Wrestlers Protest: ನಾನು ಮಲಗಿದ್ದಾಗ ಟಿಶರ್ಟ್ ಮೇಲೆತ್ತಿ ಎದೆಯ ಮೇಲೆ ಕೈ ಹಾಕಿದ್ದರು; ಬ್ರಿಜ್ ಭೂಷಣ್ ವಿರುದ್ಧ ದಾಖಲಾದ ಆರೋಪಗಳು ಬಹಿರಂಗ
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಇತ್ತೀಚೆಗೆ ಎಫ್‌ಐಆರ್ ದಾಖಲಿಸಿದ್ದರು. ಈ ಎಫ್ಐಆರ್ನಲ್ಲಿ ದಾಖಲಾದ ಆರೋಪಗಳು ಈಗ ಬಯಲಾಗಿವೆ.
’ನಾನು ಮ್ಯಾಟ್ ಮೇಲೆ ಮಲಗಿದ್ದೆ. ಬ್ರಿಜ್ಭೂಷಣ್ ಸಿಂಗ್ (Brij Bhushan Sharan Singh) ನನ್ನ ಬಳಿ ಬಂದು ಅನುಮತಿ ಇಲ್ಲದೆ ಟೀ ಶರ್ಟ್ ಎಳೆದಿದ್ದರು. ನನ್ನ ಉಸಿರಾಟ ಪರಿಶೀಲನೆಯ ನೆಪದಲ್ಲಿ ನನ್ನ ಎದೆಯ ಮೇಲೆ ಕೈ ಹಾಕಿದರು. ನಂತರ ಹೊಟ್ಟೆಗೆ ಕೈ ಜಾರಿಸಿದ್ದರು. ಮೆಲ್ಲನೇ ತನ್ನ ಕೈಯನ್ನು ನನ್ನ ಹಣೆಯ ಮೇಲಿಟ್ಟರು‘.. ಹೀಗಂತ ಮಹಿಳಾ ಕುಸ್ತಿಪಟುವೊಬ್ಬರು ಭಾರತೀಯ ಕುಸ್ತಿ ಫೆಡರೇಷನ್ (WFI) ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಇತ್ತೀಚೆಗೆ ಎಫ್‌ಐಆರ್ ದಾಖಲಿಸಿದ್ದರು. ಈ ಎಫ್ಐಆರ್ನಲ್ಲಿ ದಾಖಲಾದ ಆರೋಪಗಳು ಈಗ ಬಯಲಾಗಿವೆ. ಅಸಮರ್ಪಕ ಸ್ಪರ್ಶ, ಮೈ ಸವರುವುದು, ಮುಜುಗರ ಪ್ರಶ್ನೆಗಳನ್ನು ಕೇಳುವುದು, ಲೈಂಗಿಕ ಸುಖಕ್ಕೆ ಬೇಡಿಕೆ ಇಡುವುದು ಸೇರಿದಂತೆ ಪ್ರಮುಖ ಆರೋಪಗಳನ್ನು ದೂರಿನಲ್ಲಿ ದಾಖಲಿಸಲಾಗಿದೆ. ಭಾರತದ ಅಗ್ರಮಾನ್ಯ ಕುಸ್ತಿಪಟುಗಳು ಕಳೆದ 40 ದಿನಗಳಿಂದಲೂ ಬ್ರಿಜ್ ಭೂಷಣ್ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ (Wrestlers Protest) ನಡೆಸುತ್ತಿದ್ದಾರೆ.
ದೂರಿನಲ್ಲಿರುವ ಆರೋಪಗಳೇನು?
- ಕುಸ್ತಿಪಟು 1
ಬ್ರಿಜ್ ಭೂಷಣ್ ತಮ್ಮೊಂದಿಗೆ ನಡೆಸಿಕೊಂಡ ಬಗ್ಗೆ ಮಹಿಳಾ ಕುಸ್ತಿಪಟುಗಳು ದುಃಖವನ್ನು ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರೆ. ನಾನು ವಿದೇಶದಲ್ಲೊಮ್ಮೆ ಸ್ಪರ್ಧೆಯ ಸಂದರ್ಭದಲ್ಲಿ ಗಾಯಗೊಂಡಿದ್ದೆ. ಆಗ ಲೈಂಗಿಕವಾಗಿ ಸಹಕರಿಸಿದರೆ ನಿಮ್ಮ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸಂಸ್ಥೆಯೇ ನೋಡಿಕೊಳ್ಳಲಿದೆ ಬ್ರಿಜ್ ಭೂಷಣ್ ಆಮೀಷ ಒಡ್ಡಿದ್ದರು ಎಂದು ಕುಸ್ತಿಪಟು ಆರೋಪಿಸಿದ್ದಾರೆ.
- ಕುಸ್ತಿಪಟು 2
ನಾನು ಒಂದು ದಿನ ಹೋಟೆಲ್ನ ರೆಸ್ಟೋರೆಂಟ್ನಲ್ಲಿ ಊಟ ಮಾಡುತ್ತಿದ್ದೆ. ಆಗ ಬ್ರಿಜ್ ಭೂಷಣ್ ಅವರು ನನ್ನನ್ನು ಪ್ರತ್ಯೇಕ ಡೈನಿಂಗ್ ಟೇಬಲ್ಗೆ ಕರೆದರು. ಆಗ ನನ್ನ ಒಪ್ಪಿಗೆ ಇಲ್ಲದೆ, ಎದೆಯ ಮೇಲೆ ಕೈ ಹಾಕಿದರು. ನಂತರ ಆ ಕೈಗಳು ಹೊಟ್ಟೆಯ ಭಾಗಕ್ಕೆ ಜಾರಿಸಿದರು. ಮತ್ತೆ ಕೈಗಳನ್ನು ಎದೆಯ ಭಾಗದತ್ತ ಕೊಂಡೊಯ್ದರು. ಹೀಗೆ ನಾಲ್ಕೈ ಬಾರಿ ಮಾಡಿದರು. ನಾನು ಒಮ್ಮೆ ಬ್ರಿಜ್ ಭೂಷಣ್ ಸಿಂಗ್ ಕಚೇರಿಗೆ ಹೋಗಿದ್ದೆ. ಆಗ ಏಕಾಏಕಿ ಒಪ್ಪಿಗೆ ಇಲ್ಲದೆ ನನ್ನ ಅಂಗೈ, ಮೊಣಕಾಲು, ತೊಡೆಗಳು ಹಾಗೂ ಭುಜಗಳ ಮೇಲೆ ಅನುಚಿತವಾಗಿ ಸ್ಪರ್ಶಿಸಿದರು. ನಾವು ಕುಳಿತಿದ್ದಾಗ ಅವರ ಪಾದಗಳಿಂದ ನಮ್ಮ ಪಾದಗಳನ್ನು ಒತ್ತುತ್ತಿದ್ದರು ಎಂದು ಮತ್ತೊಬ್ಬ ಕುಸ್ತಿಪಟು ಎಫ್ಐಆರ್ನಲ್ಲಿ ದಾಖಲಿಸಿದ್ದಾರೆ.
- ಕುಸ್ತಿಪಟು 3
ಮ್ಯಾಟ್ ಮೇಲೆ ನಾನು ಮಲಗಿದ್ದೆ. ನನ್ನ ಬಳಿ ಬಂದು ಕೂತಿದ್ದರು. ಆ ಸಂದರ್ಭದಲ್ಲಿ ನನ್ನ ಕೋಚ್ ಇರಲಿಲ್ಲ. ನನ್ನ ಅನುಮತಿ ಇಲ್ಲದೆ ನನ್ನ ಟಿ ಶರ್ಟ್ ಎತ್ತಿದರು. ಉಸಿರಾಟ ಪರೀಕ್ಷೆಯ ನೆಪದಲ್ಲಿ ಎದೆಯ ಮೇಲೆ ಕೈ ಇಟ್ಟರು. ನಂತರ ಹೊಟ್ಟೆಯ ಮೇಲೆ ಕೈ ಜಾರಿಸಿದ್ದರು. ನನ್ನನ್ನು ಫೆಡರೇಷನ್ ಕಚೇರಿಗೆ ಕರೆದಿದ್ದರು. ಆಗ ಸಹೋದರನ ಜೊತೆ ಹೋಗಿದ್ದೆ. ತಮ್ಮನನ್ನು ಹೊರಗಿರುವಂತೆ ಹೇಳಿದರು. ನಾನು ಒಳಗೆ ಹೋಗುತ್ತಿದ್ದಂತೆ ಬಾಗಿಲು ಹಾಕಿದರು. ದೈಹಿಕ ಸಂಪರ್ಕಕ್ಕೆ ಯತ್ನಿಸಿದರು ಎಂದು ಮತ್ತೊಬ್ಬ ಕುಸ್ತಿಪಟು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
- ಕುಸ್ತಿಪಟು 4
ನಾನು ಊಟ ಮಾಡಲು ಡೈನಿಂಗ್ ಟೇಬಲ್ ಬಳಿ ಕುಳಿತಿದ್ದೆ. ಆಗ ಬ್ರಿಜ್ ಭೂಷಣ್ ನನ್ನ ಬಳಿ ಬಂದರು. ಆರೋಗ್ಯ ಮತ್ತು ಪ್ರದರ್ಶನ ನೀಡಲು ಈ ಆಹಾರ ಉತ್ತಮ. ಈ ಆಹಾರ ತಿನ್ನುವಂತೆ ಸೂಚಿಸಿದ್ದರು. ಇದೇ ವೇಳೆ ನನ್ನ ಹೊಟ್ಟೆಯ ಮೇಲೆ ಕೈ ಹಾಕಿದರು. ಆದರೆ ಆ ಖಾದ್ಯವನ್ನು ನಾನೆಂದೂ ಕೇಳಿಯೇ ಇರಲಿಲ್ಲ. ಆದರೆ ನಮ್ಮ ಕೋಚ್ ಅದಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ ಎಂದು ಮತ್ತೊಬ್ಬರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
- ಕುಸ್ತಿಪಟು 5
ತಂಡದೊಂದಿಗೆ ಫೋಟೋ ತೆಗೆಸಿಕೊಳ್ಳಲು ನಾನು ಕೊನೆಯ ಸಾಲಿನಲ್ಲಿ ನಿಂತಿದ್ದೆ. ಆಗ ಬ್ರಿಜ್ ಭೂಷಣ್ ನನ್ನ ಬಳಿಗೆ ಬಂದು ನಿಂತರು. ಯಾರೋ ಭುಜದ ಮೇಲೆ ಕೈ ಹಾಕಿದ ಅನುಭವಾಯ್ತು. ಬಳಿಕ ನನ್ನ ಹಿಂಬದಿಯನ್ನು ಅಸಭ್ಯವಾಗಿ ಕೈಗಳಿಂದ ಮುಟ್ಟಿದ್ದರು. ನಾನು ಓಡಿ ಹೋಗಲು ಯತ್ನಿಸಿದಾಗ ನನ್ನ ಭುಜದ ಮೇಲೆ ಕೈ ಹಾಕಿದರು ಎಂದು ಮತ್ತೊಬ್ಬ ಕುಸ್ತಿಪಟು ತನಗಾದ ಅನ್ಯಾಯವನ್ನು ತೋಡಿಕೊಂಡಿದ್ದಾರೆ.
- ಕುಸ್ತಿಪಟು 6
ನಾನು ಕುಸ್ತಿ ಆಡಲು ಕೆಲವು ಸಲಕರಣೆಗಳನ್ನು ಖರೀದಿಸಬೇಕಾಗಿತ್ತು. ಅವರಿಗೆ ಸಹಾಯ ಮಾಡಲು ಕೇಳಿದ್ದೆ. ಲೈಂಗಿಕ ಬಯಕೆ ಪೂರೈಸು ಎಂದು ಒತ್ತಾಯಿಸಿದರು. ನನ್ನನ್ನು ಬಲವಂತವಾಗಿ ತಬ್ಬಿಕೊಂಡಿದ್ದರು. ಹಾಸಿಗೆಗೆ ಬರುವಂತೆ ಕೇಳಿದ್ದ. ಅನುಚಿತವಾಗಿ ವರ್ತಿಸುತ್ತಿದ್ದರು. ದೌರ್ಜನ್ಯದ ರೀತಿಯಲ್ಲಿ ಬೆದರಿಕೆ ಹಾಕುತ್ತಿದ್ದರು. ಲೈಂಗಿಕ ಕಿರುಕುಳ ನೀಡುತ್ತಿದ್ದರು. ಭಯದಿಂದ ಅವರ ಕೈಗೆ ಎಲ್ಲರೂ ಗುಂಪು ಗುಂಪಾಗಿ ಓಡುತ್ತಿದ್ದೆವು. ಒಂಟಿಯಾಗಿ ಅವರ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದೆವು ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ.
ದಾಖಲಾದ ಸೆಕ್ಷನ್ಗಳೇನು?
ಎರಡೂ ಎಫ್‌ಐಆರ್‌ಗಳಲ್ಲಿ ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವುದು, ಹಲ್ಲೆ ಅಥವಾ ಬಲವಂತ ಪ್ರಯೋಗ), 354 ಡಿ (ಅನುಚಿತ ವರ್ತನೆ), ಮತ್ತು 34 (ಸಾಮಾನ್ಯ ಉದ್ದೇಶ) 354 ಎ (ಲೈಂಗಿಕ ಕಿರುಕುಳ) ಅಡಿ ಪ್ರಕರಣಗಳು ದಾಖಲಾಗಿವೆ. ಇವುಗಳ ಪ್ರಕಾರ ಒಂದರಿಂದ ಮೂರು ವರ್ಷಗಳ ಪ್ರಕಾರ, ಶಿಕ್ಷೆಗೆ ಒಳಪಡಿಸುತ್ತವೆ. ಸೆಕ್ಷನ್ 10ರ ಅಡಿಯಲ್ಲೂ (ಫೋಕ್ಸೋ) ಪ್ರಕರಣ ದಾಖಲಾಗಿದ್ದು, 5 ರಿಂದ 7 ವರ್ಷಗಳ ಶಿಕ್ಷೆಯಾಗಲಿದೆ.
ನೇಣಿಗೆ ಸಿದ್ದ ಎಂದಿದ್ದ ಬ್ರಿಜ್ ಭೂಷಣ್
ಕುಸ್ತಿಪಟುಗಳು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಮಾಡಿರುವ ಆರೋಪಗಳನ್ನು ಶುದ್ಧ ಸುಳ್ಳೆಂದು ಅಲ್ಲಗಳೆದಿರುವ ಬ್ರಿಜ್ ಭೂಷಣ್ ಸಿಂಗ್, ಆರೋಪ ಸಾಬೀತಾದರೆ ನಾನು ನೇಣಿಗೆ ಶರಣಾಗುತ್ತೇನೆ ಎಂದು ಹೇಳಿಕೆ ನೀಡಿದ್ದರು. ನಿಮ್ಮ ಬಳಿ ಆಧಾರಗಳು ಇದ್ದರೆ, ಅವುಗಳನ್ನು ಕೋರ್ಟ್ಗೆ ಹಾಜರುಪಡಿಸಿ, ಆರೋಪ ಸಾಬೀತಾದರೆ ಯಾವುದೇ ಶಿಕ್ಷೆಗೂ ನಾನು ಸಿದ್ದ ಎಂದಿದ್ದರು.