಾಗವಾದ ಪರ್ದೀಪ್, 16 ಪಂದ್ಯಗಳಲ್ಲಿ ಒಟ್ಟು 121 ಅಂಕಗಳನ್ನು ಗಳಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ಆ ಬಳಿಕ 4ನೇ ಋತುವಿನಲ್ಲಿ ಎರಡನೇ ಬಾರಿಗೆ ಪಾಟ್ನಾ ಪರ ಆಡಿ, 16 ಪಂದ್ಯಗಳಲ್ಲಿ ಬರೋಬ್ಬರಿ 133 ಅಂಕಗಳನ್ನು ಗಳಿಸಿದರು.

ಐದನೇ ಋತುವಿನಲ್ಲಿ, ದಾಖಲೆಯ ಪ್ರದರ್ಶನವನ್ನು ನೀಡಿದ ಅವರು 26 ಪಂದ್ಯಗಳಲ್ಲಿ ಗರಿಷ್ಠ 369 ಅಂಕಗಳನ್ನು ಗಳಿಸಿದರು. ಇದು ದಾಖಲೆ ಅಂಕ ಗಳಿಕೆ. ಪಿಕೆಎಲ್‌ 6ರಲ್ಲಿ 21 ಪಂದ್ಯಗಳಲ್ಲಿ ಆಡಿ ಒಟ್ಟು 233 ಅಂಕಗಳನ್ನು ಗಳಿಸಿದರು. ಪಿಕೆಎಲ್‌ 7ನೇ ಆವೃತ್ತಿಯಲ್ಲಿ ಕೊನೆಯ ಬಾರಿ ಪಾಟ್ನಾ ಪೈರೇಟ್ಸ್ ಪರ ಆಡಿದ್ದ ನರ್ವಾಲ್‌, 22 ಪಂದ್ಯಗಳಲ್ಲಿ ಒಟ್ಟು 304 ಅಂಕಗಳನ್ನು ಗಳಿಸಿದರು.

ಯುಪಿ ಯೋಧಾಸ್

ಪಿಕೆಎಲ್ 8, 9 ಮತ್ತು 10ನೇ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ ಬಳಗ ಸೇರಿಕೊಂಡ ಪರ್ದೀಪ್‌ ಮತ್ತೆ ಅಬ್ಬರಿಸತೊಡಗಿದರು. ಲೀಗ್‌ನ 8ನೇ ಸೀಸನ್‌ನಲ್ಲಿ ಯುಪಿ ಯೋಧಾಸ್ ತಂಡದ ಭಾಗವಾಗಿದ್ದ ಪರ್ದೀಪ್ ನರ್ವಾಲ್, 24 ಪಂದ್ಯಗಳಲ್ಲಿ ಒಟ್ಟು 188 ಅಂಕಗಳನ್ನು ಗಳಿಸಿದರು. 9ನೇ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅವರು 22 ಪಂದ್ಯಗಳಲ್ಲಿ 220 ಅಂಕಗಳನ್ನು ಗಳಿಸಿದರು. ಕಳೆದ, ಅಂದರೆ 10ನೇ ಋತುವಿನಲ್ಲಿ ಯೋಧಾಸ್ ಪರ ಕೊನೆಯ ಬಾರಿಗೆ ಆಡಿದ್ದ ಪರ್ದೀಪ್ 17 ಪಂದ್ಯಗಳಲ್ಲಿ ಒಟ್ಟು 122 ಅಂಕಗಳನ್ನು ದಾಖಲಿಸಿದ್ದರು. ಹೊಸ ಆವೃತ್ತಿಗೂ ಮುನ್ನ ಯುಪಿ ಅವರನ್ನು ರಿಲೀಸ್‌ ಮಾಡಿತ್ತು. ಇದೀಗ ಬುಲ್ಸ್‌ ಬಳಗ ಸೇರಿರುವ ಅವರು, ತಂಡಕ್ಕೆ ಎರಡನೇ ಟ್ರೋಫಿ ಗೆದ್ದುಕೊಡುವ ಉತ್ಸಾಹದಲ್ಲಿದ್ದಾರೆ.

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.