ಮೈಸೂರಿನಿಂದ ದೆಹಲಿ; ಭಾರತ ಖೋ ಖೋ ವಿಶ್ವಕಪ್‌ ತಂಡದಲ್ಲಿ ಕನ್ನಡತಿ ಚೈತ್ರಾ, ಇವರು ದಕ್ಷಿಣ ಭಾರತದ ಏಕೈಕ ಆಟಗಾರ್ತಿ
ಕನ್ನಡ ಸುದ್ದಿ  /  ಕ್ರೀಡೆ  /  ಮೈಸೂರಿನಿಂದ ದೆಹಲಿ; ಭಾರತ ಖೋ ಖೋ ವಿಶ್ವಕಪ್‌ ತಂಡದಲ್ಲಿ ಕನ್ನಡತಿ ಚೈತ್ರಾ, ಇವರು ದಕ್ಷಿಣ ಭಾರತದ ಏಕೈಕ ಆಟಗಾರ್ತಿ

ಮೈಸೂರಿನಿಂದ ದೆಹಲಿ; ಭಾರತ ಖೋ ಖೋ ವಿಶ್ವಕಪ್‌ ತಂಡದಲ್ಲಿ ಕನ್ನಡತಿ ಚೈತ್ರಾ, ಇವರು ದಕ್ಷಿಣ ಭಾರತದ ಏಕೈಕ ಆಟಗಾರ್ತಿ

ವನಿತೆಯರ ಖೋ ಖೋ ವಿಶ್ವಕಪ್ ತಂಡದಲ್ಲಿರುವ ಒಟ್ಟು 15 ಜನ ಸದಸ್ಯರಲ್ಲಿ ಕರ್ನಾಟಕದ ಏಕೈಕ ಆಟಗಾರ್ತಿಯಾಗಿ ಚೈತ್ರಾ ಆಯ್ಕೆಯಾಗಿದ್ದಾರೆ. ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟು ಇವರು. ಮೈಸೂರಿನ ಇದೀಗ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಭಾರತ ಖೋ ಖೋ ವಿಶ್ವಕಪ್‌ ತಂಡದಲ್ಲಿ ಕನ್ನಡತಿ ಚೈತ್ರಾ; ಇವರು ದಕ್ಷಿಣ ಭಾರತದ ಏಕೈಕ ಆಟಗಾರ್ತಿ
ಭಾರತ ಖೋ ಖೋ ವಿಶ್ವಕಪ್‌ ತಂಡದಲ್ಲಿ ಕನ್ನಡತಿ ಚೈತ್ರಾ; ಇವರು ದಕ್ಷಿಣ ಭಾರತದ ಏಕೈಕ ಆಟಗಾರ್ತಿ (AFP, FB)

ಭಾರತದಲ್ಲಿ ಖೋ ಖೋ ವಿಶ್ವಕಪ್‌ ಕಣ ರಂಗೇರಿದೆ. ರಾಜಧಾನಿ ನವದೆಹಲಿಯಲ್ಲಿ ಉದ್ಘಾಟನಾ ಆವೃತ್ತಿಯ ಖೋ ಖೋ ವಿಶ್ವಕಪ್‌ಗೆ ಚಾಲನೆ ಸಿಕ್ಕಿದ್ದು, ಆತಿಥೇಯ ಭಾರತವು ಕಪ್‌ ಗೆಲ್ಲುವ ವಿಶ್ವಾಸದಲ್ಲಿದೆ. ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಪಂದ್ಯಗಳು ನಡೆಯುತ್ತಿದ್ದು, ಎರಡು ವಿಭಾಗದಲ್ಲಿಯೂ ಭಾರತ ಗೆಲ್ಲುವ ಫೇವರೆಟ್‌ ಆಗಿದೆ. ಜನವರಿ 13ರ ಸೋಮವಾರ, ಭಾರತ ಪುರುಷರ ತಂಡವು ನೇಪಾಳವನ್ನು ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇದೇ ವೇಳೆ ಭಾರತ ವನಿತೆಯರ ತಂಡವು ಇಂದು (ಜ.14) ದಕ್ಷಿಣ ಕೊರಿಯಾ ವಿರುದ್ಧ ಅಭಿಯಾನ ಆರಂಭಿಸಲಿದೆ. ಈ ನಡುವೆ ಕರ್ನಾಟಕದ ಆಟಗಾರ್ತಿಯೊಬ್ಬರು ಗಮನ ಸೆಳೆದಿದ್ದಾರೆ. ಅವರೇ ಚೈತ್ರಾ.

ವನಿತೆಯರ ಖೋ ಖೋ ತಂಡದಲ್ಲಿರುವ ಒಟ್ಟು 15 ಜನ ಸದಸ್ಯರಲ್ಲಿ ಕರ್ನಾಟಕದ ಏಕೈಕ ಆಟಗಾರ್ತಿ ಚೈತ್ರಾ. ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟು ಇವರು. ಮೈಸೂರಿನ ಹುಡುಗಿ ಇದೀಗ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ರೈತನ ಮಗಳು ಚೈತ್ರ. ಬಿʼಪಿಇಡಿ ಓದುತ್ತಿರುವ 22 ವರ್ಷದ ಯುವತಿ, ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ. ಇದರ ಹಿಂದೆ ಅವರ ಪ್ರತಿಭೆ, ನಿರಂತರ ಶ್ರಮ ಹಾಗೂ ಬಹುದಿನಗಳ ಕನಸಿದೆ. ಉದ್ಘಾಟನಾ ಆವೃತ್ತಿಯ ಖೋ ಖೋ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗುವ ಮೂಲಕ ಅವರು ರಾಜ್ಯವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಅಂದು ಮಣ್ಣಿನ ಕೋರ್ಟ್, ಇಂದು ಮ್ಯಾಟ್‌ ಕೋರ್ಟ್

ಚೈತ್ರ ಅವರು ರೈತ ದಂಪತಿ ಬಸವಣ್ಣ ಮತ್ತು ನಾಗರತ್ನ ಅವರ ಮಗಳು. ತಾವಿರುವ ಊರಿನಲ್ಲಿ ಕ್ರೀಡಾ ಸೌಲಭ್ಯಗಳ ಕೊರತೆ ಇದ್ದರೂ, ಅವರ ಪ್ರತಿಭೆಗೆ ಅವು ಯಾವುದೂ ಅಡ್ಡಿಯಾಗಿಲ್ಲ. ಇಂದು ಮ್ಯಾಟ್ ಕೋರ್ಟ್‌ನಲ್ಲಿ ಆಡುವ ಅವಕಾಶ ಪಡೆಯುವ ಹಿಂದೆ, ಹಲವಾರು ವರ್ಷ ಮಣ್ಣಿನ ಕೋರ್ಟ್‌ನಲ್ಲಿ ಎದ್ದು ಬಿದ್ದು ಆಡಿ ಗಾಯ ಮಾಡಿಕೊಂಡ ಉದಾಹರಣೆಗಳಿವೆ. 

ಕೋಚ್‌ ಹಾಗೂ ಕುಟುಂಬ ಸದಸ್ಯರಿಗೆ ಧನ್ಯವಾದ

ಖೋ ಖೋ ವಿಶ್ವಕಪ್‌ಗೆ ಆಯ್ಕೆಯಾಗುವ ಮುನ್ನ, ದೆಹಲಿಯಲ್ಲಿ ನಡೆದ ಶಿಬಿರದಲ್ಲಿ ಚೈತ್ರ ಭಾಗವಹಿಸಿದ್ದರು. ಅಲ್ಲಿಂದಲೇ ಅವರು ತಂಡಕ್ಕೆ ಆಯ್ಕೆಯಾಗಿ ಮನೆಯವರಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ತಮ್ಮ ಆಯ್ಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚೈತ್ರಾ, “ಭಾರತ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಈ ವರ್ಷ ನಾನು ನಾಲ್ಕನೇ ಬಾರಿ ಭಾರತೀಯ ಶಿಬಿರಕ್ಕೆ ಹಾಜರಾಗಿದ್ದು. ಆದರೆ ಈ ಹಿಂದಿನ ಮೂರು ಪ್ರಯತ್ನಗಳಲ್ಲಿ ನಾನು ಭಾರತ ತಂಡಕ್ಕೆ ಆಯ್ಕೆಯಾಗಲಿಲ್ಲ. ಈ ಅವಕಾಶಕ್ಕಾಗಿ ಅಖಿಲ ಭಾರತ ಮತ್ತು ರಾಜ್ಯ ಸಂಸ್ಥೆ ಸೇರಿದಂತೆ ಎಲ್ಲರಿಗೂ ನಾನು ಕೃತಜ್ಞಳಾಗಿದ್ದೇನೆ. ಇಂದು ನಾನು ಈ ಹಂತ ತಲುಪಲು ನನ್ನ ತರಬೇತುದಾರ ಮಂಜುನಾಥ್ ಸರ್ ಮುಖ್ಯ ಕಾರಣ. ಅವರಿಗೆ ಧನ್ಯವಾದ ಹೇಳಲು ನನಗೆ ಪದಗಳೇ ಸಿಗುತ್ತಿಲ್ಲ. ಮನೆಯಲ್ಲಿ ಹಲವು ಸವಾಲುಗಳಿದ್ದರೂ, ನನ್ನ ಪೋಷಕರು ಮತ್ತು ಸಹೋದರ ನನ್ನೊಂದಿಗೆ ನಿಂತು ನನ್ನ ಕನಸುಗಳನ್ನು ಪೂರೈಸಲು ಜೊತೆಯಾಗಿ ನಿಂತಿದ್ದಾರೆ,” ಎಂದು ಚೈತ್ರ ಹೇಳಿದ್ದಾರೆ.

ತಮ್ಮ ತರಬೇತಿಯಲ್ಲಿ ಪಳಗಿದ ಚೈತ್ರ ಕುರಿತು ಕೋಚ್‌ ಮಂಜುನಾಥ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. “ಚೈತ್ರಾ ನಾಲ್ಕನೇ ತರಗತಿಯಲ್ಲಿದ್ದಾಗಲೇ ಆಕೆಯಲ್ಲಿದ್ದ ಚುರುಕುತನವನ್ನು ನಾನು ಗಮನಿಸಿದೆ. ಖೋ ಖೋ ಆಡುವಂತೆ ಪ್ರೋತ್ಸಾಹಿಸಿದೆ. ಆದರೆ, ಕುರುಬೂರಿನಲ್ಲಿ ಮ್ಯಾಟ್ ಕೋರ್ಟ್ ಕೊರತೆ ಇದೆ. ಮಣ್ಣಿನ ಕೋರ್ಟ್‌ಗಳಲ್ಲಿ ತರಬೇತಿ ನೀಡಿ ಮ್ಯಾಟ್ ಕೋರ್ಟ್‌ಗಳಲ್ಲಿ ಸ್ಪರ್ಧಿಸುವುದು ತುಂಬಾ ಕಷ್ಟ. ನಮ್ಮ ಗ್ರಾಮದಲ್ಲಿ ನಮಗೆ ಮ್ಯಾಟ್ ಕೋರ್ಟ್ ಇದ್ದರೆ, ಚೈತ್ರರಂತಹ ಇನ್ನಷ್ಟು ಪ್ರತಿಭೆಗಳು ಇನ್ನೂ ಉತ್ತಮ ಪ್ರದರ್ಶನ ನೀಡಬಹುದು” ಎಂದು ಅವರು ಹೇಳಿದ್ದಾರೆ.

ಭಾರತ ಮಹಿಳಾ ಖೋ ಖೋ ತಂಡ

ಪ್ರಿಯಾಂಕಾ ಇಂಗ್ಲೆ (ನಾಯಕಿ), ಅಶ್ವಿನಿ ಶಿಂಧೆ, ರೇಷ್ಮಾ ರಾಥೋಡ್, ಭಿಲಾರ್ ದೇವ್ಜಿಭಾಯಿ, ನಿರ್ಮಲಾ ಭಾಟಿ, ನೀತಾ ದೇವಿ, ಚೈತ್ರಾ ಆರ್, ಸುಭಶ್ರೀ ಸಿಂಗ್, ಮಗೈ ಮಾಝಿ, ಅಂಶು ಕುಮಾರಿ, ವೈಷ್ಣವಿ ಬಜರಂಗ್, ನಸ್ರೀನ್ ಶೇಖ್, ಮೀನು, ಮೋನಿಕಾ, ನಾಜಿಯಾ ಬೀಬಿ.

ಸ್ಟ್ಯಾಂಡ್‌ಬೈ: ಸಂಪದಾ ಮೋರೆ, ರಿತಿಕಾ ಸಿಲೋರಿಯಾ, ಪ್ರಿಯಾಂಕಾ ಭೋಪಿ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.