ಭಾರತಕ್ಕೆ ಮತ್ತೊಂದು ಕಿರೀಟ; ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್ ಗೆದ್ದ ಕೊನೇರು ಹಂಪಿ, ಮಹಿಳಾ ಗ್ರ್ಯಾಂಡ್ ಮಾಸ್ಟರ್ ದಾಖಲೆ
Koneru Humpy: ಮಹಿಳಾ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್-2024 ಫೈನಲ್ ಪಂದ್ಯದಲ್ಲಿ ಭಾರತದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಕೊನೇರು ಹಂಪಿ ಅವರು ಗೆದ್ದು ಚಾಂಪಿಯನ್ ಆಗಿದ್ದಾರೆ.
2024ರ ವರ್ಷದ ಕೊನೆಯಲ್ಲಿ ಭಾರತೀಯ ಚೆಸ್ ಪಟುಗಳ ಅದ್ಭುತ ಸಾಧನೆ, ದೇಶದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹೌದು, ಇತ್ತೀಚೆಗೆ ವಿಶ್ವ ಚೆಸ್ ಚಾಂಪಿಯನ್ ಗೆದ್ದಿದ್ದ ಭಾರತ, ಇದೀಗ ಮಹಿಳಾ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್-2024 ಪ್ರಶಸ್ತಿಗೆ ಮುತ್ತಿಕ್ಕಿದೆ. ಮಹಿಳಾ ಗ್ರ್ಯಾಂಡ್ ಮಾಸ್ಟರ್ ಕೊನೇರು ಹಂಪಿ ಅವರು, 2ನೇ ಬಾರಿಗೆ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ, ಭಾರತದ ಮುಕುಟಕ್ಕೆ ಮತ್ತೊಂದು ಗರಿ ಒಲಿದು ಬಂದಂತಾಗಿದೆ. ಗೆಲುವಿನೊಂದಿಗೆ ವಿಶೇಷ ದಾಖಲೆಯನ್ನೂ ಬರೆದಿದ್ದಾರೆ.
ಇಂದು (ಡಿಸೆಂಬರ್ 29ರಂದು ಭಾನುವಾರ) ನ್ಯೂಯಾರ್ಕ್ನಲ್ಲಿ ನಡೆದ ಮಹಿಳಾ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್-2024 ಫೈನಲ್ನಲ್ಲಿ ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಸೋಲಿಸಿದ ಹಂಪಿ ಅವರು ಅದ್ಭುತ ಸಾಧನೆಯೊಂದಿಗೆ ಚೆಸ್ ಇತಿಹಾಸ ಪುಟಗಳಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಚೀನಾದ ಜು ವೆನ್ಜುನ್ ಅವರ ನಂತರ 37 ವರ್ಷದ ಹಂಪಿ, ಮಹಿಳೆಯ ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಈ ಪ್ರಶಸ್ತಿ ಜಯಿಸಿದ ಎರಡನೇ ಆಟಗಾರ್ತಿಯಾಗಿದ್ದಾರೆ.
2019ರಲ್ಲಿ ಮೊದಲ ಪ್ರಶಸ್ತಿ ಗೆದ್ದಿದ್ದ ಹಂಪಿ
ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 11 ಅಂಕಗಳ ಪೈಕಿ ಕೊನೇರು 8.5 ಅಂಕ ಗಳಿಸುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕೊನೇರು ಅವರು ಇದಕ್ಕೂ ಮುನ್ನ 2019ರಲ್ಲಿ ಜಾರ್ಜಿಯಾದಲ್ಲಿ ನಡೆದಿದ್ದ ಇದೇ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು. ಇದೀಗ ಐದು ವರ್ಷಗಳ ಬಳಿಕ ಭಾರತದ ನಂ1 ಆಟಗಾರ್ತಿ 2ನೇ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ತನ್ನ ಗೆಲುವಿನ ಕುರಿತು ಮಾತನಾಡಿದ ಕೊನೇರು ಅವರು, ಮೊದಲ ಸುತ್ತಿನಲ್ಲಿ ಸೋಲು ಕಂಡ ನಂತರ ನಾನು ಪ್ರಶಸ್ತಿ ಗೆಲ್ಲುವೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಅಂದರೆ ಡಿಸೆಂಬರ್ 12ರಂದು ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 18 ವರ್ಷದ ಭಾರತದ ಆಟಗಾರ ಗುಕೇಶ್ ದೊಮ್ಮರಾಜು ಅವರು ಪ್ರಶಸ್ತಿ ಗೆದ್ದಿದ್ದರು. ಚೀನಾದ ಡಿಂಗ್ ಲಿರೇನ್ ಅವರನ್ನು 14ನೇ ಅಥವಾ ಅಂತಿಮ ಸುತ್ತಿನಲ್ಲಿ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಅವರು ವಿಶ್ವನಾಥನ್ ಆನಂದ್ ಬಳಿಕ ಈ ಟೂರ್ನಿ ಗೆದ್ದ ಎರಡನೇ ಭಾರತೀಯ ಮತ್ತು ವಿಶ್ವದ ಮೊದಲ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ಗುಕೇಶ್ ಜಯಿಸಿದ ಎರಡೇ ವಾರದಲ್ಲಿ ಭಾರತಕ್ಕೆ ಮತ್ತೊಂದು ಚೆಸ್ ಕಿರೀಟ ಒಲಿದು ಬಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
ಕೊನೇರು ಹಂಪಿ ಯಾರು?
ಕೊನೇರು ಹಂಪಿ ಅವರು ಆಂಧ್ರ ಪ್ರದೇಶದ ಗುಡಿವಾಡದವರು. ಹುಟ್ಟಿದ್ದು 1987ರ ಮಾರ್ಚ್ 31ರಂದು. ತಂದೆ ಕೊನೇರು ಅಶೋಕ್ ಮತ್ತು ತಾಯಿ ಕೊನೇರು ಲತಾ. ಆಕೆಯ ಮೂಲ ಹೆಸರು ಹಂಪಿ. ಕೊನೇರು ಎಂಬುದು ಅವರ ಮನೆತನದ ಹೆಸರು. ಈವರೆಗೂ ತನ್ನ ವೃತ್ತಿ ಜೀವನದಲ್ಲಿ 13 ಚಿನ್ನದ ಪದಕ ಗೆದ್ದಿರುವ ಅವರು, 2014ರ ಆಗಸ್ಟ್ನಲ್ಲಿ ದಾಸರಿ ಅನ್ವೇಶ್ ಅವರನ್ನು ವಿವಾಹವಾದರು. ಅವರಿಗೆ ಅಹಾನಾ ಎಂಬ ಮಗಳಿದ್ದಾಳೆ. ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿರುವ ಹಂಪಿ, ವಿಶ್ವ ಚಾಂಪಿಯನ್‌ಶಿಪ್‌ನ ರನ್ನರ್-ಅಪ್ ಮತ್ತು 2 ಬಾರಿ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್ ವಿಜೇತರು (2019 ಮತ್ತು 2024).
2002ರಲ್ಲಿ ಅಂದರೆ 15 ವರ್ಷ, 1 ತಿಂಗಳ ವಯಸ್ಸಿನಲ್ಲಿ ಗ್ರ್ಯಾಂಡ್‌ಮಾಸ್ಟರ್ ಪ್ರಶಸ್ತಿ ಸಾಧಿಸಿದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹಂಪಿ ಅವರು ಒಲಿಂಪಿಯಾಡ್, ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತರು. ಅವರು ಮೊದಲ ಭಾರತೀಯ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಕೂಡ ಹೌದು. 2007ರ ಅಕ್ಬೋಬರ್ನಲ್ಲಿ ಪೋಲ್ಗರ್ ನಂತರ 2606 ಎಲೋ ರೇಟಿಂಗ್ ಮಾರ್ಕ್ ಅನ್ನು ಮೀರಿದ ಎರಡನೇ ಮಹಿಳಾ ಆಟಗಾರ್ತಿಯಾದರು. ಇವರ ವೃತ್ತಿಜೀವನದಲ್ಲಿ ಇನ್ನೂ ಅನೇಕಾರು ಸಾಧನೆಗಳನ್ನು ಮಾಡಿದ್ದಾರೆ.
–––
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.