ಮೊನಾಕೊದಲ್ಲಿ ಫಾರ್ಮುಲಾ 2 ರೇಸ್ ಗೆದ್ದು ಇತಿಹಾಸ ನಿರ್ಮಿಸಿದ ಕುಶ್ ಮೈನಿ; ಈ ಸಾಧನೆ ಮಾಡಿದ ಮೊದಲ ಭಾರತೀಯ
ಮೊನಾಕೊ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಫಾರ್ಮುಲಾ 2 ರೇಸ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಭಾರತದ ಕುಶ್ ಮೈನಿ ಪಾತ್ರರಾಗಿದ್ದಾರೆ. ಇದು ಭಾರತೀಯ ಮೋಟಾರ್ ಸ್ಪೋರ್ಟ್ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲು. ಹೀಗಾಗಿ ಹಲವು ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಭಾರತೀಯ ಮೋಟಾರ್‌ಸ್ಪೋರ್ಟ್ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಭಾರತವು ಹೆಚ್ಚಾಗಿ ಗುರುತಿಸಿಕೊಳ್ಳದ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣರಾದವರು ಬೆಂಗಳೂರಿನ ಕುಶ್ ಮೈನಿ. ಮೊನಾಕೊ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಫಾರ್ಮುಲಾ 2 ರೇಸ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕುಶ್ ಮೈನಿ ಪಾತ್ರರಾಗಿದ್ದಾರೆ. 25 ವರ್ಷದ ಕುಶ್, ರಿವರ್ಸ್-ಗ್ರಿಡ್ ಸ್ಪ್ರಿಂಟ್ ರೇಸ್‌ನಲ್ಲಿ ಗೆದ್ದಿದ್ದಾರೆ. ಇದರೊಂದಿಗೆ ಮೊನಾಕೋದಾ ಮಾಂಟೆ ಕಾರ್ಲೊದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗುವಂತೆ ಮಾಡಿದ್ದಾರೆ. ಅವರ ಗೆಲುವಿನ ನಂತರ ಎಲ್ಲೆಡೆ ಅಭಿನಂದನೆ ಸಲ್ಲಿಸಲಾಗುತ್ತಿದೆ.
ಡಿಎಎಂಎಸ್ ಲ್ಯೂಕಸ್ ಆಯಿಲ್ ತಂಡದ ಪರ ಡ್ರೈವಿಂಗ್ ಮಾಡಿದ ಕುಶ್, ಮಾಂಟೆ ಕಾರ್ಲೊದ ಐತಿಹಾಸಿಕ ಬೀದಿಗಳಲ್ಲಿ ಸಾಗಿ ಪ್ರಸಕ್ತ ಋತುವಿನಲ್ಲೇ ಮೊದಲ ಬಾರಿಗೆ ಪ್ರಶಸ್ತಿ ಗೆದ್ದರು. ತಮ್ಮ ಚೊಚ್ಚಲ ಎಫ್2 ಗೆಲುವನ್ನು ಸಂಭ್ರಮಿಸಿದರು. ಈ ಗೆಲುವನ್ನು ಭಾರತದಾದ್ಯಂತ ಸಂಭ್ರಮಿಸಲಾಗುತ್ತಿದ್ದು, ಹಲವರು ಶುಭಾಶಯ ಕೋರಿದ್ದಾರೆ.
ಮೊನಾಕೊದ ಐತಿಹಾಸಿಕದ ಸ್ಟ್ರೀಟ್ ಸರ್ಕ್ಯೂಟ್‌ನಲ್ಲಿ ಪೋಡಿಯಂಗೆ ಹತ್ತಿದ ಕುಶ್, ಭಾರತೀಯ ರಾಷ್ಟ್ರಗೀತೆ ಮೊಳಗುವಾಗ ಅದರೊಂದಿಗೆ ತಾವೂ ಹಾಡುತ್ತಾ ರೋಮಾಂಚಕ ಕ್ಷಣವನ್ನು ಸಂಭ್ರಮಿಸಿದರು. ಗೆಲುವಿನ ನಂತರ ಭಾವುಕರಾಗಿ ಮಾತನಾಡಿದ ಮೈನಿ, ಈ ಗೆಲುವನ್ನು "ಕನಸು ನನಸಾದ ಕ್ಷಣ" ಎಂದು ಬಣ್ಣಿಸಿದ್ದಾರೆ. ತಮ್ಮ ತಂಡ ಮತ್ತು ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ. "ನಮಗೆ ನಂಬಿಕೆ ಇತ್ತು. ಅದು ಈಗ ಫಲ ನೀಡಿದೆ" ಎಂದು ಅವರು ವೇದಿಕೆಯ ಮೇಲೆ ಹೇಳಿದ್ದಾರೆ.
ಆನಂದ್ ಮಹೀಂದ್ರಾ ಅಭಿನಂದನೆ
ಕುಶ್ ಮೈನಿಗೆ ಮೊದಲು ಅಭಿನಂದನೆ ಸಲ್ಲಿಸಿದವರಲ್ಲಿ ಭಾರತದ ಉದ್ಯಮಿ ಆನಂದ್ ಮಹೀಂದ್ರಾ ಕೂಡ ಒಬ್ಬರು. ಸಾಮಾಜಿಕ ಮಾಧ್ಯಮದಲ್ಲಿ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ. “ನೀವು ತುಂಬಾ ಎತ್ತರಕ್ಕೆ ನಿಂತಿದ್ದೀರಿ. ದೇಶ ಕೂಡಾ ನಿಮ್ಮೊಂದಿಗೆ ಎತ್ತರಕ್ಕೇರಿದೆ” ಎಂದು ಮಹೀಂದ್ರಾ ಬರೆದಿದ್ದಾರೆ.
ಕುಶ್ ಗೆಲುವನ್ನು ಸಂಸದ ತೇಜಸ್ವಿ ಸೂರ್ಯ ಸಂಭ್ರಮಿಸಿದ್ದು, ಟ್ವೀಟ್ ಮಾಡಿದ್ದಾರೆ. “ಮಾಂಟೆ ಕಾರ್ಲೊದಲ್ಲಿ F2 ರೇಸ್ ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ ನಮ್ಮ ಬೆಂಗಳೂರಿನ ಕುಶ್ ಮೈನಿಗೆ ಅಭಿನಂದನೆಗಳು. ವೇದಿಕೆಯ ಮೇಲೆ ಭಾರತೀಯ ರಾಷ್ಟ್ರಗೀತೆಯನ್ನು ಕೇಳಲು ಹೆಮ್ಮೆಯ ಕ್ಷಣ” ಎಂದು ಬರೆದಿದ್ದಾರೆ.
ಪ್ರಸ್ತುತ ಬಿಡಬ್ಲ್ಯೂಟಿ ಆಲ್ಪೈನ್ ಎಫ್ 1 ತಂಡಕ್ಕೆ ಮೀಸಲು ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಮೈನಿ, ಈ ಗೆಲುವಿನೊಂದಿಗೆ ತಮ್ಮ ಜನಪ್ರಿಯತೆಯನ್ನು ಸಹಜವಾಗಿ ಹೆಚ್ಚಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಪೂರ್ಣ ಸಮಯದ ಫಾರ್ಮುಲಾ 1 ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆ ಕೂಡಾ ಇದೆ.
ವಿಭಾಗ