ಅಸ್ಸಾಂನ ಬೀದಿಗಳಿಂದ ಒಲಿಂಪಿಕ್ಸ್ವರೆಗೆ; ಪ್ಯಾರಿಸ್‌ನಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟ ರೈತನ ಮಗಳು
Lovlina Borgohain story: ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದ ಬಣ್ಣ ಬದಲಾಯಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬಾಕ್ಸಿಂಗ್ ಪ್ರಯಾಣವನ್ನು ಒಮ್ಮೆ ತಿಳಿಯೋಣ.

ಕ್ರೀಡೆಯ ಕುಂಭಮೇಳ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ವೈಭವದ ಚಾಲನೆ ಸಿಕ್ಕಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಅಭಿಮಾನಿಗಳು ಒಲಿಂಪಿಕ್ಸ್ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಇವತ್ತಿನಿಂದ (ಜುಲೈ 27) ಪದಕ ಬೇಟೆಗೆ 117 ಕ್ರೀಡಾಪಟುಗಳ ಭಾರತ ತಂಡ ಸಜ್ಜಾಗಿದ್ದು, ಈ ಪೈಕಿ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರೂ ಒಬ್ಬರು. ಟೊಕಿಯೊ ಒಲಿಂಪಿಕ್ಸ್ನಲ್ಲಿವ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದ ಲೇಡಿ ಬಾಕ್ಸರ್ ಈ ಬಾರಿ ಪದಕದ ಬಣ್ಣ ಬದಲಾಯಿಸಲು ಸಜ್ಜಾಗಿದ್ದಾರೆ. ಕೋಟ್ಯಂತರ ದೇಶವಾಸಿಗಳು ಆಕೆಯ ಮೇಲೆ ಹಲವು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಬಾಕ್ಸರ್ ಆದ ರೈತನ ಮಗಳು
ಭಾರತದ ಸ್ಟಾರ್ ಬಾಕ್ಸರ್ ಲೊವ್ಲಿನಾ ಅಸ್ಸಾಂ ಮೂಲದವರು. 1997ರ ಅಕ್ಟೋಬರ್ 2ರಂದು ಗೋಲಘಾಟ್ ಜಿಲ್ಲೆಯ ದೂರದ ಕುಗ್ರಾಮ ಬಾರೋಮುಖಿಯಲ್ಲಿ ಜನಿಸಿದರು. ಮೇರಿ ಕೋಮ್ ಅವರ ಹಾದಿಯಲ್ಲಿ ಸಾಗಿದ ಬೊರ್ಗೊಹೈನ್ ಭಾರತೀಯ ಬಾಕ್ಸಿಂಗ್‌ನಲ್ಲಿ ಮಹಿಳೆಯರ ಪರಂಪರೆಯನ್ನು ಮುನ್ನಡೆಸಿದರು. ಬಡ ಕುಟುಂಬದಿಂದ ಬಂದ ಆಕೆ ತಂದೆ ವ್ಯವಸಾಯ ಮಾಡುತ್ತಾರೆ. ಕೃಷಿಯೇ ಅವರ ಜೀವನ. ಲವ್ಲಿನಾಗೆ ಇಬ್ಬರು ಹಿರಿಯ ಸಹೋದರಿಯರೂ ಇದ್ದಾರೆ. ಅವರ ಹೆಸರು ಲಿಚಾ ಮತ್ತು ಲಿಮಾ.
ತನ್ನ ಆರಂಭಿಕ ದಿನಗಳಲ್ಲಿ ಬಡತನ ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸಿದ ಲವ್ಲಿನಾ, ಹಿರಿಯ ಸಹೋದರಿಯರಿಂದ ಸ್ಫೂರ್ತಿ ಪಡೆದು ಹದಿಹರೆಯದ ವಯಸ್ಸಿನಲ್ಲೇ ಬಾಕ್ಸಿಂಗ್ ಕಡೆ ಒಲವು ತೋರಿದರು. ಮೌಯಿ ಥಾಯ್ (ಕಿಕ್ ಬಾಕ್ಸಿಂಗ್‌ನ ಒಂದು ರೂಪ) ನೊಂದಿಗೆ ತಮ್ಮ ಕ್ರೀಡಾ ವೃತ್ತಿಜೀವನ ಪ್ರಾರಂಭಿಸಿದರು. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಟ್ರಯಲ್ಸ್ ಸಮಯದಲ್ಲಿ ಭಾರತೀಯ ಬಾಕ್ಸಿಂಗ್ ಕೋಚ್ ಪಡುಮ್ ಬೊರೊ ಅವರು ಲವ್ಲಿನಾ ಪ್ರತಿಭೆ ಗುರುತಿಸಿ ಬಾಕ್ಸಿಂಗ್ ಆರಂಭಿಸುವಂತೆ ಸಲಹೆ ನೀಡಿದರು.
ಆ ಬಳಿಕ ಕೋಚ್ ಸಲಹೆ ಮೇರೆಗೆ ಬಾಕ್ಸಿಂಗ್ ಆರಂಭಿಸಿದ ಲವ್ಲಿನಾ ಅದರಲ್ಲಿ ತಮ್ಮ ಛಾಪು ಮೂಡಿಸಿದರು. ಲವ್ಲಿನಾ ಅವರು 2012ರಲ್ಲಿ ಗುವಾಹಟಿಯ ನೇತಾಜಿ ಸುಭಾಸ್ ಪ್ರಾದೇಶಿಕ ಕೇಂದ್ರದಲ್ಲಿ 14ನೇ ವಯಸ್ಸಿನಲ್ಲಿ ತಮ್ಮ ಬಾಕ್ಸಿಂಗ್ ತರಬೇತಿಯನ್ನು ಪ್ರಾರಂಭಿಸಿದರು. 2012ರಲ್ಲಿ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ಮತ್ತು 2013ರ ನೇಷನ್ಸ್ ಸೆರ್ಬಿಯಾ ಮಹಿಳಾ ಜೂನಿಯರ್ ಕಪ್‌ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಕೋಚ್ ಬೊರೊ ಅವರ ನಂಬಿಕೆ ಉಳಿಸಿಕೊಂಡಿದ್ದರು.
ಲವ್ಲಿನಾ ಅವರ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಪದಕವು 2017ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ರೂಪದಲ್ಲಿ ಬಂದಿತು. ಇದು ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 2018ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾಗುವಂತೆ ಮಾಡಿತು. ಅವರು ಗೋಲ್ಡ್ ಕೋಸ್ಟ್‌ನಲ್ಲಿ ಕ್ವಾರ್ಟರ್-ಫೈನನಿಂದ ಹೊರಬಿದ್ದರು. ಆದರೆ ನವದೆಹಲಿಯಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವೆಲ್ಟರ್‌ವೇಟ್ ವಿಭಾಗದಲ್ಲಿ ಕಂಚಿನ ಪದಕದೊಂದಿಗೆ ಆ ವರ್ಷವನ್ನು ಕೊನೆಗೊಳಿಸಿದರು.
ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ ಲೊವ್ಲಿನಾ
ಮೇರಿ ಕೋಮ್ ಮತ್ತು ವಿಜೇಂದರ್ ಸಿಂಗ್ ಪರಂಪರೆ ಮುಂದುವರೆಸಿದ ಲವ್ಲಿನಾ ಬೊರ್ಗೊಹೈನ್, ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ವೆಲ್ಟರ್‌ವೇಟ್ ವಿಭಾಗದಲ್ಲಿ (69 ಕೆಜಿ) ಕಂಚಿನ ಪದಕ ಗೆದ್ದರು. ಈ ಮೂಲಕ ಒಲಿಂಪಿಕ್ ಪದಕ ಗೆದ್ದ ಮೂರನೇ ಭಾರತೀಯ ಬಾಕ್ಸರ್ ಎನಿಸಿದರು. ನಂತರ, 2023ರಲ್ಲಿ, ಲೊವ್ಲಿನಾ ಮಹಿಳೆಯರ ಮಿಡಲ್ ವೇಟ್ (75 ಕೆಜಿ) ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗುವ ಮೂಲಕ ದೇಶಕ್ಕೆ ಕೀರ್ತಿ ತಂದರು.
ಲವ್ಲಿನಾ ಇಲ್ಲಿಯವರೆಗೆ ಗೆದ್ದ ಪದಕಗಳು
ಟೊಕಿಯೋ ಒಲಿಂಪಿಕ್ಸ್ - ಕಂಚಿನ ಪದಕ (2021)
ವಿಶ್ವ ಚಾಂಪಿಯನ್‌ಶಿಪ್‌ಗಳು - ಚಿನ್ನದ ಪದಕ (2023), ಕಂಚಿನ ಪದಕ (2018, 2019)
ಏಷ್ಯನ್ ಚಾಂಪಿಯನ್‌ಶಿಪ್‌ಗಳು - ಚಿನ್ನದ ಪದಕ (2022), ಕಂಚಿನ ಪದಕ (2017, 2021)
ಏಷ್ಯನ್ ಗೇಮ್ಸ್ - ಬೆಳ್ಳಿ ಪದಕ (2023)
ಕಳೆದ ವರ್ಷದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ
ಕಳೆದ ವರ್ಷ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಲವ್ಲಿನಾ ಬೊರ್ಗೊಹೈನ್ ಮೊದಲ ಚಿನ್ನದ ಪದಕ ಗೆದ್ದಿದ್ದರು. ಅವರು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ಅವರನ್ನು 5-2 ರಿಂದ ಸೋಲಿಸುವ ಮೂಲಕ ತಮ್ಮ ಮೊದಲ ಚಿನ್ನದ ಪದಕಕ್ಕೆ ಕೊರೊರೊಳೊಡ್ಡಿದ್ದರು. 75 ಕೆಜಿ ವಿಭಾಗದಲ್ಲಿ ದೇಶಕ್ಕೆ ಸ್ವರ್ಣ ತಂದುಕೊಟ್ಟರು. ಒಲಿಂಪಿಕ್ಸ್‌ನಲ್ಲಿ ಪದಕ, ವಿಶ್ವ ಚಾಂಪಿಯನ್ನಲ್ಲಿ ಚಿನ್ನ, 2 ಕಂಚು, ಏಷ್ಯನ್ ಚಾಂಪಿಯನ್ನಲ್ಲಿ ಚಿನ್ನ, 2 ಕಂಚು, ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಗೆದ್ದಿರುವ ಲವ್ಲಿನಾ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದು, ಒಲಿಂಪಿಕ್ಸ್ ಇತಿಹಾಸದಲ್ಲಿ ಚೊಚ್ಚಲ ಚಿನ್ನ ಗೆಲ್ಲುವ ಕನಸನ್ನು ಹೊಂದಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಅವರು ಬಾಕ್ಸಿಂಗ್‌ನಲ್ಲಿ ನೀಡಿರುವ ಶ್ರೇಷ್ಠ ಸಾಧನೆಗಾಗಿ ಅರ್ಜುನ ಪ್ರಶಸ್ತಿ ಪಡೆದರು. ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಗೌರವಕ್ಕೂ 2021ರಲ್ಲಿ ಪಾತ್ರರಾದರು. ಅದೇ ವರ್ಷದಲ್ಲಿ ಅಸ್ಸಾಂ ಸರ್ಕಾರದಿಂದ ಅಸ್ಸಾಂನ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಅಸ್ಸಾಂ ಸೌರವ್ ಗೌರವಕ್ಕೂ ಲವ್ಲಿನಾ ಪಾತ್ರರಾಗಿದ್ದಾರೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ಯಾರಿಸ್ ಒಲಿಂಪಿಕ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
