ಖೋ ಖೋ ವಿಶ್ವಕಪ್ 2025: ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ, ಭಾಗವಹಿಸುವ ದೇಶಗಳು, ಲೈವ್ ಸ್ಟ್ರೀಮಿಂಗ್ ವಿವರ ಇಂತಿದೆ
Kho Kho World Cup 2025: ಖೋ ಖೋ ವಿಶ್ವಕಪ್‌ನಲ್ಲಿ ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ? ಪುರುಷ-ಮಹಿಳಾ ವಿಭಾಗದಲ್ಲಿ ಎಷ್ಟು ತಂಡಗಳು ಭಾಗವಹಿಸಲಿವೆ? ಪಂದ್ಯಗಳ ವೀಕ್ಷಣೆ ಎಲ್ಲಿ ಎಂಬುದರ ವಿವರ ಇಲ್ಲಿದೆ.
ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣವು ಮೊದಲ ಬಾರಿಗೆ ಖೋ ಖೋ ವಿಶ್ವಕಪ್‌ಗೆ (Kho Kho World Cup India 2025) ಆತಿಥ್ಯ ವಹಿಸಲು ಸಜ್ಜಾಗಿದೆ. ಜನವರಿ 13 ರಿಂದ ಜನವರಿ 19 ರವರೆಗೆ ನಡೆಯಲಿದೆ. ಈ ಮಹತ್ವದ ಟೂರ್ನಿಯಲ್ಲಿ 6 ಖಂಡಗಳನ್ನು ಪ್ರತಿನಿಧಿಸುವ ಪುರುಷ ಮತ್ತು ಮಹಿಳೆಯರ ವಿಭಾಗಗಳ ತಂಡಗಳು ಭಾಗವಹಿಸಲಿವೆ. ಭಾರತದಲ್ಲಿ ಆಳವಾಗಿ ಬೇರೂರಿರುವ ಖೋ ಖೋ ಕ್ರೀಡೆಯ ಜಾಗತಿಕ ವಿಸ್ತರಣೆಗೆ ಈ ಟೂರ್ನಿಗೆ ಮಹತ್ವದ ಹೆಜ್ಜೆಯಾಗಿದೆ.
ಈ ಐತಿಹಾಸಿಕ ಟೂರ್ನಿಯಲ್ಲಿ ತಂಡಗಳ ಶ್ರೇಯಾಂಕ ಆಧಾರದ ಮೇಲೆ ಗುಂಪುಗಳಾಗಿ ವಿಂಗಡಣೆ ಮಾಡಲಾಗುವುದು. ಎರಡೂ ವಿಭಾಗಗಳಲ್ಲಿ (ಮಹಿಳೆ-ಪುರುಷ) ಭಾರತ ತಂಡವು ನೆಚ್ಚಿನ ತಂಡವಾಗಿದೆ. ವಿಶ್ವಕಪ್‌ನಲ್ಲಿ 2 ಭವ್ಯವಾದ ಟ್ರೋಫಿಗಳು ಇರುತ್ತವೆ, ಪುರುಷರ ಚಾಂಪಿಯನ್‌ಶಿಪ್‌ಗಾಗಿ ನೀಲಿ ಟ್ರೋಫಿ ಮತ್ತು ಮಹಿಳೆಯರ ಈವೆಂಟ್‌ಗಾಗಿ ಹಸಿರು ಟ್ರೋಫಿ. ಪಾಕಿಸ್ತಾನ ಈ ವಿಶ್ವಕಪ್ ಆಡಲು ವೀಸಾಗೆ ಅರ್ಜಿ ಸಲ್ಲಿಸಿದೆ.
ಪುರುಷರ ವಿಭಾಗದಲ್ಲಿ ಭಾಗವಹಿಸುವ ದೇಶಗಳು
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ತಂಡಗಳು ಏಷ್ಯಾ ಖಂಡದಿಂದ ಪ್ರತಿನಿಧಿಸಲಿದೆ.
ಆಫ್ರಿಕಾದಿಂದ ಘಾನಾ, ಕೀನ್ಯಾ ಮತ್ತು ದಕ್ಷಿಣ ಆಫ್ರಿಕಾ ಪ್ರತಿನಿಧಿಸಲಿವೆ.
ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಯುರೋಪ್‌ನಿಂದ ಸ್ಪರ್ಧಿಸಲಿವೆ.
ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ಉತ್ತರ ಅಮೆರಿಕಾವನ್ನು ಪ್ರತಿನಿಧಿಸುತ್ತವೆ.
ಬ್ರೆಜಿಲ್ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ದಕ್ಷಿಣ ಅಮೆರಿಕಾ ಮತ್ತು ಓಷಿಯಾನಿಯಾದಿಂದ ಭಾಗವಹಿಸಲಿವೆ. (ಓಷಿಯಾನಿಯಾ - ಪೆಸಿಫಿಕ್ ಸಾಗರದ ದ್ವೀಪಗಳ ಪ್ರದೇಶಕ್ಕೆ ಸಾಮಾನ್ಯವಾಗಿ ಈ ಹೆಸರಿದೆ.)
ಮಹಿಳಾ ವಿಭಾಗದಲ್ಲಿ ಭಾಗವಹಿಸುವ ದೇಶಗಳು
ಭಾರತ, ಪಾಕಿಸ್ತಾನ, ಭೂತಾನ್, ಇರಾನ್, ನೇಪಾಳ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ ಮತ್ತು ಶ್ರೀಲಂಕಾ ತಂಡಗಳು ಏಷ್ಯಾವನ್ನು ಪ್ರತಿನಿಧಿಸಲಿವೆ.
ಕೀನ್ಯಾ, ದಕ್ಷಿಣ ಆಫ್ರಿಕಾ ಮತ್ತು ಉಗಾಂಡಾದ ತಂಡಗಳು ಆಫ್ರಿಕಾದಿಂದ ಭಾಗವಹಿಸಲಿವೆ.
ಪೋಲೆಂಡ್, ಇಂಗ್ಲೆಂಡ್ ಮತ್ತು ಜರ್ಮನಿ ಯುರೋಪ್ ಅನ್ನು ಪ್ರತಿನಿಧಿಸುತ್ತದೆ.
ಪೆರು ಮತ್ತು ನ್ಯೂಜಿಲೆಂಡ್ ಕ್ರಮವಾಗಿ ದಕ್ಷಿಣ ಅಮೆರಿಕಾ ಮತ್ತು ಓಷಿಯಾನಿಯಾದಿಂದ ಸ್ಪರ್ಧಿಸಲಿವೆ.
ಈ ವರ್ಷ ಮಹಿಳಾ ಟೂರ್ನಿಯಲ್ಲಿ ಉತ್ತರ ಅಮೆರಿಕದ ಯಾವುದೇ ತಂಡ ಭಾಗವಹಿಸುವುದಿಲ್ಲ ಎಂಬುದು ಗಮನಾರ್ಹ.
ಖೋ ಖೋ ವಿಶ್ವಕಪ್ ಲೈವ್-ಸ್ಟ್ರೀಮಿಂಗ್
ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ದೂರದರ್ಶನ ಮೂಲಕ ಪಂದ್ಯಗಳನ್ನು ಪ್ರಸಾರ ಮಾಡಲಾಗುತ್ತದೆ. ಡಿಸ್ನಿ + ಹಾಟ್‌ಸ್ಟಾರ್ ಒಟಿಟಿ ವೇದಿಕೆಯಲ್ಲೂ ಟೂರ್ನಿಯ ಲೈವ್ಸ್ಟ್ರೀಮ್ ಇರುತ್ತದೆ.
ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ?
ಜನವರಿ 17ರಂದು ಕ್ವಾರ್ಟರ್ ಫೈನಲ್, ಜನವರಿ 18ರಂದು ಸೆಮಿಫೈನಲ್ ಹಾಗೂ ಜನವರಿ 19ರಂದು ಫೈನಲ್ ಪಂದ್ಯ ನಡೆಯಲಿದೆ. ವಿಶ್ವಕಪ್‌ನಲ್ಲಿ 615 ಆಟಗಾರರು, 125 ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಜನವರಿ 8ರಂದು ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಪ್ರಕಟವಾಗಲಿವೆ.