ಕನ್ನಡ ಸುದ್ದಿ  /  ಕ್ರೀಡೆ  /  Euro Cup 2024: ಕಾಲಿನಿಂದ ಮೂಗಿಗೆ ಒದ್ದ ಎದುರಾಳಿ ಆಟಗಾರ; ಗಂಭೀರ ಗಾಯಗೊಂಡ ಕೈಯಲಿನ್ ಎಂಬಾಪ್ಪೆ

Euro Cup 2024: ಕಾಲಿನಿಂದ ಮೂಗಿಗೆ ಒದ್ದ ಎದುರಾಳಿ ಆಟಗಾರ; ಗಂಭೀರ ಗಾಯಗೊಂಡ ಕೈಯಲಿನ್ ಎಂಬಾಪ್ಪೆ

Kylian Mbappe Injury Update : ಆಸ್ಟ್ರೀಯಾ ವಿರುದ್ಧದ ಪಂದ್ಯದಲ್ಲಿ ಫ್ರಾನ್ಸ್ ತಂಡದ ಸ್ಟಾರ್ ಆಟಗಾರ ಕೈಲಿಯನ್ ಎಂಬಾಪ್ಪೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

Euro Cup 2024: ಕಾಲಿನಿಂದ ಮೂಗಿಗೆ ಒದ್ದ ಎದುರಾಳಿ ಆಟಗಾರ; ಗಂಭೀರ ಗಾಯಗೊಂಡ ಕೈಯಲಿನ್ ಎಂಬಾಪ್ಪೆ
Euro Cup 2024: ಕಾಲಿನಿಂದ ಮೂಗಿಗೆ ಒದ್ದ ಎದುರಾಳಿ ಆಟಗಾರ; ಗಂಭೀರ ಗಾಯಗೊಂಡ ಕೈಯಲಿನ್ ಎಂಬಾಪ್ಪೆ

ಯುರೋ ಕಪ್​ ಫುಟ್ಬಾಲ್ (Euro 2024)​ ಟೂರ್ನಿಯಲ್ಲಿ ಫ್ರಾನ್ಸ್ ಮೊದಲ ಗೆಲುವು ದಾಖಲಿಸಿದೆ. ಡಸೆಲ್ಡಾರ್ಫ್ ಅರೆನಾದಲ್ಲಿ ಜೂನ್ 18ರ ಮಂಗಳವಾರ ಜರುಗಿದ ಡಿ ಗುಂಪಿನ ಪಂದ್ಯದಲ್ಲಿ ಆಸ್ಟ್ರೀಯಾ ವಿರುದ್ಧ 1-0 ಗೋಲುಗಳ ಅಂತರದಿಂದ ಗೆದ್ದು ಬೀಗಿದೆ. ಆದರೆ, ಗೆಲುವಿನ ಶುಭಾರಂಭ ಕಂಡಿರುವ ಫ್ರಾನ್ಸ್ ಇದೀಗ ಆಘಾತಕ್ಕೆ ಒಳಗಾಗಿದೆ. ಈ ಪಂದ್ಯದಲ್ಲಿ ತಂಡದ ಸ್ಟಾರ್ ಆಟಗಾರ ಕೈಯಲಿನ್ ಎಂಬಾಪೆ ಅವರು ಗಂಭೀರ ಗಾಯಗೊಂಡಿದ್ದಾರೆ. ಹೀಗಾಗಿ, ಮುಂದಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿಯುವುದು ಅನುಮಾನ ಎಂದು ಹೇಳಲಾಗಿದೆ.

ಆಸ್ಟ್ರೀಯಾ ಎದುರಿನ ಈ ಪಂದ್ಯದಲ್ಲಿ ಎಂಬಾಪೆ ಅವರಿಗೆ ಎರಡು ಗೋಲು ಬಾರಿಸುವ ಅವಕಾಶ ಇದ್ದರೂ ಅವರು ಯಶಸ್ಸು ಪಡೆಯಲು ಸಾಧ್ಯವಾಗಿಲ್ಲ. ಆದರೆ, ಪಂದ್ಯದ 86ನೇ ನಿಮಿಷದಲ್ಲಿ ಎದುರಾಳಿ ತಂಡದ ಕೆವಿನ್ ಡಾನ್ಸೊ ಚೆಂಡನ್ನು ಕಿಕ್ ಮಾಡಲು ಯತ್ನಿಸಿದ ಅವಧಿಯಲ್ಲಿ ಕಾಲು ಮೂಗಿಗೆ ಬಡಿದ ಪರಿಣಾಮ ಎಂಬಾಪೆ ತೀವ್ರವಾಗಿ ಗಾಯಗೊಂಡರು. ಈ ವೇಳೆ ಅವರ ಮೂಗಿನಿಂದ ರಕ್ತಸ್ರಾವವಾಗಿದೆ. ತಕ್ಷಣವೇ ವೈದ್ಯರು ಎಂಬಾಪೆ ಅವರನ್ನು ಆಸ್ಪ್ರತೆಗೆ ಸಾಗಿಸಿದರು. ಆದರೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಸುದ್ದಿಯಾಗಿದೆ.

ಸತತ 15 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್

ಜೂನ್ 17ರ ಸೋಮವಾರ ರಾತ್ರಿ ಜರುಗಿದ ಯುರೋ ಕಪ್​ ಅಚ್ಚರಿ ಫಲಿತಾಂಶವೊಂದಕ್ಕೆ ಸಾಕ್ಷಿಯಾಯಿತು. ಸ್ಲೊವಾಕಿಯಾ ಎದುರಿನ ಪಂದ್ಯದಲ್ಲಿ ಪ್ರಮುಖ ಆಟಗಾರ ರೊಮೆಲೂ ಲುಕಾಕೊ 2 ಗೋಲು ಸಿಡಿಸಿದರೂ ಅಮಾನ್ಯಗೊಂಡ ಕಾರಣ ಬೆಲ್ಜಿಯಂ ತಂಡ 1-0 ಅಂತರದಿಂದ ಸೋಲನುಭವಿಸಿತು. ಈ ಘೋರ ಪರಾಭವದಿಂದ ಬೆಲ್ಜಿಯಂ ತಂಡದ ಸತತ 15 ಪಂದ್ಯಗಳ ಗೆಲುವಿನ ಓಟಕ್ಕೆ ತಡೆ ಬಿದ್ದಿತು.

ಟ್ರೆಂಡಿಂಗ್​ ಸುದ್ದಿ

ಪಂದ್ಯ ಆರಂಭದ 7ನೇ ನಿಮಿಷದಲ್ಲಿ ಸ್ಲೋವಾಕಿಯಾ ತಂಡದ ಇವಾನ್ ಸ್ಕ್ರಾನ್ಜ್​ ಗೋಲುಗಳನ್ನು ದಾಖಲಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಆದರೆ, ಲುಕಾಕು 55 ಹಾಗೂ 86ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಆದರೆ ವಿಎಆರ್​ ಪರಿಶೀಲನೆಯ ನಂತರ ಈ ಎರಡು ಗೋಲುಗಳನ್ನು ಅಮಾನ್ಯ ಮಾಡಲಾಯಿತು. ರೆಫರಿ ಆಫ್ ಸೈಡ್ ಎಂದು ನಿರ್ಧಾರ ಕೈಗೊಂಡು ಗೋಲುಗಳನ್ನು ನಿರಾಕರಿಸಿದರು.

24 ವರ್ಷಗಳ ನಂತರ ರೊಮೇನಿಯಾ ಗೆಲುವು

ಮತ್ತೊಂದು ಪಂದ್ಯದಲ್ಲಿ ಉಕ್ರೇನ್​ ವಿರುದ್ಧ ರೊಮೇನಿಯಾ ತಂಡ 3-0 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಯುರೋ ಕಪ್​​ನಲ್ಲಿ ರೊಮೇನಿಯಾ ಸಾಧಿಸಿದ 2ನೇ ಗೆಲುವು ಇದು. ಪಂದ್ಯದ 29ನೇ ನಿಮಿಷದಲ್ಲಿ ನಾಯಕ ನಿಕೋಲೆ ಸ್ಟಾನ್ಸಿ ಗೋಲು ಸಿಡಿಸಿ ಮುನ್ನಡೆ ಸಾಧಿಸಿತು. ಎರಡನೇ ಹಂತದಲ್ಲಿ ರಜ್ವಾನ್​ ಮರಿನ್ ​(53) ಹಾಗೂ ಡೆನಿಸ್​ ಮಿಹೈ ಡ್ರಾಗಸ್ ​(57) ಗೋಲು ಸಿಡಿಸಿ ಬಾರಿಸಿದರು.

ಆದರೆ, ಉಕ್ರೇನ್ ಒಂದು ಗೋಲು ಬಾರಿಸಲು ಸಾಧ್ಯವಾಗಲಿಲ್ಲ. 24 ವರ್ಷದ ಹಿಂದೆ ಇಂಗ್ಲೆಂಡ್​ ವಿರುದ್ಧ 3-2 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ನಂತರ ಯುರೊ ಕಪ್​ನಲ್ಲಿ ರೊಮೇನಿಯಾಗೆ ಒಲಿದ ಮೊದಲ ಜಯ ಇದಾಗಿದೆ. ಒಟ್ಟಾರೆ 2 ಗೆಲುವನ್ನಷ್ಟೇ ಕಂಡಿದೆ.

ಕ್ರಿಕೆಟ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.