FIFA World Cup 2022: ಬಲಿಷ್ಠ ತಂಡಗಳ ಮಾಡು ಇಲ್ಲವೇ ಮಡಿ ಪಂದ್ಯ; ಟೂರ್ನಿಯಲ್ಲಿ ಜೀವಂತವಾಗಿ ಉಳಿಯುತ್ತಾ ಜರ್ಮನಿ?
ಈ ನಡುವೆ 2014ರ ವಿಶ್ವಚಾಂಪಿಯನ್ ಜರ್ಮನಿ ತಂಡವು, ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಸೆಣಸಲಿದೆ. ಒಂದು ವೇಳೆ ಈ ಪಂದ್ಯವನ್ನು ಜರ್ಮನಿ ಸೋತರೆ, ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಈ ಅನುಕೂಲವನ್ನು ಜಪಾನ್ ಸೇರಿದಂತೆ ಇತರ ತಂಡಗಳು ಪಡೆದುಕೊಳ್ಳಲಿವೆ.
ಕತಾರ್: ಫಿಫಾ ವಿಶ್ವಕಪ್ 2022ರ ಮೊದಲ ಪಂದ್ಯದಲ್ಲಿ ಜಪಾನ್ ತಂಡ ಜರ್ಮನಿಯನ್ನು ಬೆರಗುಗೊಳಿಸಿತು. ಏಷ್ಯಾದ ಬಲಿಷ್ಠ ತಂಡ ಈಗ ತಮ್ಮ ಎರಡನೇ ಪಂದ್ಯದಲ್ಲಿ ಕೋಸ್ಟರಿಕಾವನ್ನು ಎದುರಿಸಲು ಸಜ್ಜಾಗಿದೆ. ಕೋಸ್ಟರಿಕಾ ವಿರುದ್ಧ ಜಪಾನಿಯರು ಗೆಲುವು ಸಾಧಿಸಿದರೆ, ಮುಂದಿನ 16ರ ಸುತ್ತಿಗೆ ಒಂದು ಹೆಜ್ಜೆ ಇಟ್ಟಂತಾಗುತ್ತದೆ.
ಈ ನಡುವೆ 2014ರ ವಿಶ್ವಚಾಂಪಿಯನ್ ಜರ್ಮನಿ ತಂಡವು, ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಸೆಣಸಲಿದೆ. ಒಂದು ವೇಳೆ ಈ ಪಂದ್ಯವನ್ನು ಜರ್ಮನಿ ಸೋತರೆ, ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಈ ಅನುಕೂಲವನ್ನು ಜಪಾನ್ ಸೇರಿದಂತೆ ಇತರ ತಂಡಗಳು ಪಡೆದುಕೊಳ್ಳಲಿವೆ.
ಮತ್ತೊಂದೆಡೆ ಎಫ್ ಗುಂಪಿನಲ್ಲಿ ಎರಡು ಪಂದ್ಯಗಳು ಇಂದು ನಡೆಯಲಿವೆ. ಇದು ನಾಕೌಟ್ ಹಂತಕ್ಕೆ ಅರ್ಹತೆಯ ವಿಷಯದಲ್ಲಿ ಪ್ರಮುಖ ಪಂದ್ಯ. ಈಗಾಗಲೇ ನಡೆದ ಕ್ರೊಯೇಷಿಯಾ ಮತ್ತು ಮೊರಾಕೊ ಪಂದ್ಯವು ಡ್ರಾದಲ್ಲಿ ಅಂತ್ಯವಾದರೆ, ಈ ಗುಂಪಿನಿಂದ ಗೆಲುವು ಸಾಧಿಸಿದ ಏಕೈಕ ತಂಡ ಬೆಲ್ಜಿಯಂ. ಹೀಗಾಗಿ ಇಂದು ನಡೆಯಲಿರುವ ಪಂದ್ಯದಲ್ಲಿ ಬೆಲ್ಜಿಯಂ ಮೊರಾಕೊವನ್ನು ಸೋಲಿಸಿದರೆ, ನೇರವಾಗಿ 16ರ ಸುತ್ತಿಗೆ ಪ್ರವೇಶಿಸುತ್ತದೆ. ಅತ್ತ ಪಂದ್ಯಾವಳಿಯಲ್ಲಿ ಜೀವಂತವಾಗಿರಲು ಕೆನಡಾ ತಂಡವು ಕ್ರೊಯೇಷಿಯಾ ವಿರುದ್ಧ ಸೆಣಸಲಿದೆ.
ಇಂದಿನ ಪಂದ್ಯಗಳು ಯಾವುವು?
ಜಪಾನ್ vs ಕೋಸ್ಟರಿಕಾ
ಬೆಲ್ಜಿಯಂ vs ಮೊರಾಕೊ
ಕ್ರೊಯೇಷಿಯಾ vs ಕೆನಡಾ
ಸ್ಪೇನ್ vs ಜರ್ಮನಿ
ಪಂದ್ಯದ ಸಮಯ
ಮೊದಲ ಮೂರು ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ನಡೆಯಲಿವೆ. ಆದರೆ ಸ್ಪೇನ್ ಮತ್ತು ಜರ್ಮನಿ ನಡುವಣ ಪಂದ್ಯ ಇಂದು ತಡರಾತ್ರಿ ನಡೆಯಲಿದೆ. ಅಂದರೆ ಭಾರತದಲ್ಲಿ ಇದು ಸೋಮವಾರ.
ಜಪಾನ್ ಮತ್ತು ಕೋಸ್ಟರಿಕಾ ಪಂದ್ಯ ಭಾರತದಲ್ಲಿ ಮಧ್ಯಾಹ್ನ 3.30 ಕ್ಕೆ ಆರಂಭವಾಗುತ್ತದೆ. ಬೆಲ್ಜಿಯಂ ಮತ್ತು ಮೊರಾಕೊ ನಡುವಿನ ಪಂದ್ಯವು ಸಂಜೆ 6.30ಕ್ಕೆ ನಡೆಯಲಿದೆ. ಕ್ರೊಯೇಷಿಯಾ ಮತ್ತು ಕೆನಡಾ ನಡುವಿನ ಪಂದ್ಯವು ರಾತ್ರಿ 9.30 ಕ್ಕೆ ಆರಂಭವಾಗಲಿದೆ. ಸ್ಪೇನ್ ವಿರುದ್ಧ ಜರ್ಮನಿ ನಡುವಿನ ಪಂದ್ಯವು ತಡರಾತ್ರಿ (ಸೋಮವಾರ) 12.30ಕ್ಕೆ ಪ್ರಸಾರವಾಗಲಿದೆ.
ಕ್ರೀಡಾಂಗಣಗಳು ಯಾವುವು?
ಜಪಾನ್ ಮತ್ತು ಕೋಸ್ಟರಿಕಾ ನಡುವಿನ ಪಂದ್ಯವು ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಲ್ಜಿಯಂ ಮತ್ತು ಮೊರಾಕೊ ಪಂದ್ಯ ಅಲ್ ಥುಮಾಮಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರೊಯೇಷಿಯಾ ಹಾಗೂ ಕೆನಡಾ ನಡುವಿನ ಪಂದ್ಯ ಖಲೀಫಾ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದರೆ, ಸ್ಪೇನ್ ಮತ್ತು ಜರ್ಮನಿ ನಡುವಿನ ಪಂದ್ಯವು ಅಲ್ ಬೇಟ್ ಕ್ರೀಡಾಂಗಣದಲ್ಲಿ ನಡೆಯಲಿವೆ.
ಇಂದಿನ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ವಿವರ
ಇಂದಿನ ಎಲ್ಲಾ ನಾಲ್ಕು ಪಂದ್ಯಗಳು Sports18 ಮತ್ತು Sports18 HD ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ ಈ ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.
ನಿನ್ನೆಯ ಪಂದ್ಯದ ಫಲಿತಾಂಶ
ನಿನ್ನೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನ ಶುಭಾರಂಭ ಮಾಡಿದೆ. ತುನಿಷಿಯಾ ವಿರುದ್ಧದ ಪಂದ್ಯದಲ್ಲಿ 1-0 ಅಂತರದಿಂದ ಜಯಗಳಿಸಿದೆ. ಮತ್ತೊಂದು ಪಂದ್ಯದಲ್ಲಿ ಸೌದಿ ಅರೇಬಿಯಾವು ಪೋಲೆಂಡ್ ವಿರುದ್ಧ 2-0 ಗೋಲುಗಳಿಂದ ಸೋತಿದೆ. ಮೂರನೇ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು ಸೋಲಿಸಿ, ಫ್ರಾನ್ಸ್ 16ರ ಸುತ್ತಿಗೆ ಎಂಟ್ರಿ ಕೊಟ್ಟಿದೆ. ಮೊದಲ ಪಂದ್ಯದಲ್ಲಿ ಸೌದಿ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದ ಅರ್ಜೆಂಟೀನಾ ತಂಡವು ಮೆಕ್ಸಿಕೋ ವಿರುದ್ಧ 2-0 ಗೋಲುಗಳಿಂದ ಗೆದ್ದು ಪ್ರಾಬಲ್ಯ ಮೆರೆಯಿತು.