Ranji Trophy: ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಕರ್ನಾಟಕಕ್ಕೆ ಸೌರಾಷ್ಟ್ರ ಎದುರಾಳಿ; ನಮ್ಮ ತಂಡ ಎಷ್ಟು ಬಲಿಷ್ಠ?
ಸೆಮಿಫೈನಲ್‌ಗೆ ಪ್ರವೇಶಿಸಿರುವ ಕರ್ನಾಟಕವು, ಒಂಬತ್ತನೇ ಬಾರಿಗೆ ಟ್ರೋಫಿಯನ್ನು ಎತ್ತಲು ಮುಂದಾಗಿದೆ. ಕೊನೆಯ ಬಾರಿಗೆ ರಾಜ್ಯವು 2014-15ರಲ್ಲಿ ಕಪ್ ಗೆದ್ದಿತ್ತು.ಆ ಬಳಿಕ ಮತ್ತೆ ತನ್ನ ಬತ್ತಳಿಕೆಗೆ ಮತ್ತೊಂದು ಟ್ರೋಫಿಯನ್ನು ಸೇರಿಸಲು ಎದುರು ನೋಡುತ್ತಿದೆ.
ಎಂಟು ಬಾರಿಯ ರಣಜಿ ಚಾಂಪಿಯನ್ ಕರ್ನಾಟಕವು, ನಿನ್ನೆ (ಶುಕ್ರವಾರ) ಬೆಂಗಳೂರಿನಲ್ಲಿ ನಡೆದ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿದೆ. ಉತ್ತರಾಖಂಡವನ್ನು ಇನ್ನಿಂಗ್ಸ್ ಮತ್ತು 281 ರನ್‌ಗಳಿಂದ ಭರ್ಜರಿಯಾಗಿ ಸೋಲಿಸಿದ ಮಯಾಂಕ್ ಅಗರ್ವಾಲ್ ಪಡೆ, ಮತ್ತೊಂದು ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿ ಮುಂದಡಿ ಇಟ್ಟಿದೆ.
ಟ್ರೆಂಡಿಂಗ್ ಸುದ್ದಿ
ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕಕ್ಕೆ ಸೌರಾಷ್ಟ್ರ ಎದುರಾಳಿಯಾಗಲಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಸೌರಾಷ್ಟ್ರ ತಂಡವು ಪಂಜಾಬ್ ತಂಡವನ್ನು 71 ರನ್‌ಗಳಿಂದ ಮಣಿಸಿದೆ. ಹೀಗಾಗಿ ಸೆಮೀಸ್‌ಗೆ ಲಗ್ಗೆ ಇಟ್ಟ ಸೌರಾಷ್ಟ್ರ ಕರ್ನಾಟಕದ ವಿರುದ್ಧ ಸೆಣಸಲಿದೆ.
ಮತ್ತೊಂದೆಡೆ ಹಾಲಿ ಚಾಂಪಿಯನ್ ಮಧ್ಯಪ್ರದೇಶವು ಆಂಧ್ರವನ್ನು ಐದು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಮತ್ತೊಮ್ಮೆ ಸೆಮಿಫೈನಲ್ ಪ್ರವೇಶಿಸಿದೆ. ಇದಕ್ಕೆ ಬಂಗಾಳ ಎದುರಾಳಿ. ಅತ್ತ ಜಾರ್ಖಂಡ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಂಗಾಳವು 9 ವಿಕೆಟ್‌ಗಳ ಅಂತರದಿಂದ ಗೆದ್ದು ಸೆಮೀಸ್ ಪ್ರವೇಶಿಸಿದೆ.
ಫೆಬ್ರವರಿ 8ರಿಂದ 12ರವರೆಗೆ ಸೆಮಿಫೈನಲ್ ಪಂದ್ಯಗಳು ನಡೆಯಲಿದೆ. ಮೊದಲ ಸೆಮಿ ಕದನದಲ್ಲಿ ಬಂಗಾಳ ಹಾಗೂ ಹಾಲಿ ಚಾಂಪಿಯನ್ ಮಧ್ಯ ಪ್ರದೇಶವು ಇಂದೋರ್‌ನಲ್ಲಿ ಸೆಣಸಾಡಲಿದ್ದು. ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕವು ಸೌರಾಷ್ಟ್ರ ತಂಡವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಎರಡೂ ಪಂದ್ಯಗಳು ಬೆಳಗ್ಗೆ 9ಗಂಟೆಗೆ ಆರಂಭವಾಗಲಿದೆ.
ಕರ್ನಾಟಕ ಮತ್ತು ಉತ್ತರಾಖಂಡ ಕ್ವಾರ್ಟರ್ ಕದನದ ಫಲಿತಾಂಶ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಮೊದಲ ದಿನವಾದ ಮಂಗಳವಾರ ಟಾಸ್ ಗೆದ್ದ ಕರ್ನಾಟಕವು ಉತ್ತರಾಖಂಡ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಇನಿಂಗ್ಸ್ ಆರಂಭಿಸಿದ ಉತ್ತರಾಖಂಡವು ಅಲ್ಪಮೊತ್ತಕ್ಕೆ ಕುಸಿಯಿತು. ಮೊದಲ ದಿನವೇ ಕೇವಲ 116 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಯಾಗಿ ಭರ್ಜರಿ ಬ್ಯಾಟಿಂಗ್ ನಡೆಸಿದ ಕರ್ನಾಟಕವು ಮೊದಲ ಇನ್ನಿಂಗ್ಸ್‌ನಲ್ಲೇ ಭರ್ಜರಿ 606 ರನ್ ಕಲೆ ಹಾಕಿ ಆಲೌಟ್ ಆಯ್ತು. ತನ್ನ ಪಾಳಯದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಉತ್ತರಾಖಂಡವು, 209 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿತು. ಆ ಮೂಲಕ ಭರ್ಜರಿ ಗೆಲುವಿನೊಂದಿಗೆ ಸೆಮಿ ಫೈನಲ್‌ಗೆ ಪ್ರವೇಶಿಸಿತು.
ಕರ್ನಾಟಕ ಎಷ್ಟು ಬಲಿಷ್ಠ?
ಈ ಬಾರಿ ಸೆಮಿಫೈನಲ್‌ಗೆ ಪ್ರವೇಶಿಸಿರುವ ಕರ್ನಾಟಕವು, ಒಂಬತ್ತನೇ ಬಾರಿಗೆ ಟ್ರೋಫಿಯನ್ನು ಎತ್ತಲು ಮುಂದಾಗಿದೆ. ಕೊನೆಯ ಬಾರಿಗೆ ರಾಜ್ಯವು 2014-15ರಲ್ಲಿ ಕಪ್ ಗೆದ್ದಿತ್ತು.ಆ ಬಳಿಕ ಮತ್ತೆ ತನ್ನ ಬತ್ತಳಿಕೆಗೆ ಮತ್ತೊಂದು ಟ್ರೋಫಿಯನ್ನು ಸೇರಿಸಲು ಎದುರು ನೋಡುತ್ತಿದೆ.
ರಣಜಿ ಟ್ರೋಫಿಯ ಇತಿಹಾಸದಲ್ಲೇ ಎರಡನೇ ಅತ್ಯಂತ ಯಶಸ್ವಿ ತಂಡ ಎಂಬ ಹೆಗ್ಗಳಿಕೆ ಕರ್ನಾಟಕದ್ದು. ಅತ್ಯಂತ ಯಶಸ್ವಿ ರಣಜಿ ತಂಡ ಎಂಬ ಹೆಗ್ಗಳಿಕೆಗೆ ಮುಂಬೈ ಪಾತ್ರವಾಗಿದೆ. ಇದು ಈವರೆಗೆ ಒಟ್ಟು 41 ಬಾರಿ ಕಪ್ ಗೆದ್ದಿದೆ. ಆರು ಬಾರಿ ರನ್ನರ್ ಅಪ್ ಆಗಿದೆ. ಇದೇ ವೇಳೆ ಕರ್ನಾಟಕವು ಒಟ್ಟು 8 ಬಾರಿ ಗೆದ್ದಿದ್ದು, 6 ಬಾರಿ ರನ್ನರ್ ಅಪ್ ಆಗಿದೆ. ಕೊನೆಯ ಬಾರಿಗೆ 2014-15ರಲ್ಲಿ ಕರ್ನಾಟಕವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಹಾಲಿ ಚಾಂಪಿಯನ್ ಯಾವುದು?
ಕಳೆದ ಬಾರಿ ನಡೆದ ಆವೃತ್ತಿಯಲ್ಲಿ, 41 ಬಾರಿ ಕಪ್ ಗೆದ್ದಿರುವ ಬಲಿಷ್ಠ ಮುಂಬೈ ತಂಡವನ್ನು ಸೋಲಿಸುವ ಮೂಲಕ, ಮಧ್ಯಪ್ರದೇಶ ರಣಜಿ ಟ್ರೋಫಿಯನ್ನು ಎತ್ತಿಹಿಡಿದಿತ್ತು. ರಣಜಿಯಲ್ಲಿ ಐತಿಹಾಸಿಕ ದಾಖಲೆ ಹೊಂದಿರುವ ಮುಂಬೈ ಬಗ್ಗುಬಡಿಯುವ ಮೂಲಕ ಎಂಪಿ ಕಪ್ ಗೆದ್ದಿತ್ತು. ಈ ಬಾರಿಯೂ ಎಂಪಿ ಸೆಮೀಸ್ ಪ್ರವೇಶಿಸಿದ್ದು, ತನ್ನ ಪಟ್ಟವನ್ನು ಉಳಿಸಿಕೊಳ್ಳುವ ಇರಾದೆಯಲ್ಲಿದೆ.