ಕನ್ನಡ ಸುದ್ದಿ  /  ಕ್ರೀಡೆ  /  ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

Vinesh Phogat : ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ 50 ಕೆಜಿ ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿರುವ ಕುಸ್ತಿಪಟು ವಿನೇಶಾ ಫೋಗಟ್ ಅವರು ತೂಕ ಕಾಯ್ದುಕೊಳ್ಳುವುದೇ ದೊಡ್ಡ ಸವಾಲು ಎಂದು ಹೇಳಿದ್ದಾರೆ.

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್
ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಒಲಿಂಪಿಕ್ಸ್​ನಲ್ಲಿ ಸ್ಥಾನ ಪಡೆದುಕೊಂಡು ನಿರಾಳವಾಗಿರುವ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat), ಪ್ಯಾರಿಸ್ ಕ್ರೀಡಾಕೂಟದ (Paris Olympics 2024) ತಯಾರಿಗಾಗಿ ತೂಕವನ್ನು ಇಳಿಸಿಕೊಂಡಿದ್ದಾರೆ. ಒಲಿಂಪಿಕ್ಸ್​ನಲ್ಲಿ 50 ಕೆಜಿಯ ಕಡಿಮೆ ವಿಭಾಗದಲ್ಲಿ ಸ್ಪರ್ಧಿಸಲಿರುವ ವಿನೇಶ್, ಸತತ 3ನೇ ಬಾರಿಗೆ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ಪದಕ ಗೆಲ್ಲುವ ನಿರೀಕ್ಷೆ ಹುಟ್ಟು ಹಾಕಿರುವ ವಿನೇಶ್, ತಮ್ಮ ತೂಕ ಕಾಯ್ದುಕೊಳ್ಳುವುದೇ ದೊಡ್ಡ ಸವಾಲು ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಏಷ್ಯನ್ ಒಲಿಂಪಿಕ್ಸ್​ ಕ್ವಾಲಿಫೈಯರ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿ ಯಾವುದೇ ಅಂಕ ಕಳೆದುಕೊಳ್ಳದ ವಿನೇಶ್ ಅವರು, ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥರಾಗಿದ್ದ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸುಮಾರು ಒಂದೂವರೆ ವರ್ಷಗಳ ಕಾಲ ನಿಯಮಿತ ಅಭ್ಯಾಸಗಳಿಂದ ದೂರವಿದ್ದರು. ದೆಹಲಿಯ ಜಂತರ್​​ ಮಂತರ್​​ನಲ್ಲಿ ಸುದೀರ್ಘ ಪ್ರತಿಭಟನೆ ನಡೆಸಿದ್ದರು. ಬ್ರಿಜ್​ಭೂಷಣ್ ಅವರು ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದಾರೆ.

53 ಕೆಜಿ ವಿಭಾಗದಲ್ಲಿ ಸವಾಲು ಎದುರಿಸುತ್ತಿದ್ದ ದೇಶದ ಅತ್ಯಂತ ಯಶಸ್ವಿ ಮಹಿಳಾ ಕುಸ್ತಿಪಟುವಿಗೆ ಒಲಿಂಪಿಕ್ಸ್​ಗೆ ಸ್ಥಾನ ಪಡೆಯಲು ತೂಕದ ವಿಭಾಗ ಬದಲಾಯಿಸಿಕೊಳ್ಳಲು ನಿರ್ಧರಿಸಿದರು. 50 ಕೆಜಿ ವಿಭಾಗದಲ್ಲಿ ಕೋಟಾವನ್ನು ಪಡೆದುಕೊಂಡ ನಂತರ ವಿನೇಶ್, 'ನಾನು ನನ್ನ ತೂಕವನ್ನು ಉತ್ತಮವಾಗಿ ನಿರ್ವಹಿಸಬೇಕಾಗಿದೆ. ಸದ್ಯ ತೂಕ ಇಳಿಸಿಕೊಂಡಿದ್ದು, ಆದಷ್ಟು ಕಾಯ್ದುಕೊಳ್ಳಲು ಪ್ರಯತ್ನಿಸುತ್ತೇನೆ. ಆದರೆ ಹೇಳಿದಷ್ಟು ಸುಲಭವಲ್ಲ ಎಂದು ಹೇಳಿಕೆ ನೀಡಿದ್ದಾರೆ. 

ತೂಕ ಕಾಯ್ದುಕೊಳ್ಳುವುದೇ ದೊಡ್ಡ ಸವಾಲು ಎಂದ ಕುಸ್ತಿಪಟು

ಯುಡಬ್ಲ್ಯುಡಬ್ಲ್ಯು ವೆಬ್​ಸೈಟ್​ನೊಂದಿಗೆ ಮಾತನಾಡಿದ 29 ವರ್ಷದ ಕುಸ್ತಿಪಟು, ನನ್ನ ಸ್ನಾಯುಗಳು ಬಲವಾಗಿವೆ. ಇದರಿಂದಾಗಿ ಬೇಗನೆ ತೂಕ ಹೆಚ್ಚಾಗುತ್ತದೆ. ನಾನು ಎಷ್ಟು ಫಿಟ್ ಆಗಿದ್ದೇನೆ ಎಂಬುದು ಮುಖ್ಯವಲ್ಲ. ಸ್ನಾಯುಗಳು ಬಲವಾದ ಕಾರಣ ತೂಕ ಪಡೆಯುತ್ತೇನೆ. ಪ್ರತಿ ದಿನವೂ ನನಗೆ ಮುಖ್ಯವಾಗಿದೆ. ಸಾಕಷ್ಟು ಸವಾಲು ಎದುರಿಸಬೇಕು. ನಾನು ನನ್ನ ತೂಕವನ್ನು ನಿಯಂತ್ರಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ನನಗೆ ಆಯ್ಕೆ ಇಲ್ಲದ ಕಾರಣ ನಾನು ತೂಕವನ್ನು ಬದಲಾಯಿಸಿದೆ. ನಾನು 50 ಕೆಜಿ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಹೋಗುವುದು ನನಗೆ ಖುಷಿ ತಂದಿದೆ. ನಾನು 50 ಕೆಜಿ ವಿಭಾಗದಲ್ಲಿ ಹೋಗಬೇಕೇ ಅಥವಾ 53 ಕೆಜಿ ವಿಭಾಗದಲ್ಲಿ ಆಡುತ್ತೇನೆಯೇ ಇಲ್ಲವೇ ಎಂಬುದು ಟ್ರಯಲ್ಸ್‌ನಲ್ಲಿ ನಿರ್ಧರವಾಗುತ್ತದೆ. ಆದರೆ ಏನೇ ಆಗಲಿ, ನಾನು ನನ್ನ ದೇಶಕ್ಕೆ ಕೋಟಾ ಪಡೆದಿದ್ದೇನೆ ಎಂದು ಹೇಳಿದ್ದಾರೆ. ವಿನೇಶ್ ಈ ಹಿಂದೆ ರಿಯೊ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಿರಾಸೆ ಎದುರಿಸಿದ್ದರು.

ದೇಶಕ್ಕಾಗಿ ಒಲಿಂಪಿಕ್ಸ್ ಗೆಲ್ಲಬೇಕು ಎಂದು ವಿನೇಶ್

ಆದರೀಗ ಒಲಿಂಪಿಕ್ ಪದಕದ ಕನಸನ್ನು ನನಸಾಗಿಸಲು ಸಾಕಷ್ಟು ಶ್ರಮ ಹಾಕುತ್ತಿರುವ ಅವರು, ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ನಾನು ಕುಸ್ತಿಯಲ್ಲಿ ತೊಡಗಿ 20 ವರ್ಷಗಳಾಗಿವೆ. ನನಗೆ ಒಲಿಂಪಿಕ್ ಪದಕ ಬೇಕು. ದೇಶಕ್ಕಾಗಿ ಪದಕ ಜಯಿಸಬೇಕು. ಅದಕ್ಕಾಗಿ ಏನು ಬೇಕಾದರೂ ಮಾಡಲು ನಾನು ಸಿದ್ಧ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೋವಿಡ್-19ನಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮತ್ತು ಡಬ್ಲ್ಯುಎಫ್ಐ ಮುಖ್ಯಸ್ಥರ ವಿರುದ್ಧ ಪ್ರತಿಭಟನೆ ನಡೆಸಿದ್ದರ ಕುರಿತು ಮಾತನಾಡಿದ ವಿನೇಶ್, ಇದೆಲ್ಲದರಿಂದ ಮಾನಸಿಕ ಒತ್ತಡ ಹೆಚ್ಚಾಗಿತ್ತು. ಇದು ಕಠಿಣವಾಗಿತ್ತು. ಆದರೆ ಇದೆಲ್ಲ ಗೆದ್ದಾಗ ಸಾರ್ಥಕವಾಯಿತು ಎಂದು ಹೇಳಿದ್ದಾರೆ. ಮುಂದೆ ನಾನು ಶಾಂತಿಯಿಂದ ಬದುಕಬಲ್ಲೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನನ್ನ ಮುಖ್ಯ ಗುರಿ. ಕಳೆದ ಎರಡು ಒಲಿಂಪಿಕ್ಸ್‌ಗಳಲ್ಲಿ ಮಾಡಲು ಸಾಧ್ಯವಾಗದ್ದನ್ನು ಮಾಡಲು ಪ್ರಯತ್ನಿಸುತ್ತೇನೆ. ಈ ಒಲಿಂಪಿಕ್ಸ್‌ನಲ್ಲಿ ನಾನು ಉತ್ತಮ ಪ್ರದರ್ಶನ ನೀಡಬಲ್ಲೆ ಎಂದಿದ್ದಾರೆ.