ಕನ್ನಡ ಸುದ್ದಿ  /  Sports  /  Kl Rahul S Patient Batting Helped Team India Win Second Odi Against Sri Lanka Series Clinched

India vs Sri Lanka: ಕನ್ನಡಿಗ ಕೆಎಲ್ ರಾಹುಲ್ ತಾಳ್ಮೆಯ ಆಟಕ್ಕೆ ಸಿಕ್ಕ ಜಯ; ಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ಗಳ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳ ಸರಣಿಯನ್ನು ಗೆದ್ದುಕೊಂಡಿದೆ.

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 64 ರನ್ ಗಳ ಉಪಯುಕ್ತ ಕಾಣಿಕೆ ನೀಡಿದ ಕೆ.ಎಲ್ ರಾಹುಲ್ (ಫೋಟೋ-AFP)
ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 64 ರನ್ ಗಳ ಉಪಯುಕ್ತ ಕಾಣಿಕೆ ನೀಡಿದ ಕೆ.ಎಲ್ ರಾಹುಲ್ (ಫೋಟೋ-AFP)

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕನ್ನಡಿಗ ಕೆ.ಎಲ್. ರಾಹುಲ್ ಸಿಡಿಸಿದ ತಾಳ್ಮೆಯ ಅರ್ಧ ಶತಕದ ನೆರವಿನಿಂದ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 4 ವಿಕೆಟ್ ಗಳ ಗೆಲುವು ಸಾಧಿಸಿದೆ. ಜೊತೆಗೆ ರೋಹಿತ್ ಪಡೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ತಮ್ಮದಾಗಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 39.4 ಓವರ್ ಗಳಲ್ಲಿ 215 ರನ್ ಗಳಿಸಿ ಆಲೌಟ್ ಆಯಿತು. ಇದಕ್ಕೆ ಪ್ರತಿಯಾಗಿ ಟೀಂ ಇಂಡಿಯಾ 43.2 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 219 ರನ್ ಗಳಿಸಿತು. ಭಾರತದ ಗೆಲುವಿನಗೆ 1 ರನ್ ಅಗತ್ಯವಿದ್ದಾಗ ಕುಲ್ದೀಪ್ ಯಾದವ್ ಜಯದ ಬೌಂಡರಿ ಬಾರಿಸಿದರು.

ಶ್ರೀಲಂಕಾ ನೀಡಿದ 216 ರನ್ ಗಳ ಸಾಧಾರಾಣ ಗುರಿ ಬೆನ್ನಟ್ಟಿದ ಆರಂಭಿಕ ಬ್ಯಾಟರ್ ಗಳಾದ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ವೇಗದ ಆಟಕ್ಕೆ ಮುಂದಾದರು. ಆದರೆ ಈ ಜೊತೆಯಾಟವನ್ನು ಚಾಮಿಕ ಕರುಣಾರತ್ನೆ ಮುರಿದರು. 5ನೇ ಓವರ್ ನ ಕೊನೆಯ ಎಸೆತದಲ್ಲಿ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದರು. ಆ ಬಳಿಕ ಶುಭಮನ್ ಗಿಲ್ ಕೂಡ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಂತು ಆಡಲಿಲ್ಲ. ಗಿಲ್ ಸಹ ಲಹಿರು ಕುಮಾರ ಬೌಲಿಂಗ್ ನಲ್ಲಿ ಅವಿಷ್ಕ ಫೆರ್ನಾಂಡೋಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.

ಇನ್ನು ಕಳೆದ ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸಿ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದ ವಿರಾಟ್ ಕೊಹ್ಲಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಿರಾಸೆ ಮೂಡಿಸಿದರು. ಕೇವಲ 4 ರನ್ ಗಳಿಸಿ ಲಹಿರು ಕುಮಾರ ಎಸೆತದಲ್ಲಿ ಬೌಲ್ಡ್ ಆದರು. ಶ್ರೇಯಸ್ ಕೂಡ ಹೆಚ್ಚು ಕ್ರೀಸ್ ನಲ್ಲಿ ಇರಲು ಕಸುನ್ ರಜಿತ ಬಿಡಲಿಲ್ಲ. ಹಾರ್ದಿಕ್ ಪಾಂಡ್ಯ ಸ್ವಲ್ಪ ಹೊತ್ತು ಕ್ರೀಸ್ ಕಚ್ಚಿ ಆಡಿದರು. ಪಾಂಡ್ಯ 53 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 36 ರನ್ ಗಳಿಸಿ ಚಾಮಿಕ ಕರುಣಾರತ್ನೆಗೆ ವಿಕೆಟ್ ಒಪ್ಪಿಸಿದರು.

ಒಂದು ಕಡೆ ವಿಕೆಟ್ ಗಳು ಬೀಳುತ್ತಿದ್ದ ಹಿನ್ನೆಲೆಯಲ್ಲಿ ತಾಳ್ಮೆಯ ಆಟಕ್ಕೆ ಮೊರೆ ಹೋದ ಕನ್ನಡಿಗ ಕೆ.ಎಲ್.ರಾಹುಲ್ ತಂಡವನ್ನು ಗೆಲುವಿನ ದಡ ಸೇರಿಸಿದರು. 103 ಎಸೆತಗಳನ್ನು ಎದುರಿಸಿದ ರಾಹುಲ್ 6 ಬೌಂಡರಿಗಳೊಂದಿಗೆ 64 ರನ್ ಗಳ ಉಪಯುಕ್ತ ಕಾಣಿಗೆ ನೀಡಿ ಔಟಾಗದೆ ಉಳಿದರು.

ರೋಹಿತ್ ಶರ್ಮಾ (17), ಶುಭಮನ್ ಗಿಲ್ (21), ಶ್ರೇಯಸ್ ಅಯ್ಯರ್ (28), ಹಾರ್ದಿಕ್ ಅಕ್ಸರ್ ಪಟೇಲ್ (21), ಕುಲದೀಪ್ ಯಾದವ್ ಔಟಾಗದೆ 10 ರನ್ ಗಳಿಸಿದರು. ಶ್ರೀಲಂಕಾ ಪರ ಲಹಿರು ಕುಮಾರ, ಚಾಮಿಕ ಕರುಣಾರತ್ನೆ ತಲಾ ಎರಡು ವಿಕೆಟ್ ಪಡೆದರೆ, ಕಸುನ್ ರಜಿತ ಮತ್ತು ಧನಂಜಯ ಡಿ ಸಿಲ್ವ ತಲಾ 1 ವಿಕೆಟ್ ಕಿತ್ತರು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 39.4 ಓವರ್ ಗಳಲ್ಲಿ 215 ರನ್ ಗಳಿಸಿ ಸರ್ವ ಪತನ ಕಂಡಿತು. ಲಂಕಾ ತಂಡವನ್ನು ಭಾರತದ ಬೌಲರ್ ಗಳು ಇನ್ನಿಲ್ಲದಂತೆ ಕಾಡಿದರು. ಆರನೇ ಓವರ್ ನ ಕೊನೆಯ ಎಸೆತದಲ್ಲಿ ಎನ್ ಫೆರ್ನಾಂಡೋ ಅವರನ್ನು ಮೊಹಮ್ಮದ್ ಸಿರಾಜ್ ಬೋಲ್ಡ್ ಮಾಡುವ ಮೂಲಕ ವಿಕೆಟ್ ಖಾತೆಯನ್ನು ತೆರೆದರು. ಮುಂದಿನ 10 ಓವರ್ ಗಳಲ್ಲಿ ಯಾವುದೇ ವಿಕೆಟ್ ಬೀಳದಿದ್ದರೂ ಆ ನಂತರ ಮೇಲುಗೈ ಸಾಧಿಸಿದರು. ಪರಿಣಾಮ 39.4 ಓವರ್ ಗಳಲ್ಲಿ ಲಂಕಾ ತಂಡವನ್ನು ಆಲೌಟ್ ಮಾಡಲಾಯಿತು.

ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಹಾಗೂ ಕೊನೆಯ ಪಂದ್ಯ ಜನವರಿ 15 ರಂದು ತಿರುವನಂತಪುರಂನಲ್ಲಿ ನಡೆಯಲಿದೆ.