ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್-malaysia football player faisal halim suffers acid attack causes 2nd degree burn neck shoulder accused arrest jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

Faisal Halim: ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ ನಡೆದ ಬಳಿಕ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ದೇಹದ ಮೇಲೆ ಸುಟ್ಟ ಗಾಯದ ಗುರುತುಗಳೊಂದಿಗೆ ಮಲೇಷ್ಯಾದ ಫುಟ್ಬಾಲ್ ಆಟಗಾರ ಕುಳಿತಿರುವುದನ್ನು ಫೋಟೋದಲ್ಲಿ ನೋಡಬಹುದು.

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ
ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ (AFP, X)

ಮಲೇಷ್ಯಾದ ರಾಷ್ಟ್ರೀಯ ಫುಟ್ಬಾಲ್ ಆಟಗಾರನ ಮೇಲೆ ಅಚ್ಚರಿಯ ರೀತಿಯಲ್ಲಿ ಆ್ಯಸಿಡ್ ದಾಳಿ ನಡೆದಿದೆ. ವಾರಾಂತ್ಯದಲ್ಲಿ ಶಾಪಿಂಗ್ ಮಾಲ್‌ಗೆ ಹೋಗಿದ್ದಾಗ, ಆಟಗಾರ ಫೈಸಲ್ ಹಲೀಮ್ (Faisal Halim) ಮೇಲೆ ಮಾಲ್‌ನಲ್ಲಿಯೇ ದಾಳಿ ನಡೆದಿದೆ. ಘಟನೆಯಿಂದ ಆಟಗಾರನ ಮೈಮೇಲೆ ಸುಟ್ಟ ಗಾಯಗಳಾಗಿವೆ ಎಂದು ಮಲೇಷ್ಯಾ ಮಾಧ್ಯಮಗಳು ವರದಿಗಳು ತಿಳಿಸಿವೆ. ಮಲೇಷ್ಯಾದ ರಾಜಧಾನಿ ಕೌಲಾಲಂಪುರದ ಹೊರಭಾಗದಲ್ಲಿರುವ ಪೆಟಾಲಿಂಗ್ ಜಯಾ ಜಿಲ್ಲೆಯಲ್ಲಿ ಏಪ್ರಿಲ್‌ 5ರ ಭಾನುವಾರ ಆ್ಯಸಿಡ್ ದಾಳಿ ನಡೆದಿದೆ. 26 ವರ್ಷದ ಫೈಸಲ್ ಹಲೀಮ್ ಅವರ ಕುತ್ತಿಗೆ, ಭುಜ, ಕೈ ಮತ್ತು ಎದೆಯ ಮೇಲೆ ಸುಟ್ಟ ಗಾಯಗಳಾಗಿವೆ ಎಂದು ಸೆಲಂಗೋರ್ ರಾಜ್ಯದ ಕ್ರೀಡಾ ಅಧಿಕಾರಿ ನಜ್ವಾನ್ ಹಲಿಮಿ ಹೇಳಿದ್ದಾರೆ.

ಆ್ಯಸಿಡ್ ದಾಳಿ ಬಳಿಕ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಕಂದು ಬಣ್ಣದ ಪ್ಯಾಂಟ್ ಧರಿಸಿದ ಫೈಸಲ್, ದೇಹದ ಮೇಲೆ ಸುಟ್ಟ ಗಾಯದ ಗುರುತುಗಳೊಂದಿಗೆ ಬೆಂಚಿನ ಮೇಲೆ ಕುಳಿತಿರುವುದನ್ನು ಫೋಟೋದಲ್ಲಿ ನೋಡಬಹುದು. 26 ವರ್ಷದ ಫೈಸಲ್, ಸೆಲಂಗೋರ್ ಫುಟ್‌ಬಾಲ್ ಕ್ಲಬ್‌ ಪರವೂ ಆಡುತ್ತಾರೆ.

“ನಾನು ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ಅಪರಾಧಿಯನ್ನು ನ್ಯಾಯಾಲಯ ಮುಂದೆ ತರುವಂತೆ ಪೊಲೀಸರನ್ನು ಒತ್ತಾಯಿಸುತ್ತೇನೆ” ಎಂದು ಘಟನೆ ಕುರಿತು ನಜ್ವಾನ್ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | ಪಾಕಿಸ್ತಾನದ ಆಟಗಾರರಿಗೆ ಬಂಪರ್​ ಆಫರ್​; ಟಿ20 ವಿಶ್ವಕಪ್​ಗೆ ಗೆದ್ದರೆ ಇಷ್ಟು ಲಕ್ಷ ಬಹುಮಾನ ಘೋಷಿಸಿದ ಪಿಸಿಬಿ

ಘಟನೆ ಬೆನ್ನಲ್ಲೇ ದಾಳಿ ನಡೆಸಿದ ಆರೋಪಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೆಲಂಗೋರ್ ಪೊಲೀಸ್ ಮುಖ್ಯಸ್ಥ ಹುಸೇನ್ ಒಮರ್ ಖಾನ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಪುರುಷ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಮತ್ತೋರ್ವ ಆಟಗಾರನ ಮೇಲೆ ಹಲ್ಲೆ, ದರೋಡೆ

ಈ ಘಟನೆಗಿಂತ ಮೂರು ದಿನದ ಹಿಂದಷ್ಟೇ, ಮತ್ತೊಬ್ಬ ರಾಷ್ಟ್ರೀಯ ಆಟಗಾರ ಅಖ್ಯರ್ ರಶೀದ್ ಅವರ ಮನೆ ಬಳಿ ದರೋಡೆ ನಡೆದಿತ್ತು. ಟೆರೆಂಗಾನುನಲ್ಲಿ ನಡೆದ ಘಟನೆಯಲ್ಲಿ ಆಟಗಾರನಿಗೆ ಗಾಯಗಳಾಗಿತ್ತು. 25 ವರ್ಷದ ಅಖ್ಯಾರ್ ಅವರನ್ನು ಇಬ್ಬರು ದುಷ್ಕರ್ಮಿಗಳು ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ. ಇದರಿಂದ ಅವರ ತಲೆ ಮತ್ತು ಕಾಲಿಗೆ ಗಂಭಿರ ಗಾಯಗಳಾಗಿ ಸ್ಟಿಚ್‌ ಹಾಕಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ತಿಳಿಸಿದೆ.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.