ಕನ್ನಡ ಸುದ್ದಿ  /  Sports  /  Kapil Dev Says Rohit And Kohli Will Never Win World Cup Kapil

Kapil Dev: 'ರೋಹಿತ್-ಕೊಹ್ಲಿ ವಿಶ್ವಕಪ್ ಗೆದ್ದು ಕೊಡುತ್ತಾರೆ ಎಂದು ನೀವು ಭಾವಿಸಿದರೆ ಅದು ಎಂದಿಗೂ ಸಾಧ್ಯವಿಲ್ಲ'

ಸದ್ಯ ಯುವ ಭಾರತ ತಂಡದ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿವೆ. ಈ ಬಗ್ಗೆ 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಮಾತನಾಡಿದ್ದಾರೆ. ಭಾರತವು ವಿಶ್ವಕಪ್ ಗೆಲ್ಲುವ ಭರವಸೆಯನ್ನು ಕೊಹ್ಲಿ ಮತ್ತು ರೋಹಿತ್ ಮೇಲೆ ಮಾತ್ರವೇ ಇರಿಸದಿದ್ದರೆ ಉತ್ತಮ ಎಂದು ಅವರು ಹೇಳಿದ್ದಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (ANI)

ಭಾರತ ಕ್ರಿಕೆಟ್‌ನಲ್ಲಿ ಪರಿವರ್ತನೆಯ ಅವಧಿ ಈಗಾಗಲೇ ಆರಂಭವಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿಯಮಿತವಾಗಿ ಟಿ20 ಕ್ರಿಕೆಟ್ ಆಡುವ ಸಾಧ್ಯತೆ ಇಲ್ಲ ಎಂಬುದು ಈಗಾಗಲೇ ಬಹುತೇಕ ಖಚಿತವಾಗಿದೆ. ಈ ವರ್ಷ ತವರಿನಲ್ಲಿ ನಡೆಯಲಿರುವ ವಿಶ್ವಕಪ್ ಬಳಿಕ, ಏಕದಿನ ಕ್ರಿಕೆಟ್‌ನಲ್ಲೂ ಇವರಿಬ್ಬರ ಭವಿಷ್ಯ ಟಿ20ಯಂತೆಯೇ ಆಗಲಿದೆ. ಈ ಬಗ್ಗೆ ಈಗಾಗಲೇ ಸುಳಿವು ದೊರಕಿದೆ.

ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಸುಮಾರು 10 ವರ್ಷಗಳಿಂದ ಭಾರತೀಯ ಕ್ರಿಕೆಟ್‌ನ ಆಧಾರ ಸ್ತಂಭಗಳಾಗಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಇವರಿಬ್ಬರು ಈಗಲೂ ವಿಶ್ವ ಕ್ರಿಕೆಟ್‌ನ ಅಗ್ರ 10 ಬ್ಯಾಟರ್‌ಗಳ ಪಟ್ಟಿಯಲ್ಲಿದ್ದಾರೆ. ಅಷ್ಟೇ ಅಲ್ಲ, ಇವರ ಆಟ ಹಾಗೂ ಅನುಭವದ ಬಗ್ಗೆ ಎದುರಾಳಿ ತಂಡಗಳಿಗೆ ಸದಾ ಭೀತಿ ಇದ್ದೇ ಇರುತ್ತದೆ. ಆದರೆ, ಕಳೆದ ಎರಡು ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಈ ಎರಡು ದಿಗ್ಗಜರ ಬ್ಯಾಟ್‌ಗಳಿಂದ ಮೊದಲಿನಂತೆ ರನ್‌ಗಳು ಹರಿದು ಬರುತ್ತಿಲ್ಲ. ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳಿದ್ದರೂ, ಶರ್ಮಾ ಬ್ಯಾಟ್‌ ಸದ್ದು ಮಾಡುತ್ತಿಲ್ಲ. ಭಾರತ ತಂಡದಲ್ಲಿ ಅವಕಾಶಗಳಿಗಾಗಿ ಕಾಯುತ್ತಿರುವ ಪ್ರತಿಭೆಗಳ ದಂಡೇ ಇದೆ. ಆದರೆ, ಹಿರಿಯರಿಗೆ ಮಣೆ ಹಾಕುತ್ತಿರುವ ಹಿನ್ನೆಲೆಯಲ್ಲಿ, ಯುವ ಆಟಗಾರರಿಗೆ ಅವಕಾಶ ಸಿಗುತ್ತಿಲ್ಲ ಎಂಬ ಬಗ್ಗೆಯೇ ಮಾತುಕತೆಗಳಾಗುತ್ತಿವೆ.

ಸದ್ಯ ಯುವ ಭಾರತ ತಂಡದ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿವೆ. ಈ ಬಗ್ಗೆ 1983ರ ವಿಶ್ವಕಪ್ ವಿಜೇತ ಭಾರತದ ನಾಯಕ ಕಪಿಲ್ ದೇವ್ ಮಾತನಾಡಿದ್ದಾರೆ. ಭಾರತವು ವಿಶ್ವಕಪ್ ಗೆಲ್ಲುವ ಭರವಸೆಯನ್ನು ಕೊಹ್ಲಿ ಮತ್ತು ರೋಹಿತ್ ಮೇಲೆ ಮಾತ್ರವೇ ಇರಿಸದಿದ್ದರೆ ಉತ್ತಮ ಎಂದು ಅವರು ಹೇಳಿದ್ದಾರೆ.

“ಭಾರತವು ವಿಶ್ವಕಪ್ ಗೆಲ್ಲಲು ಬಯಸಿದರೆ, ಕೋಚ್, ಆಯ್ಕೆದಾರರು ಮತ್ತು ತಂಡದ ಮ್ಯಾನೇಜ್‌ಮೆಂಟ್‌ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ತಂಡದ ಬಗ್ಗೆ ಯೋಚಿಸಬೇಕಾಗುತ್ತದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೇವಲ 2-3 ಆಟಗಾರರಿಂದ ಮಾತ್ರ ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂದು ನೀವು ಭಾವಿಸಿದರೆ ಅದು ಎಂದಿಗೂ ಸಾಧ್ಯವಿಲ್ಲ. ನಿಮಗೆ ತಂಡದ ಮೇಲೆ ನಂಬಿಕೆ ಇರಬೇಕು. ಖಂಡಿತವಾಗಿಯೂ ಅಂತಹ ತಂಡ ನಮ್ಮಲ್ಲಿದೆ. ನಮ್ಮಲ್ಲಿ ಕೆಲವು ಮ್ಯಾಚ್ ವಿನ್ನರ್‌ಗಳು ಕೂಡಾ ಇದ್ದಾರೆ. ವಿಶ್ವಕಪ್ ಗೆಲ್ಲುವ ಆಟಗಾರರು ನಮ್ಮಲ್ಲಿದ್ದಾರೆ” ಎಂದು ಕಪಿಲ್ ಎಬಿಪಿ ನ್ಯೂಸ್‌ಗೆ ತಿಳಿಸಿದರು.

ಭಾರತದ ಪ್ರಸ್ತುತ ಎಲ್ಲಾ ಫಾರ್ಮ್ಯಾಟ್‌ಗಳ ನಾಯಕ ರೋಹಿತ್ ಶರ್ಮಾ, ಕಳೆದ ಎರಡು ವರ್ಷಗಳಿಂದ ಏಕದಿನ ಕ್ರಿಕೆಟ್‌ನಲ್ಲಿ ಶತಕ ಗಳಿಸಿಲ್ಲ. ಮತ್ತೊಂದೆಡೆ, ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧದ ಮೂರನೇ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ, ವಿರಾಟ್‌ ಕೊಹ್ಲಿ 36 ತಿಂಗಳ ಏಕದಿನ ಶತಕದ ಬರ ನೀಗಿಸಿದ್ದಾರೆ.

ರೋಹಿತ್ ಮತ್ತು ಕೊಹ್ಲಿ ತಮ್ಮ ಕೈಲಾದಷ್ಟು ಕೆಲಸ ಮಾಡಿದ್ದಾರೆ. ಈಗ ಯುವ ಆಟಗಾರರು ತಂಡವನ್ನು ಮುನ್ನಡೆಸುವ ಸಮಯ ಬಂದಿದೆ ಎಂದು ಕಪಿಲ್ ಹೇಳಿದರು.

“ತಂಡದ ಆಧಾರ ಸ್ತಂಭವಾಗಿ ಪ್ರತಿಬಾರಿಯೂ ಒಂದೆರಡು ಆಟಗಾರರು ಇರುತ್ತಾರೆ. ತಂಡವು ಅವರ ಮೇಲೆಯೇ ಅವಲಂಬಿತವಾಗಿರುತ್ತದೆ. ಆದರೆ ಈ ಸಂಪ್ರದಾಯವನ್ನು ಮುರಿದು ಕನಿಷ್ಠ 5-6 ಆಟಗಾರರನ್ನು ನಾವು ನಿರ್ಮಿಸಬೇಕಾಗಿದೆ. ಹೀಗಾಗಿಯೇ, ವಿರಾಟ್ ಮತ್ತು ರೋಹಿತ್ ಮೇಲೆ ಮಾತ್ರ ಅವಲಂಬಿತರಾಗಲು ಸಾಧ್ಯವಿಲ್ಲ ಎಂದು ನಾನು ಹೇಳುತ್ತಿದ್ದೇನೆ. ಭಾರತ ತಂಡಕ್ಕೆ ಅವರ ಪ್ರತಿಯೊಂದು ಜವಾಬ್ದಾರಿಯನ್ನು ಪೂರೈಸುವ ಆಟಗಾರರು ಬೇಕು. ಯುವಕರು ಮುಂದೆ ಬಂದು 'ಇದು ನಮ್ಮ ಸಮಯ' ಎಂದು ಹೇಳಬೇಕು” ಎಂದು ದಿಗ್ಗಜ ಆಲ್‌ರೌಂಡರ್ ಹೇಳಿದ್ದಾರೆ.

“ವಿಶ್ವಕಪ್ ಭಾರತದಲ್ಲಿ ನಡೆಯುತ್ತದೆ ಎಂಬುದು ಭಾರತಕ್ಕೆ ದೊಡ್ಡ ಧನಾತ್ಮಕ ಅಂಶವಾಗಿದೆ. ಇಲ್ಲಿನ ಪರಿಸ್ಥಿತಿಗಳ ಬಗ್ಗೆ ನಮಗಿಂತ ಚೆನ್ನಾಗಿ ಯಾರಿಗೂ ತಿಳಿದಿಲ್ಲ. ಕಳೆದ 8ರಿಂದ 10 ವರ್ಷಗಳಿಂದ ರೋಹಿತ್ ಮತ್ತು ವಿರಾಟ್ ಭಾರತದ ಪ್ರಮುಖ ಕ್ರಿಕೆಟಿಗರಲ್ಲಿ ಇಬ್ಬರು. ಇದು ವಿರಾಟ್ ಮತ್ತು ರೋಹಿತ್ ಅವರ ಕೊನೆಯ ವಿಶ್ವಕಪ್ ಆಗಲಿದೆಯೇ ಎಂಬ ಪ್ರಶ್ನೆಯನ್ನು ಈಗಾಗಲೇ ಅನೇಕರು ಕೇಳಲು ಪ್ರಾರಂಭಿಸಿದ್ದಾರೆ. ಅವರು ಮುಂದೆಯೂ ಆಡಬಹುದು ಎಂದು ನಾನು ನಂಬುತ್ತೇನೆ. ಆದರೆ, ಅವರು ನಿಜವಾಗಿಯೂ ಕಷ್ಟಪಡಬೇಕಾಗುತ್ತದೆ. ಆಟದಲ್ಲಿ ಫಿಟ್‌ನೆಸ್ ಪ್ರಮುಖ ಪಾತ್ರ ವಹಿಸುತ್ತದೆ. ತಂಡದಲ್ಲಿ ಸ್ಥಾನ ಪಡೆಯಲು ಬಹಳಷ್ಟು ಯುವಕರು ಮುಂದೆ ಬರುತ್ತಿದ್ದಾರೆ. ಅವರೊಂದಿಗೆ ಇವರಿಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಅವರು ತಮ್ಮ ಆಟವನ್ನು ಹೇಗೆ ಆಡಲು ಬಯಸುತ್ತಾರೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ಅವರಲ್ಲಿ ಸಾಮರ್ಥ್ಯದ ಕೊರತೆಯಿಲ್ಲ” ಎಂದು ಕಪಿಲ್‌ ದೇವ್‌ ಹೇಳಿದರು.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜನವರಿ 10ರಿಂದ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡಕ್ಕೆ ಮರಳಲಿದ್ದಾರೆ.