ಮಲೇಷ್ಯಾ ಓಪನ್ ಪಂದ್ಯದ ವೇಳೆ ಕ್ರೀಡಾಂಗಣದ ಚಾವಣಿಯಲ್ಲಿ ಸೋರಿಕೆ; ಎಚ್ಎಸ್ ಪ್ರಣಯ್ ಪಂದ್ಯ ಸ್ಥಗಿತ -Video
ಮಲೇಷ್ಯಾ ಓಪನ್ ಪಂದ್ಯದ ವೇಳೆ ಕ್ರೀಡಾಂಗಣದ ಚಾವಣಿಯಲ್ಲಿ ಸೋರಿಕೆಯಾಗಿದೆ. ಹೀಗಾಗಿ ಭಾರತದ ಎಚ್‌ಎಸ್ ಪ್ರಣಯ್ ಅವರ ಪಂದ್ಯ ಸ್ಥಗಿತಗೊಂಡಿದೆ. ಈ ವಿಡಿಯೋ ವೈರಲ್ ಆಗಿದೆ.
ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಂಗಳವಾರ ವಿಲಕ್ಷಣ ಸನ್ನಿವೇಶ ನಡೆಯಿತು. ಪಂದ್ಯ ನಡೆಯುತ್ತಿದ್ದಾಗಲೇ, ಚಾವಣಿಯಿಂದ ನೀರು ಸೋರಿಕೆಯಾದ ಕಾರಣದಿಂದಾಗಿ, ನಡೆಯುತ್ತಿದ್ದ ಪಂದ್ಯವನ್ನು ಕೆಲಕಾಲ ನಿಲ್ಲಿಸಲಾಯ್ತು. ಕೌಲಾಲಂಪುರದ ಕೋರ್ಟ್ 2 ಮತ್ತು ಕೋರ್ಟ್ 3ರಲ್ಲಿ ಮೊದಲ ಸುತ್ತಿನ ಪಂದ್ಯಗಳು ನಡೆಯುತ್ತಿದ್ದಾಗ ಚಾವಣಿಯಿಂದ ನೀರು ಬೀಳಲು ಆರಂಭವಾಯ್ತು. ಹೀಗಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯ್ತು. ಭಾರತದ ಶಟ್ಲರ್ ಎಚ್.ಎಸ್.ಪ್ರಣಯ್ ಅವರ ಪಂದ್ಯಕ್ಕೆ ನೀರು ಸೋರಿಕೆಯಿಂದ ತೊಂದರೆಯಾಯಿತು.
ಭಾರತದ ಪ್ರಣಯ್ ಎರಡನೇ ಗೇಮ್‌ನಲ್ಲಿ ಕೆನಡಾದ ಬ್ರಿಯಾನ್ ಯಾಂಗ್ ವಿರುದ್ಧ 21-12, 6-3 ಸೆಟ್‌ಗಳಿಂದ ಮುನ್ನಡೆ ಸಾಧಿಸಿದ್ದರು. ಈ ವೇಳೆ ಪ್ರಣಯ್‌ಗೆ ನೀರು ಸೋರುತ್ತಿರುವುದು ಗೊತ್ತಾಯ್ತು. ಆಗ ಚೇರ್ ಅಂಪೈರ್ ಗಮನಕ್ಕೆ ತಂದ ಪ್ರಣಯ್, ಕೋರ್ಟ್‌ಗೆ ಅಪಾಯವಿದೆ ಎಂದು ಹೇಳಿದರು. ಪ್ರಣಯ್ ಅವರ ತರಬೇತುದಾರ ಗುರುಸೈದತ್ ಕೂಡ, ಸಂಭಾವ್ಯ ಅಪಾಯದ ಬಗ್ಗೆ ಆಟಗಾರನಿಗೆ ಎಚ್ಚರಿಕೆ ನೀಡಿದರು.
ಶೀಘ್ರದಲ್ಲೇ ಅಂಗಣಕ್ಕೆ ಬಂದ ರೆಫರಿ, ಕೋರ್ಟ್ ಮತ್ತು ಚಾವಣಿಯನ್ನು ವೀಕ್ಷಿಸಿದರು. ಆಟಕ್ಕೆ ತಡೆ ನೀಡಿದ್ದರಿಂದ ಇಬ್ಬರೂ ಆಟಗಾರರು 25 ನಿಮಿಷಗಳ ನಂತರ ಹೊರಟುಹೋದರು. ಆ ನಂತರ ಆಯೋಜಕರು ಬಂದು ಸೋರಿಕೆಯನ್ನು ಪರಿಶೀಲಿಸಿದರು. ಅದಕ್ಕೂ ಹಿಂದೆ, ಯಾಂಗ್ ಮತ್ತೊಂದು ಬದಿಯಲ್ಲಿ ಆಡಿದಾಗ ಸಮಸ್ಯೆಗಳಿದ್ದವು. ಆದರೆ ಕೋರ್ಟ್ ಸಿಬ್ಬಂದಿ ಮೈದಾನ ಸ್ವಚ್ಛಗೊಳಿಸಿದ್ದರಿಂದ ಆಟ, ಮುಂದುವರಿಯಿತು.
ನೀರು ಸೋರಿಕೆಯಿಂದ ನಿಲುಗಡೆಯಾದ ಎಚ್ ಎಸ್ ಪ್ರಣಯ್ ಅವರ ಪಂದ್ಯವು ಕೊನೆಗೆ ಸಂಜೆ 4:15ರ ಸುಮಾರಿಗೆ ಪುನರಾರಂಭವಾಯಿತು. ಆದಾಗ್ಯೂ, ಅದೇ ಸಮಸ್ಯೆಯಿಂದಾಗಿ ಪಂದ್ಯವನ್ನು ಮತ್ತೆ ನಿಲ್ಲಿಸಲಾಯಿತು. ಎರಡನೇ ಗೇಮ್‌ನಲ್ಲಿ ಯಾಂಗ್ 11-9ರಿಂದ ಮುನ್ನಡೆ ಸಾಧಿಸಿದ್ದರು.
ಇಲ್ಲಿದೆ ವಿಡಿಯೋ
ಕೋರ್ಟ್ 2ನ್ನು ಸ್ವಚ್ಛಗೊಳಿಸಲು ಸಿಬ್ಬಂದಿ ಟವೆಲ್‌ಗಳನ್ನು ಹಿಡಿದು ಬರುತ್ತಿದ್ದರು. ನೀರು ಸೋರಿಕೆಯಿಂದ ಬ್ಯಾಡ್ಮಿಂಟನ್ ಆಟ ಸ್ಥಗಿತಗೊಂಡಿರುವುದು ಒಳಾಂಗಣ ಕ್ರೀಡಾಂಗಣದ ನಿರ್ವಹಣೆ ಸಮಸ್ಯೆಯನ್ನು ಎತ್ತಿ ತೋರಿಸಿದೆ. ಮೂಲಸೌಕರ್ಯದಲ್ಲಿನ ಸಮಸ್ಯೆಯಿಂದಾಗಿ ಪ್ರಮುಖ ಬ್ಯಾಡ್ಮಿಂಟನ್ ಟೂರ್ನಿಯ ನಿರ್ವಹಣೆ ಕುರಿತು ಸಂಘಟಕರಿಗೆ ಪ್ರಶ್ನೆಗಳು ಬರುತ್ತಿವೆ.
ಭಾರತೀಯರ ಶುಭಾರಂಭ
ಇದಕ್ಕೂ ಮುನ್ನ ಮಂಗಳವಾರ (ಜನವರಿ 7) ನಡೆದ ಮಹಿಳಾ ಡಬಲ್ಸ್ ಪಂದ್ಯದಲ್ಲಿ ಭಾರತದ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಒರ್ನಿಚಾ ಜೊಂಗ್ಸಥಾಪೊರ್ನ್ಪಾರ್ನ್ ಮತ್ತು ಸುಕಿಟ್ಟಾ ಸುವಾಚೈ ಅವರನ್ನು ಕೇವಲ 30 ನಿಮಿಷಗಳಲ್ಲಿ 21-10, 21-10 ಅಂತರದಿಂದ ಸೋಲಿಸಿದರು. ಇದರೊಂದಿಗೆ 16ನೇ ಸುತ್ತಿಗೆ ಪ್ರವೇಶಿಸಿದರು.
ಭಾರತದ ಲಕ್ಷ್ಯ ಸೇನ್, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇಂದು (ಜನವರಿ 8, ಬುಧವಾರ) ತಮ್ಮ ಅಭಿಯಾನ ಆರಂಭಿಸಲಿದ್ದಾರೆ.
ಮಲೇಷ್ಯಾ ಓಪನ್ ಸೂಪರ್ 1000 ಟೂರ್ನಿಯು 2025ರ ಮೊದಲ ಪ್ರಮುಖ ಬ್ಯಾಡ್ಮಿಂಟನ್ ಪಂದ್ಯಾವಳಿಯಾಗಿದೆ. ಇದು ವರ್ಲ್ಡ್ ಟೂರ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಅತ್ಯುನ್ನತ ಹಂತವಾಗಿದೆ.