Kannada News  /  Sports  /  Kapil Dev Says He Has Serious Doubts Over The Fitness Of Rohit Sharma
ಕಪಿಲ್ ದೇವ್ ಮತ್ತು ರೋಹಿತ್ ಶರ್ಮಾ
ಕಪಿಲ್ ದೇವ್ ಮತ್ತು ರೋಹಿತ್ ಶರ್ಮಾ

Kapil Dev on Rohit: 'ಭಾರತವನ್ನು ಮುನ್ನಡೆಸಲು ರೋಹಿತ್ ಫಿಟ್ ಇದ್ದಾರೆಯೇ? ನನಗಂತೂ ಅನುಮಾನ' ಅಂದ್ರು ಕಪಿಲ್ ದೇವ್!

07 January 2023, 16:47 ISTHT Kannada Desk
07 January 2023, 16:47 IST

ರೋಹಿತ್ ಶರ್ಮಾ ಅವರ ಕ್ರಿಕೆಟ್ ಕೌಶಲ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದಾರೆ.  ಆದರೆ ಅವರ ಫಿಟ್‌ನೆಸ್ ಪ್ರಮುಖ ಕಾಳಜಿಯಾಗಿದೆ. ಭಾರತ ತಂಡದ ನಾಯಕನ ಫಿಟ್‌ನೆಸ್ ಬಗ್ಗೆ ನನಗೆ ಅನುಮಾನವಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಕಳೆದ ವರ್ಷದ ಆರಂಭದಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕರಾದ ಬಳಿಕ, ಭಾರತ ಒಟ್ಟು 68 ಪಂದ್ಯಗಳನ್ನು ಆಡಿದೆ. ಇದರಲ್ಲಿ 5 ಟೆಸ್ಟ್, 21 ಏಕದಿನ ಮತ್ತು 42 ಟಿ20 ಪಂದ್ಯಗಳು. ಅದರಲ್ಲಿ ಶರ್ಮಾ ಕೇವಲ 39 ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಅಂದರೆ 2 ಟೆಸ್ಟ್, ಕೇವಲ 8 ಏಕದಿನ ಮತ್ತು 29 ಟಿ20 ಪಂದ್ಯಗಳು. ಇದರರ್ಥ, ಈ ಪಂದ್ಯಗಳಲ್ಲಿ ನಾಯಕತ್ವದ ಜವಾಬ್ದಾರಿಯನ್ನು ಬೇರೆ ಆಟಗಾರರು ವಹಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇದಕ್ಕೆ ಬಹುದೊಡ್ಡ ಕಾರಣವೆಂದರೆ, ಸಹಜವಾಗಿಯೇ ಬಿಸಿಸಿಐನ ಕೆಲಸದ ಹೊರೆ ನಿರ್ವಹಣೆ. ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಕಳೆದ ವರ್ಷ ರೋಹಿತ್ ಸಾಕಷ್ಟು ಪಂದ್ಯಗಳನ್ನು ಕಳೆದುಕೊಂಡರು. ಕಳೆದ 12 ತಿಂಗಳುಗಳಲ್ಲಿ ಭಾರತೀಯ ನಾಯಕನ ಫಿಟ್‌ನೆಸ್ ಪ್ರಮುಖ ಚರ್ಚೆಯಾಗಿದೆ. ವಿವಿಧ ಕಾರಣಗಳಿಗಾಗಿ ಭಾರತ ತಂಡದ ನಾಯಕ ಈ ಹಿಂದೆ ಎಂದಿಗೂ ಇಷ್ಟೊಂದು ಸಂಖ್ಯೆಯ ಪಂದ್ಯಗಳನ್ನು ಕಳೆದುಕೊಂಡಿರಲಿಲ್ಲ. ತಮ್ಮ ಫಿಟ್‌ನೆಸ್ ಸಮಸ್ಯೆಯಿಂದಾಗಿ ರೋಹಿತ್‌ ಬ್ಯಾಟಿಂಗ್‌ನಲ್ಲೂ ವೈಫಲ್ಯ ಅನುಭವಿಸುತ್ತಿದ್ದಾರೆ.

ಈ ಬಗ್ಗೆ ಈಗ ಭಾರತದ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಮಾತನಾಡಿದ್ದಾರೆ. ರೋಹಿತ್ ಶರ್ಮಾ ಅವರ ಕ್ರಿಕೆಟ್ ಕೌಶಲ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದಾರೆ. ಕಳೆದ ದಶಕದಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಭಾರತ ತಂಡದ ಬ್ಯಾಟಿಂಗ್‌ನ ಆಧಾರ ಸ್ತಂಭಗಳಲ್ಲಿ ಶರ್ಮಾ ಕೂಡಾ ಒಬ್ಬರು. ಆದರೆ ಅವರ ಫಿಟ್‌ನೆಸ್ ಪ್ರಮುಖ ಕಾಳಜಿಯಾಗಿದೆ. ಭಾರತ ತಂಡದ ನಾಯಕನ ಫಿಟ್‌ನೆಸ್ ಬಗ್ಗೆ ನನಗೆ ಅನುಮಾನವಿದೆ ಎಂದು ಕಪಿಲ್ ಹೇಳಿದ್ದಾರೆ.

“ರೋಹಿತ್ ಶರ್ಮಾ ಅವರಲ್ಲಿ ಯಾವುದೇ ಕೊರತೆಯಿಲ್ಲ. ಅವರಲ್ಲಿ ಎಲ್ಲಾ ಸಾಮರ್ಥ್ಯವೂ ಇದೆ. ಆದರೆ ವೈಯಕ್ತಿಕವಾಗಿ ನನ್ನ ಪ್ರಕಾರ, ಅವರ ಫಿಟ್ನೆಸ್ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ. ಅವರು ನಿಜಕ್ಕೂ ಫಿಟ್ ಆಗಿದ್ದಾರೆಯೇ? ಏಕೆಂದರೆ, ಒಂದು ತಂಡದ ನಾಯಕ ಎಂದ ಮೇಲೆ ಇತರ ಆಟಗಾರರು ಫಿಟ್‌ ಆಗುವಂತೆ ಪ್ರೇರೇಪಿಸುವ ವ್ಯಕ್ತಿಯಾಗಬೇಕು. ಸಹ ಆಟಗಾರರು ತಮ್ಮ ನಾಯಕನ ಬಗ್ಗೆ ಹೆಮ್ಮೆ ಪಡಬೇಕು” ಎಂದು ಕಪಿಲ್ ಎಬಿಪಿ ನ್ಯೂಸ್‌ನಲ್ಲಿ ಹೇಳಿದ್ದಾರೆ.

ರೋಹಿತ್ ತಮ್ಮ ಫಿಟ್ನೆಸ್ ಸುಧಾರಿಸಿದರೆ, ಅವರು ಉಳಿದ ಕ್ರಿಕೆಟಿಗರಿಗೆ ಪ್ರೇರಕಶಕ್ತಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು 1983ರ ವಿಶ್ವಕಪ್ ವಿಜೇತ ಭಾರತೀಯ ನಾಯಕ ಹೇಳಿದರು. “ರೋಹಿತ್ ಅವರ ಫಿಟ್‌ನೆಸ್ ಬಗ್ಗೆ ಭಾರಿ ಅನುಮಾನವಿದೆ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಅವರು ನಾಯಕರಾದ ಬಳಿಕ ಹೆಚ್ಚು ರನ್ ಗಳಿಸಿಲ್ಲ ಎಂಬ ಬಗ್ಗೆ ಸಾಕಷ್ಟು ಟೀಕೆಗಳಿವೆ. ನಾನು ಅದನ್ನು ಒಪ್ಪುತ್ತೇನೆ. ಆದರೆ ಅವರ ಕ್ರಿಕೆಟ್ ಕೌಶಲ್ಯದಲ್ಲಿ ಯಾವುದೇ ಸಮಸ್ಯೆ ಇದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಅವರು ಅತ್ಯಂತ ಯಶಸ್ವಿ ಕ್ರಿಕೆಟಿಗ. ಅವರು ಫಿಟ್ ಆಗಿದ್ದರೆ, ಇಡೀ ತಂಡವು ಅವರ ಸುತ್ತಲೂ ಒಟ್ಟುಗೂಡುತ್ತದೆ” ಎಂದು ಹಿರಿಯ ಆಟಗಾರ ಹೇಳಿದರು.

ವಿಶ್ವಕಪ್ ಗೆಲುವಿಗೆ ಭಾರತ ತಂಡವನ್ನು ಮುನ್ನಡೆಸಲು ರೋಹಿತ್ ಮತ್ತು ಕೊಹ್ಲಿಯನ್ನು ಅವಲಂಬಿಸಿದೆ. ಮುಂದೆ ಹೆಜ್ಜೆ ಹಾಕುವಂತೆ ಕಪಿಲ್ ಯುವ ಆಟಗಾರರಿಗೆ ಸಲಹೆ ನೀಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ರೋಹಿತ್ ಕೊನೆಯ ಬಾರಿಗೆ ಭಾರತದ ಪರ ಕಾಣಿಸಿಕೊಂಡಿದ್ದರು. ಮೂರನೇ ಏಕದಿನದ ನಂತರದ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಮತ್ತು ಶ್ರೀಲಂಕಾ ವಿರುದ್ಧ ಸ್ವದೇಶದಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯಿಂದಲೂ ಅವರು ಹೊರಗುಳಿದಿದ್ದಾರೆ. ಸದ್ಯ ಜನವರಿ 10ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಬಲಗೈ ಬ್ಯಾಟರ್ ಮೈದಾನಕ್ಕೆ ಮರಳಲು ಸಿದ್ಧರಾಗಿದ್ದಾರೆ.

ಈ ವರ್ಷದ ಅಕ್ಟೋಬರ್ ಮತ್ತು ನವೆಂಬರ್‌ ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಭಾರತದ ಪ್ರಮುಖ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಿ ಅವರ ಫಾರ್ಮ್ ಮತ್ತು ಫಿಟ್‌ನೆಸ್ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತದೆ.